• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಪ್ಪ, ಅಮ್ಮ ಮತ್ತು ಮಗನ ಪುಸ್ತಕ ಏಕಕಾಲಕ್ಕೆ ಲೋಕಾರ್ಪಣೆ!

By Staff
|

ಸುಗಮಸಂಗೀತದ ಸರಿಗಮ ದಾಂಪತ್ಯಕ್ಕೆ ಅನ್ವರ್ಥರೆನಿಸಿರುವ ಎಸ್‌.ಜಿ.ರಘುರಾಮ್‌-ಎಚ್‌.ಆರ್‌.ಲೀಲಾವತಿ ದಂಪತಿಗಳು ಮತ್ತು ಅವರ ಪುತ್ರ ಸುಕುಮಾರ್‌ ರಚಿಸಿದ ಕೃತಿಗಳು ಒಂದೇ ವೇದಿಕೆಯಲ್ಲಿ, ಒಂದೇ ಗಳಿಗೆಯಲ್ಲಿ ಬಿಡುಗಡೆಯಾದವು. ಮೈಸೂರಿನ ಜಗನ್ಮೋಹನ ಅರಮನೆಯಲ್ಲಿ ನಡೆದ ಈ ಕಾರ್ಯಕ್ರಮ ಹಲವು ವೈಶಿಷ್ಟ್ಯಗಳಿಗೆ ಸಾಕ್ಷಿಯಾಯಿತು.

(ನಮ್ಮ ವರದಿಗಾರರಿಂದ)

ಮೈಸೂರು : ‘ಆರೋಗ್ಯ ಮತ್ತು ಮರ್ಯಾದೆ ’ ಎಂಬ ಶೀರ್ಷಿಕೆ ಹೊತ್ತ ಮೂರಾಣೆ ಮುಖಬೆಲೆಯ ಪುಸ್ತಕ ಭೂಗತವಾಗಿದೆ. ಯಾರಾದರೂ ಹುಡುಕಿಕೊಡುವಿರಾ? ಕಣ್ಣಿಗೆ ಬಿದ್ದರೆ ಕೂಡಲೇ ನನಗೆ ತಿಳಿಸುವಿರಾ?

ಮಕ್ಕಳ ಮನಸ್ಸನ್ನು ರೂಪಿಸುವ ಜವಾಬ್ದಾರಿವೆತ್ತ ಪಠ್ಯೇತರ ಪುಸ್ತಕ ಅದು. ಬೆಳೆಯುವ ಮಕ್ಕಳನ್ನು ಉತ್ತಮ ನಾಗರಿಕರನ್ನಾಗಿಸಲು ತಂದೆತಾಯಿಯರು, ಪೋಷಕರು ಅಗತ್ಯವಾಗಿ ಅರಿಯಬೇಕಾದ ಮಾರ್ಗಸೂಚಿಗಳನ್ನು ಪಟ್ಟಿಮಾಡುವ ಕೃತಿಯದು. ಈ ಸೂಕ್ಷ್ಮಗಳನ್ನು ಸರಳಗನ್ನಡದಲ್ಲಿ ತಿಳಿಯಪಡಿಸುವ ಆ ಪುಸ್ತಕದ ಒಂದು ಪ್ರತಿಯೂ ಇವತ್ತು ಲಭ್ಯವಿಲ್ಲ. ನೀವು ಆ ಪುಸ್ತಕದ ಹೆಸರು ಕೇಳಿದ್ದೀರಾ? ನಿಮ್ಮ ಕಣ್ಣಿಗೆನಾದರೂ ಬಿತ್ತಾ?

ಮಕ್ಕಳ ಪುಸ್ತಕದ ಔಚಿತ್ಯ ಮತ್ತು ಉಪಯೋಗಗಳನ್ನು ವಿವರಿಸುತ್ತಾ , ತಮ್ಮ ಶಾಲಾದಿನಗಳಲ್ಲಿ ಓದಿದ್ದ ಆ ಪುಸ್ತಕವನ್ನು ನೆನಪಿಸಿಕೊಂಡವರು ಎಂಬತ್ತರ ಹರೆಯದ, ನಾಡೋಜ ದೇಶಹಳ್ಳಿ ಜಿ. ನಾರಾಯಣ.

