ಪ್ರೇಮವೆನಲು ಹಾಸ್ಯವೇ?
*ಸತ್ಯವ್ರತ ಹೊಸಬೆಟ್ಟು
ನವ್ಯದ ಅಬ್ಬರದಲ್ಲಿ ನಾವು ಕಳೆದುಕೊಂಡ ಕವಿಗಳಲ್ಲಿ ಮುಖ್ಯವಾದವರು ಕೆ.ಎಸ್.ನರಸಿಂಹ ಸ್ವಾಮಿ. ಅಡಿಗರ ನಂತರ ಬಂದ ಅನೇಕ ಪ್ರಮುಖರೆನ್ನಿಸಿಕೊಂಡ ಕವಿಗಳು, ಅವರ ವಂದಿಮಾಗಧರಂತಿದ್ದ ವಿಮರ್ಶಕರೂ ತೋಚಿದ್ದೆಲ್ಲ ಗೀಚುವುದೇ ಕವಿತ್ವ ಎಂದು ನಂಬಿಸಲು ಯತ್ನಿಸಿದರು. ಅಂಥವರಲ್ಲಿ ಹಲವರು ತರಗೆಲೆಗಳಂತೆ ತೂರಿಹೋದರೆ , ಉಳಿದವರು ಕೊಳೆರೋಗಕ್ಕೆ ತುತ್ತಾದ ಅಡಕೆಯಂತೆ ಉದುರಿದರು.
ಆದರೆ ಯಾವತ್ತೂ ಕೆ.ಎಸ್. ನರಸಿಂಹ ಸ್ವಾಮಿ ಕಾವ್ಯದಲ್ಲಿ ಮುನಿಸಿಕೊಳ್ಳಲಿಲ್ಲ. ಮೈಸೂರು ಮಲ್ಲಿಗೆಯ ಕಂಪು ಅವರ ಮನೆಯಂಗಳದಲ್ಲಿ ಮರೆಯಾಗಲಿಲ್ಲ. ಜೋಯಿಸರ ಹೊಲದೊಳಗೆ ಕುಣಿವ ಕೆಂಗರು ಬೆಳೆದು ಹಸುವಾಗಲಿಲ್ಲ. ಚಿತ್ರದುರ್ಗದ ರೈಲು ನಿತ್ಯವೂ ಓಡೋಡಿ ಮೈಸೂರ ಸೇರುವುದು ಸುಳ್ಳೆಂದು ಅವರು ಒಪ್ಪಲಿಲ್ಲ.
ನೀನರಿಯದಿರಬಹುದು ನೀ ನಂಬದಿರಬಹುದು
ನೀನೊಲ್ಲದಿರಬಹುದು ನನ್ನೊಲವನು
ಕೋಟಿ ತಾರೆಗೆ ಮಿನುಗಿ ತುಂಬು ಚಂದಿರ ಹೊಳೆದು
ಆದರೂ ತುಂಬದಿದೆ ಬಾನಿನೊಡಲು
ಎಂದವರು ಅವರು. ಒಂದೆರಡು ಸಾರಿ ಅವರು ಸುತ್ತಿ ಬಳಸಿ ನವ್ಯರಿಗೆ ಹತ್ತಿರಾಗಲು ಯತ್ನಿಸಿದರಾದರೂ, ಅವರಿಗೇ ಅದರ ನಿರರ್ಥಕತೆ ಅರಿವಾಗಿರಬೇಕು. ಹಾಗೆ ನೋಡಿದರೆ ನವ್ಯ ಸಿದ್ದಿಸಿದ್ದು ಅಡಿಗರಿಗೆ ಮಾತ್ರ. ಶರ್ಮ, ನಾಡಿಗ, ಎಚ್.ಎಸ್. ವೆಂಕಟೇಶಮೂರ್ತಿ,ಲಕ್ಷ್ಮಿ ನಾರಾಯಣ ಭಟ್ಟ, ಕೆ.ವಿ. ತಿರುಮಲೇಶ ಇವರೆಲ್ಲ ನೆರಳುಗಳು ಅಷ್ಟೇ.
ಸಂಜೆಗೊಬ್ಬಳು ಮುದುಕಿ ಕೊನೆಯ ಕೆಂಡವ ಕೆದಕಿ
ಎತ್ತಿ ಮುಡಿದಳು ತನ್ನ ಗಂಟು ಜಡೆಗೆ
ಎಂಬೊಂದು ರೂಪಕವನ್ನು ನರಸಿಂಹ ಸ್ವಾಮಿ ಮುಂದಿಟ್ಟಾಗ ಶರ್ಮ ಮುಂತಾದವರು ದಂಗಾದದ್ದು ನಿಜ. ಜಾನಪದವನ್ನು ಕಂಬಾರ, ಪ್ರತಿಪದವನ್ನು ಬೇಂದ್ರೆ, ಆಧುನಿಕತೆಯನ್ನು ಅಡಿಗ ಆವಾಹಿಸಿಕೊಂಡ ಹಾಗೆ, ಕೆಎಸ್‌ನ ಆಯ್ದುಕೊಂಡದ್ದು ಪ್ರತಿಮಾತ್ಮಕತೆಯನ್ನು . ಪ್ರೇಮಕ್ಕಿರುವ ಮೇರೆಗಳನ್ನು ಅವರ ಕವಿತೆಗಳು ವಿಸ್ತರಿಸಿದವು.
