ಜನಪ್ರಿಯ ಸಾಹಿತ್ಯ ವಿಮರ್ಶಕರು ತಿರಸ್ಕರಿಸುವುದು ಏಕೆ?
ಡಾ. ಸಿ.ಎನ್.ರಾಮಚಂದ್ರನ್ ಅವರು ವಿಮರ್ಶೆಗೆ ಇಂದು ತೆರೆದುಕೊಳ್ಳುವ ಮನಃಸ್ಥಿತಿಯೇ ಕಡಿಮೆಯಾಗುತ್ತಿದೆ ಎಂದು ಹೇಳಿದರು. ಜನಪ್ರಿಯ ಸಾಹಿತ್ಯವನ್ನು ವಿಮರ್ಶಕರು ತಿರಸ್ಕರಿಸುವುದು ಏಕೆ? ಎನ್ನುವುದನ್ನು ವಿವರಿಸಿದರು. ಸಾಹಿತ್ಯ ವಿಮರ್ಶೆಯ ವಿವಿಧ ಆಯಾಮಗಳನ್ನು ಸೋದಾರಣವಾಗಿ ವಿವರಿಸಿದರು. ಅಲ್ಲದೇ ಕೊನೆಯಲ್ಲಿ ಯು.ಆರ್.ಎ. ಅವರ 'ಸಂಸ್ಕಾರ' ಕಾದಂಬರಿಯನ್ನಿಟ್ಟುಕೊಂಡು ಈ ಎಲ್ಲಾ ಆಯಾಮಗಳನ್ನು ಚರ್ಚಿಸಿದರು. ಯಾವ್ಯಾವ ರೀತಿ ಒಂದು ಬರಹವನ್ನು ವಿಮರ್ಶಿಸಬೇಕು ಎನ್ನುವುದನ್ನು ಕಾದಂಬರಿಯ ಮೂಲಕ ಹೇಳಿ ಕೊಟ್ಟರು.
ವಿವರಣೆ : ಜನಪ್ರಿಯ ಕೃತಿ ಹಿತಾನುಭವವನ್ನು ಕೊಡುವಂಥದ್ದಾಗಿರುತ್ತದೆ. ಓದುಗರಿಗೆ ಸಮಾಧಾನವನ್ನು ಕೊಡುತ್ತದೆ. ಕೃತಿಯಲ್ಲಿ ಪ್ರತಿಪಾದಿಸಿದ ವಿಷಯಗಳ ಜೊತೆ ಓದುಗ ಸಮೀಕರಿಸಿಕೊಂಡಾಗ, ತನ್ನ ಅನುಭವ, ನಂಬಿಕೆಗಳು ಸರಿ ಇವೆ.. ಅವೆಲ್ಲಾ ಇಲ್ಲೂ ಇವೆ. ಈ ಸಮಾಜ ಬಹು ಒಳ್ಳೆಯದಾಗಿದೆ ಎಂಬುದನ್ನು ನಂಬುವಂತೇ ಮಾಡುತ್ತವೆ ಜನಪ್ರಿಯ ಸಾಹಿತ್ಯಗಳು. ಯಾರಾದರೂ ಓದುಗನ ಕಲ್ಪನೆಗಿಂತ ಭಿನ್ನವಾದ ಸಮಾಜವನ್ನು ತೋರಿದಾಗ ಆತನಿಗೆ ಕಸಿವಿಸಿಯಾಗುತ್ತದೆ. ಹಾಗಾಗಿ ಅದನ್ನಾತ ಓದಲು ಹೋಗುವುದೇ ಇಲ್ಲಾ. ವಸ್ತು ನಿಷ್ಠ ವಿಮರ್ಶಕನ ಕರ್ತವ್ಯವೇನೆಂದರೆ - ಓದುಗನಲ್ಲಿರುವಂಥ ಎಲ್ಲಾ ನಂಬಿಕೆ, ಆಚರಣೆಗಳನ್ನು ಸ್ವವಿಮರ್ಶಿಸಿಕೊಳ್ಳುವಂತೆ ಮಾಡುವುದು. ಅಂತಹ ಕೃತಿಯನ್ನೇ ಆಯ್ದುಕೊಳ್ಳುವುದು. ಅಂದರೆ ಓದುಗನ ಮನಸನ್ನು ತಿವಿಯುವಂಥ, ಅಲ್ಲೋಲಕಲ್ಲೋಲ ಮಾಡುವಂಥ ಕೃತಿಯನ್ನಾಯ್ದುಕೊಳ್ಳುವುದು.

ಸಾಹಿತ್ಯ ವಿಮರ್ಶೆಯ ಆಯಾಮಗಳು : ಕ್ರಿಟಿಕ್ ಅನ್ನೋ ಪದಕ್ಕೆ ವಿವಿಧ ಆಯಾಮಗಳಿವೆ. ಮೇಧಾವಿಗಳು, ಸಾಮಾಜಿಕ ಚಿಂತಕರು, ರಾಜಕೀಯ ಚಿಂತಕರು ಇವರೆಲ್ಲರೂ ವಿಮರ್ಶಕರೇ. ಶ್ರೇಷ್ಠ ವಿಮರ್ಶೆ ಅನ್ನೋದು ಈ ಎಲ್ಲಾ ಅಂಶಗಳನ್ನೂ ಒಳಗೊಂಡಿರುವಂಥದ್ದಾಗಿರುತ್ತದೆ. ಆಯಾಮಗಳು ಸಾಹಿತ್ಯ ಕೃತಿಯ 4 ಪರಿಮಾಣಗಳನ್ನು ಆಧರಿಸಿರುತ್ತವೆ. ಅವು ಹೀಗಿವೆ. 1) ಲೇಖಕ 2) ಕೃತಿ 3) ಸ್ಪಂದಿಸುವ ಓದುಗ 4) ಇವನ್ನೆಲ್ಲಾ ಒಟ್ಟುಗೂಡಿದ ಸಾಮಾಜಿಕ ವ್ಯವಸ್ಥೆ.
ವಿಮರ್ಶೆ ಆಯಾ ಕಾಲದಲ್ಲಿ ಯಾವುದಾದರೂ ಒಂದೇ ಪರಿಮಾಣದ ಮೇಲೂ ಅವಲಂಬಿತವಾಗಿರುತ್ತದೆ/ಕೇಂದ್ರಿತವಾಗಿರುತ್ತದೆ. ಹೇಗೆಂದರೆ..
1) ಲೇಖಕನ ಮೇಲೆ ಕೇಂದ್ರಿತ ವಿಮರ್ಶೆ (Biological criticism)
2)ಕೃತಿ ಕೇಂದ್ರಿತ ವಿಮರ್ಶೆ : ಇದರಲ್ಲೂ ವಿಶ್ಲೇಷಿಸುವ ಬಗೆ ಬೇರೆ ಬೇರೆಯದ್ದಾಗಿರುತ್ತದೆ. ಪ್ರಬೇಧ ಆಧಾರಿತ, ನವ್ಯ, ಕಥನ ಶಾಸ್ತ್ರ, ತೌಲನಿಕ. ವಿಮರ್ಶೆ ಹೀಗೆ ವಿಂಗಡಿಸಬಹುದು. ಭಾರತೀಯ ಕಾವ್ಯ ಮೀಮಾಂಸೆಯೂ ಒಂದು ಕೃತಿ ಕೇಂದ್ರಿತವೇ ಆಗಿದೆ.
3) ಓದುಗನ ಕೇಂದ್ರಿತ ವಿಮರ್ಶೆ : ಇದಕೆ ವಾಚಕ ಸ್ಪಂದನ ವಿಮರ್ಶಾ ಪರಿಮಾಣ ಎಂದೂ ಹೇಳುತ್ತಾರೆ.
