ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಬು ಚುರುಕು ಪ್ರಶ್ನೆಗಳನ್ನು ಕೇಳಿ ತಲೆ ತಿನ್ನುವುದರಲ್ಲಿ ನಿಸ್ಸೀಮ.

By Super
|
Google Oneindia Kannada News

Mangalore, beach
ಬೆಂಗಳೂರು ಚಂದವೋ ಮಂಗಳೂರು ಚಂದವೋ ನಮ್ಮ ಪಕ್ಕದ ಮನೆ ಪುಟ್ಟ ಬಾಬು ಚುರುಕು ಪ್ರಶ್ನೆಗಳನ್ನು ಕೇಳಿ ತಲೆ ತಿನ್ನುವುದರಲ್ಲಿ ನಿಸ್ಸೀಮ. ಪ್ರಶ್ನೆಗಳ ಬಾಣ ಎಂದೂ ಅವನ ಬತ್ತಳಿಕೆಯಲ್ಲಿ ಅಕ್ಷಯ. ಮೊನ್ನೆ ಒಂದು ಪ್ರಶ್ನೆ ಕೇಳಿದ, ಬಸ್ಸು, ರೈಲು, ವಿಮಾನ, ಹಡಗು ನಾಲ್ಕೂ ಹೋಗುವ ಕರ್ನಾಟಕದ ಊರು ಯಾವುದು ಎನ್ನುವುದವನ ಪ್ರಶ್ನೆ. ಕ್ಷಣ ಕಕ್ಕಾಬಿಕ್ಕಿಯಾಗಿ ತಲೆ ಕೆರೆದುಕೊಳ್ಳುವಷ್ಟರಲ್ಲಿ , ಅಷ್ಟೂ ಗೊತ್ತಿಲ್ಲವಾ, ಮಂಗಳೂರು ಅಲ್ಲವಾ ಅಂಥಾ ನಗುತ್ತಿದ್ದ.

ಬಾಬು ಮಾತು ಎಷ್ಟು ನಿಜವಲ್ಲವಾ. ನೆಲ, ಜಲ, ವಾಯು- ಮೂರೂ ಸಂಪರ್ಕಗಳನ್ನು ಹೊಂದಿರುವ ಭಾಗ್ಯ ಎಷ್ಟು ಊರುಗಳಿಗಿದ್ದೀತು. ಅಂಥಾ ಭಾಗ್ಯವನ್ನು ಪಡೆದ ಕರ್ನಾಟಕದ ಏಕೈಕ ನಗರಿ ಮಂಗಳೂರು.

ಮಂಗಳೂರು ಯಾಪಾಟಿ ಬೆಳವಣಿಗೆ ಹೊಂದುತ್ತಿದೆಯೆಂದರೆ , ಇನ್ನು ಐದಾರು ವರ್ಷಗಳಲ್ಲಿ ಸೈಬರ್‌ಸಿಟಿ ಎನ್ನುವ ಖ್ಯಾತಿ ಬೆಂಗಳೂರಿನ ಕೈ ತಪ್ಪಿದರೆ ಆಶ್ಚರ್ಯವೇನೂ ಇಲ್ಲ. ನಿನ್ನೆ ತಾನೆ ಮಂಗಳೂರಿನ ಸಮೀಪ ಐಟಿ ಸ್ಥಾಪಿಸುವುದಾಗಿ ಕೇಂದ್ರದ ಮಾಹಿತಿ ಮತ್ತು ತಂತ್ರಜ್ಞಾನ ಸಚಿವರು ತಿಳಿಸಿದ್ದಾರೆ. ತೆಂಗಿನ ಮರಗಳ ಮಡಲಿನೆಡೆಯಿಂದ ತೂರಿ ಬರುವ ಸೂರ್ಯನ ಸಂಜೆ ರಶ್ಮಿ ಮೈದಡುವುದು ಈಗ ಬರೆಯ ಮೀನು ತುಂಬಿದ ದೋಣಿಗಳನ್ನಲ್ಲ. ಟೆಕ್ನಾಲಜಿ

ಪಾ ರ್ಕ್‌ ಹೊಂದಲಿರುವ ಐ.ಟಿ. ಕೇಂದ್ರವನ್ನು. ಮಂಗಳೂರೀಗ ಸುದ್ದಿಯಲ್ಲಿದೆ.