Jaganmohan Palace, Mysoreಸಂದರ್ಭ : ಸುಗಮಸಂಗೀತದ ಸರಿಗಮ ದಾಂಪತ್ಯಕ್ಕೆ ಅನ್ವರ್ಥರೆನಿಸಿರುವ ಎಸ್‌.ಜಿ.ರಘರಾಮ್‌ ಮತ್ತು ಎಚ್‌.ಆರ್‌.ಲೀಲಾವತಿ ಹಾಗೂ ಅವರ ಮಗ ಅಮೆರಿಕಾ ವಾಸಿ ಸುಕುಮಾರ್‌ ರಘುರಾಮ್‌ ಮೂವರೂ ರಚಿಸಿದ ಕೃತಿಗಳ ಬಿಡುಗಡೆ ಸಮಾರಂಭ. ದಿನಾಂಕ : ಜೂನ್‌ 24 ಶನಿವಾರ, ಸಮಯ : ಸಂಜೆ ಆರೂವರೆ, ಊರು : ನಿಮ್ಮೂರು ಮೈಸೂರು, ಸ್ಥಳ : ಜಗನ್ಮೋಹನ ಅರಮನೆ, ಆರ್ಟ್‌ ಗ್ಯಾಲರಿಯ ಭವ್ಯ ಸಭಾಂಗಣ.

ಆಕಾಶವಾಣಿ ಕಲಾವಿದೆಯಾಗಿ ಎಚ್‌. ಆರ್‌. ಲೀಲಾವತಿಯವರು ಸುಗಮ ಸಂಗೀತ ಮತ್ತು ಮಕ್ಕಳೊಂದಿಗೆ ಮಗುವಾಗಿ ಕಥಾಕಾಲಕ್ಷೇಪ ಮಾಡುವ ಮಾಧ್ಯಮದಲ್ಲಿ ಪಳಗಿದವರು. ಬಾನುಲಿಯಿಂದ ಮೂಡಿಬಂದ ಅವರ ಕಥಾ ಲಹರಿಗಳನ್ನು ಆಲಿಸಿ ಸಂತಸಪಟ್ಟ ಆಬಾಲವೃದ್ಧರದೆಷ್ಟೊ. ಬಾನುಲಿ ಅಕ್ಷರ ರೂಪತಾಳಿ, ಅಕ್ಷರಗಳು ಕಥೆಗಳಾಗಿ, ಕಥೆಗಳು ಪುಸ್ತಕ ರೂಪದಲ್ಲಿ ಚಿಕ್ಕಮ್ಮನ ಕಥೆಗಳಾದದ್ದನ್ನು ( ಬೆಲೆ : 40 ರೂ)ಲೋಕಾರ್ಪಣೆ ಮಾಡಿದವರು ಜಿ. ನಾರಾಯಣ. ಜಗತ್ತಿನ ಎಲ್ಲ ಭಾಗಗಳಿಂದ ಜಾನಪದ ಕಥೆಗಳು ಹರಿದು ಬರಲಿ, ಆದರೆ ಭಾರತೀಯ ಸಂಸ್ಕೃತಿ ಮತ್ತು ಮನೋಧರ್ಮ ಬಿಂಬಿಸುವ ಕಥೆಗಳನ್ನು ಹುಲುಸಾಗಿ ಬೆಳೆಸಿರಿ ಎಂದು ನಾರಾಯಣ ಅವರು ಬರಹಗಾರರಿಗೆ ಕಿವಿಮಾತು ಹೇಳಿದರು. ಜತೆಗೆ, ‘ಎಲ್ಲದಕ್ಕೂ ಅಕಾಡೆಮಿ ಅಂತ ಇದೆ, ಆದರೆ ಮಕ್ಕಳಿಗಾಗಿ ಅಕಾಡೆಮಿ ಏಕಿಲ್ಲ ?’ ಎಂದು ಸರಕಾರವನ್ನು ಕೇಳಿದರು. ಕೇಳಿಸಿತಾ?

**

S.G. Raghurams Habbadoota mattitara makkala kathegaluH.R. Leelavathis Chikkammana kathegaluSukumar Raghurams Onti Hudugana Kanasugalu

ಅವಳು ಕಥೆ ಹೇಳಿದರೆ ಇವನು ನಾಟಕ ಆಡಿಸುತ್ತಾನೆ ಎನ್ನಬಹುದೆ?

ಕಳೆದವರ್ಷವಷ್ಟೆ ನಗೆಗಡಲು -ಹಾಸ್ಯ ಬರಹಗಳ ಸಂಕಲವನ್ನು ಹೊರತಂದಿದ್ದ ಲೀಲಾವತಿ ಪತಿ ಎಸ್‌. ಜಿ. ರಘುರಾಮ್‌ ಅವರ ಹಬ್ಬದೂಟ ಮತ್ತು ಮತ್ತಿತರ ಮಕ್ಕಳ ನಾಟಕಗಳು, (ಬೆಲೆ 25 ರೂ) ಆವತ್ತು ಬಿಡುಗಡೆ ಆದ ಎರಡನೇ ಕೃತಿ. ಬಿಡುಗಡೆ ಮಾಡಿದವರು ಕಲಾರಾಧಕ ಕೆ.ವಿ. ಮೂರ್ತಿ.

ಮೈಸೂರಿನಲ್ಲಿ ಸಂಗೀತಕ್ಕೆ ಸಂಬಂಧಿಸಿದ ಒಂದು ಚಟುವಟಿಕೆ/ಕಾರ್ಯಕ್ರಮ/ಕಚೇರಿ ನಡೆಯುತ್ತಿದೆ ಎಂದರೆ ಅಲ್ಲಿ ಮೂರ್ತಿಯವರ ಸ್ಪರ್ಶ ಇರಲೇಬೇಕು. ಇಂಥ ಸಂಗೀತ ಪೋಷಕರನ್ನು ಪಡೆದ ಮೈಸೂರು ಧನ್ಯ. ಒಬ್ಬೊಬ್ಬರ ಕಾರ್ಯಕ್ಷೇತ್ರ ಒಂದೊಂದು ತೆರನಾಗಿದ್ದರೂ ಸಂಗೀತದ ಮಾಧುರ್ಯ ಅನೇಕರನ್ನು ಒಂದು ಸೂರಿನಡಿ ತಂದು ನಿಲ್ಲಿಸುತ್ತದೆ. ಲೀಲಾವತಿ ಅವರು ಕಟ್ಟಿದ ಸುಗಮ ಸಂಗೀತ ಅಕಾಡೆಮಿ ಮೈಸೂರಿನಲ್ಲಿ ಮನೆಮಾತು. ಕಲಿಸುವವರ ಹೆಮ್ಮೆ, ಕಲಿಯುವವರ ಹಂಬಲ, ಕಲೆತು ಹಾಡುವ ಸಂಭ್ರಮ ಅಕಾಡೆಮಿಯಲ್ಲಿ ಸದಾ ಸಂಚಾರಿಭಾವದಲ್ಲಿರುವುದು ವೈಶಿಷ್ಟ್ಯ.

