ಸಮೀರನ ಮದುವೆ
ಸಮೀರ ನನ್ನ ಹೆಂಡತಿಯ ಅಣ್ಣ. ನ್ಯೂಜಿಲೆಂಡ್‌ನಲ್ಲಿ ಇಂಜಿನೀಯರ್. ಅವನು ಅಲ್ಲಿಗೆ ಹೋದ 2 ವರ್ಷಗಳವರೆಗೆ ಬರೀ ಅವನ ಫೋನ್ ಕಾಲ್,ಇ-ಮೇಲ್‌ನಲ್ಲಿ ಕಾರು, ಮನೆ ಫೋಟೋಗಳು ಬರುತ್ತಿದ್ದವೇ ಹೊರತು ಅವನೇನೂ ಈ ಕಡೆಗೆ ತಲೆ ಹಾಕಿರಲಿಲ್ಲ. ಅದೇನೋ ಪರ್ಮನೆಂಟ್ ರೆಸಿಡೆನ್ಸಿ ಅಂತೆ. ಹೋದ ವರ್ಷ ಅವನು ರಜೆಗೆಂದು ಬಂದಾಗ, ನನ್ನ ಅತ್ತೆ, ಮಾವ ಅವನಿಗೆ ಮದುವೆಗೆ ದುಂಬಾಲು ಬಿದ್ದರು. ನನ್ನ ಅತ್ತೆ ಮಾವನಿಗೆ ನಾಲ್ಕು ಮಕ್ಕಳು, ಮೂರು ಹೆಣ್ಣು ಮತ್ತು ಒಂದು ಗಂಡು. ತುಂಬಾ ಮಡಿವಂತರು, ಮನೆಯನ್ನು ಬಿಟ್ಟು ಹೊರಗಡೆ ಏನೂ ತಿನ್ನುವುದಿಲ್ಲ. ದೊಡ್ಡ ಮಗಳು ಜ್ಯೋತಿ ಡೆಲ್ಲಿಯಲ್ಲಿ, ಎರಡನೆಯವಳು ಆರತಿ ಸಿಂಗಾಪುರಿನಲ್ಲಿ ಸೆಟ್ಲ್ ಆಗಿದ್ದಾರೆ.
ಹೋದ ವರುಷ ಸಮೀರ ಇಂಡಿಯಾಗೆ ಬಂದಾಗ ನಾವೆಲ್ಲ ಒಟ್ಟಿಗೆ ಸೇರಿದ್ದೆವು. ಮದುವೆಗಾಗಿ ಎಲ್ಲಾ ಸಂಬಂಧಿಕರ ಕಡೆಗೆ ಕುಂಡಲಿ ಕಳಿಸಿದ್ದಾಯಿತು. ಪೇಪರಿನಲ್ಲಿ ಕೂಡಾ ಕೊಟ್ಟಾಯಿತು. ಏನೋ ಒಂದು ಕಾರಣದಿಂದ ಎಲ್ಲೂ ಕೂಡಿ ಬರಲಿಲ್ಲ, ಅವನು ತಿರುಗಿ ನ್ಯೂಜಿಲೆಂಡ್‌ಗೆ ಹೋಗುವುದಕ್ಕೆ ಏಳು ದಿನಗಳು ಮಾತ್ರ ಇದ್ದವು.
