• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಾಹ-ಸ ಯಾರೊಬ್ಬರ ಸೊತ್ತಲ್ಲ !

By Staff
|

Sailingಸಮುದ್ರದಲ್ಲಿ ರಭಸದಿಂದ ಬರುವ ಅಲೆಗಳ ನಡುವೆ ಪುಟ್ಟ ದೋಣಿಯಲ್ಲಿ ಮೀನಿನಂತೆ ತೇಲಬೇಕು, ಭೋರ್ಗರೆಯುತ್ತಾ ಧುಮ್ಮಿಕ್ಕುವ ನದಿಗಳಲ್ಲಿ ಮೀನಿನಂತೆ ಈಜಬೇಕು, ಹಿಮವತ್ಪರ್ವತವನ್ನೊಮ್ಮೆ ಏರಿಬಿಡಬೇಕು, ಬೃಹತ್‌ ಬೆಲೂನ್‌ಗಳಲ್ಲಿ ಕುಳಿತು ಹಕ್ಕಿಯಂತೆ ಹಾರಾಡಬೇಕು, ಗ್ಲೈಡರ್‌ ರಾಡನ್ನು ಹಿಡಿದು ಮೇಲೆ ಹಾರಿ ಭೂಮಿಯ ವಿಹಂಗಮ ನೋಟವನ್ನೊಮ್ಮೆ ನೋಡಿಬಿಡಬೇಕು ಎಂಬ ಭಾವನೆಗಳು ಎಲ್ಲರ ಮನದಲ್ಲೂ ಸುಳಿಯುವುದು ಸಹಜ. ಶ್ರೀಮಂತ ವರ್ಗದ ಯುವಜನತೆ ಇದಕ್ಕಾಗಿಯೇ ಇರುವ ಸಾಹಸ ಕ್ಲಬ್‌ಗಳಲ್ಲಿ ಸದಸ್ಯರಾಗಿ ತಮ್ಮ ಆಸೆಗಳನ್ನು ಈಡೇರಿಸಿಕೊಳ್ಳುತ್ತಾರೆ. ಕೆಳವರ್ಗದವರು ಇಂಥ ಸಾಹಸಕ್ಕೆ ಎಳೆಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಯಾಕೆಂದರೆ ಅವರು ಬದುಕುವುದೇ ಸಾಹಸ. ಆದರೆ ಈ ಎರಡು ವರ್ಗಗಳ ಮಧ್ಯೆ ನುಸುಳುವ ಮಧ್ಯಮ ವರ್ಗದವರು ಈ ಪರಿಯ ಸಾಹಸಕ್ಕೆ ಹಾತೊರೆಯುತ್ತಾರೆ. ಅದಕ್ಕೆ ಬೇಕಾದಷ್ಟು ಸೈಕಲ್ಲು ಹೊಡೆಯುತ್ತಾರೆ. ಕರ್ನಾಟಕ ಭೌಗೋಳಿಕವಾಗಿ ಸಾಹಸ ಕ್ರೀಡೆಗಳಿಗೆ ಹೇಳಿ ಮಾಡಿಸಿದ ತಾಣ. ಸಮೃದ್ಧ ವನಸಿರಿ, ಜಲಪಾತ, ಪರ್ವತ ಶ್ರೇಣಿಗಳು, ಕಡಿದಾದ ಬೆಟ್ಟ - ಗುಡ್ಡಗಳು, ತುಂಬಿ ಹರಿಯುವ ನದಿಗಳುಳ್ಳ ಇಲ್ಲಿ ಹಿಮಾಚ್ಛಾದಿತ ಪರ್ವತಗಳಿಲ್ಲ ಎಂಬುದೊಂದದನ್ನು ಬಿಟ್ಟರೆ, ವಾಯು, ಭೂ, ಜಲ ಸಾಹಸಗಳಿಗೆ ಅಗತ್ಯವಾದ ಎಲ್ಲ ಅನುಕೂಲತೆಗಳೂ ಇವೆ. ಆದರೆ ಈ ಸಾಹಸ ಕ್ರೀಡೆಗಳಿಗೆ ಧುಮುಕುವ ಯುವಕರ ಸಂಖ್ಯೆ ಬೆರಳಷ್ಟು ಮಾತ್ರ. ಇದಕ್ಕೆ ಕಾರಣವೂ ಇಲ್ಲದಿಲ್ಲ. ಹೇಳಿಕೇಳಿ ಇದು ಸಾಹಸ ಕ್ರೀಡೆ. ಸುಮ್ನನೆ ಪ್ರಾಣವನ್ನೇಕೆ ಪಣಕ್ಕಿಡಬೇಕು ಎಂಬ ಅಂಜಿಕೆ ಒಂದೆಡೆಯಾದರೆ. ಈ ಸಾಹಸ ಕ್ರೀಡೆಗಳಲ್ಲಿ ತೊಡಗಲು ಅಪಾರ ಹಣಬೇಕು ಎಂಬ ಭಾವನೆ ಮತ್ತೊಂದೆಡೆ.

