ಜಿಜ್ಞಾಸಾಗಂಗಾ
ರವಿ ಕೃಷ್ಣಾ ರೆಡ್ಡಿ, ಕುಪರ್ಟಿನೊ, ಕ್ಯಾಲಿಫೊರ್ನಿಯ.
ಹೀಗಾಗಬಾರದಿತ್ತು , ಹಾಗೇ ಆಗಬೇಕಿತ್ತು !
ನಡೆದುಹೋದದ್ದರ ಶವಪರೀಕ್ಷೆ ಎಂದೂ ಅಪೂರ್ಣ
ಮುಂದೇನುಂಟೆಂದು ತಿಳಿಯದ ಮೌಢ್ಯ ಕುತೂಹಲದಲಿ
ಇಂದು ಮಾಡುವುದು ನಾಳೆಗೆ ತರವೆ ?
ನೆನ್ನೆಯ ಜ್ಞಾನ ಇಂದಿನ ಅಜ್ಞಾನವಾಗಲಿಲ್ಲವೇನು ಬಹು ಬಾರಿ?
ಆ ಅಜ್ಞಾನವೇ ಇಂದಿನ ವಿಜ್ಞಾನಕ್ಕಾಗಲಿಲ್ಲವೇನು ದಾರಿ?
ಸಾವಿರದಲ್ಲೊಂದಷ್ಟು ಕಲ್ಲು ಹಣ್ಣಿಗೆ ಬಿದ್ದರೆ
ಆದೆಯೇನು ನೀ ಬಲಶಾಲಿ, ಕಾಲಜ್ಞಾನಿ ?
ಹೊಡೆದ ಕಲ್ಲಿಗೆಲ್ಲಾ ಹಣ್ಣುದುರಿಸಿಕೊಂಡವರುಂಟೇನು?
ಉಂಟೇನು ಭವಿಷ್ಯ ಹೀಗೇ ಉಂಟು ಎಂಬವ ?
ತಿಳಿದೂ ಬದಲಿಸಲಾರೆ ಬಹಳೊಮ್ಮೆ ಮಾತು ಕೃತಿ ತಂತ್ರ
ಗೆಲುವು ಕಟ್ಟಿಟ್ಟದ್ದದ್ದೆಂದಾಕ್ಷಣ ಕಾಯಬಲ್ಲನೆ ದುಷ್ಟ ?
ಕಾದಿದ್ದರೂ ದುರಂತ ಕೊಲ್ಲಬಲ್ಲನೆ ಶಿಷ್ಟ ?
ಇದೇ ಸತ್ಯವೆ ? ಇಲ್ಲವೇನಿದಕೇನೂ ಅಪವಾದಗಳು?
ಪಕ್ಕಕ್ಕಿಟ್ಟರೆ ಪಾವಿತ್ರ್ಯ ಕಾಣವೇನು ವಿವಿಧ ಬೆತ್ತಲೆ ಕೋನಗಳು ?
ಸ್ವಾರ್ಥಕ್ಕಾಗಿ ಕೊಲ್ಲಲಿಲ್ಲವೆ ರಾಮ ಮರದ ಮರೆಯಿಂದ ?
ಸುಗ್ರೀವನೊಬ್ಬನೇನು ಆಗಿನ ಅನ್ಯಾಯಕ್ಕೊಳಗಾದ ದಲಿತ ?
ಅಂದರೂ ಪಂಡಿತನು ಸುಗ್ರೀವನಿಗೆ ರಾಮನ್ಯಾಯವೆಂದು
ಸೀತೆಗಾಗಿ ರಾಮ ಪಡೆದ ಸುಗ್ರೀವ ಪಡೆಯ ಕಪ್ಪವಲ್ಲದೇನು ?
ಜೀವನದ ಸಾಧ್ಯತೆಗಳು ಅಗಾಧ, ಮೊಗೆದಷ್ಟೂ
ಉಕ್ಕುವುದು ಜಿಜ್ಞಾಸೆಯ ಅಮೃತ ಜೀವಗಂಗಾ!
ಕುಡಿದೆಯಾದರೆ ಒಮ್ಮೆ, ನಿಲ್ಲದದು ತನು ಮರಣಿಸುವ ತನಕ












Click it and Unblock the Notifications