ಮಂಗಳೂರು ಎಂದಾಕ್ಷಣ ನೆನಪಿಗೆ ಬರುವುದು ಆಕಾಶದಂತೆ ಬಿದ್ದುಕೊಂಡಿರುವ ಸಮುದ್ರ, ಆಮೇಲೆ ಮಂಗಳೂರು ಗಣೇಶ ಬೀಡಿ. ಮಂಗಳೂರು ಹೆಂಚು ಕೂಡಾ ಪ್ರಸಿದ್ಧವೇ. ಇತ್ತೀಚಿನ ದಿನಗಳಲ್ಲಿ ಹೆಂಚಿನ ಬಳಕೆ ಕಡಿಮೆಯಾಗಿ ಮಂಗಳೂರು ಹೆಂಚಿನ ಖ್ಯಾತಿ ಕಮ್ಮಿಯಾಗುತ್ತಿರುವುದು ಬೇರೆಯೇ ಕತೆ. ಮಂಗಳೂರಿನಷ್ಟು ಸುವ್ಯವಸ್ಥಿತ ಖಾಸಗಿ ಸಾರಿಗೆ ವ್ಯವಸ್ಥೆಯನ್ನು ನೀವೆಲ್ಲೂ ಕಂಡಿರಲಾರಿರಿ.

ಮಂಗಳೂರಿಗೆ ಎರಡು ಮುಖ. ಸಮುದ್ರ ಇರುವ ಊರಾದರೂ ಜನ ಕುಡಿಯುವ ನೀರಿಗೆ ಮೈಲು ನಡೆಯಬೇಕು. ಸುಂದರ ಪ್ರಕೃತಿಯಾಂದಿಗೆ ಪ್ರಕೃತಿಜನ್ಯವಾದ ಮಲೇರಿಯಾಕ್ಕೂ ಮಂಗಳೂರು ಫೇಮಸ್ಸು. ಸುಸಂಸ್ಕೃತ ಜನರಿಗೆ ಹೆಸರಾಗಿರುವ ಮಂಗಳೂರಿಗೆ ರೌಡಿಸಂನ ಕುಖ್ಯಾತಿಯೂ ಇದೆ.

ಮಂಗಳೂರಿನಲ್ಲಿ ಏನಿಲ್ಲ ?

ಪಶ್ಚಿಮ ಘಟ್ಟಗಳ ಬೆಚ್ಚನೆಯ ನೆರಳಲ್ಲಿರುವ ಮಂಗಳೂರಿನಲ್ಲಿ ಅರಬ್ಬೀ ಸಮುದ್ರ ತಡಿಯ ವಿಹಾರ ಕೇಂದ್ರಗಳು ಪ್ರಮುಖ ಪ್ರವಾಸೀ ಮತ್ತು ವಾಣಿಜ್ಯ ಆಕರ್ಷಣೆಗಳಾಗಿವೆ.

ಸಮುದ್ರ ಮಂಗಳೂರನ್ನು ಆಧುನಿಕ ಜಗತ್ತಿನೊಂದಿಗೆ ಬೆಸೆದಿದೆ. ಸಾಕ್ಷರತೆ, ಇಂಗ್ಲಿಷ್‌ ಭಾಷಾ ಪರಿಣಿತಿಯಾಂದಿಗೆ ಮಂಗಳೂರ ಮಂದಿ ಅಂತರ್‌ರಾಷ್ಟ್ರ ಮಟ್ಟದಲ್ಲಿ ವ್ಯವಹರಿಸುತ್ತಾರೆ. ಇಲ್ಲಿನ ಜನ ಎಷ್ಟು ಬುದ್ದಿವಂತರೆಂದರೆ ಬಹಳಷ್ಟು ಜನ ಎರಡಕ್ಕಿಂತ ಹೆಚ್ಚು ಭಾಷೆಗಳಲ್ಲಿ ವ್ಯವಹರಿಸುತ್ತಾರೆ. ಕನ್ನಡದೊಂದಿಗೆ ತುಳು, ಕೊಂಕಣಿಗಳು ಜನರ ಬದುಕಿನಲ್ಲಿ ಹಾಸುಹೊಕ್ಕಿವೆ.