ವಾಹನಭರಿತ ರಸ್ತೆಗಳನ್ನು ದಾಟುವಾಗ ಇರುವಷ್ಟು ಗಂಡಾಂತರವೂ ಈ ಕ್ರೀಡೆಗಳಲ್ಲಿ ಇಲ್ಲವಂತೆ. ಅಪಾರ ಹಣದ ಅಗತ್ಯವೂ ಈ ಕ್ರೀಡೆಗಳಲ್ಲಿ ತೊಡಗಲು ಬೇಕಿಲ್ಲ. 1989ರಲ್ಲಿ ಸಾಹಸ ಕ್ರೀಡೆಗಳನ್ನು ಅಭಿವೃದ್ಧಿ ಪಡಿಸಲು ಹಾಗೂ ಪ್ರೋತ್ಸಾಹಿಸಲು ರಾಜ್ಯ ಸರಕಾರ ಜನರಲ್‌ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡಮಿಯನ್ನು ಸ್ಥಾಪಿಸಿತು. ತತ್ಪರಿಣಾಮವಾಗಿ ಕೇವಲ ಶ್ರೀಮಂತರ ಸ್ವತ್ತಾಗಿದ್ದ ಸಾಹಸ ಕ್ರೀಡೆಗಳು ಸಾಮಾನ್ಯ ವರ್ಗದ ಯುವಕರಿಗೂ ಕೈಗೆಟಕುವಂತಾಯ್ತು. ಆದರೆ ಅಕಾಡಮಿ ಸ್ಥಾಪನೆಯಾಗಿ ದಶಕಗಳೇ ಕಳೆದಿದ್ದರೂ ಹಲವಾರು ಉತ್ಸಾಹಿ ಯುವಕರಿಗೆ ಇದರ ಅರಿವೇ ಇಲ್ಲ.

Rock climbingಪ್ರತಿವರ್ಷವೂ ಸಾಹಸ ಅಕಾಡೆಮಿ ನೂರಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳತ್ತದೆ. ಈ ಬಾರಿ ಕೂಡ ಅದೂ ಈ ಬೇಸಿಗೆ ರಜೆಯಲ್ಲಿಯೇ ದಾಂಡೇಲಿ ಅರಣ್ಯ ಪ್ರದೇಶದ ತಟ್ಟಿಹಳ್ಳಿಯಲ್ಲಿ - ನೇಚರ್‌ಕ್ಯಾಂಪ್‌ ನಡೆಸುತ್ತಿದೆ . ಹಲವಾರು ಹಂತಗಳಲ್ಲಿ ಇದು ಈಗ ನಡೆಯುತ್ತಿದೆ. ಮೈಸೂರಿನಲ್ಲಿ ಜೂನ್‌ ತಿಂಗಳಿನಿಂದ ಪ್ಯಾರಾಸೈಲಿಂಗ್‌ ಆರಂಭವಾಗಲಿದೆ. ಬಾದಾಮಿಯಲ್ಲಿ ರಾಕ್‌ ಕ್ಲೈಂಬಿಂಗ್‌ ಶಿಬಿರವೂ ನಡೆಯಲಿದೆ, ಪ್ರತಿ ವಾರಾಂತ್ಯದಲ್ಲೂ ಬಹುತೇಕ ಇಂಥ ಕಾರ್ಯಕ್ರಮಗಳೂ ನಡೆಯುತ್ತಲೇ ಇರುತ್ತವೆ.

