ಕಾಡ ಬೆಳದಿಂಗಳು
ಸತ್ತಿದ್ದು ತನ್ನ ಮಗ ಚಂದ್ರಹಾಸ ಅಲ್ಲ, ಚಂದ್ರಶೇಖರಯ್ಯನ ಮಗ ಸುಮತೀಂದ್ರ ಅನ್ನುವುದು ಮೂರು ದಿನಗಳ ನಂತರ ಶಿವರಾಮಯ್ಯನವರಿಗೆ ಗೊತ್ತಾಯಿತು. ಹಾಗೆ ಗೊತ್ತಾಗುವ ಹೊತ್ತಿಗಾಗಲೇ ಅವರು ಮಗನನ್ನು ಕಳೆದುಕೊಂಡ ದುಃಖ ಅನುಭವಿಸಿ ಆಗಿತ್ತು. ಪೊಲೀಸರು ತಾವು ಆ ರೆಕಾರ್ಡ್ ಬದಲಿ ಮಾಡಿಕೊಳ್ಳುತ್ತೇವೆ ಅಂತ ಹೇಳಿ ಶಿವರಾಮಯ್ಯನವರ ಕೈಯಿಂದ ಸ್ವಲ್ಪ ದುಡ್ಡು ಕೀಳಲಿಕ್ಕೆ ನೋಡಿದರು. ಅದಕ್ಕೆ ಶಿವರಾಮಯ್ಯ ಮಣಿಯಲಿಲ್ಲ. ಯಾರಿಗೂ ಚಿಕ್ಕಾಸೂ ಕೊಡದೇ, ಚಂದ್ರಶೇಖರಯ್ಯನವರಿಗೆ ವಿಷಯ ತಿಳಿಸಿ ಅವರನ್ನೇ ಕಳಿಸುವುದಾಗಿ ಹೇಳಿ ಹೊರಟುಬಿಟ್ಟರು.
ದಾರಿಯಲ್ಲಿ ಬರುವಾಗ ಯೋಚನೆಯಾಯಿತು. ಈ ವಿಚಾರವನ್ನು ಚಂದ್ರಶೇಖರಯ್ಯನಿಗೆ ಹೇಳುವುದಾದರೂ ಹೇಗೆ? ಅವರು ಇದನ್ನು ಹೇಗೆ ಸ್ವೀಕರಿಸಬಹುದು. ತನ್ನಂಥವನಿಗೆ, ಹೆಂಡತಿ ಇರುವ ತನ್ನಂಥವನಿಗೇ ಒಂದು ಕ್ಷಣ ತಡೆದುಕೊಳ್ಳಲಾಗದೇ ಹೋದ ಸಂಗತಿಯನ್ನು ಆತ ಹೇಳಿ ತಾಳಿಕೊಂಡಾನು. ಅಷ್ಟಕ್ಕೂ ಅವನ ಮಗ ಮನೆಗೆ ಬರದೇ ವರುಷಗಳೇ ಕಳೆದಿವೆ. ಅವನು ಎಲ್ಲಿದ್ದಾನೆ ಅನ್ನುವುದೂ ಅಪ್ಪ ಅನ್ನಿಸಿಕೊಂಡವನಿಗೆ ಗೊತ್ತಿಲ್ಲ. ಆ ಅನೂಹ್ಯದಲ್ಲಿ ಅವನು ಇದ್ದುಬಿಡಲಿ. ಮಗ ಎಲ್ಲೋ ಬದುಕಿದ್ದಾನೆ ಅನ್ನುವ ಸಣ್ಣ ಸಂತೋಷವಾದರೂ ಅವನಿಗಿರಲಿ. ಸತ್ತಿದ್ದು ಯಾರೋ ಏನೋ ಅಂತ ಹೇಳಿದರಾಯಿತು ಅಂದುಕೊಂಡರು ಶಿವರಾಮಯ್ಯ. ಮಗ ಬಂದು ಪಿಂಡ ಇಡ್ತಾನೆ ಅಂತ ಕಾಯ್ತಿರುತ್ತೆ ಜೀವ. ಇಂಥ ಸುದ್ದಿ ಮುಚ್ಚಿಡೋದು ನ್ಯಾಯವೇ ಅಂತ ವಿಶಾಲಾಕ್ಷಿ ಆತಂಕದಲ್ಲಿ ಕೇಳಿದ್ದಕ್ಕೆ ಶಿವರಾಮಯ್ಯ ಉತ್ತರ ಕೊಡಲಿಲ್ಲ. ಆದರೆ ಊರಿಗೆ ಬಂದವರು ಸತ್ತದ್ದು ನನ್ನ ಮಗ ಅಲ್ಲ ಅಂತಷ್ಟೇ ಹೇಳಿ ಸುಮ್ಮನಾದರು. ಮತ್ಯಾರು ಅಂತ ಚಂದ್ರಶೇಖರಯ್ಯ ಕೇಳಿದ್ದರೆ ಖಂಡಿತಾ ಸಮಸ್ಯೆ ಆಗುತ್ತಿತ್ತು ಶಿವರಾಮಯ್ಯನಿಗೆ. ಆದರೆ ಚಂದ್ರಶೇಖರಯ್ಯ ಕೇಳಲಿಲ್ಲ.