ಹಾಡುಗಾರಿಕೆಯ ಜತೆ ಸಾಹಿತ್ಯ ಕೃಷಿಯಲ್ಲೂ ತಲ್ಲೀನತೆ ಸಾಧಿಸಿದ ರಘುರಾಂ ಪತ್ನಿ ಕಟ್ಟಿದ ಅಕಾಡೆಮಿಗೆ ಪೋಷಕರು! ಗಂಡನ ಆಕಾಂಕ್ಷೆಗಳಿಗೆ ಪತ್ನಿ ನೀರೆರೆಯಬೇಕು, ಅವನ ಯಶಸ್ಸಿನ ಹಿಂದೆ ನೆರಳಾಗಬೇಕು ಎನ್ನುವುದು ಲೋಕೋಕ್ತಿ. ಆದರೆ, ಹೆಂಡತಿಯ ಕೌಟುಂಬಿಕ ವ್ಯಾಪ್ತಿ ಮೀರಿದ ಹಪಾಹಪಿಗಳಿಗೆ ನೆರವಾಗುವುದಿರಲಿ, ಸಹಿಸಿಕೊಳ್ಳುವುದೂ ಅನೇಕ ಗಂಡಂದಿರಿಗೆ ಇರುಸುಮುರುಸು. ಅಂಥದ್ದರಲ್ಲಿ, ಲೀಲಾವತಿ ಪತಿ ರಘುರಾಂ ‘ಎಲ್ಲರಂತಲ್ಲ ನನ ಗಂಡ’. ಸುಗಮ ಸಂಗೀತ ಅಕಾಡೆಯಿಯ ಒಂದಂಗವೇ ಆಗಿ ಶ್ರಮಿಸುವ ರಘುರಾಂ ಅವರ ಸಹಕಾರದಿಂದ ಲೀಲಾವತಿಯವರ ಇನ್ನೂ ಅನೇಕ ಕನಸುಗಳು ನನಸಾಗಬಹುದು.

ಅಂದಹಾಗೆ, ಹಬ್ಬದೂಟ ಮತ್ತು ಮಕ್ಕಳನಾಟಕದಿಂದ ಪ್ರಸಂಗಳನ್ನು ಆಯ್ದುಕೊಂಡು ಮಕ್ಕಳು, ಉಪಾಧ್ಯಾಯರು ತಮ್ಮತಮ್ಮ ಶಾಲೆಗಳಲ್ಲಿ ನಾಟಕ ಪ್ರದರ್ಶಿಸಬಹುದು. ನಾಟಕ ಆಡುವವರು ಲೇಖಕರಿಗೆ ಒಂದು ಮಾತು ತಿಳಿಸಬೇಕು.

**

ಲಂಡನ್‌ನಲ್ಲಿ ಇತ್ತೀಚೆಗೆ ಒಂದು ವಿಚಾರ ಸಂಕಿರಣ ನಡೆಯಿತಂತೆ. ಜಗತ್ತಿನ ನಾನಾ ಭಾಗಗಳಿಂದ ನೊಬೆಲ್‌ ಪ್ರಶಸ್ತಿ ವಿಜೇತರೂ ಸೇರಿದಂತೆ ಕವಿವರೇಣ್ಯರು ಸಂಕಿರಣದಲ್ಲಿ ಭಾಗವಹಿಸಿದ್ದರಂತೆ. ಸಂಕಿರಣದ ವಿಷಯ ಏನಪ್ಪಾ ಅಂದರೆ : ಕವಿತೆಗಳನ್ನು ಓದಬೇಕೆ?ಯಾತಕ್ಕೆ ಓದಬೇಕು (We mean, poetry reading) ವೇದಿಕೆಗಳಲ್ಲಿ ಕವನ ವಾಚಿಸುವ ಔಚಿತ್ಯದ ಬಗ್ಗೆ ವಿಪುಲ ಚರ್ಚೆ ನಡೆಯಿತಂತೆ. ಕೊನೆಗೆ ಏನಪ್ಪಾ ಆಯಿತು ಎಂದರೆ :

ವೇದಿಕೆಗಳಲ್ಲಿ , ಗುಂಪುಗಳಲ್ಲಿ, ಜನಾರಣ್ಯದಲ್ಲಿ , ಬಸ್‌ಸ್ಟಾಪುಗಳಲ್ಲಿ, ಪದ್ಯ ಓದಬಾರದು. ಕಾವ್ಯಗುಣವನ್ನು ಹೀರಿಕೊಳ್ಳುವ ಮನೋಸ್ಥಿತಿ ಬಯಲು ಆಲಯದಲ್ಲಿ ನಿಮ್ಮದಾಗುವುದಿಲ್ಲ. ಮನಸ್ಸಿಗೂ ಒಂದು ಲಯ ಇರುತ್ತದಲ್ಲ.

