• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಿಶೇಷ ಲೇಖನ: ನೊಬೆಲ್ ಪುರಸ್ಕೃತೆ ಲೂಯಿಸ್ ಗ್ಲುಕ್

By ಡಾ. ಉದಯರವಿ ಶಾಸ್ತ್ರೀ
|

ಪ್ರತೀ ವರ್ಷ ಅಕ್ಟೋಬರ್ ತಿಂಗಳು ಸಮೀಪಿಸುತ್ತಿದ್ದಂತೆ ಶೈಕ್ಷಣಿಕ ವಲಯಗಳಲ್ಲಿ ತಾರ್ಕಿಕ ಊಹೆಗಳು, ವೈಚಾರಿಕ ಚರ್ಚೆಗಳು ವಾದ ವಿವಾದಗಳು ಸ್ಟಾಕ್ ಹೋಮಿನಿಂದ ಘೋಷಣೆ ಬರುವವರೆಗೂ ನಡೆಯುತ್ತವೆ. ಸಾಹಿತ್ಯದಲ್ಲಿ ಈ ಬಾರಿಯ ನೊಬೆಲ್ ಪಾರಿತೋಷಕದ ವಿಜೇತೆ ಯಾರೆಂದು ಊಹಿಸುವುದು ಅಷ್ಟೇನೂ ಕಠಿಣವಾಗಿರಲಿಲ್ಲ. 27 ವರ್ಷಗಳ ಬಳಿಕ ಅಮೆರಿಕದ ಕವಯತ್ರಿ ಲೂಯಿಸ್ ಗ್ಲುಕ್ ಅವರಿಗೆ ಸಂದಿದೆ. ಗ್ಲುಕ್ ಪರಿಚಯಾತ್ಮಕ ಲೇಖನ ಇಲ್ಲಿದೆ....

2020ರ ನೊಬೆಲ್ ಸಾಹಿತ್ಯ ಪಾರಿತೋಷಕ ಅಮೆರಿಕದ ಲೂಯಿಸ್ ಗ್ಲುಕ್ ಅವರಿಗೆ ಸಂದಿದೆ. ಸ್ವೀಡಿಷ್ ಅಕಾಡೆಮಿಯ ಪ್ರಕಾರ, ವಯಕ್ತಿಕ ಅಸ್ತಿತ್ವವು ಸಾರ್ವತ್ರಿಕ ಮಾಡಬಲ್ಲ ನಿಷ್ಠುರವಾದ ಸೌಂದರ್ಯವನ್ನು ಹಾಗೂ ಆಕೆಯ ನಿಸ್ಸಂಧಿಗ್ಧ ಕಾವ್ಯ ದನಿಯನ್ನು ಗುರುತಿಸಿ ಲೂಯಿಸ್ ಗ್ಲುಕ್ ರವರಿಗೆ ಈ ಪ್ರಶಸ್ತಿ ಪ್ರದಾನ ಮಾಡಲಾಗಿದೆ.

