ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂದು ಶುಕ್ರವಾರ, ನಾಳೆ ಷಷ್ಟಿ ಆಮೇಲೆ ಅಣ್ಣ ನಿಲ್ಲುವನೆ ಅಲ್ಲಿ......?

By Super
|
Google Oneindia Kannada News

ಬೆಂಗಳೂರು : ವರನಟ ರಾಜ್‌ಕುಮಾರನ್ನು ಒತ್ತೆಯಾಳಾಗಿ ಇಟ್ಟುಕೊಂಡಿರುವ ವೀರಪ್ಪನ್‌ ಮುಂದಿಡುವ ಬೇಡಿಕೆಗಳನ್ನು ಮುಕ್ತ ಮನಸ್ಸಿನಿಂದ ಪರಿಶೀಲಿಸುವ ಭರವಸೆಯನ್ನು ರಾಜ್ಯದ ಮುಖ್ಯಮಂತ್ರಿ ಎಸ್‌. ಎಂ. ಕೃಷ್ಣ ನೀಡಿದ್ದಾರೆ. ಎಲ್ಲವೂ ನಾವಂದುಕೊಂಡಂತೆ ನಡೆದರೆ ಇನ್ನೆರಡು ದಿನದಲ್ಲಿ ರಾಜ್‌ ನಮ್ಮೊಂದಿಗಿರುತ್ತಾರೆ ಎಂದರು.

'ರಾಜ್‌ ಕುಮಾರ್‌ ಹಾಗೂ ಇತರ ಮೂವರ ಮೇಲೆ ವೀರಪ್ಪನ್‌ ಯಾವುದೇ ರೀತಿಯ ಹಿಂಸಾ ಪ್ರಯೋಗ ಮಾಡಿಲ್ಲ. ನಾಡಿನ ಜನರಿಗೆ ಶಾಂತಿಯಿಂದ ಇರುವಂತೆ ಸ್ವತಃ ರಾಜ್‌ಕುಮಾರ್‌ ಅವರೇ ಕ್ಯಾಸೆಟ್‌ ಮೂಲಕ ನಿವೇದಿಸಿಕೊಂಡಿದ್ದಾರೆ. ರಾಜ್‌ ಅವರು ಅಲ್ಲಿ ಕ್ಷೇಮವಾಗಿದ್ದಾರೆ, ಅವರು ಖಂಡಿತಾ ಸುರಕ್ಷಿತವಾಗಿ ಹಿಂತಿರುಗಿ ಬರುತ್ತಾರೆ. ಅಲ್ಲಿಯವರೆಗೆ ರಾಜ್‌ ಅವರ ಕೋರಿಕೆಯಂತೆ ನಾವೆಲ್ಲ ತಾಳ್ಮೆ, ಸಹನೆ ಹಾಗೂ ಸಂಯಮದಿಂದ ವರ್ತಿಸಬೇಕು" ಮುಖ್ಯಮಂತ್ರಿಗಳು ಮನವಿ ಮಾಡಿಕೊಂಡರು.

ಜನತೆ ಯಾವುದೇ ಪ್ರಚೋದನೆಗೆ ಒಳಗಾಗದೇ ದಿನನಿತ್ಯದ ಜೀವನವನ್ನು ನಡೆಸಬೇಕು ಎಂಬುದು ಡಾ. ರಾಜ್‌ ಅವರ ಅಭಿಲಾಷೆಯಾಗಿದೆ. ಸರಕಾರ ವೀರಪ್ಪನ್‌ ವಿರುದ್ಧದ ಎಲ್ಲ ಕಾರ್ಯಾಚರಣೆಗಳನ್ನೂ ಕೈಬಿಟ್ಟಿದೆ ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದರು.

