ಜನಪದ ಗೀತೆಗಳ ಕೊಲ್ಲಬೇಡಿ, ಕೆಸೆಟ್‌ಗಳಿಗೆ ಸೆನ್ಸಾರ್ ಅಳವಡಿಸಿ
ಬೆಂಗಳೂರು : ನಕಲಿ ಹಾಗೂ ಅಶ್ಲೀಲ ಸಾಹಿತ್ಯದ ದಾಳಿಯಿಂದ ಜನಪದ ಸಾಹಿತ್ಯವನ್ನು ರಕ್ಷಿಸಲು ಧ್ವನಿ ಸುರುಳಿಗಳಿಗೆ ಸೆನ್ಸಾರ್ ಅಳವಡಿಸಬೇಕೆ?
ಹೌದು ಎನ್ನುವ ಅಭಿಪ್ರಾಯ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಭಾನುವಾರ ನಗರದಲ್ಲಿ ಏರ್ಪಡಿಸಿದ್ದ- ಜನಪದ ಸಂಗೀತ ಶೋಧ : ಗಾಯನ ಸ್ಪರ್ಧೆ ಕಾರ್ಯಕ್ರಮದಲ್ಲಿ ಕೇಳಿಬಂತು.
ಕಾರ್ಯಕ್ರಮವನ್ನು ಹಾಡು ಹೇಳುವ ಮೂಲಕ ಉದ್ಘಾಟಿಸಿದ ಸಿನಿಮಾ ಸಾಹಿತಿ ಹಂಸಲೇಖಾ ಇಂಥದೊಂದು ಸೆನ್ಸಾರ್ ಸಮಿತಿ ಇರುವ ಅಗತ್ಯವನ್ನು ಬಲವಾಗಿ ಪ್ರತಿಪಾದಿಸಿದರು. ಕರ್ನಾಟಕ ಜಾನಪದ ಅಕಾಡೆಮಿ ಧ್ವನಿ ಸುರುಳಿಗಳಿಗೆ ಸೆನ್ಸಾರ್ ಸಮಿತಿಯನ್ನು ಅಳವಡಿಸುವ ಮೂಲಕ ನೈಜ ಜಾನಪದ ಸಾಹಿತ್ಯದ ವಿಶಿಷ್ಟತೆಯನ್ನು ರಕ್ಷಿಸಬೇಕು ಎನ್ನುವ ಕಳಕಳಿ ಅವರದು.
ನಾವು ಹಾಕಿದ ಕಸವನ್ನು ನಾವೇ ತೊಡೆಯಬೇಕಾಗಿದೆ. ಕೆಟ್ಟದ್ದನ್ನು ಗುಡಿಸಿ ಒಳ್ಳೆಯದನ್ನು ಹುಟ್ಟುಹಾಕುವ ಪ್ರಯತ್ನ ನಡೆಯಬೇಕಾಗಿದೆ ಎಂದು ಅರ್ಥಪೂರ್ಣವಾಗಿ ನುಡಿದ ಹಂಸಲೇಖಾ, ಜನಪದವನ್ನು ಶಾಸ್ತ್ರೀಯವಾಗಿ ಅಧ್ಯಯನ ಮಾಡಿ ಅಕಾಡೆಮಿ ಪುಸ್ತಕ ತರುವುದಾದಲ್ಲಿ ತಾವು ಸಹಕಾರ ನೀಡಲು ಸಿದ್ಧ ಎಂದರು.
ಜನಪದ ಗೀತೆಗಳನ್ನು ಕೊಲ್ಲಬೇಡಿ- ಬಿ.ಕೆ. ಸುಮಿತ್ರಾ
ಜನಪದ ಸಂಗೀತ ಜನರ ಮನಸ್ಸಿನಲ್ಲಿ ಹುಟ್ಟುತ್ತದೆ, ಅಲ್ಲಿಯೇ ಬೆಳೆಯುತ್ತದೆ. ಆದ್ದರಿಂದ ಯಾವ ಮೂಲ ಬಂಡವಾಳವೂ ಇಲ್ಲದೆ ಹಳ್ಳಿಯ ಹಾಡುಗಳನ್ನು ರಚಿಸುವವರತ್ತ ಜಾನಪದ ಅಕಾಡೆಮಿ ಗಮನ ಹರಿಸಬೇಕು ಎಂದು ಪ್ರಸಿದ್ಧ ಸುಗಮ ಸಂಗೀತ ಗಾಯಕಿ ಬಿ.ಕೆ. ಸುಮಿತ್ರಾ ಸಲಹೆ ಮಾಡಿದರು.
ಹಾಸ್ಯ, ಸಮಯ ಪ್ರಜ್ಞೆ, ಸಮದ್ಧ ಅನುಭವದಿಂದ ಸೃಷ್ಟಿಯಾದ ಜನಪದ ಗೀತೆಗಳನ್ನು ಕೊಲ್ಲುವ ಪ್ರಯತ್ನ ಬೇಡ ಎಂದು ಕಳಕಳಿಯಿಂದ ಮನವಿ ಮಾಡಿದ ಸುಮಿತ್ರಾ, ಜನಪದ ಗೀತೆಗಳ ಸ್ವರೂಪವನ್ನು ಬದಲಾಯಿಸುವ ಪ್ರಯತ್ನಗಳಿಗೆ ತಮ್ಮ ವಿರೋಧ ವ್ಯಕ್ತಪಡಿಸಿದರು.
ಜನಪದ ಸಂಗೀತದ ಧಾಟಿ ಸಾಂಪ್ರದಾಯಿಕವಾಗಿದ್ದರೆ ಮಾತ್ರ ಅದರ ಮೂಲ ಸ್ವರೂಪ ಉಳಿಯುತ್ತದೆ ಎಂದು ಗಾಯಕ ವೈ.ಕೆ.ಮುದ್ದುಕೃಷ್ಣ ಅಭಿಪ್ರಾಯಪಟ್ಟರು. ಪ್ರತಿ ಜಿಲ್ಲೆಯಲ್ಲೂ ಜನಪದ ಕಮ್ಮಟಗಳನ್ನು ಹಮ್ಮಿಕೊಳ್ಳುವುದಾಗಿ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪ್ರೊ।ಹಿ.ಶಿ. ರಾಮಚಂದ್ರೇಗೌಡ ಹೇಳಿದರು.
ಜನಪದ ಸಾಹಿತ್ಯದಲ್ಲಿ ಕಲಬೆರಕೆ : ಈ ಕುರಿತು ನೀವೇನಂತೀರಿ?
(ಇನ್ಫೋ ವಾರ್ತೆ)
ಮುಖಪುಟ / ಸಾಹಿತ್ಯ ಸೊಗಡು











Click it and Unblock the Notifications