ಅ. 1ಕ್ಕೆ ‘ಕುಂವೀ 70 ಕಥೆ 50’ ಕೃತಿ ಲೋಕಾರ್ಪಣೆ ಮತ್ತು ಜನ್ಮೋತ್ಸವ ಕಾರ್ಯಕ್ರಮ
ಶಿವಮೊಗ್ಗ, ಸೆ. 29 : ಕುಂವೀ ಎಂದೇ ಖ್ಯಾತರಾಗಿರುವ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಕುಂಬಾರ ವೀರಭದ್ರಪ್ಪ ಅವರ 'ಕುಂವೀ 70 ಕಥೆ 50' ಕೃತಿ ಅಕ್ಟೋಬರ್ 01 ರಂದು ಶಿವಮೊಗ್ಗದಲ್ಲಿ ಲೋಕಾರ್ಪಣೆಯಾಗಲಿದೆ. ಇದರ ಜೊತೆಗೆ ಜನ್ಮೋತ್ಸವ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
ಸುವ್ವಿ ಪಬ್ಲಿಕೇಶನ್ಸ್, ಕುಂವೀ ಅಭಿಮಾನಿ ಬಳಗ, ಜನಸ್ಪಂದನ ಟ್ರಸ್ಟ್(ರಿ), ಸಾಹಿತ್ಯ ಸಾಂಸ್ಕೃತಿಕ ವೇದಿಕೆ, ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಶಿವಮೊಗ್ಗದ ಕರ್ನಾಟಕ ಜಾನಪದ ಪರಿಷತ್ತಿನ ಸಂಯುಕ್ತಾಶ್ರಯದಲ್ಲಿ ಅಕ್ಟೋಬರ್ 01 ರಂದು ಸಂಜೆ 5ಕ್ಕೆ ಕಮಲಾ ನೆಹರೂ ಸ್ಮಾರಕ ರಾಷ್ಟ್ರೀಯ ಮಹಿಳಾ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ 'ಕುಂವೀ 70 ಕಥೆ 50' ಕೃತಿ ಲೋಕಾರ್ಪಣೆಯಾಗಲಿದೆ.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ಕೇಂದ್ರ ಸಾಹಿತ್ಯ ಅಕಾಡೆಮಿಯ ಮಾಜಿ ಕಾರ್ಯದರ್ಶಿ ಅಗ್ರಹಾರ ಕೃಷ್ಣಮೂರ್ತಿ ನೆರವೇರಿಸಲಿದ್ದಾರೆ. ಬಳ್ಳಾರಿ ಜ್ಞಾನಾಮೃತ ವಸತಿ ಶಿಕ್ಷಣ ಸಂಸ್ಥೆಯ ಗೌರವಾಧ್ಯಕ್ಷ ಎಂ.ಜಿ. ಗೌಡ ಅಧ್ಯಕ್ಷತೆ ವಹಿಸಲಿದ್ದಾರೆ. ಪುಸ್ತಕ ಬಿಡುಗಡೆ ಸಂದರ್ಭದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ. ಕು. ವೀರಭದ್ರಪ್ಪ ಅವರಿಗೆ ಅಭಿನಂದನಾ ಕಾರ್ಯಕ್ರಮ ಕೂಡ ನಡೆಯಲಿದೆ.

ಖ್ಯಾತ ಸಾಹಿತಿ ಡಾ.ನಾ.ಡಿಸೋಜ ಅವರು ಕೃತಿ ಲೋಕಾರ್ಪಣೆಗೊಳಿಸಲಿದ್ದು, ಚಿಂತಕ ಹಾಗೂ ವಿಮರ್ಶಕ ಡಾ.ರಾಜೇಂದ್ರ ಚೆನ್ನಿ ಅವರು ಪುಸ್ತಕದ ಕುರಿತು ಮಾತನಾಡಲಿದ್ದಾರೆ. ಕೇಂದ್ರ ಬಾಲ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಡಾ.ಹಾಫೀಜ್ ಕರ್ನಾಟಕಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಿ.ಮಂಜುನಾಥ ಕಾರ್ಯಕ್ರಮದ ಮುಖ್ಯ ಅತಿಥಿಗಳು.
'ಕುಂವೀ 70 ಕಥೆ 50' ಕೃತಿ ಲೋಕಾರ್ಪಣೆ ಮತ್ತು ಜನ್ಮೋತ್ಸವ ಸಮಿತಿ ಅಧ್ಯಕ್ಷ ಕೆ.ಎಸ್. ಹುಚ್ರಾಯಪ್ಪ, ಸುವ್ವಿ ಪಬ್ಲಿಕೇಶನ್ಸ್‍ನ ಪ್ರಕಾಶಕ ಬಿ.ಎನ್.ಸುನೀಲ್ ಕುಮಾರ್ ಉಪಸ್ಥಿತರಿರಲಿದ್ದಾರೆ.

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಕುಂವೀಯವರು ತಮ್ಮ ಕಥೆ ಕಾದಂಬರಿಗಳ ಮೂಲಕ ಕನ್ನಡ ಸಾರಸ್ವತ ಲೋಕಕ್ಕೆ ಅನನ್ಯವಾದ ಕೊಡುಗೆಗಳನ್ನು ನೀಡಿದ್ದಾರೆ. ಕುಂ. ವೀರಭದ್ರಪ್ಪ ಅವರು ಆಕರ್ಷಕ ಭಾಷಾ ಪ್ರಯೋಗ ಮತ್ತು ಗಡಿಸೀಮೆಯ ನುಡಿಬೆಡಗು, ನುಡಿಗಟ್ಟುಗಳನ್ನು ಬಳಸುವ ಕಾರಣಕ್ಕೆ ಜನ ಸಾಮಾನ್ಯರಿಗೆ ಹತ್ತಿರವಾಗಿದ್ದಾರೆ.

ಕುಂವೀ. ಕಥಾಸಾಹಿತ್ಯ ಆರಂಭಿಸಿ ಐವತ್ತು ವರ್ಷಗಳು ತುಂಬಿರುವುದು ಮತ್ತು ಎಪ್ಪತ್ತನೇ ವಸಂತಕ್ಕೆ ಕಾಲಿರಿಸುತ್ತಿರುವ ಜನ್ಮದಿನದ ಸಂಭ್ರಮಕ್ಕೆ 'ಕುಂವೀ 70 ಕಥೆ 50' ಎಂಬ ಕೃತಿಯನ್ನು ಲೋಕಾರ್ಪಣೆ ಮಾಡಲಾಗುತ್ತಿದೆ.












Click it and Unblock the Notifications