ರಾಜ್‌ ಅಪಹರಣವಾಗಿ 6 ಇರುಳುಗಳು ಸಮೀಪಿಸುತ್ತಿದ್ದು, ಶುಕ್ರವಾರ ಶುಭ ಸಂದೇಶ ಬಂದ ಹಿನ್ನೆಲೆಯಲ್ಲಿ ಕನ್ನಡಿಗರಿಗೆ ಶುಭಶುಕ್ರವಾರವೇ ಆದಂತಾಗಿದೆ. ಪರಿಸ್ಥಿತಿ ತಹಬಂದಿಗೆ ಬಂದಿದೆ. ರಾಜ್ಯದಲ್ಲಿ ಶಾಂತಿ ನಿಧಾನವಾಗಿ ನೆಲಸುತ್ತಿದೆ. ರಾಜ್‌ ಅವರ ಬಿಡುಗಡೆಗಾಗಿ ಜಪ, ತಪ, ಹೋಮ - ಹವನಗಳು ನಡೆಯುತ್ತಿವೆ. ರಾಜ್‌ ಅವರ ಮನೆಯಲ್ಲಿ ಸಹ ಶನಿ ಶಾಂತಿ ನಡೆಸಲಾಗಿದೆ. ಚಿತ್ರನಟ -ನಟಿಯರು ಉರುಳು ಸೇವೆ ಸಹ ಮಾಡಿದ್ದಾರೆ. ನಾನಾ ಧರ್ಮೀಯರು ವಿಶೇಷ ಪ್ರಾರ್ಥನೆಗಳನ್ನು ಸಲ್ಲಿಸಿದ್ದಾರೆ.

ಸೋಮವಾರದ ವರೆಗೆ ಶಾಲೆಗೆ ರಜೆ: ಪರಿಸ್ಥಿತಿ ರಾಜ್ಯದಲ್ಲಿ ಸಹಜ ಸ್ಥಿತಿಗೆ ಮರಳುತ್ತಿದ್ದರೂ ಕೂಡ, ಸೋಮವಾರದ ವರೆಗೆ ಎಲ್ಲ ಶಾಲೆ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಮದ್ಯ ಮಾರಾಟವನ್ನು ನಿಷೇಧಿಸಿ ಆದೇಶ ಹೊರಡಿಸಲಾಗಿದೆ. ಏತನ್ಮಧ್ಯೆ ರಾಜ್ಯದ ವಿವಿಧ ಕ್ಷೇತ್ರಗಳ ಗಣ್ಯರು ಬೆಂಗಳೂರಿನ ಡಾ. ರಾಜ್‌ ಅವರ ನಿವಾಸಕ್ಕೆ ತೆರಳಿ, ಅವರ ಕುಟುಂಬವರ್ಗದವರಿಗೆ ಧೈರ್ಯ ಹೇಳಿದರು.

ಹುಬ್ಬಳ್ಳಿ ವರದಿ : ಕನ್ನಡದ ವರ ನಟ ರಾಜ್‌ಕುಮಾರ್‌ ಅವರ ಅಪಹರಣವನ್ನು ಖಂಡಿಸಿ, ಹುಬ್ಬಳ್ಳಿಯಲ್ಲಿ ಶುಕ್ರವಾರ ಸಾಹಿತಿ ಕಲಾವಿದರು ಮೆರವಣಿಗೆ ನಡೆಸಿದರು. ಖ್ಯಾತ ಸಾಹಿತಿ, ಕಣವಿಯವರೂ ಸೇರಿದಂತೆ ನೂರಾರು ಸಾಹಿತಿ - ಕಲಾವಿದರು, ಮೆರವಣಿಗೆಯಲ್ಲಿ ತೆರಳಿ ಜಿಲ್ಲಾಧಿಕಾರಿಗಳಿಗೆ ಮನವಿ ಅರ್ಪಿಸಿದರು. ಡಾ. ರಾಜ್‌ ಕುಮಾರ್‌ ಅವರ ಬಿಡುಗಡೆಗೆ ತಮಿಳುನಾಡು ಹಾಗೂ ಕರ್ನಾಟಕ ಸರಕಾರಗಳು ಸಕಲ ಪ್ರಯತ್ನಗಳನ್ನು ಮಾಡಬೇಕು ಎಂದು ಅವರು ಸರಕಾರವನ್ನು ಆಗ್ರಹಿಸಿದರು. ಸರಕಾರದ ಪ್ರಯತ್ನ ಫಲಕಾರಿಯಾಗಲಿ ಎಂದು ಹಾರೈಸಿದರು.

ನೂರಾರು ಸಂಖ್ಯೆಯಲ್ಲಿದ್ದ ಸಾಹಿತಿ ಕಲಾವಿದರ ಬಳಗದಲ್ಲಿ ವಿಶ್ವೇಶ್ವರಿ ಹೆಗಡೆ, ಜಿ.ಎಂ. ಹೆಗಡೆ, ಸಂಗಮೇಶ್ವರ ಮುಂತಾದವರು ಪಾಲ್ಗೊಂಡಿದ್ದರು.

English summary
Government to all veerapans demands
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X