ವ್ಯಕ್ತಿ

1943ರಲ್ಲಿ ನ್ಯೂ ಯಾರ್ಕ್ ನಲ್ಲಿ ಜನಿಸಿದ ಗ್ಲುಕ್, ಸಾರಾ ಲರೆನ್ಸ್ ಕಾಲೆಜ್ ಹಾಗೂ ಕೊಲಂಬಿಯ ವಿಶ್ವ ವಿದ್ಯಾಲಯದಲ್ಲಿ ವ್ಯಾಸಂಗ ಮಾಡಿ, ಈಗ ಮೆಸ್ಯಾಚುಸೆಟ್ಸ್ ನಲ್ಲಿ ವಾಸವಾಗಿದ್ದು ಯೇಲ್ ವಿಶ್ವ ವಿದ್ಯಾಲಯದಲ್ಲಿ ಪ್ರೊಫೆಸರ್ ಆಗಿದ್ದಾರೆ, ಜೊತೆಗೆ ಅವರನ್ನು ರೋಸೆನ್ಕ್ರಾಂಟ್ಸ್ ಬ್ರಹಗಾರ್ತಿಯಾಗಿ ನೇಮಿಸಿದ್ದಾರೆ. ಬಿಲ್ಲಿ ಕಾಲಿನ್ಸ್ ನಂತರ, 2003 ರಿಂದ 2004 ವರೆಗೆ ಇವರನ್ನು ಅಮೆರಿಕದ ಪೊಯೆಟ್-ಲಾರಿಯೆಟ್ ಎಂದು ನೇಮಕ ಮಾಡಿದ್ದರು. ಗ್ಲುಕ್ ಅವರು ಎರಡು ಬಾರಿ ವಿವಾಹವಾಗಿದ್ದಾರೆ. ಮೊದಲು ಚಾರ್ಲ್ಸ್ ಹರ್ಟ್ಜ್ ನೊಂದಿಗೆ ವಿವಾಹವಾಗಿತ್ತು. ವಿಚ್ಛೇದನ ಗೊಂಡ ನಂತರ, ಜಾನ್ ಟಿ ಡ್ರಾನೋ ಎಂಬ ಬರಹಗಾರ, ಪ್ರೊಫೆಸರ್ ಹಾಗೂ ಉದ್ದಿಮೆದಾರನೊಂದಿಗೆ ವಿವಾಹವಾಗಿತ್ತು, ಆದರೆ ನಂತರ ವಿಚ್ಛೇದನ ಗೊಂಡಿತು. ಅವರಿಗೆ ನೋಯ ಎಂಬ ಮಗನೂ ಇದ್ದಾನೆ. ದ ಬೆಸ್ಟ್ ಅಮೆರಿಕನ್ ಪೊಯೆಟ್ರಿ (1993)ಗೆ ಸಂಪಾದಕಾರಾಗಿದ್ದರು.

ಪ್ರಶಸ್ತಿಗಳು

ಇವರಿಗೆ ನೊಬೆಲ್ ಸಿಗಬಹುದು ಎಂದು ಊಹಿಸಲು ಇವರು ಇದುವರೆಗೆ ಪಡೆದ ಪ್ರಶಸ್ತಿಗಳ ಪಟ್ಟಿ ನೆರವಾಗುತ್ತದೆ. 2001 ರಲ್ಲಿ ಯೇಲ್ ವಿಶ್ವವಿದ್ಯಾಲಯ ಗ್ಲುಕ್ ರಿಗೆ ಕವನಕ್ಕೆ ಮೀಸಲಾದ ಬೊಲಿಂಜೆನ್ ಪ್ರಶಸ್ತಿ ಕೊಟ್ಟು ಸನ್ಮಾನಿಸಿದೆ. ಇದು ವ್ಯಕ್ತಿಯ ಜೀವಿತಾವಧಿ ಸಾಧನೆಗೆ ನೀಡುವ ಪ್ರಶಸ್ತಿ. 1993 ರಲ್ಲಿ ತಮ್ಮ ಕವನ ಸಂಕಲನ ದ ವೈಲ್ಡ್ ಐರಿಸ್ ಗೆ ಪುಲಿಟ್ಸರ್ ಪ್ರಶಸ್ತಿ ಸಂದಿದೆ.