ಈಗ ಜಿಲ್ಲೆ ಶೇ.100ರಷ್ಟು ಕಂಪ್ಯೂಟರ್‌ ಸಾಕ್ಷರತೆಯ ಸಾಧನೆಯ ಹಾದಿಯಲ್ಲಿದೆ. ಇದಕ್ಕೆ ಪೂರಕವಾಗಿ ಟೆಕ್ನಾಲಜಿ ಪಾರ್ಕ್‌ಗಳು ಮಂಗಳೂರಿನ ಹೊಸಿಲು ತುಳಿಯಲಿವೆ.

ಬಂದರು ನಗರಕ್ಕೆ ಮುಂಬಯಿ ಮಹಾನಗರದ ಸ್ನೇಹವಿದೆ. ಮುಂಬಯಿಯಾಂದಿಗಿನ ಸಂಪರ್ಕವೇ ಮಂಗಳೂರಿಗೆ ಮಾಫಿಯಾ ಕಳೆಯನ್ನು ಒದಗಿಸಿದೆ.

ಮರವಂತೆ ಬೀಚ್‌ನ ಸೌಂದರ್ಯ ಬಹುಶಃ ಮತ್ತೆಲ್ಲೂ ಸಿಗದು. ರಸ್ತೆಯ ಒಂದು ಮಗ್ಗುಲಲ್ಲಿ ನದಿ ಹರಿಯುತ್ತಿದ್ದರೆ ಮತ್ತೊಂದು ಮಗ್ಗುಲಲ್ಲಿ ಸಮುದ್ರ ಮೊರೆಯುತ್ತದೆ. ನಡುವೆ ಇರುವ ರಸ್ತೆಯಲ್ಲಿ ಪಯಣಿಸುವ ಸುಖವೇ ಬೇರೆ.

ಮಂಗಳೂರಿನವರು ವ್ಯವಹಾರಸ್ಥರು ಎನ್ನುವ ಮಾತಿಗೆ ಪೂರಕವಾಗಿ ಬ್ಯಾಂಕಿಂಗ್‌ ಕ್ಷೇತ್ರದಲ್ಲೂ ಮಂಗಳೂರೇ ಮುಂದು. ಕೈಗಾರಿಕೆಗಳು ಜಿಲ್ಲೆಯ ಹೆಸರಿಗೆ ಮೆರುಗು ನೀಡಿವೆ. ಗೋಡಂಬಿ ಕಾರ್ಖಾನೆಗಳು, ಬೀಡಿ ಕಂಪೆನಿಗಳು ಮಂಗಳೂರಿನ ಬಡವರನ್ನು, ಮದ್ಯಮ ವರ್ಗವರೊಂದಿಗೆ ಸಾಮರಸ್ಯದೊಂದಿಗೆ ಬದುಕುವಂತೆ ಮಾಡಿದೆ.

ವ್ಯವಹಾರಸ್ಥರ ಊರಿನಲ್ಲಿ ಪುಣ್ಯಕ್ಷೇತ್ರಗಳೂ ಅನೇಕ.