***
ಆದರೆ ಆಮೇಲೆ ಚಂದ್ರಶೇಖರಯ್ಯನವರನ್ನು ಭೇಟಿ ಆದಾಗಲೆಲ್ಲ ಶಿವರಾಮಯ್ಯನವರನ್ನು ಒಂಥರದ ಪಾಪಪ್ರಜ್ಞೆ ಕಾಡತೊಡಗಿತು. ಅದಕ್ಕೆ ತಕ್ಕಂತೆ ಚಂದ್ರಶೇಖರಯ್ಯ ಆಗಾಗ ತನ್ನ ಮಗನ ಬಗ್ಗೆ ಹೇಳುತ್ತಿದ್ದರು. ಎಲ್ಲಿದ್ದಾನೋ ಏನೋ, ಒಂದಲ್ಲ ಒಂದು ದಿನ ಬಂದೇ ಬರುತ್ತಾನೆ, ಸಂಬಂಧ ದೊಡ್ಡದು ಅನ್ನುತ್ತಿದ್ದರು. ಆಗೆಲ್ಲ ಶಿವರಾಮಯ್ಯ ಆಕಾಶ ನೋಡುತ್ತಾ ಕೂತು ಬಿಡುತ್ತಿದ್ದರು, ನೆಲ ನೋಡಿದರೆ ಎಲ್ಲಿ ಕಣ್ಣಿಂದ ಒಂದು ಹನಿ ಜಾರೀತೊ ಅನ್ನುವ ಭಯಕ್ಕೆಂಬಂತೆ ಅವರು ಆಕಾಶ ನೋಡುತ್ತಿದ್ದರು.
ಶಿವರಾಮಯ್ಯನವರನ್ನು ಜೀವನದ ನಶ್ವರತೆ ಕಾಡಲಾರಂಭಿಸಿದ್ದು ಆಗಲೇ. ತನ್ನ ಮಗ ಸತ್ತದ್ದೇ ಆ ಮನುಷ್ಯನಿಗೆ ಗೊತ್ತಿಲ್ಲ. ಮಗ ಮರಳುತ್ತಾನೆ ಅನ್ನುವ ಭರವಸೆಯಲ್ಲಿ ಅವನು ಬದುಕುತ್ತಿದ್ದಾನೆ. ಅಷ್ಟು ಭರವಸೆ ಅವನಿಗೆ ಸಾಕು. ಮಗ ಒಂದು ವೇಳೆ ಬದುಕಿದ್ದರೂ ವಾಪಸ್ಸು ಬರುತ್ತಿರಲಿಲ್ಲ. ಈಗ ಸತ್ತಿದ್ದರಿಂದ ವಾಪಸ್ಸು ಬರುತ್ತಿಲ್ಲ ಅಷ್ಟೇ. ಆದರೆ ತನ್ನ ಮಗ ಎಲ್ಲೋ ಇದ್ದಾನೆ ಅನ್ನುವ ನಂಬಿಕೆ ಅವನಲ್ಲಿ ವಿಚಿತ್ರ ಜೀವನೋತ್ಸಾಹ ಹುಟ್ಟುಹಾಕಿದೆ.