ಶ್ರೇಷ್ಠ ವಿಮರ್ಶೆ ಎನ್ನುವುದು ಈ ಎಲ್ಲಾ ಪರಿಮಾಣಗಳನ್ನೂ ಒಳಗೊಂಡಿರುತ್ತದೆ. ವಿಮರ್ಶೆಗೆ ಸಾಕ್ಷ್ಯವೆಂದರೆ ಅಲ್ಲಿ ಬರುವ ಪಾತ್ರಗಳೇ. ಕೃತಿಯೊಳಗಿನ ವಿವರಗಳು ಮತ್ತು ತನ್ನ ವೈಚಾರಿಕ ಸಂಹಿತೆಯನ್ನಾಧಾರಿಸಿ ತೀರ್ಪಿಗೆ ಬರುತ್ತಾನೆ. ಆತ ಕೊಡುವ ತೀರ್ಮಾನ ಏನೇ ಇದ್ದಿರಲಿ.. ಆತ ಕೃತಿಯನ್ನು ತಿರಸ್ಕರಿಸಿರಲು ಅಥವಾ ಸ್ವೀಕರಿಸಿರಲಿ, ಅವನ ತೀರ್ಪು ಕೃತಿಯ ವಿವರಗಳನ್ನಾಧರಿಸಿಯೇ ಬರಬೇಕಾಗುತ್ತದೆ. ಆಗ ಮಾತ್ರ ಅಂಥ ವಿಮರ್ಶೆ ಸ್ವೀಕಾರ್ಯವಾಗುತ್ತದೆ. ಸಾಹಿತ್ಯ ಕೃತಿಯಲ್ಲಿ ವೈಜ್ಞಾನಿಕ ಬರಹಗಳಂತೆ ಇದು ಸರಿ, ಅದು ತಪ್ಪು ಎಂಬ ಇದಮಿತ್ಥಂ ಇಲ್ಲ. ಇಲ್ಲಿ ಮಿಶ್ರ ತೀರ್ಮಾನಗಳಿರುತ್ತವೆ.
ಚರ್ಚೆ, ಸಂವಾದಗಳು ಸಾಹಿತ್ಯದಲ್ಲಿ ಮಾತ್ರ ಸಾಧ್ಯ. ಇಲ್ಲಿ ಬರುವ ಸಂಸ್ಕೃತಿಗಳಲ್ಲಿ ಯಾವುದೇ ಮೇಲು ಕೀಳು ಎಂಬ ಭಾವವಿಲ್ಲ. ಓದುಗನಾಗಿ ಸುಲಭ ತೀರ್ಮಾನಕ್ಕೆ ಬರಬೇಡಿ ಎನ್ನುವ ಪ್ರಬುದ್ಧ ಓದುಗನೇ ವಿಮರ್ಶಕ. ವಿಮರ್ಶಕನೂ ಓರ್ವ ಓದುಗ. ಆದರೆ ಸಾಮಾನ್ಯ ಓದುಗರು ಓದಿಕೊಂಡಿರುವುದಕ್ಕಿಂತ ಹೆಚ್ಚು ಓದಿ ಗ್ರಹಿಸುತ್ತಾನೆ. ವಸ್ತುನಿಷ್ಠ ವಿಮರ್ಶಕನಾಗಲ್ಲು ಹೆಚ್ಚು ಹೆಚ್ಚು ಓದಬೇಕು. ಈ ರೀತಿ ಓರ್ವ ವಿಮರ್ಶಕ ಒಂದು ಕೃತಿಯನ್ನು ತೆಗೆದುಕೊಂಡಾಗ ಹೇಗೆ ಮುಂದುವರಿಯುತ್ತಾನೆ? ಮುಂದುವರಿಯ ಬೇಕು ಎಂಬುದನ್ನು ವಿವರಿಸಿದರು.











Click it and Unblock the Notifications