ವೀರಪ್ಪನ್‌ನೊಂದಿಗೆ ಗೋಪಾಲ್ ಸಂಪರ್ಕ : ಮುಖ್ಯಮಂತ್ರಿ ವಿಶ್ವಾಸ
ಬೆಂಗಳೂರು : ರಾಜ್ ಬಿಡುಗಡೆ ಸಂಬಂಧ ವೀರಪ್ಪನ್ ಬಳಿ ಸಂಧಾನಕಾರನಾಗಿ ತೆರಳಿದ್ದ ನಕ್ಕೀರನ್ ಗೋಪಾಲ್ ವೀರಪ್ಪನ್ ಗುಂಪಿನೊಂದಿಗೆ ಸಂಪರ್ಕ ಸಾಧಿಸುವಲ್ಲಿ ಯಶಸ್ವಿಯಾಗಿರಬಹುದು ಎಂದು ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಹೇಳಿದ್ದಾರೆ.
ರಾಜ್ ಬಿಡುಗಡೆ ಪ್ರಕ್ರಿಯೆಗಳ ಬಗ್ಗೆ ಮುಖ್ಯ ಮಂತ್ರಿಗಳು ಸಂತೋಷ ವ್ಯಕ್ತ ಪಡಿಸುತ್ತಾ, ವೀರಪ್ಪನ್ ಬಳಿ ಒತ್ತೆಯಾಳಾಗಿರುವ ರಾಜ್ ಕುಮಾರ್ ಮತ್ತೆ ಮೂವರ ಬಿಡುಗಡೆಗೆ ಸಂಬಂಧಿಸಿದಂತೆ ಎಲ್ಲವೂ ನಾವು ಯೋಜಿಸಿದಂತೆಯೇ ನಡೆಯುತ್ತಿದೆ ಎಂದು ಪುನರುಚ್ಚರಿಸಿದರು. ಈ ಕುರಿತು ಶನಿವಾರ ರಾತ್ರಿ ತಲುಪಿರುವ ಮಾಹಿತಿಗಿಂತ ಹೆಚ್ಚಿನದೇನೂ ತಿಳಿದಿಲ್ಲ , ಗೋಪಾಲ್ ಅವರಿಂದ ರಾಜ್‌ಕುಮಾರ್ ಬಿಡುಗಡೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸುತ್ತಿದ್ದೇವೆ ಎಂದರು. ರಾಜ್ ಕುಮಾರ್ ಬಿಡುಗಡೆಯಾಗಬೇಕು ಎನ್ನುವ ಉದ್ದೇಶದಿಂದಲೇ ಕಳೆದ ಏಳು ವರ್ಷಗಳಿಂದ ಮೈಸೂರು ಜೈಲಿನಲ್ಲಿ ಟಾಡಾ ಅನ್ವಯ ಬಂಧಿತರಾಗಿದ್ದ ವೀರಪ್ಪನ್ ಸಹಚರರ ವಿರುದ್ಧದ ಕೇಸು ವಾಪಾಸು ತೆಗೆದುಕೊಳ್ಳಲಾಗಿದೆ ಎಂದು ಕೃಷ್ಣ ವಿವರಿಸಿದರು.
ಬಿಡುಗಡೆ ಸುದ್ದಿಗೆ ಕಾಯುತ್ತಿದ್ದೇವೆ: ನಕ್ಕೀರನ್ ಗೋಪಾಲ್ ವೀರಪ್ಪನ್ ಗುಂಪಿನೊಡನೆ ಸಂಪರ್ಕ ಸಾಧಿಸಿರುವುದಾಗಿ ಇಂದು ಬೆಳಿಗ್ಗೆ ರಾಜ್ಯ ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ನಕ್ಕೀರನ್ ಗೋಪಾಲ್, ರಾಜ್ ಕುಮಾರ್ ಮತ್ತಿತರ ಮೂವರನ್ನು ವೀರಪ್ಪನ್ ಸೆರೆಯಿಂದ ಬಿಡುಗಡೆ ಮಾಡಿದ ಸುದ್ದಿಯನ್ನು ಗೋಪಾಲ್ ತರುತ್ತಾರೆ ಎಂಬ ನಂಬಿಕೆ ತಮಗಿದೆ. ರಾಜ್ ಬಿಡುಗಡೆಯ ಸುದ್ದಿಗಾಗಿ ನಾವು ಪ್ರತಿ ಕ್ಷಣವೂ ಎದುರು ನೋಡುತ್ತಿದ್ದೇವೆ ಎಂದು ಖರ್ಗೆ ಹೇಳಿದ್ದಾರೆ.
ನಗರದಲ್ಲಿ ಹುಸಿಬಾಂಬ್ ಬೆದರಿಕೆಯ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸುತ್ತಾ ಅವರು, ಈ ಘಟನೆಯ ಹಿ ನ್ನೆಲೆಯಲ್ಲಿ ನಗರದ ಸ್ಥಾಪಿತ ಹಿತಾಸಕ್ತಿಗಳು ಕೆಲಸ ಮಾಡುತ್ತಿರುವುದು ತಿಳಿದು ಬಂದಿದೆ. ಪೊಲೀಸರು ಈ ಕುರಿತು ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಿದರು.