ಈ ಭಾನುವಾರ ಸಾಹಿತ್ಯ ಪ್ರಿಯರಿಗೆ 'ಛಂದ'ದ ಹಬ್ಬ!
ಬೆಂಗಳೂರು, ಅಕ್ಟೋಬರ್ 14: ಲೇಖಕ ವಸುಧೇಂದ್ರ ಅವರ 'ಛಂದ ಪುಸ್ತಕ' ಪ್ರಕಾಶನದ ಐದು ಕೃತಿಗಳು ಭಾನುವಾರ (ಅ.20) ಬಿಡುಗಡೆಯಾಗುತ್ತಿವೆ.
ಛಂದ ಪುಸ್ತಕ ಬಹುಮಾನ ಪಡೆದ ಶಶಿ ತರೀಕೆರೆ ಅವರ ಕಥಾಸಂಕಲನ 'ಡುಮಿಂಗ', ನಾಗರಾಜ ವಸ್ತಾರೆ ಅವರ 'ಪ್ರಿಯೇ ಚಾರುಶೀಲೆ' ಕಾದಂಬರಿ, ಪದ್ಮನಾಭ ಭಟ್ ಶೇವ್ಕಾರ್ ಅವರ 'ಕನ್ನಡಿ ಹರಳು' ಕಥಾಸಂಕಲನ, ಲಕ್ಷ್ಮಣ ಬಾದಾಮಿ ಅವರ 'ಒಂದು ಚಿಟಿಕೆ ಮಣ್ಣು' ಕಥಾ ಸಂಕಲನ ಮತ್ತು ಸಂಯುಕ್ತಾ ಪುಲಿಗಲ್ ಅವರು ಅನುವಾದಿಸಿರುವ 'ರೆಬೆಲ್ ಸುಲ್ತಾನರು' ಕೃತಿಗಳು ಬಿಡುಗಡೆಯಾಗಲಿವೆ.
ನಗರದ ಬಸವನಗುಡಿಯ ಬಿ.ಪಿ. ವಾಡಿಯಾ ರಸ್ತೆಯಲ್ಲಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌ನಲ್ಲಿ ಬೆಳಿಗ್ಗೆ 10.30ರಿಂದ ಕಾರ್ಯಕ್ರಮ ಆರಂಭವಾಗಲಿದ್ದು, ಹಿರಿಯ ವಿಮರ್ಶಕ ರಾಜೇಂದ್ರ ಚೆನ್ನಿ ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ನಿರ್ದೇಶಕ ಬಿ. ಸುರೇಶ್ ಮತ್ತು ಲೇಖಕಿ ದೀಪಾ ಗಣೇಶ್ ಐವರು ಲೇಖಕರೊಂದಿಗೆ ಸಂದರ್ಶನ ನಡೆಸಲಿದ್ದಾರೆ.

ಈ ವರ್ಷದ ಫಸಲಾಗಿ ಐದು ಹೊಚ್ಚ ಹೊಸ ಕನ್ನಡ ಪುಸ್ತಕಗಳನ್ನು ಓದುಗರಿಗೆ ನೀಡಲು 'ಛಂದ ಪುಸ್ತಕ' ಸಿದ್ಧವಾಗಿದೆ. ಬರುವ ಭಾನುವಾರ, ಅಂದರೆ ೨೦ನೇ ಅಕ್ಟೋಬರ್ ೨೦೧೯ರ ಬೆಳಿಗ್ಗೆ, ನೀವು ನಮ್ಮೊಡನೆ ಇರಬೇಕು. ಹಿರಿಯ ವಿಮರ್ಶಕ ರಾಜೇಂದ್ರ ಚೆನ್ನಿಯವರು ಪುಸ್ತಕ ಬಿಡುಗಡೆ ಮಾಡಿ ಮಾತನಾಡುತ್ತಾರೆ. ಐವರು ಲೇಖಕರೊಡನೆ ಸಂದರ್ಶನವನ್ನು ಬಿ.ಸುರೇಶ ಮತ್ತು ದೀಪಾ ಗಣೇಶ್ ಮಾಡುತ್ತಾರೆ.
ಛಂದ ಪುಸ್ತಕ ಬಹುಮಾನ ಪಡೆದ ಶಶಿ ತರೀಕೆರೆಯವರ ಕಥಾಸಂಕಲನ 'ಡುಮಿಂಗ' ಅಪ್ರಕಟಿತ, ಹೊಸ ಬಗೆಯ ಕತೆಗಳನ್ನು ಹೊಂದಿದೆ. ನಾಗರಾಜ ವಸ್ತಾರೆಯವರು ತಮ್ಮ ಕಾವ್ಯಮಯ ಸುಕೋಮಲ ಭಾಷೆಯಲ್ಲಿ ಒಂದು ಸೊಗಸಾದ ಪ್ರೇಮಕತೆಯನ್ನು 'ಪ್ರಿಯೇ ಚಾರುಶೀಲೆ' ಕಾದಂಬರಿಯಲ್ಲಿ ಒಡಮೂಡಿಸಿದ್ದಾರೆ.