ಆರತಿಯ ಪ್ರಯತ್ನದಿಂದ, ಒಂದು ದಿನ ಮೈಸೂರಿನಿಂದ ಫೋನ್ ಕಾಲ್ ಬಂದಿತು. ಹುಡುಗಿ Mಖ್ಚ ಗ್ರ್ಯಾಜುಯೇಟ್, ತುಂಬಾ ಒಳ್ಳೆಯ ಮನೆತನ. ಬಂದು ನೋಡಿಕೊಂಡು ಹೋಗಿ ಎಂದರು. ಮರುದಿನವೇ ನಾವೆಲ್ಲಾ ಮೈಸೂರಿಗೆ ಪ್ರಯಾಣ ಬೆಳೆಸಿದೆವು. ದೇವರ ಕೃಪೆಯಿಂದ ಕುಂಡಲಿ ಕೂಡಿ ಬಂತು. ಹುಡುಗ-ಹುಡುಗಿಯ ಒಪ್ಪಿಗೆ ಕೂಡಾ ಕೇಳಿ ಬಂದಾಗ, ನಮ್ಮ ಅತ್ತೆ ಮಾವನಿಗೆ ಆದ ಖುಷಿ ಅಷ್ಟಿಟ್ಟಲ್ಲ. ಎರಡು ದಿನದಲ್ಲಿ ನಿಶ್ಚಿತಾರ್ಥ ಮುಗಿದು ಮುಂದಿನ ವರುಷ ಮದುವೆಯೆಂದು ನಿಶ್ಚಯವಾಯಿತು. ನಿಶ್ಚಿತಾರ್ಥ ಮುಗಿಸಿದ 2 ದಿನಗಳ ನಂತರ ಸಮೀರ ನೂಜಿಲೆಂಡ್‌ಗೆ ಹಿಂದಿರುಗಿದ್ದ.
ಮೊದಲು ತಿಂಗಳಿಗೆ 4-5 ಬಾರಿ ಬರುತ್ತಿದ್ದ ಫೋನ್, ನಿಶ್ಚಿತಾರ್ಥದ ನಂತರ ತಿಂಗಳಿಗೆ 1-2 ಸಾರಿಯಾಯಿತು. ಈ ನಡುವೆ ಮದುವೆ ಹಾಲ್, ಅಡುಗೆ ವ್ಯವಸ್ಥೆ, ಮದುವೆಯ ಕಾರ್ಡ್ ಕೆಲಸ ಆದವು. ಹಾಗೂ ಹೀಗೂ 12 ತಿಂಗಳ ನಂತರ ಸಮೀರ ಮದುವೆಗೆ 3ವಾರ ರಜೆ ಹಾಕಿ ಬಂದಿದ್ದ.
ಇಲ್ಲಿ ಬಂದ ಮರುದಿನವೇ ಮೈಸೂರಿಗೆ ಓಡಿದ್ದ ಸಮೀರ, ರಿಜಿಸ್ಟರ್ ಮ್ಯಾರೇಜ್ ಆಗಬೇಕು. ವೀಸಾ ಮಾಡಿಸಲು ಸಮಯ ತುಂಬಾ ಕಡಿಮೆ ಇದೆ ಎಂದೆಲ್ಲ ಗಡಿಬಿಡಿ ಮಾಡಿದ್ದ. ಮ್ಯಾರೇಜ್ ಸರ್ಟಿಫಿಕೇಟ್ ಬಂದ ಮರುದಿನ ವೀಸಾ ಪೇಪರ್ ಅಪ್ಲಾಯ್ ಮಾಡಿದ್ದ . ರಿಜಿಸ್ಟರ್ ಮ್ಯಾರೇಜ್ ಸರ್ಟಿಫಿಕೇಟ್ ಬಂದ ಮೇಲೆ ಮಾಡಬೇಡ ಅಂತ ಎಲ್ಲರೂ ಅವನ ಗೋಳು ಹೊಯ್ದಕೊಂಡರು.
ಆದರೂ ರಿಜಿಸ್ಟರ್ ಮ್ಯಾರೇಜ್ ಆದ. ಒಂದು ವಾರದ ನಂತರ, ಬೆಂಗಳೂರಿನಲ್ಲಿ ಮದುವೆ ಆಯಿತು. ಮದುವೆಯ ನಂತರ ಹುಡುಗ-ಹುಡುಗಿ ಕೈಯಲ್ಲಿ ಸಿಗುತ್ತಾರೆಯೇ? ಹನಿಮೂನ್ ಅಂತ ಹೋದವರು ರಜೆ ಮುಗಿಯುವುದಕ್ಕೆ 2 ದಿನ ಮುಂಚೆ ಊರಿಗೆ ಮರಳಿ ಬಂದರು.