ತನ್ನ ಮಗನೂ ಅಷ್ಟೇ ತಾನೇ. ಈ ಅಪಾರ ಆಸ್ತಿಯನ್ನು ತನಗೇ ಬಿಟ್ಟು ಹೋಗಿದ್ದಾನೆ. ತೀರ ವೈಫಲ್ಯ ಕಾಡಿದರೆ ಊರಲ್ಲಿ ಆಸ್ತಿಯಿದೆ ಅನ್ನುವ ಭರವಸೆ ಅವನ ಬೆನ್ನಿಗಿದೆ. ಆದರೆ ಅಪ್ಪ ಇದ್ದಾರೆ ಅನ್ನುವ ನೆನಪೂ ಅವನಿಗೆ ಇದ್ದಂತಿಲ್ಲ. ಅವನೂ ತನ್ನ ಪಾಲಿಗೆ ಸತ್ತಂತೆಯೇ. ಮಗ ಬದುಕಿದ್ದಾನೆ ಅನ್ನುವುದು ಕೇವಲ ಸುದ್ದಿ ಮಾತ್ರ. ಅದಕ್ಕಿಂತ ಹೆಚ್ಚಿನ ಮಹತ್ವ ಅದಕ್ಕಿಲ್ಲ.
ಹೀಗೆ ಯೋಚಿಸುತ್ತಿದ್ದಂತೆ ಅವರನ್ನು ಅನಾಥಭಾವ ಕಾಡತೊಡಗಿತು. ಅಂಥದ್ದೇ ಅನಾಥಪ್ರಜ್ಞೆ ಚಂದ್ರಶೇಖರಯ್ಯನನ್ನೂ ಕಾಡುತ್ತದೆ ಅಂತ ಅವರಿಗೆ ಗೊತ್ತಿತ್ತು.ಹೀಗಾಗಿ ಬಿಡುವಿದ್ದಾಗೆಲ್ಲ ಹೋಗಿ ಚಂದ್ರಶೇಖರಯ್ಯನವರ ಜೊತೆ ಮಾತಾಡುತ್ತಿದ್ದರು. ಹಾಗೆ ಮಾತಾಡಲು ಅವರು ಹೋದ ಗುರುವಾರದಂದೇ ಚಂದ್ರಶೇಖರಯ್ಯ ಹಾಗೆ ವರ್ತಿಸಿದ್ದು.
***
ಚಂದ್ರಹಾಸ ಸತ್ತ ಸುದ್ದಿ ಅದು ಹೇಗೋ ಚಂದ್ರಶೇಖರಯ್ಯನಿಗೆ ಗೊತ್ತಾಗಿಬಿಟ್ಟಿದೆ ಅನ್ನುವುದು ಶಿವರಾಮಯ್ಯನವರಿಗೆ ಗೊತ್ತಾಯಿತು. ಸುಳ್ಳು ಹೇಳಿದ್ದಕ್ಕೆ ಚಂದ್ರಶೇಖರಯ್ಯ ತರಾಟೆಗೆ ತಗೋತಾನೆ ಅಂತ ಖಾತ್ರಿಯಾಗಿ ಗೊತ್ತಿದ್ದ ಶಿವರಾಮಯ್ಯನಿಗೇ ಆಶ್ಚರ್ಯವಾಗುವಂತೆ ಚಂದ್ರಶೇಖರಯ್ಯ ಹೇಳಿದರು;
ಸತ್ತಿದ್ದು ನನ್ನ ಮಗ ನಿಜ. ಆದರೆ ಸಂಕಟ ಪಟ್ಟದ್ದು ನೀನು. ನೀನು ನನ್ನ ಪರವಾಗಿ ನನ್ನ ಮಗನಿಗಾಗಿ ಸಂಕಟಪಟ್ಟೆಯೋ ಅಥವಾ ನಿನ್ನ ಮಗನ ನೆನಪು ಬಂದು ನೋವು ಅನುಭವಿಸಿದೆಯೋ ನನಗೆ ಗೊತ್ತಿಲ್ಲ. ಒಂದು ವಯಸ್ಸು ದಾಟಿದ ನಂತರ ಸತ್ತವನು ನನ್ನ ಮಗನೋ ನಿನ್ನ ಮಗನೋ ಅನ್ನೋದು ಮುಖ್ಯ ಆಗುವುದಿಲ್ಲ. ನಮ್ಮಂಥ ಮುದುಕರ ಪಾಲಿಗೆ ನಮ್ಮ ಮಕ್ಕಳು ಎಂದೋ ಸತ್ತು ಹೋಗಿರುತ್ತಾರೆ. ಅಥವಾ ನಾವು ಅವರ ಪಾಲಿಗೆ ಸತ್ತಿರುತ್ತೇವೆ. ನಾವು ಸತ್ತರೆ ಅವರಿಗೆ ನಿರಾಳ, ಮಕ್ಕಳು ಸತ್ತರೆ ನಮಗೆ ಆತಂಕ. ಪರಸ್ಪರ ಒಬ್ಬರು ಇನ್ನೊಬ್ಬರ ಹಂಗಿನಲ್ಲೋ ಆಧಾರದಲ್ಲೋ ಇಲ್ಲದಿದ್ದರೂ ಸಂಕಟ.
