ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಂಗಳಿದ್ಯಾತಕೋ ಕಾವೇರಿರಂಗನ ನೋಡದ.....!

By Staff
|
Google Oneindia Kannada News

ಮೈಸೂರು : ಕೃಷ್ಣರಾಜ ಸಾಗರ ಅರ್ಥಾತ್‌ ಕೆ.ಆರ್‌. ಎಸ್‌. ಯಾರಿಗೆ ತಿಳಿದಿಲ್ಲ. ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ ದೂರದರ್ಶಿತ್ವ, ಸರ್‌. ಎಂ. ವಿಶ್ವೇಶ್ವರಯ್ಯ ಅವರ ಶ್ರಮದ ಫಲವಾಗಿ ಕನ್ನಡಿಗರಿಗೆ ವರವಾದ ಈ ಜಲಾಶಯದ ಮಡಿಲಲ್ಲಿರುವ ಬೃಂದಾವನ ಗಾರ್ಡನ್‌ ಸಂಗೀತ ಕಾರಂಜಿಯನ್ನೂ ಹೊಂದಿದ್ದು ವಿಶ್ವ ವಿಖ್ಯಾತವಾಗಿದೆ. ಕೆ.ಆರ್‌.ಎಸ್‌.ಗೆ ಕನ್ನಂಬಾಡಿ ಕಟ್ಟೆ ಎಂಬ ಹೆಸರಿದೆ ಎಂಬುದು ಹಲವರಿಗೆ ತಿಳಿದಿಲ್ಲ.

‘ಕಾವೇರಿಯನು ಹರಿಯಲು ಬಿಟ್ಟು ವಿಶ್ವೇಶ್ವರಯ್ಯ ಶ್ರಮಪಡದಿದ್ದರೇ.. ಕನ್ನಂಬಾಡಿಯ ಕಟ್ಟದಿದ್ದರೆ ’ ಎಂಬ ಹಾಡಿನ ಸಾಲುಗಳನ್ನು ಕೇಳಿದ್ದವರಿಗೆ ಹಾಗೂ ಹಳೆಯ ಮೈಸೂರಿಗರಿಗೆ ಇದು ನೆನಪಿಗೆ ಬಂದೀತು. ಕೆ.ಆರ್‌.ಎಸ್‌.ಗೆ ಕನ್ನಂಬಾಡಿ ಕಟ್ಟೆ ಎಂದು ಹೆಸರು ಬರಲು ಕಾರಣ ಇಲ್ಲದಿಲ್ಲ. ಈಗ ಜಲಾಶಯ ಇರುವ ಸ್ಥಳ ಹಿಂದೆ ಕನ್ನಂಬಾಡಿ ಎಂಬ ಗ್ರಾಮವಾಗಿತ್ತು. ಕನ್ನಂಬಾಡಿ ಎಂಬ ಗ್ರಾಮದಲ್ಲಿ ನಿರ್ಮಾಣವಾದ ಜಲಾಶಯ ಹಳೆಯ ಮೈಸೂರಿಗರಿಗೆ ಇಂದೂ ಕನ್ನಂಬಾಡಿ ಕಟ್ಟೆಯೇ.

ಏನು ಇದ್ದಕ್ಕಿದ್ದಂತೆ ಕನ್ನಂಬಾಡಿಯ ನೆನಪು ಏಕೆ ಬಂತು? ಎಂಬ ಪ್ರಶ್ನೆ ಎದುರಾಗದಿರದು. ಸುಮಾರು ಎರಡು ದಶಕಗಳ ನಂತರ ಕೃಷ್ಣರಾಜಸಾಗರ ಜಲಾಶಯದಲ್ಲೀಗ ನೀರನ ಮಟ್ಟ ಇಳಿಮುಖವಾಗಿದೆ. ರಾಜ್ಯದ ನಾನಾ ಭಾಗಗಳಲ್ಲಿ ಮಳೆಯಾಗುತ್ತಿದ್ದರೂ ಕೂಡ ಕೃಷ್ಣರಾಜ ಸಾಗರದ ಸುತ್ತಮುತ್ತಲ ಪ್ರದೇಶದಲ್ಲಿ ಮಳೆ ಕ್ಷೀಣಿಸಿರುವ ಕಾರಣ ಜಲಾಶಯಕ್ಕೆ ಒಳಹರಿವು ಕಡಿಮೆಯಾಗಿ ನೀರಿನ ಮಟ್ಟ ಕುಸಿದಿದೆ. ತತ್ಪರಿಣಾಮವಾಗಿ 20 ವರುಷಗಳ ನಂತರ ಈ ಜಲಾಶಯದಲ್ಲಿ ಮುಳುಗಿ ನೇಪಥ್ಯಕ್ಕೆ ಸರಿದಿದ್ದ 500 ವರ್ಷಗಳಷ್ಟು ಹಳೆಯದಾದ ಹೊಯ್ಸಳರ ವಾಸ್ತು ಶೈಲಿಯನ್ನು ಹೋಲುವ ಪುರಾತನ ವೇಣುಗೋಪಾಲ ಸ್ವಾಮಿ ದೇವಾಲಯ ಪ್ರತ್ಯಕ್ಷವಾಗಿದೆ.