2 ದಿನದಲ್ಲಿ ಪ್ಯಾಕಿಂಗ್ ಮಾಡುವುದು, ಲಾಸ್ಟ್ ಮಿನಿಟ್ ಪರ್‌ಚೇಸಿಂಗ್‌ನಲ್ಲಿ ಸಮಯ ಕಳೆದದ್ದೇ ಗೊತ್ತಾಗಲಿಲ್ಲ.
ಒಂದು ವಾರದ ನಂತರ ಅಡುಗೆಗೆ ಕುಕ್ಕರ್ ಹಾಗೂ ಮತ್ತಿತರ ಸಾಮಾನು ಬೇಕೆಂದು ಸಮೀರನಿಂದ ಫೋನ್ ಬಂದಿತು. ಫೋನಿನಲ್ಲಿ ಮಾತನಾಡಿದ ನನ್ನ ಮಾವ ಎಲ್ಲಾ ಸಾಮಾನಿನ ಲಿಸ್ಟನ್ನೇ ಮಾಡಿದ್ದರು. ಅಲ್ಲೇ ಇದ್ದ ನಮ್ಮ ಮಾಮಿ ಮಗ ವಿನಯ್ ಜೊತೆ ಮಾತನಾಡಿದ ಸಮೀರ, ಎಲ್ಲಾ ಸಾಮಾನನ್ನು ಕಾರ್ಗೋ ಮೂಲಕ ಕಳಿಸಲು ಹೇಳಿ ಅಡ್ರೆಸ್ ಕೊಟ್ಟ. ಸ್ವಲ್ಪ ಸಮಯದ ನಂತರ, ವಿನಯ ‘ಸಮೀರನ ಗೆಳೆಯನ ತಾಯಿಗೆ ಏನೋ ಮೆಡಿಸಿನ್ ಬೇಕಂತೆ ನಾನು ನಾಳೆ ತಂದು ಕೊಡುತ್ತೇನೆ ಅದನ್ನೂ ಪ್ಯಾಕ್ ಮಾಡಿ’ ಎಂದು ಹೇಳಿ ಹೋದ.
ದಿನಗಳ ನಂತರ, ವಿನಯ ಅದೇನೋ ಮೆಡಿಸಿನ್ ಅಂತ ತುಸು ಭಾರವಿರುವ ಒಂದು ಪ್ಯಾಕೇಟ್ ತೆಗೆದುಕೊಂಡು ಮನೆಗೆ ಬಂದಾಗ ಮಾವನವರಿಗೆ ಕುತೂಹಲ ತಡೆಯಲಾಗದೇ, ಇದೆಂಥಾ ಮೆಡಿಸಿನ್ ಇದು? ನ್ಯೂಜಿಲೆಂಡಿನಲ್ಲಿ ಸಿಗದೆ ಇರುವುದು, ಎಂದು ವಿನಯನಿಗೆ ಕೇಳಿದರು. ಉತ್ತರಿಸಲಾಗದ ವಿನಯ ಅದು ಅದು ಆಯುರ್ವೇದಿಕ್ ಮೆಡಿಸಿನ್ ಎಂದು ಹೇಳಿ ಪ್ಯಾಕ್ ಮಾಡಲು ಮುಂದಾದ. ಮಾವನಿಗೆ ಏನೋ ಸಂಶಯ. ಒಳಗಡೆ ಏನಿದೆ ಎಂದು ನೋಡದೆ ಪ್ಯಾಕ್ ಮಾಡಲು ಅವಕಾಶ ಇಲ್ಲ ಎಂದು ಖಚಿತವಾದ ಗಡಸು ಧ್ವನಿಯಿಂದ ಹೇಳಿದರು.