ಇದನ್ನು ಯೋಚಿಸುತ್ತಿದ್ದಾಗ ಒಂದು ವಿಲಕ್ಷಣ ಸಂಗತಿ ಹೊಳೆಯಿತು. ನಾವು ಮಕ್ಕಳನ್ನು ನಮ್ಮ ಮತ್ತೊಂದು ಬಾಲ್ಯ, ಮತ್ತೊಂದು ಯೌವನ ಎಂಬಂತೆ ನೋಡುತ್ತಿರುತ್ತೇವೆ. ಅದೇ ಮಕ್ಕಳ ಪಾಲಿಗೆ ನಾವು ಮುಂದೆಂದೋ ಬರಬಹುದಾಗ ವೃದ್ಧಾಪ್ಯ ಮತ್ತು ಸಾವಿನ ಥರ ಕಾಣಿಸುತ್ತೇವೆ. ನಾವು ಬಾಲ್ಯಕ್ಕೆ ಹಂಬಲಿಸಿದ ಹಾಗೇ, ಅವರು ಸಾವಿನಿಂದ ವೃದ್ದಾಪ್ಯದಿಂದ ನೀಗಿಕೊಳ್ಳಲು ಹೆಣಗುತ್ತಾರೆ.
ನಾನೂ ಆ ವಯಸ್ಸಿನಲ್ಲಿ ಹಾಗೇ ಇದ್ದೆ. ಆದರೆ ಅಪ್ಪ ಸತ್ತ ತಕ್ಷಣ ಅವರ ವಯಸ್ಸು ಮತ್ತು ಆತಂಕ ನನ್ನ ತಲೆಯೊಳಗೆ ಬಂದು ಕೂತುಬಿಟ್ಟಿತು. ಅದನ್ನು ನಾನು ಕಳಚಿಕೊಂಡದ್ದು ನನ್ನ ಮಗನ ಸಾವಿನ ಮೂಲಕ.
***
ಚಂದ್ರಶೇಖರಯ್ಯ ಏನು ಹೇಳುತ್ತಿದ್ದಾರೆ ಅನ್ನುವುದು ಶಿವರಾಮಯ್ಯನಿಗೆ ಅರ್ಥವೇ ಆಗಲಿಲ್ಲ. ಅರ್ಥ ಆಗಲಿಲ್ಲ ಯಾಕೆಂದರೆ ಅವರು ಮಾತಾಡುವುದೇನನ್ನೂ ಇವರು ಕೇಳಿಸಿಕೊಳ್ಳುತ್ತಿರಲಿಲ್ಲ. ಅವರಿಗೆ ಅಂತ ಇವರು ಮಾತಾಡುತ್ತಿದ್ದರು. ತನಗಲ್ಲ ಅಂತ ಅವರು ಕೂತಿದ್ದರು.
ಮಾತು ಇಬ್ಬರ ಮಧ್ಯೆ ಸಾಯುತ್ತಾ ಬದುಕುತ್ತಾ ಸಾಯುತ್ತಾ ಬದುಕುತ್ತಾ ಸಾಯುತ್ತಾ ಬದುಕುತ್ತಾ...