ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೂರು ಬಣ್ಣಗಳ ನಡುವೆ ತಿರುಗಿದ ಶೋಕಚಕ್ರ

By Staff
|
Google Oneindia Kannada News

ಬೆಂಗಳೂರು : ರಾಜ್‌ ಇಲ್ಲದ ನಾಡಿನಲ್ಲಿ ಸ್ವಾತಂತ್ರ್ಯೋತ್ಸವವೂ ಡಲ್ಲು. 16 ದಿವಸಗಳಿಂದ ಶಾಲೆಗೆ ಹೋಗದ ಮಕ್ಕಳಿಗೆ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮಗಳ ರಿಹರ್ಸಲ್‌ ಕೂಡ ನಡೆಸಲಾಗಲಿಲ್ಲ. ಪ್ರತಿ ಆಗಸ್ಟ್‌ 15ರಂದು ‘ಸಾರೇ ಜಹಾ ಸೆ ಅಚ್ಛಾ..., ವಂದೇ ಮಾತರಂ’ಗಳು ಪ್ರತಿಧ್ವನಿಸುತ್ತಿದ್ದ ಬೆಂಗಳೂರಲ್ಲಿ ಈ ಹಾಡುಗಳು ಅಲ್ಲೋ ಇಲ್ಲೋ ಅನ್ನುವಂತೆ ಕೇಳಿಬರುತ್ತಿದ್ದವು. ಪ್ರತಿ ವರ್ಷ ಗಂಟೆ ಹನ್ನೊಂದಾದರೂ ಮುಗಿಯದ ಸಮಾರಂಭ ಈವತ್ತು (ಮಂಗಳವಾರ) ಅನೇಕ ಕಡೆ 8 ಗಂಟೆಗೇ ಮುಗಿದು ಹೋಗಿತ್ತು.

ಮಾರ್ಷಲ್‌ ಮಾಣಿಕ್‌ ಮಾತಾಡಿದ್ದು ಅದೇ ಸಮಸ್ಯೆಯ ಬಗ್ಗೆ :ಷಾ ಪೆರೇಡ್‌ ಗ್ರೌಂಡ್ಸ್‌ನಲ್ಲಿ ಮುಖ್ಯಮಂತ್ರಿ ಕೃಷ್ಣ ಸಂಪ್ರದಾಯಕ್ಕೆ ಕಟ್ಟು ಬಿದ್ದವರಂತೆ ರಾಷ್ಟ್ರಧ್ವಜಾರೋಹಣ ಮಾಡಿದರು. ರಾಜ್ಯಕ್ಕೆ ಭೇಟಿ ನೀಡಲು ಬಂದಿರುವ ಮಡಗಾಸ್ಕರ್‌ನ 6 ಸದಸ್ಯರ ನಿಯೋಗವೂ ಸಮಾರಂಭದಲ್ಲಿ ಭಾಗವಹಿಸಿತ್ತು. ರಾಜ್‌ ಅಪಹರಣದ ಬಿಕ್ಕಟ್ಟು ಬಗೆಹರಿಸುವ ಯತ್ನದಲ್ಲಿ ಬಾಡಿ ಹೋಗಿರುವಂತೆ ಕಾಣುತ್ತಿರುವ ಕೃಷ್ಣ, ತಮ್ಮ ಸ್ವಾತಂತ್ರ್ಯೋತ್ಸವದ ಭಾಷಣದಲ್ಲೂ ಮಾತಾಡಿದ್ದು ಅದೇ ಸಮಸ್ಯೆಯ ಬಗ್ಗೆ. ‘ರಾಜ್‌ ಬಿಡುಗಡೆಗೆ ರಾಜ್ಯ ತಮಿಳುನಾಡು ಸರ್ಕಾರದೊಂದಿಗೆ ಶತಾಯಗತಾಯ ಪ್ರಯತ್ನಿಸುತ್ತಿದೆ. ಜನ ತಾಳ್ಮೆಯಿಂದಿದ್ದು, ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಿಕೊಂಡು ಬರಬೇಕು. ರಾಜ್‌ಕುಮಾರ್‌ ಹಾಗೂ ಇತರ ಮೂವರು ಒತ್ತೆಯಾಳುಗಳು ಬಿಡುಗಡೆಯಾಗೋವರೆಗೆ ಯಾವುದೇ ಅಹಿತಕರ ಘಟನೆಗೂ ಆಸ್ಪದ ಕೊಡದಂತೆ ಸಹಕರಿಸಬೇಕು’ ಎಂದು ಅವರು ಕರೆ ಕೊಟ್ಟರು.