ಪ್ರಚಾರದ ಕೊರತೆಯಿಂದಾಗಿ ಅವಕಾಶವಿದ್ದರೂ ಕರ್ನಾಟಕದಲ್ಲಿ ಸಾಹಸಕ್ರೀಡೆಗಳು ಜನಪ್ರಿಯವಾಗಿಲ್ಲ. ಗ್ರಾಮೀಣ ಹಾಗೂ ಮಧ್ಯಮ ವರ್ಗದ ಯುವಕರು ಇಂದೂ ಸಾಹಸ ಕ್ರೀಡೆಗಳನ್ನು ಗಗನ ಕುಸುಮವೆಂದೇ ತಿಳಿದಿದ್ದಾರೆ. ಕರ್ನಾಟಕದಲ್ಲಿರುವ ಅಕಾಡಮಿಯ ಬಗ್ಗೆಯಾಗಲಿ, ಅದರ ಕಾರ್ಯವೈಖರಿಯ ಬಗ್ಗೆಯಾಗಲೀ ಜನಸಾಮಾನ್ಯರಿಗೆ ತಿಳಿವಳಿಕೆ ಇಲ್ಲ. ಇದು ದುಬಾರಿ ಹಾಗೂ ದುಸ್ಸಾಹಸ ಎಂದೇ ಜನ ಭಾವಿಸಿದ್ದಾರೆ. ಅಕಾಡೆಮಿ ನಡೆಸುವ ಕ್ಯಾಂಪ್‌ಗಳಿಗೆ ಪಡೆಯುವುದು ಅತ್ಯಲ್ಪ ಮೊತ್ತ. ನೋಂದಣಿ ಶುಲ್ಕವಾಗಿ 50 ಅಥವಾ 100 ರುಪಾಯಿ ಪಡೆವ ಅಕಾಡೆಮಿ ಊಟ - ವಸತಿಯ ಏರ್ಪಾಟೂ ಮಾಡುತ್ತದೆ.

ಚಾರಣ, ಶಿಲಾರೋಹಣ, ಪರ್ವತಾರೋಹಣ, ಹಾಯಿದೋಣಿ, ಯಾಚಿಂಗ್‌, ಕ್ಯಾನೋಯಿಂಗ್‌, ಗಾಳಿ ತುಂಬಿದ ರಬ್ಬರ್‌ ದೋಣಿಯಾನ, ಸ್ಕೈಡೈವಿಂಗ್‌, ಪ್ಯಾರಾಸೈಲಿಂಗ್‌, ಗ್ಲೈಡಿಂಗ್‌, ಹಗುರ ವಿಮಾನ ಹಾರಾಟವೇ ಮುಂತಾದ ಕ್ರೀಡೆಗಳ ಉಚಿತ ತರಬೇತಿ ಅಕಾಡಮಿಯಲ್ಲಿ ಲಭ್ಯವಿದ್ದರೂ ಯುವ ಸ್ಪಂದನ ಅತ್ಯಲ್ಪ. ಸಾಹಸಿಗರಿಗೆ ಉತ್ತಮ ತರಬೇತು ದಾರರನ್ನೂ, ಕವಚವೇ ಮುಂತಾದ ಅಗತ್ಯ ರಕ್ಷಣೆಯ ಸಾಧನಗಳ ಜತೆಗೆ ವಿಮೆ ಸೌಲಭ್ಯವನ್ನೂ ಈಗ ಅಕಾಡೆಮಿ ಒದಗಿಸುತ್ತದೆ.

