ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊಹಿನೂರು ನಮ್ಮದೇ ಎಂದು ನಂ. 10 ಡೌನಿಂಗ್‌ ಸ್ಟ್ರೀಟ್‌

By Super
|
Google Oneindia Kannada News

ಕೊಹಿನೂರು ಸದ್ಯಕ್ಕಂತೂ ಭಾರತಕ್ಕೆ ಬರುವ ಲಕ್ಷಣಗಳು ಕಾಣಿಸುತ್ತಿಲ್ಲ . ಭಾರತದ 50 ರಾಜ್ಯ ಸಭೆ ಸದಸ್ಯರು ದೇಶದ ಸಂಸ್ಕೃತಿ ಮತ್ತು ಇತಿಹಾಸದ ಪ್ರತೀಕವಾದ ಕೊಹಿನೂರನ್ನು ಹಿಂದಿರುಗಿಸುವಂತೆ ಮಾಡಿಕೊಂಡ ಮನವಿಯನ್ನು ಬ್ರಿಟನ್‌ ತಿರಸ್ಕರಿಸಿದೆ. ಕೊಹಿನೂರನ್ನು ಪರಭಾರೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ಬಂಕಿಂಗ್‌ ಹ್ಯಾಂ ಅರಮನೆಯ ಪ್ರಕಟಣೆ ತಿಳಿಸಿದೆ. ಭಾರತ ಕೊಹಿನೂರ್‌ಗೆ ಒತ್ತಾಯಿಸುತ್ತಿರುವುದು ಇದು ಮೂರನೇ ಸಲ. 1947 ಮತ್ತು 1953 ರಲ್ಲಿ ಭಾರತ ಕೊಹಿನೂರ್‌ ಹಸ್ತಾಂತರಕ್ಕಾಗಿ ಮನವಿ ಸಲ್ಲಿಸಿತ್ತು.

ಬ್ರಿಟನ್‌ ರಾಜ ಮನೆತನದ ಅವಿಭಾಜ್ಯ ಅಂಗ ಕೊಹಿನೂರ್‌. ಅದು ಪರಭಾರೆ ಮಾಡಲಾಗದ ಆಸ್ತಿ. ಕೊಹಿನೂರ್‌ ಬಗೆಗೆ ಅರಮನೆಯು ಒಡೆತನವನ್ನು ಹೊಂದಿದೆ ಎಂದು ಬ್ರಿಟೀಷ್‌ ಸರ್ಕಾರದ ಸಂಸ್ಕೃತಿ, ಮಾಧ್ಯಮ ಮತ್ತು ಕ್ರೀಡಾ ಇಲಾಖೆ ಸ್ಪಷ್ಟ ಮಾತುಗಳಲ್ಲಿ ಹೇಳಿದೆ. ಈ ಮೊದಲು ಇಲಾಖೆಯ ವಕ್ತಾರರು ಬ್ರಿಟನ್‌ ಸಂಗ್ರಹಾಲಯಗಳು ಯಾವುದೇ ದೇಶದ ಸಂಸ್ಕೃತಿಯ ಕುರುಹು ಎನ್ನುವಂತಹ ವಸ್ತುಗಳನ್ನು ಹೊಂದಿಲ್ಲ ಎಂದು ಹೇಳಿಕೆ ನೀಡಿದ್ದರು.