1999 ರಲ್ಲಿ ಕವನಕ್ಕೆ ಮೀಸಲಾದ ನ್ಯೂ ಯಾರ್ಕರ್ಸ್ ಬುಕ್ ಅವಾರ್ಡ್ ವಿಟಾ ನೋವಾ ಎಂಬ ತಮ್ಮ ಸಂಕಲನಕ್ಕೆ ದೊರೆತಿದೆ. ಅಮೆರಿಕದ ಪೊಯಟ್ರಿ ಸೊಸೈಟಿ ಸ್ಥಾಪಿಸಿರುವ ವಿಲಿಯಂ ಕಾರ್ಲೋಸ್ ವಿಲಿಯಂಸ್ ಪ್ರಶಸ್ತಿಯೂ ಸಹ ವೈಲ್ಡ್ ಐರಿಸ್ ಗೆ ದೊರೆತಿದೆ. 1990ರಲ್ಲಿ ಅವರ ಅರಾರತ್ ಸಂಕಲನಕ್ಕೆ ರೆಬೆಕ ಜಾನ್ಸನ್ ಬಾಬಿಟ್ ರಾಷ್ಟ್ರೀಯ ಪ್ರಶಸ್ತಿ ದೊರೆತಿದೆ. ವೆಲ್ಲೆಸ್ಲಿ ಯಲ್ಲಿ 1986ರಲ್ಲಿ ಸಾರ ಟೆಸ್ಡೇಲ್ ಮೆಮೋರಿಯಲ್ ಬಹುಮಾನ ಹಾಗು ಮೆಸ್ಯಾಚುಸೆಟ್ಸ್ ತಾಂತ್ರಿಕ ವಿಶ್ವ ವಿದ್ಯಾಲಯದ ಆನಿವರ್ಸರಿ ಮೆಡಲ್ (2000) ನಿಂದ ಗೌರವಿಸಲಾಗಿದೆ. ದ ಟ್ರಯಂಫ್ ಆಫ್ ಅಖಿಲೀಸ್ ಎಂಬ ಅವರ ಸಂಕಲನಕ್ಕೆ ನ್ಯಾಷನಲ್ ಬುಕ್ ಕ್ರಿಟಿಕ್ಸ್ ಸರ್ಕಲ್ ಪ್ರಶಸ್ತಿ 1985ರಲ್ಲಿ ದೊರೆತಿದೆ. ಅವರ ಫಸ್ಟ್ ಬಾರ್ನ್ ಕೃತಿಗೆ ಅಕಡೆಮಿ ಆಫ್ ಅಮೆರಿಕನ್ ಪೊಯೆಟ್ಸ್ ಪ್ರಶಸ್ತಿ ದೊರೆತಿದೆ.

ಪ್ರಕಟಣೆಗಳು

1960ರಲ್ಲಿ ಅವರ ಮೊದಲ ಕೃತಿ ಸ್ಟಿಲ್ ಬಾರ್ನ್ ಪ್ರಕಟವಾದಾಗಲಿಂದಲೂ ಅವ್ಯಾಹತವಾಗಿ ಬರೆಯುತ್ತಲೇ ಇದ್ದಾರೆ. ಗ್ಲುಕ್ ಇದುವರೆಗೂ ಅವರ್ನೋ (2006), ದ ಸೆವೆನ್ ಏಜಸ್ (2001), ವಿಟಾ ನೋವ (1999) ಇವೇ ಮೊದಲಾದ ಹನ್ನೆರಡು ಕವನ ಸಂಕಲನಗಳನ್ನು ರಚಿಸಿದ್ದಾರೆ. ಕವನಗಳಲ್ಲದೆ, ಅವರು ಬರೆದ ಪ್ರಬಂಧ ಸಂಕಲನ, ಎಸ್ಸೆ ಆನ್ ಪೆÇಯೆಟ್ರಿ (1994), ಗೆ ಪೆನ್/ ಮಾರ್ಥ ಅಲ್-ಬ್ರಾಂಡ್ ಪ್ರಶಸ್ತಿಯೂ ದೊರೆತಿದೆ.

ಕಾವ್ಯ ಶೈಲಿ

ಗ್ಲುಕ್ ಕವನಗಳನ್ನು ಆತ್ಮ ಕಥೆಯ ರೀತಿಯಲ್ಲಿ ಬರೆಯುತ್ತಾರೆಂದು ಹೆಸರುವಾಸಿ ಆಗಿದ್ದಾರೆ. ಅವರ ಕೃತಿಗಳಲ್ಲಿ ಭಾವೋದ್ವೇಗಗಳ ಪರಾಕಾಷ್ಟೆಯನ್ನು ಕಾಣಬಹುದು. ಪುರಾಣ, ಇತಿಹಾಸ ಹಾಗೂ ಪ್ರಕೃತಿಯ ಆಖ್ಯಾನಗಳನ್ನು ತಮ್ಮ ಭಾವ ತೀವ್ರತೆಗಳನ್ನು ವ್ಯಕ್ತಪಡಿಸಲು ಸಾಧನವಾಗಿ ಬಳಸಿದ್ದಾರೆ. ತಮ್ಮ ಕೃತಿಗಳಲ್ಲಿ ಗ್ಲುಕ್ ಮಾನಸಿಕ ಆಘಾತ, ಆಸೆ ಹಾಗೂ ಪ್ರಕೃತಿಯನ್ನು ಪ್ರಧಾನವಾಗಿ ವಸ್ತುವಾಗಿ ಬಳಸಿದ್ದಾರೆ. ಇವುಗಳನ್ನು ಅಭಿವ್ಯಕ್ತಿಸಲು ಅವರು ಧುಃಖ ಹಾಗೂ ಒಂಟಿತನವನ್ನು ಮುಚ್ಚು ಮರೆಯಿಲ್ಲದೆ ಬಳಸಿದ್ದಾರೆ.

