ಮೊರೆತ
*ವಸಂತ ಮೂರ್ತಿ
ಭೋರ್ಗರೆವ ಸಾಗರದಿ ಭರದಿಂದ ಸಾಗುತಿರೆ
ನಿಂತೊಮ್ಮೆ ಹಿಂತಿರುಗೆ ಏರಿಳಿಯುತಿಹ ಅಲೆಗಳಾ ಸಾಲು
ಅರೆಕ್ಷಣದಿ ಉಕ್ಕಿಳಿವ ಪ್ರವಾಹದ ಉಪೇಕ್ಷೆಯೋ
ಧುಮ್ಮಿಕ್ಕಿ ಧುಮುಕುತಿಹ ಪ್ರಪಾತದ ಉತ್ಪ್ರೇಕ್ಷೆಯೋ
ಭಾವನೆಯ ಸಾಣಿ ಹಿಡಿದು, ತಿಕ್ಕಿ, ತೀಡಿ ಉಜ್ಜಿದರೂ
ಅರಿಯಲಾರದಾ ನೂರೆಂಟು ಭಾವಗಳು...
ಪ್ರೀತಿಯಾ ಕರೆಯೋ, ಆಕರ್ಷಣೆಯ ಸಂಬೋಧನೆಯೋ
ಅಳೆದಳೆದು ನೋಡಿದರೂ ಹಲವು ವಿಧ ಪ್ರಕಾರಗಳು
ಗುಲಗಂಜಿ ಕಪ್ಪು ಚುಕ್ಕೆ ನೋಡಲೆಣಿಸದ ಕಣ್ಣು
ಕೆಂಪಿನಾ ಪೆಂಪಿನಲಿ ನಲಿಯಬಯಸಿರಲಿನ್ನು
ಕಪ್ಪಿನಾ ತಪ್ಪನ್ನು ದೂಡುವುದು ಎಂತು?
ಗಕ್ಕನೆ ದುಃಖದಲಿ ಬಿಕ್ಕುವುದು ಎಂತು?
ಬಿಕ್ಕಿದರೂ ದುಃಖವ, ಕಕ್ಕಿದರೂ ನೋವಾ
ಅದಕಕ್ಕರೆಯ ನೀರೆರೆವ ಸಹೃದಯತೆಯಿರದಿರಲು
ಬಿಕ್ಕೋ ನಕ್ಕೋ ತನ್ನೆದೆಯ ಕಾವದನು ಹೊರಹಾಕಲೆತ್ನಿಸಿದ
ಕಂಬನಿಯ ಧಾರೆಯದು ಉಕ್ಕುತಿಹ ಪ್ರವಾಹವೋ,
ಧುಮುಕುತಿಹ ಪ್ರಪಾತವೋ?...












Click it and Unblock the Notifications