ಕವಿತೆ ಹಣತೆ
- ನಳಿನಿ ಮೈಯ, Email : [email protected]
ಡೇರಿಯನ್, ಇಲಿನಾಯ್
ಭಾಳ ಹತ್ರದ್ ನಂಟ್‌ನೋಳು
ಕಡ್‌ಕೊಳ್ಳೋಕೆ ಮನಸಾಗ್ದಂಥ
ಗಂಟು ನಮ್ಮಿಬ್ರ ನಂಟು
ಮೊದಲ್ನೇ ಸಾರಿ ಕಂಡಾಗವ್ಳು
ಥಳ ಥಳಾಂತ ಹೊಳೀತಾ ಇದ್ಲು
ಸರ ಸರಾಂತ ಓಡಾಡ್ತಿದ್ಲು
ಮಾಟವಾದಂಥ ಮೈನೋಳವ್ಳು
ಜಿಂಕೆ ಹಾಗೆ ಓಡೋಳವ್ಳು
ಜೋಗುಳದಂಥ ದನಿಯೋಳವ್ಳು
ಹಗಲಂತಿಲ್ಲ ರಾತ್ರೀಂತಿಲ್ಲ
ಕರ್ದಾಗ್ಲೆಲ್ಲ ಬರೋಳು
ತನ್ ಕೆಲ್ಸ ಮಾಡೋಳು
ನನ್ ಹೆಂಡ್ತಿ ಮಗೂನ್ ಹಡೆದು
ಬಾಣಂತೀನ ಕರ್ಕೊಂಡ್ ಬಂದಾಗ್
ಅವ್ಳೂ ಜೊತೇನಲ್ ಕುಣೀತಾ ಬಂದ್ಲು
ನನ್ ಮಗನ್ ಹುಟ್ಟಿದ್ ಹಬ್ಬಕ್
ಅವ್ಳೇ ಹೋಟ್ಲಿಗ್ ಕರ್ಕೊಂಡ್ ಹೋದ್ಲು
ಪಾರ್ಟೀಗಾದ್ರೂ ಬರ್ತಾ ಇದ್ಲು
ಪಿಕ್‌ನಿಕ್‌ಗಾದ್ರೂ ಬರ್ತಾ ಇದ್ಲು
ತುಟಿ ಪಿಟಕ್ ಅನ್ದೆ ನಮ್ ಸೇವೆಗ್
ಸದಾ ಅಣಿಯಾಗಿರ್ತಾ ಇದ್ಲು
ಈಗೀಗ್ ಪಾಪ, ವಯಸ್ಸಾಗೋಯ್ತು
ಆಗಾಗ್ ಖಾಯ್ಲೆ ಬೀಳೋ ಹಂಗಾಯ್ತು
ಮೈನಲ್ ಶಕ್ತಿ ಕಡಿಮೆ ಆಯ್ತು
ಕೆಲ್ಸ ಮಾಡೊ ತಾಕತ್ತಿಲ್ಲ
ಇವ್ಳಿಗಂತ ಗೊತ್ತಾದ್ ಮೇಲೆ
ಬೇರೆ ಕಡೆ ಸಾಗ್ ಹಾಕೋಕೆ
ಅಲ್ಲಿ ಇಲ್ಲಿ ನೋಡ್ತಾ ಇದ್ದೆ
ಅದಕ್ಕೇ ಅವ್ಳು ಹೊರಟಿದ್ದಾಳೆ
ಈವತ್ ನನ್ನನ್ ಬಿಟ್ಬಿಟ್ಟು
ಮನಸ್ನಲ್ ಯಾಕೊ ಭಾಳ ಸಂಕ್ಟ
ಕಣ್ಣಲ್ ಯಾಕೊ ಕೊಂಚ ನೀರು
ಅಗೋ, ಅಲ್ಲಿ ಬಂದೇ ಬಿಟ್ಟ
ಅವ್ಳನ್ ಕೊಂಡ್ಕೊಂಡ್ ಯಜಮಾನ
ಹತ್ರಕ್ ಹತ್ರಕ್ ಬರ್ತಾ ಇದ್ದಾನ್
‘ಹಾಯ್ ದೇರ್’ ಅಂತ ನಗ್ತಾ ಇದ್ದಾನ್
ಕೀಲಿ ಕೈನ ಕೈಯಾಗಿಟ್ಟು
ಅವ್ಳನ್ ಅವ್ನಿಗೊಪ್ಪಿಸ್ದೆ
‘ಥ್ಯಾಂಕ್ಯೂ’ ಅಂತ ಕೈ ಕೈ ಕುಲುಕ್ದ
‘ವೆಲ್ಕಂ’ ಅಂತ ಕಣ್ಣೊರಸ್ಕೊಂಡೆ
ನನ್ ಕಾರನ್ ಹತ್ಕೊಂಡವ್ನು
ಜೋಕಾಗ್ ನಡೆಸ್ಕೊಂಡ್ ಹೋಗೇಬಿಟ್ಟ
ತಡೀಬೇಕೂಂತ್ ಮನಸ್ಸಾದ್ರೂ
ಸುಮ್ನೆ ನೋಡ್ತಾ ನಿಂತೇ ಇದ್ದೆ
ನಂಗೇ ತಿಳೀದ್ಹಂಗ್ ನನ್ ಕೈ ಮೇಲ್ ಬಂದ್
ಅವ್ಳಿಗ್ ಬೈ ಬೈ ಹೇಳ್ತಾ ಇತ್ತು
ಈ ಕವಿತೆಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ
ಸಾಲು ಸಾಲು ಹಣತೆ












Click it and Unblock the Notifications