ಗ್ಲುಕ್ ತಮ್ಮ ಭಾವಗೀತೆಗಳಲ್ಲಿ ಅವರ ಭಾಷಾ ನಿಖರತೆ ಹಾಗು ಕಠಿಣ ಪ್ರವೃತ್ತಿಗೆ ಹೆಸರುವಾಸಿ ಆಗಿದ್ದಾರೆ. ಕ್ರೇಗ್ ಮಾರ್ಗನ್ ಎಂಬ ಕವಿಯ ಪ್ರಕಾರ ಲೂಯೀಸ್ ಗ್ಲುಕ್ ನಂತಹ ಬರಹಗಾರ್ತಿಗೆ ಯಾವಾಗಲೂ ಪದಗಳ ಕೊರತೆ ಇದ್ದು, ಕಷ್ಟಪಟ್ಟು ಅವುಗಳನ್ನು ಹೆಕ್ಕಿ ಹುಡುಕಿ ದುಂದುವೆಚ್ಚ ಮಾಡದೆ ಬಳಸುತ್ತಾರೆ. ಅಂದರೆ ಪದಗಳನ್ನು ಬಹಳ ಅಮೂಲ್ಯವೆಂಬಂತೆ ಅಳೆದು ಸುರಿದು ಆಯ್ಕೆ ಮಾಡಿ ಮಿತವಾಗಿ ಬಳಸುವುದರಿಂದ ವಸ್ತು ನಿರೂಪಣೆಯಲ್ಲಿ ಸಂಕೀರ್ಣವಾದ ಸಂಕೋಚನ ಕಂಡುಬರುತ್ತದೆ. ಗ್ಲುಕ್ ತಮ್ಮ ಕವನಗಳಲ್ಲಿ ಪ್ರಾಸವನ್ನಾಗಲೀ, ಪಲ್ಲವಿಯನ್ನಾಗಲೀ ಅಥವಾ ಸಾಲುಗಳನ್ನು ಉಲ್ಲಂಘಿಸುವ ಭಾವ ಪ್ರವಾಹವನ್ನಾಗಲೀ ಬಳಸುವುದು ಕಂಡುಬಂದಿಲ್ಲ.

ಗ್ಲುಕ್ ಅನ್ನು ತಪ್ಪೊಪ್ಪಿಗೆಯ ಕವಯತ್ರಿ ಎಂದು ಗುರಿತಿಸಿರುವುದು ಸರಿಯೇ ಎಂದು ಕೆಲವು ವಿಮರ್ಶಕರು ಪ್ರಶ್ನಿಸಿದ್ದಾರೆ. ಪ್ರಥಮ ವಿಭಕ್ತಿಯಲ್ಲೇ ಕಾವ್ಯ ಸಂಬೋಧನೆ ಇದ್ದು, ವಯಕ್ತಿಕ ಜೀವನ ಘಟನೆಗಳಿಂದ ಅವರ ಕವನಗಳು ಪ್ರೇರಿತವಾಗಿವೆ ಹೀಗಾಗಿ ಈಕೆ ಕನ್ಫೆಶನಲ್ ಕವಿಯಿತ್ರಿ ಎಂದು ಕೆಲವರು ವಾದಿಸಿದ್ದಾರೆ.

