ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೀರಪ್ಪನ್‌ ಬೇಡಿಕೆಗಳ ಬಗ್ಗೆ ಊಹಾಪೋಹ,ಬೆಂಗಳೂರಿನಲ್ಲಿ ಮತ್ತೆ ಕಾವು

By Super
|
Google Oneindia Kannada News

ಬೆಂಗಳೂರು : ವದಂತಿಗಳ ಮೇಲಾಟದ ಪರಿಣಾಮವಾಗಿ ಶಾಂತವಾಗಿದ್ದ ಬೆಂಗಳೂರಿನಲ್ಲಿ ಶನಿವಾರ ಸಂಜೆ ಮತ್ತೆ ಅಶಾಂತಿ ಮೂಡಿದೆ. ಕಲ್ಲುತೂರಾಟ, ಬಲವಂತದಿಂದ ಅಂಗಡಿ - ಮುಂಗಟ್ಟುಗಳ ಬಾಗಿಲು ಹಾಕಿಸಿದ ಪ್ರಕರಣಗಳೂ ನಡೆದಿವೆ. ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್‌ ಇಲಾಖೆ ಕಟ್ಟೆಚ್ಚರ ವಹಿಸಿದೆ.

ರಾಜ್‌ ಅಪಹರಣದ ಹಿನ್ನೆಲೆಯಲ್ಲಿ ಸೋಮವಾರದಿಂದ ಪ್ರಕ್ಷುಬ್ಧವಾಗಿದ್ದ ನಗರದ ಪರಿಸ್ಥಿತಿ ಬುಧವಾರದಿಂದ ಸಹಜ ಸ್ಥಿತಿಯತ್ತ ಮರಳಿತ್ತು. ಶುಕ್ರವಾರ ರಾಜ್‌ ಧ್ವನಿ ಕೇಳಿದ ಮೇಲಂತೂ ನೆಮ್ಮದಿಯ ನಿಟ್ಟುಸಿರಿನೊಂದಿಗೆ ಯಥಾಸ್ಥಿತಿಯತ್ತ ಮರಳಿದ್ದ ನಗರದಲ್ಲಿ ಶನಿವಾರ ಬೆಳಗ್ಗೆ ಜನಜೀವನ ಮಾಮೂಲಿನ ಸ್ಥಿತಿ ಬಂದಿತ್ತು.

ಶನಿವಾರ ಸರಕಾರಕ್ಕೆ ತಲುಪಿದ ವೀರಪ್ಪನದೆಂದು ಹೇಳಲಾದ ಕ್ಯಾಸೆಟ್‌ನಲ್ಲಿ ಏನಿದೆ ಎಂಬುದನ್ನು ರಾಜ್ಯದ ಹಿತದೃಷ್ಟಿಯಿಂದ ಬಹಿರಂಗ ಪಡಿಸಲು ಮುಖ್ಯಮಂತ್ರಿಗಳು ನಿರಾಕರಿಸಿದ್ದು, ಹಲವು ಊಹಾ ಪೋಹಗಳಿಗೆ ಎಡೆಮಾಡಿಕೊಟ್ಟಿತು. ಈ ಊಹಾಪೋಹಗಳಿಂದ ಹುಟ್ಟಿಕೊಂಡ ಸುದ್ದಿ - ವದಂತಿಗಳು ಕಾಳ್ಗಿಚ್ಚಿನಂತೆ ಹಬ್ಬಿ ನಗರದಲ್ಲಿ ಮತ್ತೆ ಅಶಾಂತಿ ಮೂಡಲು ಕಾರಣವಾಗಿದೆ.

