ಜೆಲಿನಿಕ್‌: ಮಾಂತ್ರಿಕ ಭಾಷೆಯ ಲೇಖಕಿ

  • ದಟ್ಸ್‌ಕನ್ನಡ ಬ್ಯೂರೊ
Elfriede Jelinek : Why and How Noble Prize smiled on her?ಎಲ್‌ಫ್ರೆಡೆ ಜೆಲಿನಿಕ್‌ ಎನ್ನುವ ಆಸ್ಟ್ರಿಯಾದ ಲೇಖಕಿ ಇದೀಗ ಸಾರಸ್ವತ ಲೋಕದ ಕುತೂಹಲದ ಕೇಂದ್ರ. 2004ರ ನೊಬೆಲ್‌ ಸಾಹಿತ್ಯ ಪ್ರಶಸ್ತಿಗೆ ಆಯ್ಕೆಯಾಗಿರುವ ಜೆಲಿನಿಕ್‌ ಯಾರು ?

ನಿಜ. ಜೆಲಿನಿಕ್‌ ಪ್ರಶಸ್ತಿಗೆ ನೆಚ್ಚಿನ ಸ್ಪರ್ಧಿಯಾಗಿರಲಿಲ್ಲ . ಪ್ರಶಸ್ತಿ ಪ್ರಕಟವಾಗುವ ಕೆಲ ನಿಮಿಷಗಳ ಮುಂಚೆಯೂ ಜೆಲಿನಿಕ್‌ ಹೆಸರು ಗಟ್ಟಿದನಿಯಲ್ಲಿ ಕೇಳಿಬರುತ್ತಿರಲಿಲ್ಲ . ಜಾಯ್ಸ್‌ ಸಿ ಓಟ್ಸ್‌, ಇಂಗರ್‌ ಕ್ರಿಸ್ಟೆನ್‌ಸನ್‌, ಅಸ್ಸಿಯಾ ಡಿಜೆಬರ್‌ರಂಥ ಘಟಾನುಘಟಿಗಳು ಪ್ರಶಸ್ತಿಗೆ ನೆಚ್ಚಿನ ಹುದ್ದರಿಗಳಾಗಿದ್ದರು. ಆದರೆ ಪ್ರಶಸ್ತಿ ಒಲಿದುದು ಜೆಲಿನಿಕ್‌ಗೆ. ಹಾಗಾಗಿ ಯಾರೀಕೆ ? ಈ ಹೆಣ್ಣುಮಗಳ ವೈಶಿಷ್ಟ್ಯಗಳೇನು? ಎನ್ನುವ ಪ್ರಶ್ನೆ ಸಹಜವಾದುದೇ.

ಜೆಲಿನಿಕ್‌ ನೊಬೆಲ್‌ ಸಾಹಿತ್ಯ ಪ್ರಶಸ್ತಿ ಪಡೆದ ಮೊದಲ ಆಸ್ಟ್ರಿಯನ್‌. ಆಕೆಗೆ ಪ್ರಶಸ್ತಿ ಬಂದುದರ ಕುರಿತು ಹುಬ್ಬೇರಿಸಲು ಮತ್ತೊಂದು ಕಾರಣವಿದೆ. ಅದೆಂದರೆ, ಆಕೆ ಒಬ್ಬ ಹೆಣ್ಣು . ನಿಮಗೆ ನೊಬೆಲ್‌ ಇತಿಹಾಸ ಗೊತ್ತಾ ? 1901ರಿಂದ ಇಂದಿನವರೆಗೆ ನೊಬೆಲ್‌ ಸಾಹಿತ್ಯ ಪ್ರಶಸ್ತಿ ಪಡೆದವರು 9 ಮಂದಿ ಸ್ತ್ರೀಯರು ಮಾತ್ರ. ಜಿಲಿನಿಕ್‌ ಹತ್ತನೆಯವಳು. 1.3 ಕೋಟಿ ಡಾಲರ್‌ ಬಹುಮಾನದ ಹಣಕ್ಕೆ ಆಕೆ ವಾರಸುದಾರಳು! ಬಹುಮಾನದ ಖ್ಯಾತಿ ಹಾಗೂ ಹಣ ಆಕೆಗೊಂದಿಷ್ಟು ನೆಮ್ಮದಿ ತರಬಹುದು.