ಹುತಾತ್ಮರ ಕುಟುಂಬದವರಿಗೆ ಸನ್ಮಾನ : ರಾಜ್‌ ನಿರೀಕ್ಷೆಯಲ್ಲಿ ಜನ ಮುಳುಗಿರುವುದನ್ನು ಬಿಂಬಿಸುತ್ತಿದ್ದ ಸಮಾರಂಭದಲ್ಲಿ ಜನರೂ ಹೆಚ್ಚಿನ ಸಂಖ್ಯೆಯಲ್ಲಿರಲಿಲ್ಲ. ವಿವಿಧ ಪೊಲೀಸ್‌ ಪಡೆಗಳು, ಅರೆ ಸೇನಾ ಪಡೆಗಳು, ಎನ್‌ಸಿಸಿ, ಸ್ಕೌಟ್ಸ್‌ ಮತ್ತು ಗೈಡ್ಸ್‌ ತಾಲೀಮು ನಡೆಸಿದವು. ಸಮಾರಂಭ ತೀರಾ ಕಳಾಹೀನವಾಗಿರಬಾರದು ಎಂಬಂತೆ ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳೂ ಇದ್ದವು. ಕಾರ್ಗಿಲ್‌ ಯುದ್ಧದಲ್ಲಿ ಹಾಗೂ ಕಾಶ್ಮೀರದ ಕಾರ್ಯಾಚರಣೆಯಲ್ಲಿ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ರಾಜ್ಯದ ಯೋಧರ ಕುಟುಂಬದ ಸದಸ್ಯರಿಗೆ ಮುಖ್ಯಮಂತ್ರಿ ಸನ್ಮಾನ ಮಾಡಿದರು.

ಬೆಂಗಳೂರಿನ ಅನೇಕ ಶಾಲೆಗಳಲ್ಲಿ ಸ್ವಾತಂತ್ರ್ಯ ವರ್ಧಂತಿ ಸಮಾರಂಭವನ್ನೇ ರದ್ದು ಪಡಿಸಲಾಗಿತ್ತು. ಇನ್ನು ಕೆಲವು ಶಾಲೆಗಳಲ್ಲಿ ಬೆರಳೆಣಿಕೆಯಷ್ಟು ಮಂದಿ ಮುಂಜಾನೆ ಹರೀಬರಿಯಲ್ಲಿ ಬಾವುಟ ಹಾರಿಸಿ, ಮನೆಗೆ ತೆರಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಪ್ರತಿ ವರ್ಷ ವಿವಿಧ ಸ್ಪರ್ಧೆಗಳಲ್ಲಿ ಗೆದ್ದು ಬಹುಮಾನ ಹೊತ್ತು ಸಾಗುತ್ತಿದ್ದ ಮಕ್ಕಳ ಕೈ ಈ ದಿವಸ ಬರಿದಾಗಿತ್ತು. ಅಷ್ಟೇ ಏಕೆ, ಅನೇಕ ಶಾಲೆಗಳಲ್ಲಿ ಚಾಕೊಲೇಟ್‌ ಕೂಡ ಕೊಡಲಿಲ್ಲ. ರಾಜ್‌ ನಿರೀಕ್ಷೆಯಲ್ಲಿ ಇಡೀ ರಾಜ್ಯ ತಲೆ ಮೇಲೆ ಕೈಹೊತ್ತು ಕೂತಿದೆ ಎಂಬುದನ್ನು ಸಾಬೀತು ಪಡಿಸುವಂತಿತ್ತು ಈ 54ನೇ ಸ್ವಾತಂತ್ರ್ಯೋತ್ಸವ.

(ಯುಎನ್‌ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X