ವೀರಪ್ಪನ್‌ ಕಾವೇರಿಯ ವಿಷಯ ಪ್ರಸ್ತಾಪಿಸಿದ್ದಾನೆ ಎಂಬ ವದಂತಿಗಳೇ ಇದಕ್ಕೆ ಕಾರಣ ಎನ್ನಲಾಗಿದೆ. ಕೃಷ್ಣರಾಜ ಮಾರುಕಟ್ಟೆ ಪ್ರದೇಶದಲ್ಲಿ ಕೆಲವೆಡೆ ಕಲ್ಲುತೂರಾಟ ನಡೆದ ಘಟನೆಗಳು ನಡೆದಿವೆ. ಚಾಮರಾಜ ಪೇಟೆ, ರಾಜಾಜಿನಗರ, ಮಲ್ಲೇಶ್ವರದ ಕೆಲವು ಭಾಗ, ಶ್ರೀರಾಮಪುರ, ಬಸವೇಶ್ವರ ನಗರ, ಪ್ರಕಾಶನಗರ ಮುಂತಾದ ಕಡೆಗಳಲ್ಲಿ ಬಲವಂತದಿಂದ ಅಂಗಡಿ ಬಾಗಿಲುಗಳನ್ನು ಮುಚ್ಚಿಸಿದ ವರದಿಗಳೂ ಬಂದಿವೆ.

ವದಂತಿಯ ಇನ್ನೊಂದು ಮುಖ: ಚಲನಚಿತ್ರ ವಾಣಿಜ್ಯ ಮಂಡಳಿ ಸಬ್ಸಿಡಿ ಹಾಗೂ ಮನರಂಜನಾ ತೆರಿಗೆಯ ರೂಪದಲ್ಲಿ ಸರಕಾರದಿಂದ ದೊರಕುವ ಸುಮಾರು 40ರಿಂದ 45 ಕೋಟಿ ರುಪಾಯಿಗಳನ್ನು ರಾಜ್‌ ಬಿಡುಗಡೆಗಾಗಿ ತ್ಯಾಗಮಾಡಲು ಸಿದ್ಧ ಎಂಬ ಸುದ್ದಿ ಸಹ ನಗರದಲ್ಲಿ ಶಾಂತಿ ಕದಡಲು ಕಾರಣವಾಗಿದೆ. ವಾಣಿಜ್ಯ ಮಂಡಲಿ ಸದುದ್ದೇಶದಿಂದ ಕೈಗೊಂಡ ಈ ತೀರ್ಮಾನವನ್ನು ವ್ಯತಿರಿಕ್ತವಾಗಿ ಅರ್ಥೈಸಲಾಗಿದೆ.

'ವೀರಪ್ಪನ್‌ ಮುಂದಿಟ್ಟಿದ್ದಾನೆ ಎನ್ನಲಾದ 50 ಕೋಟಿ ರುಪಾಯಿಗಳ ಬೇಡಿಕೆಯನ್ನು ಸರಕಾರ ಈಡೇರಿಸಲು ನಿರಾಕರಿಸಿದೆಯಂತೆ, ಅದಕ್ಕಾಗೇ ತಮ್ಮ ನೆಚ್ಚಿನ ನಟನ ಬಿಡುಗಡೆಗಾಗಿ ಅನಿವಾರ್ಯವಾಗಿ ವಾಣಿಜ್ಯ ಮಂಡಳಿ ಆ ಹಣವನ್ನು ತಾನೇ ಭರಿಸಲು ಈ ತ್ಯಾಗದ ಕ್ರಮಕ್ಕೆ ಮುಂದಾಗಿದೆ" ಎಂಬ ವದಂತಿಗಳು ಸಹ ಹಬ್ಬಿದ್ದು, ಪರಿಸ್ಥಿತಿ ಕೊಂಚ ಹದಗೆಡಲು ಕಾರಣವಾಗಿದೆ ಎನ್ನಲಾಗಿದೆ. ಈಗ ಪರಿಸ್ಥಿತಿ ನಿಯಂತ್ರಣದಲ್ಲಿದೆ.

ರಾಜ್‌ ಬಿಡುಗಡೆಗೆ ವೀರಪ್ಪನ್‌ನಿಂದ 50 ಕೋಟಿ ರುಪಾಯಿ ಬೇಡಿಕೆ?
ಕ್ಯಾಸೆಟ್‌ ಬೆಂಗಳೂರಿಗೆ, ವೀರಪ್ಪನ್‌ ಬೇಡಿಕೆಗಳ ಚರ್ಚೆಗೆ ಸಭೆ
ವೀರಪ್ಪನ್‌ ಕಳಿಸಿ ಕೊಟ್ಟಿರುವ ಇನ್ನೊಂದು ಕ್ಯಾಸೆಟ್‌ ಬಂದಿದೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X