ಜೆಲಿನಿಕ್‌ ಎನ್ನುವ ಈ ಹೆಣ್ಣುಮಗಳು ಲೇಖಕಿ ಮಾತ್ರವಲ್ಲ . ಓರ್ವ ಹೋರಾಟಗಾರ್ತಿಯೂ ಹೌದು. ರಾಜಕೀಯ ವಿಮರ್ಶಕಿಯೂ ಹೌದು. ಆಕೆಗೆ ನೆಮ್ಮದಿ ದೂರವಾಗಿರುವುದು ಈ ಕಾರಣಗಳಿಂದಲೇ. 1996ರಿಂದಲೂ ಜೆಲಿನಿಕ್‌ ಸಾರ್ವಜನಿಕ ಜೀವನದಿಂದ ದೂರವಾಗಿದ್ದಾಳೆ. ಅಶ್ಲೀಲತೆಯ ಸರಬರಾಜುದಾರಳು ಎನ್ನುವುದು ಆಕೆಯ ಮೇಲಿನ ಆಪಾದನೆ. ಫ್ರೀಡಂ ಪಾರ್ಟಿಗಂತೂ ಆಕೆಯನ್ನು ಕಂಡರೆ ಕೆಂಡ. ಈ ಎಲ್ಲದರಿಂದಾಗಿ ಡಿಸೆಂಬರ್‌ 10ರಂದು ನಡೆಯುವ ನೊಬೆಲ್‌ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಆಕೆ ಭಾಗವಹಿಸುತ್ತಿಲ್ಲ . ‘ಉಹುಂ, ಭಾಗವಹಿಸುವುದು ಸಾಧ್ಯವಾಗದು’ ಎಂದಿದ್ದಾಳೆ ಜೆಲಿನಿಕ್‌. ಆಕೆಗೆ ಜೀವಭಯ.

ಜೆಲಿನಿಕ್‌ ಹುಟ್ಟಿದ್ದು ಆಸ್ಟ್ರಿಯಾದ ಮುರ್ಝುಸ್‌ಚ್ಲಾಗ್‌ನಲ್ಲಿ , 1946ರಲ್ಲಿ . ಆಕೆಯ ಮೊದಲ ಕೃತಿ Lisas Schatten ಪ್ರಕಟವಾದದ್ದು 1967ರಲ್ಲಿ . 1970ರ ದಶಕದಲ್ಲಿ ಜೆಲಿನಿಕ್‌ ವಿದ್ಯಾರ್ಥಿ ಚಳವಳಿಗಳಲ್ಲಿ ತೊಡಗಿಸಿಕೊಂಡಳು. ಅದು ಆಕೆಯ ಬರವಣಿಗೆಯ ಸಂಕ್ರಮಣ ಕಾಲ. ಚಳವಳಿಯ ಕಾವು ಜೆಲಿನಿಕ್‌ಳ ಬರವಣಿಗೆಯಲ್ಲೂ ಕಾಣಿಸಿಕೊಂಡಿತು. ಆಹೊತ್ತಿನಲ್ಲೇ ಹೊರಬಿದ್ದ ‘ನಾವು ಕುರುಡರು, ಮಗು!’ (Are Decoys, Baby!) ಎನ್ನುವ ಅಣಕು ಕಾದಂಬರಿ ಆಕೆಗೆ ಹೆಸರು ತಂದುಕೊಟ್ಟಿತು, ಜೊತೆಗೆ ವಿರೋಧವನ್ನೂ .

1990ರಲ್ಲಿ ಪ್ರಕಟವಾದ ‘ವಂಡರ್‌ಫುಲ್‌ ಟೈಂ’ ಹಾಗೂ 1988ರಲ್ಲಿ ಬೆಳಕುಕಂಡ ‘ದಿ ಪಿಯಾನೊ ಮಾಸ್ಟರ್‌’ ಜೆಲಿನಿಕ್‌ಳ ತಾರಾಪಟ್ಟ ಇನ್ನಷ್ಟು ಹೆಚ್ಚಿಸಿದವು. ಮೈಕೆಲ್‌ ಹನಿಕೆ ನಿರ್ದೇಶನದಲ್ಲಿ ಪಿಯಾನೊ ಮಾಸ್ಟರ್‌ ಚಲನಚಿತ್ರವಾಗಿದೆ.

