• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚಂದಕಿಂತ ಚಂದ ಈ ‘ಛಂದ’ವು

By Staff
|

‘ಜಾನಕಿ ಕಾಲಮ್‌’ , ‘ಪೂರ್ವ ಪಶ್ಚಿಮ’, ‘ಈ ಕತೆಗಳ ಸಹವಾಸವೇ ಸಾಕು’ -ಈ ಮೂರು ಚೆಂದದ ಪುಸ್ತಕಗಳನ್ನು ಛಂದ ಪುಸ್ತಕ ಈ ವರ್ಷ ಪ್ರಕಟಿಸಿದೆ. ಈ ಪುಸ್ತಕಗಳ ಬಗ್ಗೆ ಒಂದೆರಡು ಮಾತು.

  • ಡಾ.ಗುರುಪ್ರಸಾದ ಕಾಗಿನೆಲೆ
ಮಿತ್ರ ವಸುಧೇಂದ್ರ ‘ಛಂದ ಪುಸ್ತಕ’ದಿಂದ ಈ ವರ್ಷವೂ ಮೂರು ಪುಸ್ತಕಗಳನ್ನು ಪ್ರಕಟಿಸಿದ್ದಾನೆ. ವಸು ಒಬ್ಬ ಕ್ರಿಯಾಶಾಲೀ ಕಿರಿಯ ಪ್ರಕಾಶಕನಾಗಿ ರೂಪುಗೊಳ್ಳುತ್ತಿದ್ದಾನೆ. ಛಂದದ ಪುಸ್ತಕಗಳೇ ಚಂದ. ವಿನ್ಯಾಸ, ಮುಖಪುಟ, ವಸ್ತು ಯಾವುದರಲ್ಲಿಯೂ ಒಂದು ಸ್ವಲ್ಪವೂ ರಿಯಾಯಿತಿ ತೋರಿಸದೇ ಒಟ್ಟು ಮೂರೂ ಪುಸ್ತಕಗಳಿಂದ ಸೇರಿ ಸುಮಾರು 350 ಕ್ಕೂ ಮಿಗಿಲಾದ ಪುಟದ ಚೇತೋಹಾರಿ ವಸ್ತುಗಳನ್ನು ಕೊಡುತ್ತಿರುವ ವಸು ರಿಯಾಯಿತಿ ತೋರುವುದು ಬೆಲೆಯಲ್ಲಿ ಮಾತ್ರ. ನೂರಾ ಐವತ್ತು ಪುಟದ ಪುಸ್ತಕ ಕೇವಲ ನಲವತ್ತು ರೂಪಾಯಿಗೆ ಸಿಗುವುದು ‘ಛಂದ’ದ ಚಂದ ಮಾತ್ರ.

ಈ ಬಾರಿ ಛಂದ ಪ್ರಕಟಿಸಿರುವುದು ‘ಜಾನಕಿ ಕಾಲಮ್‌’ (ಅಂಕಣ ಬರಹಗಳು), ದತ್ತಾತ್ರಿಯವರ ‘ಪೂರ್ವ ಪಶ್ಚಿಮ’ (ಅಂಕಣ ಬರಹಗಳು) ಮತ್ತು ಅಲಕ ತೀರ್ಥಹಳ್ಳಿಯವರ ‘ಈ ಕತೆಗಳ ಸಹವಾಸವೇ ಸಾಕು’(ಕಥಾ ಸಂಕಲನ)-ಇದು ಛಂದ ಪುಸ್ತಕ ಬಹುಮಾನ ಪಡೆದ ಕೃತಿ.

Janaki Column‘ಜಾನಕಿ ಕಾಲಂ’ ದಟ್ಸ್‌ಕನ್ನಡಿಗರೆಲ್ಲರಿಗೂ ಪರಿಚಿತ ಅಂಕಣ. ಬರೆಯುವುದು ಓದುಗರಿಗೆ ತಲುಪಿದರೆ ಸಾಕು ಎನ್ನುವ ನಂಬಿಕೆ ಹೊಂದಿರುವ ‘ಜಾನಕಿ’ ಇಂತೋರಿಗೆ ಹುಟ್ಟಿದ, ಇಂತಲ್ಲಿ ಬೆಳೆದ ಈಗ ಇಂತಿಪ್ಪಲ್ಲಿ ವಾಸಿಸುತ್ತಾರೆ ಅನ್ನುವ ಇತ್ಯೋಪರಿಗಳಿಂದ ಮುಕ್ತವಾಗುವ ಹಂಬಲ ಮತ್ತು ಅನಿವಾರ್ಯತೆಯ ಕಾರಣದಿಂದ‰ ಜಾನಕಿ ಅಂದರೆ, ಅಪ್ಪನ ಮಗಳು ಎಂದು ತಮ್ಮ ಪರಿಚಯವನ್ನು ಮಾಡಿಕೊಡುತ್ತಾರೆ.