ಅಲೆ ಬಂದು ಕರೆಯುವುದು ನಿನ್ನೊಲುಮೆ ಅರಮನೆಗೆ
ಒಳಗುಡಿಯ ರತ್ನಪುರಿಗೆ
ಅಲೆಯಿಡುವ ಮುತ್ತಿನಲೆ ಕಾಣುವುದು ನಿನ್ನೊಲುಮೆ
ಒಳಗುಡಿಯ ಮೂರ್ತಿಮಹಿಮೆ
ಕೇತಕಿಯ ಬನಗಳಲಿ ಸಂಚರಿಸದಿರು ಚೆಲುವೆ
ಸರ್ಪಮಂದಿರವಂತೆ ಕಂಪಿನೊಡಲು
ಮಧುವ ವೀಣಾನಾದ ನಿರ್ಮಿಸುವ ನಾಕದಲೆ
ರಾಗಗಳ ಸಿಂಚಿಸುತ ಬಹುದು ಸಿಡಿಲು
ಅಥವಾ
ಸುತ್ತಿದೆವು ದೇಗುಲವ ಬಳಸಿದೆವು ಕಂಬಗಳ
ಒಳಗುಡಿಯ ಮೂರ್ತಿಯನು ನೋಡಲಿಲ್ಲ
ಅಥವಾ
ಬಯಲಿಗೆ ಇಳಿದ ಬಿಳಿ ಬಿಳಿಯ
ಹಕ್ಕಿದಳ ದೂರದಿಂಪಿನ ಹೆಸರು ಪ್ರೇಮವೆಂದು
ಮಾಲಗಣ್ಣಿನ ಹೆಣ್ಣೆ ನಿನ್ನ ತುಟಿಯಿಕ್ಕೆಲದಿ
ಮಂದಹಾಸದ ಹೆಸರು ಪ್ರೇಮವೆಂದು
ಕೆಎಸ್‌ನ ಹೇಗೆ ಬರೆಯಬಲ್ಲರು. ಹಕ್ಕಿಗಳ ಚಿಲಿಪಿಲಿ ಅವರಿಗೆ ದೂರದಿಂಪು. ಗೆಳತಿ ಬರುವ ದಾರಿಯ ಬಗ್ಗೆ ಅವರು ಹತ್ತಾರು ಗಳಿಗೆಯಲಿ ಹಾದಿ ಹಾರಿರಲು ಎಂದು ಹಾರೈಸಬಲ್ಲರು . ಆಕೆಯ ಪ್ರಯಾಣವನ್ನು ಪಯಣವೋ ನಿಲುಗಡೆಯೋ ತಿಳಿಯದಂತಿರಲಿ ಎನ್ನಬಲ್ಲರು.
ಭಾನುವಾರ (ಆಗಸ್ಟ್ 20) ಅವರಿಗೆ ಗೊರೂರು ಪ್ರಶಸ್ತಿ ಸಂದಿದೆ. ಕನ್ನಡದ ಬಳ್ಳಿಯಲ್ಲಿ ಅರಳಿದ ಮೈಸೂರು ಮಲ್ಲಿಗೆಗೆ ಜ್ಞಾನ ಪೀಠ ಬಂದರೂ ಸಂತೋಷವೇ. ಆದರೆ ಅನಂತಮೂರ್ತಿಯ ಹಾಗೆ ಮಲ್ಲಿಗೆಯ ಕವಿಗೆ ವಶೀಲಿ ಮಾಡುವುದಕ್ಕೆ ಯಾರೂ ಇಲ್ಲ. ಜ್ಞಾನಪೀಠ ಪ್ರಶಸ್ತಿ ಸಮಿತಿಯಲ್ಲಿರುವವರಿಗೆ ಕೆಎಸ್‌ನ ಕಾವ್ಯ ಅರ್ಥವಾಗುವುದಿಲ್ಲ.
ಬನಶಂಕರಿಯ ತಮ್ಮ ಮನೆಯ ಮುಂದಿನ ಜಗಲಿಯಲ್ಲಿ ಕುಳಿತು ಮೂಗಿಗೆ ಒಂದು ಚಿಟಿಕೆ ನಶ್ಯ ಏರಿಸಿಕೊಂಡು ನರಸಿಂಹ ಸ್ವಾಮಿ ಪತ್ರಿಕೆ ಓದುತ್ತಿದ್ದಾರೆ. ಪಕ್ಕದಲ್ಲೇ ಅವರ ಅವರ ಪತ್ನಿ ಅಕ್ಕಿಯಾರಿಸುತ್ತಿದ್ದಾರೆ. ಇದು ನಿತ್ಯದ ಚಿತ್ರ . ನಾಲ್ಕು ಗಂಡು, ನಾಲ್ಕು ಹೆಣ್ಣು ಮಕ್ಕಳಿದ್ದರೂ ಸದ್ಯಕ್ಕೆ ಮನೆಯಲ್ಲಿರೋದು ಇಬ್ಬರೇ. ಮಕ್ಕಳೆಲ್ಲ ತಮ್ಮ ಪಾಡಿಗೆ ತಾವು ಸುಖವಾಗಿದ್ದಾರೆ.
ಅವರದೇ ಕವಿತೆಯ ಸಾಲುಗಳು ನೆನಪಾಗುತ್ತವೆ,
ಒಂದು ಗಂಡಿಗೊಂದು ಹೆಣ್ಣು
ಹೇಗೋ ಸೇರಿ ಹೊಂದಿಕೊಂಡು
ಕಾಣದೊಂದು ಕನಸ ಕಂಡು
ದುಃಖ ಹಗುರವೆನುತಿರೆ
ಪ್ರೇಮವೆನಲು ಹಾಸ್ಯವೇ ?












Click it and Unblock the Notifications