ತನ್ನ ತಾಯ್ನಾಡಿನಲ್ಲೇ ಜೆಲಿನಿಕ್‌ ವಿವಾದಾಸ್ಪದ ವ್ಯಕ್ತಿಯಾಗಿದ್ದಳು ಎನ್ನುವುದು ನೊಬೆಲ್‌ ಅಕಾಡೆಮಿಗೆ ಗೊತ್ತು . ಆದರೆ ಪ್ರಶಸ್ತಿ ನೀಡುವಲ್ಲಿ ಅಕಾಡೆಮಿ ಗಮನಿಸಿರುವುದು ಆಸ್ಟ್ರಿಯಾದ ಭಾಷಿಕ-ಸಾಹಿತ್ಯಿಕ ಪರಂಪರೆ ಬೆಳೆಸುವಲ್ಲಿ ಜೆಲಿನಿಕ್‌ ನೀಡಿರುವ ಕೊಡುಗೆಯನ್ನು . ಜೊಹಾನ್ನ ನೆಸ್ಟ್ರಾಯ್‌, ಕಾರ್ಲ್‌ ಕ್ರೌಸ್‌, ಒಡೊನ್‌ ಹೊರ್ವಾಥ್‌, ಇಲಿಯಾಸ್‌ ಕನೆಟ್ಟಿ , ಥಾಮಸ್‌ ಬರ್ನಾರ್ಡ್‌ ಮುಂತಾದವರೊಂದಿಗೆ ಪರಂಪರೆಯನ್ನು ರೂಢಿಸುವಲ್ಲಿ ಜೆಲಿನಿಕ್‌ ಮಹತ್ವದ ಪಾತ್ರ ವಹಿಸಿದ್ದಾಳೆ ಎಂದು ಅಕಾಡೆಮಿ ಬಣ್ಣಿಸಿದೆ. ಜೆಲಿನಿಕ್‌ಳ ಈಚಿನ ಕೃತಿ ಬ್ಯಾಂಬಿಲ್ಯಾಂಡ್‌ (Bambiland). 2003ರಲ್ಲಿ ಪ್ರಕಟವಾದ ಇದೊಂದು ರಾಜಕೀಯ ನಾಟಕ. ಇರಾಕ್‌ ಮೇಲಿನ ಅಮೆರಿಕ ದಾಳಿಯನ್ನು ವಿರೋಧಿಸುವ ಕಥಾವಸ್ತು ಈ ನಾಟಕದ್ದು . ಆಕೆಯ ರಾಜಕೀಯ ವಿಚಾರ-ಬರಹಗಳಿಗೂ ಪ್ರಶಸ್ತಿಗೂ ಏನೇನೂ ಸಂಬಂಧವಿಲ್ಲ ಎಂದೂ ಅಕಾಡೆಮಿ ಹೇಳಿದೆ.

ವ್ಯಕ್ತಿತ್ವದಂತೆಯೇ ಜೆಲಿನಿಕ್‌ಳ ಬರವಣಿಗೆಯ ಶೈಲಿಯೂ ವಿಶಿಷ್ಟವಾದುದು. ಪದ್ಯ ಹಾಗೂ ಗದ್ಯದ ನಡುವಣ ಲಯವೊಂದನ್ನು ಆಕೆಯ ಲೇಖನಿ ಸಿದ್ಧಿಸಿಕೊಂಡಿದೆ. ನಾಟಕೀಯತೆ, ಮಾಂತ್ರಿಕತೆ, ಸಿನಿಮೀಯತೆ, ಇಷ್ಟೇ ಅಲ್ಲ ಜೆಲಿನಿಕ್‌ ಬರಹಗಳಲ್ಲಿ ಆಧ್ಯಾತ್ಮಿಕತೆಯ ಸ್ಪರ್ಶವೂ ಇದೆ.

ಜೆಲಿನಿಕ್‌ ಭಾಷಾ ಪ್ರಭುತ್ವವನ್ನಂತೂ ಸ್ವೀಡಿಷ್‌ ಅಕಾಡೆಮಿ ಮುಕ್ತಕಂಠದಿಂದ ಕೊಂಡಾಡಿದೆ. ತನ್ನ ವಿಶಿಷ್ಠ ಭಾಷೆಯಿಂದ ಜೆಲಿನಿಕ್‌ ಸಮಾಜದ ಅಸ್ಪಷ್ಟತೆಯನ್ನು ಹೊರಹಾಕಿದ್ದಾಳೆ. ಆಕೆಯದ ಸಂಗೀತದ ಹರಿವಿನ ಭಾಷೆ ಎಂದು ಅಕಾಡೆಮಿ ಬಣ್ಣಿಸಿದೆ.

ನೊಬೆಲ್‌ ಪ್ರಶಸ್ತಿಯಿಂದಾಗಿ ಜೆಲಿನಿಕ್‌ ಸಮಾಜದ ಮುಖ್ಯವಾಹಿನಿಗೆ ಮರಳುವಂತಾದರೆ, ಅದು ಆಕೆಗೆ ದೊರೆಯುವ ನಿಜವಾದ ಪ್ರಶಸ್ತಿಯಾಗಬಹುದು.

ಮುಖಪುಟ / ಸಾಹಿತ್ಯ-ಸಂಸ್ಕೃತಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+