ನೀಳ್ಗತೆ (ಭಾಗ 3) : ಎಡವಟ್ಟಾಯ್ತು ತಲೆಕೆಟ್ಟೋಯ್ತು

"ಹೂಂ. ಕೂತ್ಕೊಳಪ್ಪ ಬಂದೆ ", ಎಂದು ಹೇಳಿ, ತಾತ ಕಬೋರ್ಡ್ ನಿಂದ ಕತ್ತರಿ, ಬಾಚಣಿಗೆ, ಸ್ಪ್ರೇ ಬಾಟಲ್, ಮತ್ತೆ ಇನ್ನಿತರ ಕ್ಷೌರದ ಸಾಮಗ್ರಿಗಳನ್ನು ನಿಧಾನವಾಗಿ ಹೊರತೆಗೆದರು. ತಾತಾನನ್ನೇ ಒಂದು ಬಾರಿ ಗಮನಿಸಿದೆ. ಥೇಟ್ ಮುನ್ನ ಭಾಯ್ ಸಿನಿಮಾದ ಪೆನ್ಷನ್ ತಾತ. ಸರಳ ದಿರಿಸು, ತಲೆ ತುಂಬ ಮುಳ್ಳಿನಂತೆ ಚೂಪುಚೂಪಾದ ಬಿಳಿ ಕೂದಲು. ಹಲ್ಲಿಲ್ಲವಾದುದರಿಂದ ಕೆನ್ನೆ ಸ್ವಲ್ಪ ಒಳಗೆ ಹೋಗಿತ್ತು. ಸೊಸೆ ಕಂಡರೆ ಹೆದರುವ, ತನ್ನ ಪಾಡಿಗೆ ತಾನು ಟೀವಿ ಸೀರಿಯಲ್ ನೋಡುತ್ತಾ ಭಗವದ್ಗೀತೆಯ ತಾತ್ಪರ್ಯ ಓದುವಂತಹ ಪಾಪದ ಅಜ್ಜನಂತೆ ಕಂಡರು.

ತಾತ ಉದ್ದ ಬಟ್ಟೆಯೊಂದನ್ನು ನಾಡಿಯ ಮೇಲೆ ಹಾಸಿದ ನಂತರ ಅವನು, "ಟ್ರಿಮ್ಮಿನ್ಗ್", ಎಂದು ಅರ್ಧ ನಿರ್ಲಕ್ಷ್ಯ, ಅರ್ಧ ಆತುರದಿಂದ ಘೋಷಿಸಿ, ಮುಂದೆ ಬರುವ ಶೃಂಗಾರ ದಿನಗಳ ಸ್ಮರಣೆಯಲ್ಲಿ ಕಣ್ಣು ಮುಚ್ಚಿ ಮೈಮರೆತ. ತಾತ ನಾಡಿಯ ಕೆಂಚು ಕೂದಲನ್ನು ಹುಡುಕಿ ಹುಡುಕಿ ಚಪ್ ಚಪ್ ಶಬ್ದ ಬರಿಸುತ್ತಾ ನಾಜೂಕಾಗಿ ಕತ್ತರಿಸಲು ಶುರು ಮಾಡಿದರು. ಇಷ್ಟು ಹೊತ್ತಿಗೆ ಬುರ್ಲಿ ಗೋಡೆಗೆ ಒರಗಿಕೊಂಡು ಹಿಂದಿನ ದಶಕದ ಫಿಲಂಫೇರ್ ನ ಪೇಜುಗಳನ್ನು ತಿರುಗಿಸುತ್ತಾ, "ಓಹೋ", ಎಂದು, ಈಗಷ್ಟೇ ಬಂದ ಬ್ರೇಕಿಂಗ್ ನ್ಯೂಸ್ ಎಂಬಂತೆ, ಮದ್ಮದ್ಯ ಉದ್ಗರಿಸುತ್ತಾ ನಿಂತನು. ನಾನು ಮೊಬೈಲ್ ತೆಗೆದು ಅರ್ಧ ಮುರಿದ ಸ್ಟೂಲಿನಲ್ಲಿ ಸುಮ್ಮನೆ ಕೂತೆ.