ಕುತೂಹಲದ ವಿಷಯವೆಂದರೆ, ಪಾಕಿಸ್ತಾನ ಮತ್ತು ಇರಾನ್‌ ದೇಶಗಳು ಕೂಡಾ ಕೊಹಿನೂರ್‌ ಬಗೆಗೆ ತಮ್ಮ ಹಕ್ಕನ್ನು ಪ್ರತಿಪಾದಿಸುತ್ತಿವೆ. ಕೊಹಿನೂರ್‌ ಇರಾನ್‌ನ ಸ್ಮೃತಿಗಳನ್ನು ಹೊಂದಿರುವುದರಿಂದ, ಅದನ್ನು ಹಸ್ತಾಂತರಿಸುವಂತೆ ಇರಾನ್‌ ಕೆಲವು ವರ್ಷಗಳ ಹಿಂದೆ ಬ್ರಿಟನ್‌ ಪ್ರಭುತ್ವವನ್ನು ಒತ್ತಾಯಿಸಿತ್ತು . ಪಾಕಿಸ್ತಾನವಂತೂ ಕೊಹಿನೂರ್‌ ತನ್ನದೇ ಆಸ್ತಿ ಎನ್ನುತ್ತಿದೆ. 1976 ರಲ್ಲಿ ಪಾಕ್‌ ಪ್ರಧಾನಿ ಈ ಕುರಿತ ಮನವಿಯನ್ನು ಬ್ರಿಟನ್‌ಗೆ ಸಲ್ಲಿಸಿದ್ದರು. ಈ ಎರ ಡೂ ದೇಶಗಳ ಜೊತೆಗೆ ದುಲೀಪ್‌ ಸಿಂಗ್‌ನ ವಂಶಸ್ಥರೆಂದು ಹೇಳಿಕೊಳ್ಳುವ ಕೆಲವು ಸಿಖ್‌ ಸಂಘಟನೆಗಳು ಕೂಡಾ ಕೊಹಿನೂರ್‌ ತಮಗೇ ಸೇರಬೇಕೆನ್ನುತ್ತಿದ್ದಾರೆ. ಆದರೆ ಬ್ರಿಟನ್‌ ಯಾರ ಮನವಿಗೂ ಸೊಪ್ಪು ಹಾಕಿಲ್ಲ .

ಸಿಖ್‌ ದೊರೆ ದುಲೀಪ್‌ ಸಿಂಗ್‌ನಿಂದ ಬಲವಂತವಾಗಿ ಕೊಹಿನೂರನ್ನು 1849ರಲ್ಲಿ ವಶಪಡಿಸಿಕೊಳ್ಳಲಾಯಿತು ಎನ್ನುವ ವರದಿಗಳನ್ನು ಇಂಗ್ಲೆಂಡ್‌ ಸರ್ಕಾರ ನಿರಾಕರಿಸಿದೆ. ಲಾಹೋರ್‌ ಒಪ್ಪಂದದ ಅನ್ವಯ, ಯಾವುದೇ ಷರ್ತುಗಳಿಲ್ಲದೆ ಕೊಹಿನೂರನ್ನು ಪಡೆಯಲಾಗಿದೆ ಎಂದು ಸರ್ಕಾರ ದೃಢಪಡಿಸಿದೆ. ಆದರೆ, ಪತ್ರಕರ್ತ ಕ್ರಿಸ್ಟಿ ಕ್ಯಾಂಬೆಲ್‌ ಒಂಭತ್ತು ವರ್ಷದ ಬಾಲಕ ದೊರೆ ದುಲೀಪ್‌ ಸಿಂಗ್‌ನಿಂದ ಬಲವಂತವಾಗಿ ಕೊಹಿನೂರನ್ನು ಪಡೆದು ವಿಕ್ಟೋರಿಯಾ ರಾಣಿಗೆ ಒಪ್ಪಿಸಲಾಯಿತು ಎಂದು ತಮ್ಮ ಕೃತಿ ದಿ ಮಹಾರಾಜಾಸ್‌ ಬಾಕ್ಸ್‌ (ಕೊನೆಯ ಸಿಖ್‌ ದೊರೆಯ ಜೀವನ ಚಿತ್ರ) ನಲ್ಲಿ ದಾಖಲಿಸಿದ್ದಾರೆ.