ತಮ್ಮ ಮೊದಲ ಪುಸ್ತಕದಲ್ಲೇ ಹತ್ತಾರು ಪ್ರಶಸ್ತಿ-ಬಹುಮಾನಗಳನ್ನು ಪಡೆದ ಪದ್ಮನಾಭ ಭಟ್ಟ ಶೇವ್ಕಾರ ಮತ್ತಿಷ್ಟು ಹೊಸ ಕತೆಗಳ ಗುಚ್ಚದೊಂದಿಗೆ ಬಂದಿದ್ದಾರೆ. 'ಕನ್ನಡಿ ಹರಳು' ಕಥಾಸಂಕಲನದ ಎಲ್ಲಾ ಕತೆಗಳು ಯಾವ ಪತ್ರಿಕೆಗಳಲ್ಲೂ ಪ್ರಕಟವಾಗದೆ, ಪುಸ್ತಕ ರೂಪದಲ್ಲಿ ನೇರವಾಗಿ ನಿಮಗೆ ದಕ್ಕಲಿದೆ.
ಉತ್ತರ ಕರ್ನಾಟಕದ ಕತೆಗಾರ ಲಕ್ಷ್ಮಣ ಬಾದಾಮಿ ತಮ್ಮ ಹೊಸ ಕಥಾಸಂಕಲನವನ್ನು ಓದುಗರಿಗೆ ಕೊಡುತ್ತಿದ್ದಾರೆ. 'ಒಂದು ಚಿಟಿಕೆ ಮಣ್ಣು' ಕೃತಿಗೆ ಎಸ್. ದಿವಾಕರ್ ಅವರು ವಿದ್ವತ್‌ಪೂರ್ಣ ಮುನ್ನುಡಿ ಬರೆದಿದ್ದಾರೆ.

ಬಹುಮನಿ ಸುಲ್ತಾನರ ಕುರಿತು ಮನು ಎಸ್ ಪಿಳ್ಳೈ ಇಂಗ್ಲೀಷಿನಲ್ಲಿ ಬರೆದ ಬಹುಚರ್ಚಿತ ಕೃತಿ 'ರೆಬೆಲ್ ಸುಲ್ತಾನ್ಸ್' ಅನ್ನು, ಸಂಯುಕ್ತಾ ಪುಲಿಗಲ್ 'ರೆಬೆಲ್ ಸುಲ್ತಾನರು' ಎಂದು ಅನುವಾದಿಸಿದ್ದಾರೆ. ಬಿಜಾಪುರ, ಗುಲ್ಬರ್ಗಾ, ಬೀದರ್, ಗೋಲ್ಕೊಂಡ, ಹಂಪಿ, ಅಹಮದ ನಗರ ರಾಜ್ಯಗಳನ್ನು ಆಳಿದ ಸುಲ್ತಾನರ (ಸುರತ್ರಾಣರ) ಐದು ನೂರು ವರ್ಷಗಳ ಹಳೆಯ ಇತಿಹಾಸ ನಿಮ್ಮ ಓದಿಗೆ ಸಿದ್ಧವಾಗಿದೆ ಎಂದು ವಸುಧೇಂದ್ರ ತಿಳಿಸಿದ್ದಾರೆ.












Click it and Unblock the Notifications