ಕಾವ್ಯ ವಸ್ತು

ತಮ್ಮ ಕವನದ ವಸ್ತುಗಳು ವೈವಿಧ್ಯಮಯವಾಗಿದ್ದು, ಪ್ರಮುಖ ವಸ್ತುಗಳನ್ನು ವಿಮರ್ಶಕರು ಗುರುತಿಸಿದ್ದಾರೆ. ಪ್ರಮುಖವಾಗಿ ಗ್ಲುಕ್ ಕವನಗಳು ತೀವ್ರ ಮಾನಸಿಕ ಆಘಾತಗಳನ್ನು ಅಭಿವ್ಯಕ್ತಿಸುತ್ತವೆ. ತನ್ನ ಕವನಗಳಲ್ಲಿ ಮೊದಲಿನಿಂದಲೂ ಸಾವು, ನಷ್ಟ, ತಿರಸ್ಕಾರ, ಅಸಾಮರಸ್ಯ ಸಂಬಂಧಗಳು, ಮತ್ತು ಆ ಗಾಯಗಳನ್ನು ಮಾಗಿಸುವ ಪ್ರಯತ್ನ ಹಾಗೂ ಸಂಬಂಧಗಳ ಪುನರ್ನವೀಕರಣದ ಪ್ರಯತ್ನಗಳ ವಸ್ತುಗಳ ಕಂಡುಬರುತ್ತವೆ. ಗ್ಲುಕ್ ಅವರ ಗ್ರಾಮೀಣ ಚಿತ್ರಣದ ಕವನಗಳಲ್ಲೂ ಸಾಂಪ್ರದಾಯಿಕ ಸಂತೋಷದ ಪದ್ಯಗಳಲ್ಲೂ ಸಹ ಸಾವಿನ ಅರಿವು, ಮತ್ತು ಮುಗ್ಧತೆಯ ಅಳಿವಿನ ಛಾಯೆಗಳು ಕಾಣುತ್ತವೆ. ಗ್ಲುಕ್ ಕವನಗಳಲ್ಲಿ ಸಾವು ಹಾಗೂ ಬದುಕಿನ ವಿರುಧ್ದ ಶಕ್ತಿಗಳ ಸಂಘರ್ಷದಲ್ಲಿ ಎದ್ದು ಕಾಣುವ ಮತ್ತೊಂದು ವಸ್ತುವೆಂದರೆ ಆಸೆ.

ಆಸೆಯ ವಿವಿಧ ಮುಖಗಳ ಬಗ್ಗೆ ಗ್ಲುಕ್ ಸ್ಪಷ್ಠವಾಗಿ ಬರೆದಿದ್ದಾರೆ. ಪ್ರೀತಿ ಹಾಗೂ ಗಮನ ನೀಡಲಿ ಎಂಬ ಆಸೆ, ಒಳನೋಟಗಳ ಆಸೆ, ಸತ್ಯವನ್ನು ಪ್ರಾಮಾಣಿಕವಾಗಿ ಹೇಳಬಯಸುವ ಆಸೆ, ಇತ್ಯಾದಿ. ಆದರೆ ಆಸೆಯನ್ನು ವ್ಯಕ್ತಪಡಿಸುವ ಅವರ ವಿಧಾನವು ದ್ವಂದ್ವಾರ್ಥತೆ ಕೊಡುತ್ತದೆ. ಗ್ಲುಕ್ ಕವನಗಳಲ್ಲಿ ಕಂಡು ಬರುವ ವಿರೋಧಾಭಾಸದ ದೃಷ್ಟಿಕೋನಗಳು ತನ್ನ ವಯಕ್ತಿಕ ಜೀವನಲ್ಲಿ ಸಾಮಾಜಿಕ ಘನತೆ, ಪ್ರಭಾವ, ನೈತಿಕತೆ, ಲಿಂಗತಾರತಮ್ಯ, ಹಾಗೂ ಭಾಷೆಯೊಂದಿಗಿನ ಉಭಯಮುಖಿ ಸಂಬಂಧಗಳನ್ನೇ ಪ್ರತಿಬಿಂಬಿಸುತ್ತವೆ. ಗ್ಲುಕ್ ಕೃತಿಗಳಲ್ಲಿ ಪರಸ್ಪರ ಕಾದಾಡುವ ಆಸೆಗಳ ಉದ್ವೇಗವನ್ನು ಅವರ ವಿವಿಧ ಕವನಗಳಲ್ಲಿ ಚಿತ್ರಿಸಿರುವ ಕಾವ್ಯಪುರುಷನ (ಪರ್ಸೊನ) ಚಿತ್ರಣದಲ್ಲಿ ಕಾಣಬಹುದು.