ವಿನಯ್‌ನಿಗೆ ಅದೇನೋ ಸಂಕಟ, ‘ಎಲ್ಲಾ ಪ್ಯಾಕಿಂಗ್ ಮಾಡಿದ್ದನ್ನು ಓಪನ್ ಮಾಡುವುದು ಕಷ್ಟದ ಕೆಲಸ, ನನ್ನ ಮೇಲೆ ಭರವಸೆ ಇಲ್ಲವೇ?’ ಎಂದು ಹಟ ಹಿಡಿದ. ಇದೆಲ್ಲಾ ಆಗುವುದರಲ್ಲಿ ಮನೆ ಜನರೆಲ್ಲಾ ಹಾಲ್‌ನಲ್ಲಿ ಬಂದರು. ಎಲ್ಲರಿಗೂ ಕುತೂಹಲ, ‘ಅತ್ತೆಯವರು, ಅದೇನಪ್ಪಾ ವಿನಯ್ ಅಷ್ಟೊಂದು ಬಚ್ಚಿಡುವ ವಿಷಯ? ಏನಿದೆ ಒಳಗಡೆ ?’ಎಂದು ಕೇಳಿದರು. ವಿನಯ್‌ನಿಗೆ ಮಾತನಾಡಲು ಶಬ್ದಗಳೇ ಇರಲಿಲ್ಲ. ಗುಂಪಿನಿಂದ ಬೇರ್ಪಟ್ಟ ಹರಿಣಿಯಂತೆ ಒದ್ದಾಡಿದ ಆದರೆ ಆ ಪ್ಯಾಕೆಟ್‌ಓಪನ್ ಮಾಡಲಿಲ್ಲ.
ಮಾವನವರಿಗೆ ಸಂಶಯ ಬಲವಾಯಿತು, ವಿನಯನ ಕೈಯಿಂದ ಕಸಿದುಕೊಂಡರು. ಆದರೆ ವಿನಯ ಗಟ್ಟಿಯಾಗಿ ಹಿಡಿದಿದ್ದ. ಈ ಗುದ್ದಾಟದಲ್ಲಿ ಪ್ಯಾಕೆಟ್ ಓಪನ್ ಆಗಿ ಕಾಂಡೋಮ್‌ಗಳು ಹಾಲ್‌ನಲ್ಲಿ ಹರಡಿ ಬಿದ್ದವು. ಒಂದು ನಿಮಿಷ ಎಲ್ಲರಿಗೂ ಆಶ್ಚರ್ಯ. ಎಲ್ಲರೂ ನಗ ತೊಡಗಿದರು. ಮಾವ ‘ತುಂಬಾ ಚೆನ್ನಾಗಿದೆಯಪ್ಪ ನಿನ್ನ ಆಯುರ್ವೇದಿಕ್ ಮೆಡಿಸಿನ್’ ಎಂದು ನಗುತ್ತಾ ಹೇಳಿದರು. ವಿನಯ್‌ನ ಮುಖ ನೋಡುವ ಹಾಗಿತ್ತು. ಹೊರ ದೇಶಗಳಲ್ಲಿ ಕಾಂಡೋಮ್ ತುಂಬಾ ದುಬಾರಿ, ಅದಕ್ಕೇ ಸಮೀರ್‌ನಿಗೆ ಕೊಟ್ಟು ಕಳುಹಿಸಲು ಹೇಳಿದ್ದ. ಅತ್ತೆ ಏನೂ ಮಾತನಾಡದೆ ಆಡುಗೆ ಮನೆ ಸೇರಿದರು.
ಒಂದು ವಾರದ ನಂತರ ಸಮೀರನ ಫೋನ್ ಬಂದಾಗ ಮಾವನವರು ‘ಏನು ಸಮೀರ ಕಳುಹಿಸಿದ ಎಲ್ಲಾ ಸಾಮಾನುಗಳು ತಲುಪಿದವೋ ಇಲ್ಲವೋ? ಮನೆಯಲ್ಲಿ ಅಡುಗೆ ಯಾರು ಮಾಡುತ್ತಾರೆ’ ಎಂದು ಚಟಾಕಿ ಹೊಡೆದರು.












Click it and Unblock the Notifications