ಆಲ್ಜಿಬ್ರ ಸೂತ್ರಕ್ಕೆ ಸಂಗೀತ ಶಾಸ್ತ್ರ

ಶ್ರುತಿಭೇದದ ಕಲ್ಪನೆ ಸಂಗೀತದ ವಿಸ್ಮಯಗಳಲ್ಲೊಂದು. ಇದನ್ನು ಬಣ್ಣದ ಕಾಗದದ ಚೂರುಗಳು ಮತ್ತು ಕನ್ನಡಿಗಳಿಂದ ಮಾಡಿದ ಕೆಲೈಡೊಸ್ಕೋಪ್‌ಗೆ ಹೋಲಿಸಬಹುದು. ಭಾರತೀಯ ಸಂಗೀತ 22 ಶ್ರುತಿಗಳನ್ನು ಗುರುತಿಸುತ್ತದೆ. ರಾಗಗಳ ಆಧಾರ ಶಬ್ದವನ್ನು ಬದಲಿಸಿ ಅದೇ ಸ್ವರಗಳನ್ನು ಕೇಳಿದಾಗ ಅದರ ಸ್ವರೂಪವೇ ಬೇರೆಯಾಗಿರುತ್ತೆ. ಉದಾಹರಣೆಗೆ, ನೀವು ಮೋಹನ ರಾಗವನ್ನು ಹಾಡುತ್ತಿರುವಾಗ ತಂಬೂರಿಯ ಶ್ರುತಿಯನ್ನು ಒಂದು ಮನೆಯಷ್ಟು ಹೆಚ್ಚಿಸಿದರೆ, ನೀವು ಮಧ್ಯಮಾವತಿ ರಾಗವನ್ನು ಹಾಡುತ್ತಿರುವಂತೆ ಭಾಸವಾಗುತ್ತದೆ. ಹೀಗೆ ರಾಗಗಳನ್ನು ವರದರಂಗನ್ ಪಟ್ಟಿಮಾಡಿ ಅವುಗಳ ಅಂತರವನ್ನು ಆಲ್ಜೀಬ್ರಾದ ಸೂತ್ರಗಳಿಂದ ನಿಗದಿ ಪಡಿಸಿದ್ದಾರೆ.
ವರದರಂಗನ್‌ರ ಶ್ರುತಿ ಲಕ್ಷಣ ಪ್ರಕಾಶಿನಿ ಸಾಮಾನ್ಯ ಓದುಗರಿಗೆ ಖಂಡಿತಾ ಅಲ್ಲ. ಸುಮ್ಮನೆ ಸಂಗೀತ ಕೇಳುವವರಿಗೂ ಅಲ್ಲ. ಇದು ಸಂಗೀತದ ಸಂಶೋಧಕರಿಗೆ ಅಮೂಲ್ಯವೆನಿಸುವ ಪುಸ್ತಕ. ಇಂತಹ ಪುಸ್ತಕ ಕನ್ನಡದಲ್ಲೇ ಮೊದಲು ಪ್ರಕಟವಾಗಿರುವುದು ಹೆಮ್ಮೆಯ ಸಂಗತಿ. ವರದರಂಗನ್ ಮೈಕ್ರೋವೇವ್ ಆಂಟೆನಾಗಳ ಬಗ್ಗೆ ಚೆನ್ನೈನ ಐಐಟಿಯಲ್ಲಿ ಡಾಕ್ಟರೇಟ್ ಪಡೆದು ಈಗ ಬೆಂಗಳೂರಿನ ಅರಿತಾ ನೆಟ್‌ವರ್ಕ್ಸ್ ಎಂಬ ಸಂಸ್ಥೆಯಲ್ಲಿ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ.
ಆರು ತಿಂಗಳು ರಾತ್ರಿಯಿಡೀ ಕೂತು ಬರೆದ ಈ ಪುಸ್ತಕವನ್ನು ಈಗ ಇಂಗ್ಲಿಷ್‌ನಲ್ಲಿಯೂ ಪ್ರಕಟಿಸುವ ಯೋಚನೆಯಲ್ಲಿದ್ದಾರೆ. ಈ ಪುಸ್ತಕವನ್ನು ಬರೆಯಲು ಹೊರಟಾಗ, ಅವರಿಗೆ ಎದುರಾದ ಗಣಿತದ ತೊಡಕುಗಳನ್ನು ದಾಟಲು ವರದರಂಗನ್ ಒಂದು ಪ್ರೋಗ್ರಾಮ್ ಬರೆದಿದ್ದಾರೆ. ಸಂಶೋಧಕರಿಗೆ ಉಚಿತವಾಗಿ ಕೊಡುತ್ತೇನೆ ಎನ್ನುತ್ತಾರೆ.
ವರದ ರಂಗನ್ ಅವರ ಮನೆಯಲ್ಲಿ ಸಂಗೀತ, ಸಾಹಿತ್ಯ ವಿಫುಲವಾಗಿ ಇದ್ದುದು ಅವರಿಗೆ ಸಹಾಯವಾಯಿತಂತೆ. ಗೊರೂರು ರಾಮಸ್ವಾಮಿ ಅಯ್ಯಂಗಾರ್ ನಮ್ಮ ಸಂಬಂಧ. ಅವರ ಮನೆಗೆ ಹೋದಾಗ ಅವರು ಏನಾದರೂ ಓದುತ್ತಲೋ, ಬರೆಯುತ್ತಲೋ ಇರುತ್ತಿದ್ದರು. ಪು.ತಿ.ನ ಅವರು ಸಂಗೀತ ನಾಟಕಗಳನ್ನು ಬರೆದು ಪ್ರಸಿದ್ಧ ಎಂದು ಕನ್ನಡದ ಹಿರಿಯ ಬರಹಗಾರರೂ, ತಮ್ಮ ಬಳಗದವರೂ ಆದವರನ್ನು ವರದರಂಗನ್ ಸ್ಮರಿಸುತ್ತಾರೆ. ವರದರಂಗನ್ ಅವರು ಆಕಾಶವಾಣಿಯಲ್ಲಿ ಆಗಾಗ ಹಾಡುತ್ತಿರುತ್ತಾರೆ.












Click it and Unblock the Notifications