'ಬೂಕರ್' ಕಣದಲ್ಲಿ ಕನ್ನಡಿಗ ಅರವಿಂದ ಅಡಿಗ
ಬೆಂಗಳೂರು, ಜು.31:ಕರ್ನಾಟಕ ಮೂಲದ ಪತ್ರಕರ್ತ, ಸಾಫ್ಟ ವೇರ್ ಇಂಜಿನಿಯರ್ ಅರವಿಂದ ಅಡಿಗರ ಚೊಚ್ಚಲ ಆಂಗ್ಲ ಕೃತಿ 'ದಿ ವೈಟ್ ಟೈಗರ್' ಪ್ರತಿಷ್ಠಿತ ಬೂಕರ್ ಸಾಹಿತ್ಯ ಪ್ರಶಸ್ತಿ ಆಯ್ಕೆ ಪಟ್ಟಿಯಲ್ಲಿ ಸ್ಥಾನಪಡೆದಿದೆ. ಅಂತಿಮ ಪಟ್ಟಿಯಲ್ಲಿ 13 ಪುಸ್ತಕಗಳು ಸ್ಪರ್ಧೆ ನಡೆಸಿವೆ.
ಸಲ್ಮಾನ್ ರಷ್ದಿ ಹಾಗೂ ಅಮಿತಾಬ್ ಘೋಷ್‌ರಂತಹ ಲೇಖಕರ ಸ್ಥಾನದಲ್ಲಿ ಅರವಿಂದ ಅಡಿಗ ಸ್ಥಾನ ಪಡೆದಿರುವುದು ವಿಶೇಷ. 'ದಿ ವೈಟ್ ಟೈಗರ್' ಅರವಿಂದರ ಚೊಚ್ಚಲ ಕೃತಿ. ಈಗಾಗಲೇ ವಿದೇಶದಲ್ಲಿ ಬಹಳಷ್ಟು ಜನಪ್ರಿಯವಾಗಿದೆ. ಅರವಿಂದ ಅಡಿಗರ ಹುಟ್ಟೂರು ಮಂಗಳೂರಿನ ಕೋಡಿಯಾಲಗುತ್ತು. ಹುಟ್ಟಿದ್ದು 1974ರಲ್ಲಿ, ಸೇಂಟ್ ಆಲೋಷಿಯಸ್ ಶಾಲೆಯಲ್ಲಿ ಶಿಕ್ಷಣ ಪಡೆದ ನಂತರ ಉನ್ನತ ವ್ಯಾಸಂಗಕ್ಕಾಗಿ ಆಸ್ಟ್ರೇಲಿಯಾ ಹಾಗೂ ಅಮೆರಿಕ ಕಡೆಗೆ ಪಯಣ.
ಇಂಗ್ಲಿಷ್ ಪದವಿ ಪಡೆದ ಅವರು ಅಮೆರಿಕಾದ ಫೈನಾನ್ಷಿಯಲ್ ಟೈಮ್ಸ್ ಪತ್ರಿಕೆಗೆ ವರದಿಗಾರರಾಗಿದ್ದರು. ಅಮೆರಿಕದಲ್ಲಿ ಷೇರುಪೇಟೆ ವರದಿಗಾರನಾಗಿ ಕೆಲಸ ನಿರ್ವಹಿಸಿದ್ದಾರೆ. ಪ್ರಸ್ತುತ ಇವರು ಮುಂಬೈನಲ್ಲಿ ವಾಸಿಸುತ್ತಿದ್ದಾರೆ. 2005 ರಿಂದ 2007ರ ಅವಧಿಯಲ್ಲಿ 'ದಿ ವೈಟ್ ಟೈಗರ್' ಕೃತಿಯನ್ನು ರಚಿಸಿದರು. ಭಾಷೆಯ ದೃಷ್ಟಿಯಿಂದ ಇದು ಸರಳ ಕೃತಿಯಾದರೂ ಇದರಲ್ಲಿ ಭಾರತದ ಭ್ರಷ್ಟ ಮುಖಗಳು ಅನಾವರಣಗೊಂಡಿರುವುದು ವಿಶೇಷ. ಸೆಪ್ಟೆಂಬರ್ 14ರಂದು ಪ್ರಶಸ್ತಿ ಪ್ರಕಟವಾಗಲಿದೆ. ಪ್ರಶಸ್ತಿಯ ಮೌಲ್ಯ 50,000 ಪೌಂಡ್‌ಗಳು.
(ದಟ್ಸ್‌ಕನ್ನಡ ವಾರ್ತೆ)











Click it and Unblock the Notifications