ಆದರೆ, ಜಾನಕಿಯವರ ಬರಹಗಳ ಸವಿಯನ್ನು ಓದಿದವನೇ ಬಲ್ಲ. ಸಾಹಿತ್ಯ ವಿಮರ್ಶೆ ಯಾಗಲೀ, ಕೃತಿಗಳ ಪರಿಚಯವಾಗಲಿ, ಚಿತ್ತಾಲರ ಸಮಗ್ರ ಸಾಹಿತ್ಯವನ್ನು ಎರಡೇ ಪುಟಗಳಲ್ಲಿ ನರಮನುಷ್ಯನಿಗೂ ಅರ್ಥಮಾಡಿಸಿಬಿಡಬಲ್ಲ ತುಂಟತನವನ್ನೂ ಸಹ, ಜಾನಕಿಯವರ ಗದ್ಯ ಸಂಯಮದಿಂದ ಹೇಳಬೇಕಾದ್ದನ್ನು ಹೇಳುತ್ತದೆ. ಲಂಕೇಶರ ಮೊನಚು, ವೈಎನ್ಕೆಯವರ ಓದಿನ ಹರಹು ಮತ್ತು ತುಂಟತನ ಎರಡನ್ನೂ ಸೇರಿಸಿ ಯಾರೋ ನಮ್ಮ ಪರಿಚಿತರು ಪಕ್ಕದಲ್ಲಿ ಕೂಡಿಸಿಕೊಂಡು ಕತೆ ಹೇಳಿದಂತೆ ಹೇಳುವ ಶೈಲಿ ಜಾನಕಿಯವರಿಗೆ ದಕ್ಕಿದೆ.

ವಿವೇಕ ಶಾನಭಾಗರ ‘ಇನ್ನೂಒಂದು’ ಸದಾಶಿವರ ‘ಸಿಕ್ಕು’ ಇನ್ನಿತರ ಸೂಕ್ಷಾತಿಸೂಕ್ಶ್ಮ ಕಥನಗಳ ಶಕ್ತಿ ಮತ್ತು ಮಿತಿಗಳನ್ನೂ ಓದುಗರಿಗೂ ಮತ್ತು ಬರಹಗಾರರಿಗೂ ಪ್ರಿಯವಾಗುವ ಹಾಗೆ ಮತ್ತು ಬೇಜಾರಾಗದ ಹಾಗೆ ಜಾನಕಿಯವರು ಹೇಳುತ್ತಾರೆ. ಯಾರೂ ಮುಟ್ಟದ ಕುಸುಮಗಳನ್ನು ಜಾನಕಿ ಅರಳಿಸಿದ್ದಾರೆ. ಸಾಹಿತ್ಯಾಸಕ್ತರೆಲ್ಲರೂ ಬೆಂಗಳೂರಿನ ಪುಸ್ತಕದ ಮಳಿಗೆಗಳಿಗೆ ಈ ಪುಸ್ತಕ ಕೊಳ್ಳಲು ಕಳೆದ ಮೂರುವಾರಗಳಿಂದ ಲಗ್ಗೆಯಿಟ್ಟಿದ್ದಾರೆ.

Poorva Pashchima by M.R. Dattatri‘ಪೂರ್ವ ಪಶ್ಚಿಮ’ ಎಮ್‌.ಆರ್‌. ದತ್ತಾತ್ರಿಯವರು ದಟ್ಸ್‌ಕನ್ನಡ ಡಾಟ್‌ ಕಾಮ್‌ ಗಾಗಿ ಬರೆದ ಅಂಕಣ ಬರಹಗಳು. ನನ್ನ ಮೇಲೆ ‘ಬೊಗಸೆಯಲ್ಲಿ ಮಳೆ’ಯ ಜಯಂತ ಕಾಯ್ಕಿಣಿಯವರ ಮತ್ತು ವಿಷ್ಣು ನಾಯ್ಕರ ‘ಅರೆ ಖಾಸಗಿ’ ಎಂಬ ಪುಸ್ತಕಗಳು ಯಾವ ಪರಿಣಾಮವನ್ನುಂಟುಮಾಡಿತ್ತೋ, ದತ್ತಾತ್ರಿಯವರ ಗದ್ಯವೂ ಅದೇ ಪರಿಣಾಮವನ್ನುಂಟುಮಾಡಿತು ಎಂದು ಎಚ್‌. ಎಸ್‌. ವೆಂಕಟೇಶಮೂರ್ತಿಯವರು ಮುನ್ನುಡಿಯಲ್ಲಿ ಬರೆದಿದ್ದಾರೆ.

ದತ್ತಾತ್ರಿಯವರು ‘ಸತ್ಯಜಿತ್‌ ರೇ’ , ‘ಕಳಸದ ಅಜ್ಜ’, ‘ಹೈವೇಯ ಮೇಲಿನ ಸಾಹಿತ್ಯ’, ‘ಆಯ್ಕೆಯ ಮುಕ್ತತೆ’ ಹೀಗೇ ಇನ್ನಿತರ ವಿಷಯಗಳ ಬಗ್ಗೆ ಬರೆದಿದ್ದಾರೆ. ಸ್ವತಃ ಕವಿಯಾದ ದತ್ತಾತ್ರಿಯವರ ಗದ್ಯಕ್ಕೆ ಕಾವ್ಯದ ಸೊಗಡು ಅನಾಯಾಸವಾಗಿ ಸಿಕ್ಕಿದೆ. ನಿಮ್ಮ ಕಪಾಟಿಗೊಂದು ಯೋಗ್ಯ ಸಂಗ್ರಹ.