ಕಟಿಂಗ್ ಶುರುವಾಗಿ ಇನ್ನೂ ಐದು ನಿಮಿಷ ಆಗಿಲ್ಲ, ಆಗಲೇ ನಾಡಿಗೆ ಮೇಲಿಂದ ಮೇಲೆ ಫೋನ್ ರಿಂಗ್ ಆಗಲು ಶುರುವಾಯಿತು. ನಾಡಿ ಕಟಿಂಗ್ ಬಟ್ಟೆಯಿಂದ ಮೊಬೈಲನ್ನು ನುಸುಳಿಕೊಂಡು ಯೋಗಾಸನ ಮಾಡುತ್ತಾ ತೆಗೆದು, "ಹಾಂ. ಬಂದೆ ಮಾ. ನಂಗೊತ್ತು ರಾಹುಕಾಲ ಇನ್ ಒಂದ್ ಘಂಟೆಗೆ ಅಂತ. ಅರ್ಧ ಘಂಟೆ ಪೂಜೆ. ಇನ್ ಕಾಲ್ ಘಂಟೆಗೆ ಬಂದ್ರೆ ಆಯ್ತಲ್ವಾ? ಇಲ್ಲೇ ಸರ್ಕಲ್ ಹತ್ರ ಇದೀನಿ. ಬಂದ್ಬಿಟ್ಟೆ, ಬಂದ್ಬಿಟ್ಟೆ", ಎಂದು ಥೇಟ್ ಅರ್ಚಕರಂತೆ ಅಮ್ಮನನ್ನು ಸಮಾಧಾನಗೊಳಿಸಿದ. ಮುಂದೆ ಬಂದ ಮೂರು ಫೋನ್ ಕರೆಗಳಲ್ಲಿ ನಾವು ಶಾಂತಿಸಾಗರ್, ಆಂದೋಲನ ಸರ್ಕಲ್, ಗಣೇಶ್ ಭಂಡಾರ್ ಗಳಲ್ಲಿದ್ದೆವು. ಈ ಕಾಲ್ಪನಿಕ ಪ್ರವಾಸ ಆಗುವಷ್ಟರಲ್ಲಿ ಹದಿನೈದು ನಿಮಿಷದ ಹೇರ್ಕಟ್ ಮುಗಿಯಿತು.

Friend's marriage and awkward hair cutting (part 3)

ನಾಡಿಗೆ ಅಪರಿಚಿತ ನಂಬರ್ ಗಳಿಂದ, "come fast", ಅನ್ನೋ ಮೆಸೇಜ್ ಗಳು ಬರಲಾರಂಭಿಸಿದವು. ಮೊದಲೇ ಅವಸರ ಸ್ವಭಾವದವನಾದ ನಮ್ಮ ಗೆಳೆಯ ನಾಡಿ, ತಾತ ಕಟಿಂಗ್ ಬಟ್ಟೆಯನ್ನು ತೆಗೆದೇಟಿಗೆ ಚಕ್ಕನೆ ಎದ್ದು ನಿಂತು, ಅವರಿಗೆ ನಲ್ವತ್ತು ರೂಪಾಯಿ ಕೊಟ್ಟು, ಚೇಷ್ಟೆ ಮಾಡಿದ ತುಂಟ ಮಗುವಿನ ಹಾಗೆ, ಪುಟಪುಟನೆ ಕಾರಿನತ್ತ ಓಡಿದ. ಅವನನ್ನು ನೋಡಿ ತಾತ ಅಲೌಕಿಕ ಆನಂದವನ್ನು ಪ್ರತಿಬಿಂಬಿಸುವ ಒಂದು ನಗೆಯನ್ನು ನಕ್ಕರು. "ಹೂಂ! ಬೇಗ ಬನ್ನಿ. ಲೇಟ್ ಆಯ್ತು", ಎಂದು ನಾಡಿ, ಮುಂದೆ ಪತ್ನಿಯನ್ನು ಗದರಿಸುವ ವಿಧಾನವನ್ನು ನಮ್ಮ ಮೇಲೆ ಪ್ರದರ್ಶಿಸಿದ. ಧಡಬಡ ಮಾಡಿಕೊಂಡು ಮೂರೂ ಜನ ಕಾರು ಹತ್ತಿದೆವು.

ನನ್ನ ಪಕ್ಕ ಕೂತಿದ್ದ ನಾಡಿಯ ಮುಖದಲ್ಲಿ ಸ್ವಲ್ಪ ಆತಂಕ ಕಾಣುತ್ತಿತ್ತು. "ಇನ್ನು ಮುಕ್ಕಾಲು ಘಂಟೆಗೆ ರಾಹುಕಾಲ. ಈ ಒಂದು ಪೂಜೆ ನಡೆಯದೆ ಹೋದರೆ, ಮುಂದಿನ ಶಾಸ್ತ್ರಗಳನ್ನೆಲ್ಲಾ ಮುಂದೂಡ್ಬೇಕು. ಛತ್ರ ಬೇರೆ ಬುಕ್ ಆಗ್ಬಿಟಿದೆ ", ನಮಗಿಂತ ಹೆಚ್ಚಾಗಿ ತನಗೆ ತಾನೇ ನಾಡಿ ಮಾತಾಡಿಕೊಂಡ. ವಿಷಯ ಬದಲಿಸುವುದಕ್ಕಾಗಿ ಬುರ್ಲಿ ಹಿಂದಿನ ಸೀಟಿನಿಂದ, "ಹೇರ್ಕಟ್ ಚೆನಾಗಿದೆ ಕಣೋ", ಅಂದ.
"ಹೌದಾ?" ನಾಡಿ ಬುರ್ಲಿಯ ಕಡೆ ತಿರುಗಿದ.

