ಶಾಲೆ -ಕಾಲೇಜು ಪುನಾರಂಭ, ಕಟ್ಟೆಚ್ಚರ, ಬೆಂಗಳೂರಿನಲ್ಲಿ ನಿಷೇಧಾಜ್ಞೆ
ಬೆಂಗಳೂರು: ಸಂಧಾನಕಾರ ಗೋಪಾಲ್ ಬುಧವಾರ ಅಥವಾ ಗುರುವಾರ ಮತ್ತೆ ವೀರಪ್ಪನ್ ಬಳಿಗೆ ತೆರಳುವುದು ಖಚಿತವಾಗಿದ್ದು, ವೀರಪ್ಪನ್‌ಗೆ ರಾಜ್ಯದಿಂದ ಕಳುಹಿಸಿಕೊಡಬೇಕಾದ ಕ್ರೋಡೀಕೃತ ವರದಿಗಳ ಬಗ್ಗೆ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಭಾನುವಾರ ತಮ್ಮ ಅಧಿಕೃತ ನಿವಾಸ ಅನುಗ್ರಹದಲ್ಲಿ ಒಂದೂವರೆ ಗಂಟೆಗಳ ಕಾಲ ಉನ್ನತ ಮಟ್ಟದ ಸಭೆ ನಡೆಸಿ ಚರ್ಚಿಸಿದರು.
ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ, ರಾಜ್ಯ ಗೃಹ ಆಯುಕ್ತ ಎಂ.ಬಿ. ಪ್ರಕಾಶ್, ಪೊಲೀಸ್ ಮಹಾ ನಿರ್ದೇಶಕ ಸಿ. ದಿನಕರ್, ನಗರ ಪೊಲೀಸ್ ಕಮಿಷನರ್ ಮಡಿಯಾಳ್ ಹಾಗೂ ಇನ್ನಿತರ ಉನ್ನತ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. ವೀರಪ್ಪನ್ ಕೇಳಿರುವ ಸ್ಪಷ್ಟೀಕರಣಗಳು ಹಾಗೂ ಹಳೆಯ ಬೇಡಿಕೆಗಳ ಸಂಬಂಧ ರಾಜ್ಯ ಸರಕಾರ ತಳೆದಿರುವ ನಿಲವುಗಳು ಹಾಗೂ ಅದಕ್ಕೆ ಪೂರಕವಾದ ಕ್ರೋಡೀಕೃತ ದಾಖಲೆಗಳು ಸೋಮವಾರ ಕರುಣಾನಿಧಿ ಅವರ ಕೈಸೇರಲಿವೆ. ಈ ಬಗ್ಗೆ ಭಾನುವಾರ ನಡೆದ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.
ಸೋಮವಾರದಿಂದ ಶಾಲೆ ಪುನಾರಂಭ: ಸೋಮವಾರದಿಂದ ರಾಜ್ಯದ ಎಲ್ಲ ಶಾಲೆ - ಕಾಲೇಜುಗಳು ಪುನಾರಂಭವಾಗಲಿದ್ದು, ಆಯಕಟ್ಟಿನ ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಅಧಿಕಾರಿಗಳಿಗೆ ಕೃಷ್ಣ ಸೂಚಿಸಿದ್ದಾರೆ. ಅಗತ್ಯ ಸಂದರ್ಭಗಳಲ್ಲಿ ಹಾಗೂ ಶಾಂತಿ ಸುವ್ಯವಸ್ಥೆ ಕಾಪಾಡಲು ಜನಪ್ರತಿನಿಧಿಗಳ ಸಹಕಾರ ಪಡೆಯುವಂತೆ ಸಹ ಅಧಿಕಾರಿಗಳಿಗೆ ಮುಖ್ಯಮಂತ್ರಿಗಳು ಸೂಚಿಸಿದ್ದಾರೆ.
ನಿಷೇಧಾಜ್ಞೆ ಮುಂದುವರಿಕೆ: ಸೋಮವಾರ ಬೆಳಗ್ಗೆಯಿಂದ 20ನೇ ತಾರೀಖಿನ ಮಧ್ಯರಾತ್ರಿಯವರೆಗೆ ಬೆಂಗಳೂರು ನಗರದಲ್ಲಿ ನಿಷೇಧಾಜ್ಞೆ ಮುಂದುವರಿಸಿರುವುದಾಗಿ ನಗರ ಪೊಲೀಸ್ ಆಯುಕ್ತ ಮಡಿಯಾಳ್ ತಿಳಿಸಿದ್ದಾರೆ. ಆದರೆ, ಈ ನಿಷೇಧಾಜ್ಞೆ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕಲಾಪಗಳಿಗೆ ಅನ್ವಯಿಸುವುದಿಲ್ಲ ಎಂದೂ ಅವರು ಹೇಳಿದ್ದಾರೆ.
ಮದ್ಯದಂಗಡಿ ಬಂದ್: ಸೋಮವಾರದಿಂದ ಆಗಸ್ಟ್ 15ರವರೆಗೆ ಬೆಂಗಳೂರಿನಲ್ಲಿ ಮದ್ಯದಂಗಡಿಗಳನ್ನು ಬಂದ್ ಮಾಡುವಂತೆ ಸಹ ಮಡಿಯಾಳ್ ಸೂಚಿಸಿದ್ದಾರೆ.