ವಿಶ್ವ ವ್ಯಾಪಾರ ಸಂಘಟನೆ ಸವಾಲು ಎದುರಿಸಲು ಸಾರ್ಕ್ ರಾಷ್ಟ್ರಗಳಿಗೆ ಕರೆ
ಬೆಂಗಳೂರು : ವಿಶ್ವ ವಾಣಿಜ್ಯ ಸಂಘಟನೆ ಒಡ್ಡಿರುವ ಸವಾಲುಗಳನ್ನು ಎದುರಿಸಲು ಹಾಗೂ ಸವಾಲುಗಳನ್ನು ಅವಕಾಶಗಳನ್ನಾಗಿ ಪರಿವರ್ತಿಸಲು, ಸಾರ್ಕ್ ರಾಷ್ಟ್ರಗಳು ಒಂದೇ ವೇದಿಕೆಯಡಿ ಬರಬೇಕೆಂದು ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಕರೆ ನೀಡಿದ್ದಾರೆ.
ಶುಕ್ರವಾರ ಬೆಂಗಳೂರಿನಲ್ಲಿ ಆರಂಭವಾದ ದಕ್ಷಿಣ ಏಷ್ಯಾದ ವಾಣಿಜ್ಯ ನಾಯಕರ ಸಮಿತಿ -2000ದ ಸಮಾವೇಶದ ಉದ್ಘಾಟನಾ ಭಾಷಣ ಮಾಡುತ್ತಿದ್ದ ಕೃಷ್ಣ, ವಾಣಿಜ್ಯ ಕ್ಷೇತ್ರದಲ್ಲಿನ ಹೊಸ ಸಮಸ್ಯೆಗಳನ್ನು ಎದುರಿಸುವ ನಿಟ್ಟಿನಲ್ಲಿ ಸಾರ್ಕ್ ರಾಷ್ಟ್ರಗಳ ನಡುವೆ ಯಾವುದಾದರೂ ಭಿನ್ನಾಭಿಪ್ರಾಯಗಳಿದ್ದರೆ ಬಗೆಹರಿಸಿಕೊಳ್ಳಬೇಕು. ಆ ಮೂಲಕ ಸಾರ್ಕ್ ದೇಶಗಳು ಒಂದೇ ವೇದಿಕೆಯಡಿ ಬರಲು ಸಮಾವೇಶದಲ್ಲಿ ದಾರಿ ನಿರ್ಮಾಣವಾಗಬೇಕು. ಎಲ್ಲ ಸದಸ್ಯ ರಾಷ್ಟ್ರಗಳು ಒಂದಾಗಲು ಈಗ ಸೂಕ್ತ ಕಾಲ ಕೂಡಿಬಂದಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ವಿಶ್ವ ವಾಣಿಜ್ಯ ಸಂಘಟನೆಯ ಜಾಗತೀಕರಣದ ಬಗ್ಗೆ ವಿಶ್ವಾದ್ಯಂತ ಚರ್ಚೆಗಳು ನಡೆಯುತ್ತಿರುವಾಗ ಪ್ರಾದೇಶಿಕ ಒಕ್ಕೂಟಗಳ ಅಸ್ತಿತ್ವ ಅಗತ್ಯವಾಗಿದೆ. ಸದಸ್ಯ ರಾಷ್ಟ್ರಗಳಲ್ಲಿ ಬೇರೆ ಬೇರೆ ವಿಷಯವಾಗಿ ಭಿನ್ನಾಭಿಪ್ರಾಯಗಳಿದ್ದಾಗ್ಯೂ ಯುರೋಪಿಯನ್ ರಾಷ್ಟ್ರಗಳ ವಾಣಿಜ್ಯ ಸಂಘಟನೆ (ಇ.ಯು) ಅಸ್ತಿತ್ವಕ್ಕೆ ಬಂದಿದೆ, ಆದ್ದರಿಂದ ಇದು ಸಾರ್ಕ್ ರಾಷ್ಟ್ರಗಳಿಂದಲೂ ಸಾಧ್ಯವಾಗಬೇಕು ಎಂದು ಪ್ರತಿಪಾದಿಸಿದ್ದಾರೆ.
ಸಮಾವೇಶದ ಅಧ್ಯಕ್ಷತೆ ವಹಿಸಿದ್ದ ಸಾರ್ಕ್ ರಾಷ್ಟ್ರಗಳ ಛೇಂಬರ್ ಆಫ್ ಕಾಮರ್ಸ್ ಮತ್ತು ಕೈಗಾರಿಕೆಗಳ ಅಧ್ಯಕ್ಷ ಕಾ-ಸಿಂ ಇಬ್ರಾಹಿಂ, ಕೃಷ್ಣ ಅವರ ಅಭಿಪ್ರಾಯಕ್ಕೆ ಸಹಮತ ವ್ಯಕ್ತಪಡಿಸಿದರು. ಈ ಸಂಬಂಧ ಸಮಗ್ರ ಒಡಂಬಡಿಕೆಯನ್ನು ರೂಪಿಸಲಾಗುತ್ತಿದೆ ಎಂದ-ರು.
ಸದಸ್ಯ ರಾಷ್ಟ್ರಗಳ ನಡುವೆ ಭಿನ್ನಾಭಿಪ್ರಾಯಗಳನ್ನು ಸದಾ ಹುಟ್ಟುಹಾಕುವ ಪಟ್ಟಭದ್ರ ಹಿತಾಸಕ್ತಿಗಳ ಬಗ್ಗೆ ಜಾಗರೂಕರಾಗಿರಬೇಕೆಂದ ಅವರು ಇಂಥ ಕೃತಕ ಭಿನ್ನಾಭಿಪ್ರಾಯಗಳನ್ನು ಹೋಗಲಾಡಿಸಲು ಸಂಘಟನೆ ಯತ್ನಿಸುವುದೆಂದು ಹೇಳಿದ್ದಾರೆ.