ಬ್ರಿಟನ್‌ ಬಳಿ ಇರುವುದು ಕೇವಲ ಭಾರತದ ಅಮೂಲ್ಯ ವಸ್ತುಗಳು ಮಾತ್ರವಲ್ಲ - ಇರಾನ್‌, ಗ್ರೀಸ್‌, ಚೀನಾ, ಈಜಿಪ್ಟ್‌ ಮುಂತಾದ ದೇಶಗಳ ಅನನ್ಯ ವಸ್ತುಗಳು ಕೂಡ ಬ್ರಿಟನ್‌ನ ಭಂಡಾರದಲ್ಲಿವೆ. ಹೆಜ್ಜೆ ಇಟ್ಟಲ್ಲೆಲ್ಲಾ ಚೆಂದವಾದದ್ದನ್ನು ದೋಚಿ ಭಂಡಾರವನ್ನು ಭರ್ತಿ ಮಾಡಿಕೊಂಡಿರುವ ಇಂಗ್ಲೆಂಡ್‌, ತಮ್ಮ ಸಂಸ್ಕೃತಿ ಸ್ಮರಣಿಕೆಗಳನ್ನು ಹಿಂದಿರುಗಿಸುವಂತೆ ಕೋರಿರುವ ಈಜಿಪ್ಟ್‌ , ಗ್ರೀಸ್‌, ಚೀನಾಗಳ ಮನವಿಯನ್ನೂ ತಿರಸ್ಕರಿಸಿದೆ. ಸದ್ಯಕ್ಕೆ ಈ ಎಲ್ಲಾ ವಸ್ತುಗಳು ಬ್ರಿಟನ್ನಿನ ವಿಕ್ಟೋರಿಯಾ ಮತ್ತು ಆಲ್ಬರ್ಟ್‌ ಸಂಗ್ರಹಾಲಯಗಳಲ್ಲಿವೆ.

ಬಲವಂತವಾಗಿ ಪಡೆದ ಸಂಸ್ಕೃತಿಯ ಸ್ಮರಣಿಕೆಗಳನ್ನು ವಾಪಸ್ಸು ಮಾಡಬೇಕೆನ್ನುವ ಯುನೆಸ್ಕೋ ನೀತಿಗೆ ಕೊಹಿನೂರನ್ನು ಮರಳಿಸದಿರುವ ಬ್ರಿಟನ್‌ ನಿರ್ಧಾರ ವಿರುದ್ಧವಾಗಿದೆ. ಬ್ರಿಟನ್‌ ಅಂತೂ ಕೊಹಿನೂರಿನ ಮೇಲಿನ ತನ್ನ ಸ್ವಾಮ್ಯವನ್ನು ಒತ್ತಿ ಹೇಳುತ್ತಿದೆ. ಅಂದು ಕೊಹಿನೂರನ್ನು ದೋಚಿ ದರೋಡೆಕೋರರ ಪಟ್ಟ ಪಡೆದ ಇಂಗ್ಲೆಂಡ್‌ ಇವತ್ತು ಕೊಹಿನೂರನ್ನು ಬಲವಂತದಿಂದ ಪಡೆದಿಲ್ಲವೆಂದು ಸುಳ್ಳು ಹೇಳುವ ಮೂಲಕ ಚರಿತ್ರೆಯನ್ನು ತಿದ್ದಲು ಪ್ರಯತ್ನಿಸುತ್ತಿದೆ. ಯಾವುದೇ ಅಪವಾದಕ್ಕಿಂಥ ಕೊಹಿನೂರಿನ ಬೆಲೆ ದೊಡ್ಡದೆನ್ನುವ ಸತ್ಯ ಬ್ರಿಟನ್‌ಗೆ ಗೊತ್ತಿರುವುದೇ, ಕೊಹಿನೂರ್‌ ಭಾರತಕ್ಕೆ ಬರುವ ನಿಟ್ಟಿನಲ್ಲಿನ ದೊಡ್ಡ ಅಡ್ಡಿಯಾಗಿದೆ. ಸ್ಮಶಾನಕ್ಕೆ ಹೋದ ಹೆಣ, ಸರ್ಕಾರಕ್ಕೆ ಸೇರಿದ ಹಣ ವಾಪಸ್ಸಾಗುವುದಿಲ್ಲ ಎನ್ನುವುದು ನಮ್ಮ ನಡುವಿನ ರೂಢಿ ಮಾತು. ಈ ಸಾಲಿಗೆ ಬ್ರಿಟನ್ನಿಗೆ ಹೋದ ಅಮೂಲ್ಯ ವಸ್ತುಗಳನ್ನೂ ಸೇರಿಸಬಹುದೇ?

English summary
Kohinoor seems far away from India
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X