"ಹೂಂ. ಪಾಪ ತಾತ ಅಚ್ಚುಕಟ್ಟಾಗಿ ಮಾಡಿದಾರೆ. ನೀನೀಗ ಛತ್ರಕ್ಕೆ ಎಂಟ್ರಿ ಕೊಟ್ಟೆ ಅಂದ್ರೆ ಎಲ್ಲಾರೂ....", ಬುರ್ಲಿ ಮಧ್ಯದಲ್ಲೇ ಮಾತನ್ನು ನಿಲ್ಲಿಸಿದ. ತನ್ನ ಚಿಂತಾಲೋಕದಲ್ಲಿ ಕಳೆದು ಹೋಗಿದ್ದ ನಾಡಿ ಇದನ್ನು ಗಮನಿಸಲಿಲ್ಲ. ನಾನು ಹಿಂದೆ ನೋಡುವ ಕಾರಿನ ಕನ್ನಡಿಯಲ್ಲಿ ಕಣ್ಣು ಹಾಯಿಸಿ ಬುರ್ಲಿಯ ಕಡೆ ನೋಡಿದೆ. ಬುರ್ಲಿಯ ಮುಖ, ಭೂತವನ್ನು ನೋಡುತ್ತಿದ್ದಾನೇನೋ ಎಂಬಂತೆ, ಸಂಪೂರ್ಣವಾಗಿ ಸಪ್ಪೆಯಾಗಿತ್ತು. ಅವನು ನಾಡಿ ಕೂತ ದಿಕ್ಕಿನಲ್ಲೇ ನೋಡುತ್ತಾ ಅಚಲವಾಗಿದ್ದ. ನಾನು ವಾಪಸ್ಸು ರೋಡಿನತ್ತ ಕಣ್ಣು ಸೆಳೆದೆ. ಪಕ್ಕದಲ್ಲಿ ಮೋಹಿನಿ ಮುಂಗುರುಳನ್ನು ಮುಂದೆ ಮಾಡಿಕೊಂಡು ನನ್ನನ್ನೇ ಕೆಂಗಣ್ಣಿನಿಂದ ದಿಟ್ಟಿಸಿ ನೋಡುತ್ತಿರುವ ದೃಶ್ಯ ಒಂದು ಕ್ಷಣಕ್ಕೆ ನನ್ನ ತಲೆ ಹೊಕ್ಕಿತು. ಕಡೆಗೆ, "ಸತ್ರೆ ಸತ್ತೆ ", ಅಂದುಕೊಂಡು ನಿಧಾನವಾಗಿ ಪಕ್ಕದ ಸೀಟಿನ ಕಡೆ ತಿರುಗಿದೆ. ಪಕ್ಕದಲ್ಲಿ ಸದ್ಯಕ್ಕೆ ಚಿಂತಾಮಣಿ ನಾಡಿಯೇ ಕೂತಿದ್ದ. ಆದರೆ ಏನೋ ಬೇರೆ ತರ ಕಾಣಸ್ತಿದಾನ್ನಲ್ಲಾ ಅನಿಸಿತು. ಮತ್ತೆ ಅವನ ಕಡೆ ನೋಡಿದೆ. ಬುರ್ಲಿಯ ಭಯಂಕರ ಮುಖಭಾವಕ್ಕೆ ಕಾರಣ ನನಗೆ ಥಟ್ಟನೆ ಕಂಡುಬಂತು. ನಾಡಿಯ ಬಲಭಾಗದ ಸೈಡ್ಲಾಕ್ ಸಂಪೂರ್ಣವಾಗಿ ಕಣ್ಮರೆಯಾಗಿತ್ತು. ಅವನ ಕೂದಲು, ಕಿವಿಯ ಮೇಲಿನ ಅಂಚಿನ ತನಕ ಬಂದು ಅಲ್ಲೇ ಕೊನೆಗೊಂಡಿತ್ತು. ಸೈಡ್ಲಾಕ್ ಇರಬೇಕಾದ ಜಾಗ ಗದಗಿನ ಬರಭೂಮಿಯಂತೆ ಕಾಣುತ್ತಿತ್ತು. ಸರಕ್ಕನೆ ಬ್ರೇಕ್ ಹಾಕಿ ಕಾರನ್ನು ಸೈಡಲ್ಲಿ ನಿಲ್ಲಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+