ಲೂಯಿಸ್ ಗ್ಲುಕ್ ತನ್ನ ಕವನಗಳಲ್ಲಿ ಅತ್ಯಂತ್ ತೀವ್ರವಾಗಿ ಹಾತೊರೆಯುವುದು 'ಬದಲಾವಣೆ'ಯನ್ನು. ಆದರೆ ಅವರು ಅಷ್ಟೇ ತೀವ್ರವಾಗಿ ವಿರೋಧಿಸುವುದೂ ಬದಲಾವಣೆಯನ್ನೇ. ಅತ್ಯಂತ ಕಷ್ಟಾರ್ಜಿತ ವಾದದ್ದು, ಗ್ಲುಕ್ ಗೆ ಅತ್ಯಂತ ಕಠಿಣವಾದದ್ದು ಅದೇ. ಅವರು ತಲ್ಲೀನರಾಗುವ ಮತ್ತೊಂದು ಕಾವ್ಯ ವಸ್ತುವೆಂದರೆ ಪ್ರಕೃತಿ. ಅವರ ಅತ್ಯಂತ ಪ್ರಖ್ಯಾತ ಕೃತಿ ದ ವೈಲ್ಡ್ ಐರಿಸ್ ಸಂಕಲನದ ಕವನಗಳು, ಅರಿವು, ಭಾವೋದ್ವೇಗದ ದನಿಗಳುಳ್ಳ ಹೂಗಳ ಒಂದು ಹೂದೋಟದಲ್ಲಿ ಸಂಭವಿಸುತ್ತವೆ.

ದ ಹೌಸ್ ಆನ್ ಮಾರ್ಶ್ ಲ್ಯಾಂಡ್ ಸಂಕಲನವೂ ಪ್ರಕೃತಿಗೆ ಸಂಬಂಧಿಸಿದ ಕವನಗಳೇ ಆಗಿದ್ದು, ರೊಮ್ಯಾಂಟಿಕ್ ಸಂಪ್ರದಾಯದ ಪ್ರಕೃತಿ ಕವನಗಳ ಪುನರ್ಮನನ ಇದ್ದಂತಿವೆ. ಅರಾರತ್ ಕೃತಿಯಲ್ಲಿ ಹೂಗಳು ಶೋಕದ ಭಾಷೆಯಾಗುತ್ತವೆ. ವಿಷಯಾಧಾರಿತವಾಗಿ ಹೇಳುವುದಾದರೆ, ಗ್ಲುಕ್ ಕವನಗಳು ಏನನ್ನು ದೂರವಿಡಲು ಪ್ರಯತ್ನಿಸುತ್ತದೋ ಅದೇ ಕಾರಣಕ್ಕೆ ಗಮನಾರ್ಹವೆನಿಸುತ್ತವೆ. ಅವರ ಕವನಗಳು ಜನಾಂಗೀಯವಾಗಿ ಗುರುತಿಸುವುದನ್ನು, ಧಾರ್ಮಿಕವರ್ಗಗಳಿಗೆ ಸೇರಿದಂತೆ ಗುರುತಿಸುವುದನ್ನು , ಅಥವ ಸ್ತ್ರೀ- ಪುರುಷರೆಂದು ಗುರುತಿಸುವುದನ್ನು ದೂರವಿಡುತ್ತವೆ. ಗ್ಲುಕ್ ಈ ಮೂಲಕ ತನ್ನನ್ನು ಜ್ಯೂಯಿಷ್ ಅಮೇರಿಕನ್ ಎಂದಾಗಲೀ, ಸ್ತ್ರೀವಾದಿ ಕವಿಯತ್ರಿ ಎಂದಾಗಲೀ ಪ್ರಕೃತಿ ಕವಿಯತ್ರಿ ಎಂದಾಗಲೀ ಗುರುತಿಸುವುದನ್ನು ವಿರೋಧಿಸುತ್ತಾರೆ.

ಲೇಖಕರು:

ಡಾ. ಉದಯರವಿ ಶಾಸ್ತ್ರೀ

ಇಂಗ್ಲಿಷ್ ವಿಭಾಗದ ಮುಖ್ಯಸ್ಥರು,

ಪಲ್ಲಾಗಟ್ಟಿ ಅಡವಪ್ಪ ಕಲಾ ಮತ್ತು ವಾಣಿಜ್ಯ ಕಾಲೇಜು

ತಿಪಟೂರು, ಕರ್ನಾಟಕ.

English summary
Louise Glück Biography in Kannada: The poet Louise Glück has become the first American woman to win the Nobel prize for literature in 27 years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X