ಮಂಗಳೂರಿನಲ್ಲಿರುವ ಪಣಂಬೂರು, ತಣ್ಣೀರು ಬಾವಿ ಮತ್ತು ಸಮ್ಮರ್‌ ಸ್ಯಾಂಡ್‌ ಬೀಚ್‌ಗಳು, ಕೊಲ್ಲೂರು, ಧರ್ಮಸ್ಥಳ , ಸುಬ್ರಹ್ಮಣ್ಯ, ಮೂಡಬಿದಿರೆ ಬಸದಿ ಕ್ಷೇತ್ರಗಳು ಪ್ರವಾಸಿಗರಿಗೆ ಆಹ್ವಾನ ನೀಡಿವೆ. ನೆಲ್ಲಿತೀರ್ಥ, ಕಾರಿಂಜೇಶ್ವರ ಪುಣ್ಯಕ್ಷೇತ್ರ ಮತ್ತು ಸೀತಾ ಫಾಲ್ಸ್‌ನಂತಹ ಪ್ರದೇಶಗಳು ಚಾರಣ ಮಾಡುವವರಿಗೆ ಹಿತವಾದ ಸವಾಲೊಡ್ಡುತ್ತದೆ.

ಇಷ್ಟೆಲ್ಲ ಕೇಳಿದಿರಲ್ಲ , ಸರಿ, ಮಂಗಳೂರಿಗೆ ಯಾವಾಗ ಬರ್ತೀರಿ. ಮೀನು ಗಸಿ, ಕೋರಿ ರೊಟ್ಟಿ , ಗೋಲಿ ಬಜ್ಜಿ,

ಪತ್ರೊಡೆಗಳ ರುಚಿಗಳನ್ನು ನೀವು ಎಂದೂ ಮರೆಯಲಾರಿರಿ. ಬಾಯಲ್ಲಿ ನೀರೂರುತ್ತಿದೆಯಾ, ಮತ್ತೇಕೆ ತಡ, ಇಂದೇ ಹೊರಡಿ ಮಂಗಳೂರಿಗೆ.

ನೀವು ಇಲ್ಲಿ ಉಳಿದುಕೊಳ್ಳಬಹುದು :

ಹೋಟೆಲ್‌ ಮಂಜುರಾನ್‌
ಹಳೇ ಬಂದರು ರಸ್ತೆ.
ಮಂಗಳೂರು.
ಫೋ.31791, 26980.

ಹೋಟೆಲ್‌ ಮೋತಿ ಮಹಲ್‌
ಫಳ್ನೀರ್‌ ರಸ್ತೆ.
ಫೋನ್‌ 22211

ಹೋಟೆಲ್‌ ವಿಮಲೇಶ್‌ ಇಂಟರ್‌ನ್ಯಾಶನಲ್‌
ಗಣಪತಿ ದೇವಸ್ಥಾನ ರಸ್ತೆ.
ಫೋನ್‌ 33711

ಹೋಟೆಲ್‌ ಶ್ರೀನಿವಾಸ್‌
ಗಣಪತಿ ಹೈಸ್ಕೂಲ್‌ ರಸ್ತೆ.
ಫೋನ್‌:22381

ಹೋಟೆಲ್‌ ನವರತ್ನ ಪ್ಯಾಲೇಸ್‌
ಕೆ.ಎಸ್‌ ರಸ್ತೆ.
ಫೋನ್‌ 35680, 35681

ಸಮ್ಮರ್‌ ಸ್ಯಾಂಡನ ಬೀಚ್‌ ಹೋಟೆಲ್‌
ಉಳ್ಳಾಲ
ಫೋನ್‌ 467690

ಮಂಗಳೂರು ಬೆಂಗಳೂರಿನಿಂದ 357 ಕಿಮೀ ದೂರದಲ್ಲಿದೆ.

ಇಲ್ಲಿ ವಿಮಾನ ನಿಲ್ದಾಣ, ರೈಲು ನಿಲ್ದಾಣ ಮತ್ತು ಬಂದರು ಇರುವುದರಿಂದ ದೇಶದ ಎಲ್ಲ ಪ್ರಮುಖ ನಗರಗಳ ಸಂಪರ್ಕ ಇಲ್ಲಿಗಿದೆೆ.

English summary
history,beach,resort, temple, beedi, bank, education, rowdism, crime, mafia, port, ship
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X