Short story collection by Alaka Teerthahalliಈ ಬಾರಿಯ ಛಂದದ ಒಂದೇ ‘ಫಿಕ್ಷನ್‌’ ಅಲಕ ತೀರ್ಥಹಳ್ಳಿಯವರ ‘ಈ ಕತೆಗಳ ಸಹವಾಸವೇ ಸಾಕು’ ಅನ್ನುವ ಕಥಾ ಸಂಕಲನ. ಈ ಕತೆಗಳನ್ನು ಓದಿದಮೇಲೆ ನೀವು ಖಂಡಿತಾ ಪುಸ್ತಕದ ಶೀರ್ಷಿಕೆಯನ್ನು ಮರೆತುಬಿಟ್ಟಿರುತ್ತೀರಿ-ಮರೆತುಬಿಟ್ಟಿರಬೇಕು. ಮಲೆನಾಡಿನ ನವಿಲೆಸರದ ಪುಟ್ಟ ಪ್ರಪಂಚದಲ್ಲಿ ಅರಳಿದ ಈ ಕತೆಗಳು ತಮ್ಮ ಸರಳ ನಿರೂಪಣೆ ಮತ್ತು ರಕ್ತಮಾಂಸ ಕೂಡಿದ ಪಾತ್ರಗಳಿಂದ ಇಷ್ಟವಾಗಿಬಿಡುತ್ತವೆ.

ಬೆಣ್ಣೆಯಿಂದ ಕೂದಲನ್ನು ತೆಗೆದಷ್ಟೇ ಸುಲಭವಾಗಿ ಓದಿಸಿಕೊಂಡು ಹೋಗಿಬಿಡುತ್ತವೆ. ಇದು ಅಲಕರವರ ಮೊದಲ ಕಥಾಸಂಕಲನ ಮತ್ತು ಛಂದ ಪುಸ್ತಕ ಬಹುಮಾನಿತ ಕೃತಿ. ಅಲಕರವರಿಗೆ ಅಭಿನಂದನೆಗಳು.

ಎಂದಿನಂತೆ ಈ ಬಾರಿಯೂ ಅಮೆರಿಕದಲ್ಲಿ ಈ ಮೂರೂ ಪುಸ್ತಕಗಳು ಸೀಮಿತ ಸಂಖ್ಯೆಯಲ್ಲಿ ಲಭ್ಯವಿದೆ. ಮೂರೂ ಪುಸ್ತಕಗಳ ಬೆಲೆ ಹತ್ತು ಡಾಲರ್‌.( ಅಂಚೆ ಹೊರತಾಗಿ). ಬಿಡಿಬಿಡಿಪ್ರತಿಗಳು ಬೇಕೆಂದರೆ, ಜಾನಕಿ ಕಾಲಂ- ನಾಲ್ಕು ಡಾಲರ್‌, ಪೂರ್ವ ಪಶ್ಚಿಮ- ಮೂರು ಡಾಲರ್‌, ಈ ಕತೆಗಳ ಸಹವಾಸವೇ ಸಾಕು- ಮೂರು ಡಾಲರ್‌.

(ಛಂದ ಪುಸ್ತಕದ ಎರಡನೆಯ ವರ್ಷದ ಪ್ರಕಟಣೆಗಳಾದ ‘ಜುಮುರುಮಳೆ’- ಸುಮಂಗಲಾ ಅವರ ಕಥಾ ಸಂಕಲನ -ನಾಲ್ಕು ಡಾಲರ್‌. ‘ಪುಟ್ಟಪಾದದ ಗುರುತು’-ಕಥಾ ಸಂಕಲನ, ಸುನಂದಾ ಪ್ರಕಾಶ ಕಡಮೆ- ಮೂರು ಡಾಲರ್‌, ಮತ್ತು ‘ವೈದ್ಯ, ಮತ್ತೊಬ್ಬ’- ಲೇಖನ ಸಂಗ್ರಹ- ಡಾ. ಗುರುಪ್ರಸಾದ್‌ ಕಾಗಿನೆಲೆ: ಮೂರುಡಾಲರ್‌. ಈ ಮೂರೂ ಪುಸ್ತಕಗಳೂ ಸೀಮಿತ ಸಂಖ್ಯೆಯಲ್ಲಿ ಲಭ್ಯವಿದೆ.)

ಆಸಕ್ತರು ನನ್ನನ್ನು gkaginele@hotmail.com ಈ ವಿ-ಅಂಚೆಯ ಮೂಲಕ ಸಂಪರ್ಕಿಸಬಹುದು.

ಮುಖಪುಟ / ಸಾಹಿತ್ಯ-ಸಂಸ್ಕೃತಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more