ರಾಮನಗರಂ, ಕೊಡಚಾದ್ರಿ, ಕೆಮ್ಮಣ್ಣುಗುಂಡಿ, ಕುದುರೇಮುಖ, ಯಾಣ ಮೊದಲಾದೆಡೆಗಳಲ್ಲಿ ಶಿಲಾರೋಹಣ, ಪರ್ವತಾರೋಹಣಗಳು ನಡೆದರೆ, ಜಕ್ಕೂರು, ಬೆಂಗಳೂರು, ಮೈಸೂರು, ಭದ್ರವಾತಿ, ಬೀದರ್‌ ಹೀಗೆ ವಿಮಾನ ಇಳಿದಾಣಗಳಿರುವೆಡೆ ವಾಯು ಸಾಹಸಗಳು ನಡೆಯುತ್ತವೆ. ಮಲ್ಪೆ , ಕಾರವಾರ, ಸ್ಯಾಂಕಿಕೆರೆ, ಅಲಸೂರು ಕೆರೆ, ಕೆಂಪುಹೊಳೆ, ಜನಿವಾರ ಕೆರೆ, ಸಿತಾ ನದಿ, ಕೃಷ್ಣಾ, ಕಾವೇರಿ, ಕಿಲ್ಲಾಕೆರೆ, ಹೆಸರಘಟ್ಟ ಕೆರೆಗಳಲ್ಲಿ ಜಲಸಾಹಸ ಶಿಬಿರಗಳನ್ನು ಅಕಾಡೆಮಿ ಏರ್ಪಡಿಸುತ್ತಿದೆ.

ಗ್ರಾಮಾಂತರ ಪ್ರದೇಶಗಳಲ್ಲೂ ಆಗೊಮ್ಮೆ ಈಗೊಮ್ಮೆ ಇಂತಹ ಶಿಬಿರಗಳನ್ನು ಏರ್ಪಡಿಸದ್ದೂ ಉಂಟು. ಸ್ಪರ್ಧೆಗಳನ್ನೂ ಅಕಾಡೆಮಿ ನಡೆಸುತ್ತದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ ಸ್ಪರ್ಧೆಗಳಿಗೆ ಸ್ಪರ್ಧಿಗಳನ್ನೂ ತಯಾರು ಮಾಡಿದೆ. 1991-92ರ ಸಾಲಿನಿಂದ ಅತ್ಯುತ್ತಮ ಸಾಹಸ ಪ್ರಶಸ್ತಿಯನ್ನೂ ನೀಡುತ್ತಿದೆ, ಸಾಹಸ ಕ್ರೀಡೆಗಳಿಗೆ ಪ್ರಚೋದನೆ ನೀಡುವ ಸಂಸ್ಥೆಗಳಿಗೆ ಅತ್ಯತ್ತಮ ಸಾಹಸ ಪ್ರೇರಕ ಪ್ರಶಸ್ತಿಯೂ ಇಲ್ಲಿದೆ. ಇಷ್ಟೇಲ್ಲಾ ಮಾಡಿದ್ದರೂ ಪ್ರಚಾರದಲ್ಲಿ ಹಿಂದೆ ಬಿದ್ದಿರುವ ಅಕಾಡೆಮಿಯ ಧ್ಯೇಯೋದ್ದೇಶಗಳು ಜನಸಾಮಾನ್ಯರಿಗೆ ತಲುಪದೆ ಸೊರಗಿವೆ.

ನಿಮಗೂ ನೀರಿನಲ್ಲಿ ತೇಲುವ, ಆಕಾಶದಲ್ಲಿ ಹಾರುವ ಬಯಕೆಯಿದ್ದರೆ ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿರುವ ಯವನಿಕಾ ಕಟ್ಟಡದಲ್ಲಿನ ಜನರಲ್‌ ತಿಮ್ಮಯ್ಯ ಸಾಹಸ ಅಕಾಡೆಮಿಗೆ ಹೋಗಿ. ವಿವರ ತಿಳಿದು ಮನದಾಸೆಯನ್ನೂ, ಹಲವು ವರ್ಷಗಳ ಕನಸನ್ನೂ ನನಸಾಗಿಸಿಕೊಳ್ಳಿ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more