ಕೃಷ್ಣರಾಜ ಸಾಗರದ ಸುತ್ತಮತ್ತಲ ಪ್ರದೇಶದಲ್ಲಿಯೇ ಹತ್ತಾರು ವರ್ಷಗಳಿಂದ ವಾಸಿಸುತ್ತಿರುವ ಜನರಿಗೆ ಮರೆತು ಹೋಗಿದ್ದ, ಇಲ್ಲವೇ ತಿಳಿಯದೇ ಇದ್ದ ಸಂಗತಿ ಈಗ ಹೊರಬಿದ್ದಿದೆ. ನೀರಿನಲ್ಲಿ ಮುಳುಗಿಹೋಗಿದ್ದ ಈ ಸುಂದರ ದೇವಾಲಯವನ್ನು ನೋಡಲು ಮಂಡ್ಯ, ಮೈಸೂರು, ಶ್ರೀರಂಗಪಟ್ಟಣ, ಮಡಿಕೇರಿ ಹಾಗೂ ರಾಜ್ಯದ ನಾನಾ ಭಾಗಗಳಿಂದ ಜನರು ತಂಡೋಪತಂಡವಾಗಿ ಬರುತ್ತಿದ್ದಾರೆ. ದೊಡ್ಡ ದೊಡ್ಡ ಕಂಬಗಳುಳ್ಳ ಈ ಶಿಲಾ ದೇಗುಲ ಹಳೆಬೀಡು, ಬೇಲೂರಿನ ದೇವಾಲಯಗಳಂತೆಯೇ ನಯನಮನೋಹರವಾಗಿದೆ. ಕಲೆಯ ನೆಲೆಯಾಗಿದೆ. ವೇಣುಗೋಪಾಲ ಸ್ವಾಮಿಯಿರುವ ಮಂಟಪವನ್ನು ಏಕಶಿಲೆಯಲ್ಲಿ ಕೆತ್ತಲಾಗಿದೆ.

18 ವರ್ಷಗಳ ಹಿಂದೆ ಜಲಾಶಯದಲ್ಲಿ ನೀರಿನ ಮಟ್ಟ ಇಳಿಮುಖವಾಗಿದ್ದಾಗ ದೇವಾಲಯ ಭಾಗಶಃ ಗೋಚರಿಸಿತ್ತು ಎಂಬುದು ಸಮೀಪದ ಗ್ರಾಮದ ಹಿರಿಯರ ಅಂಬೋಣ. ಆದರೆ ಈಬಾರಿ ದೇವಾಲಯ ಸಂಪೂರ್ಣವಾಗಿ ಸಾರ್ವಜನಿಕರಿಗೆ ದರ್ಶನ ನೀಡಿದೆ. ಮಿಗಿಲಾಗಿ ಈ ದೇವಾಲಯದ ಸುತ್ತಮುತ್ತ ಕನ್ನಂಬಾಡಿ ಗ್ರಾಮ ಇತ್ತು ಎಂಬುದಕ್ಕೆ ಸಾಕ್ಷಿಯಾಗಿ ಹಳೆಯ ಕಾಲದ ಮನೆಗಳ, ಹಾಗೂ ದನದ ಕೊಟ್ಟಿಗೆಗಳ ಅವಶೇಷಗಳೂ ಲಭ್ಯವಾಗಿವೆ.

ಹಳೆ ಮೈಸೂರು ಪ್ರಾಂತದ ಜನರ ಜೀವನಾಡಿಯಾದ ಈ ಜಲಾಶಯ ನಿರ್ಮಾಣ ಸಂದರ್ಭದಲ್ಲಿ ಅಂದಿನ ಮಹಾಹಾಜರು ಈ ದೇವಾಲಯವಿರುವ ಪ್ರದೇಶವಾದ ಕನ್ನಂಬಾಡಿ ಗ್ರಾಮದ ಜನರಿಗೆ ಪುನರ್ವಸತಿ ಕಲ್ಪಿಸಿಕೊಟ್ಟ ಹೊಸ ಸ್ಥಳದಲ್ಲಿ ದೇವಾಲಯ ನಿರ್ಮಿಸಲಾಗಿದೆಯಂತೆ.

ಈ ಪುರಾತತ್ವ ದೇಗುಲದ ರಕ್ಷಣೆಯಂತೂ ಸಾಧ್ಯವಿಲ್ಲ. ಮತ್ತೆ ಜಲಾಶಯಕ್ಕೆ ನೀರು ಬರುವ ಮುನ್ನವೇ ಸಾಧ್ಯವಾದರೆ ಬಂದು ವೇಣುಗೋಪಾಲ ಸ್ವಾಮಿ ದೇಗುಲವನ್ನೊಮ್ಮೆ ಕಣ್ತುಂಬ ನೋಡಿ ಬಿಡಿ. ಹಾಗೆಯೇ ಜಲಾಶಯ ತುಂಬಿ ಹರಿಯುವಂತೆ ಮಳೆ ಬರಲಿ ಎಂದು ಆ ವೇಣುಗೋಪಾಲನಲ್ಲಿ ಅರಿಕೆ ಮಾಡಿಕೊಳ್ಳಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X