ಏಕಾಂತದಲ್ಲಿ, ತನ್ನಲ್ಲಿ ತಾನಾಗಿ ಕವಿತೆ ಓದಿಕೊಳ್ಳಬೇಕು. ಧ್ಯಾನಸ್ಥ ಸ್ಥಿತಿಯಲ್ಲಿ ಕಾವ್ಯವನ್ನು ಧೇನಿಸುತ್ತಾ ಕಾವ್ಯರಸವನ್ನು ಹೀರಿಕೊಬೇಕು. ದುಂಬಿ ಮಕರಂದವನ್ನು ಸ್ವೀಕರಿಸಿದಂತೆ.

ಪತ್ರಕರ್ತ ವಿಶ್ವೇಶ್ವರ ಭಟ್ಟರ ಸಮಕಾಲೀನ ಓದಿನ ಹರವು ಅಪಾರವಾದದ್ದು. ಒಂದು ಪುಟ ಬರೆಯುವದಕ್ಕೆ ಮುಂಚೆ ಅವರು ನಾಲ್ಕು ಪುಸ್ತಕ, ಹತ್ತಾರು ಪುರವಣಿ ಓದುವುದಲ್ಲದೆ ಅಂತರ್‌ಜಾಲದಲ್ಲಿ ಈಜಾಡಿ ಒದ್ದೆಯಾಗದೆ ಆಚೆಬರುತ್ತಾರೆ. ಕಳೆದ ಮೂರು ವರ್ಷಗಳಲ್ಲಿ ಅವರು ಬಿಡುಗಡೆ ಮಾಡಿರುವ ಪುಸ್ತಕಗಳನ್ನು ಪಟ್ಟಿಮಾಡಿದರೆ ಒಂದು ಗ್ರಂಥಾಲಯಕ್ಕೆ ಸಾಕಾಗುತ್ತದೆ. ಅತಿ ಹೆಚ್ಚು ಕನ್ನಡ ಪುಸ್ತಕಗಳನ್ನು ಬಿಡುಗಡೆ ಮಾಡಿದ್ದಕ್ಕೆ ಬುಕರ್‌ ಪ್ರಶಸ್ತಿ ಕೊಟ್ಟರೆ ಅದು ವಿಶ್ವೇಶ್ವರ ಭಟ್ಟರಿಗೆ ಸಲ್ಲಬೇಕು.

ಲಂಡನ್‌ ವಿಚಾರ ಸಂಕಿರಣದ ಸಮಾಚಾರವನ್ನು ಸಭೆಗೆ ಒಪ್ಪಿಸಿದವರು ಭಟ್ಟರೇ. ರಘುರಾಂ ದಂಪತಿಗಳ ಮಗ ಸುಕುಮಾರ್‌ ರಚಿಸಿದ ಒಂಟಿ ಹುಡುಗನ ಕನಸುಗಳು (ಸುಕುಮಾರ್‌ ಈಗ ಚತುರ್ಭುಜರಾಗಿದ್ದಾರೆ) ಕವನ ಸಂಕಲನವನ್ನು ಬಿಡುಗಡೆಗೊಳಿಸಿ ಕವಿತೆ ಆಸ್ವಾದಿಸುವ ಮನಸ್ಥಿಯ ಬಗ್ಗೆ ಅವರು ದೀರ್ಘವಾಗಿ ಮಾತನಾಡಿದರು. ಸುಕುಮಾರ್‌ ಅವರ ಕವನಗಳನ್ನು ಅಂತಃಸತ್ವವನ್ನು ಉದಾಹರಣೆ ಸಮೇತ ಮೆಚ್ಚಿ ಬೆಳೆಯುತ್ತಿರುವ ಕವಿಯ ಬೆನ್ನು ತಟ್ಟಿದರು.

ಅಪ್ಪ, ಅಮ್ಮ ಮತ್ತು ಮಗ ಮೂವರು ರಚಿಸಿದ ಕೃತಿಗಳು ಒಂದೆ ವೇದಿಕೆಯಲ್ಲಿ ಒಂದೇ ಗಳಿಗೆಯಲ್ಲಿ ಲೋಕಾರ್ಪಣೆ ಆದದ್ದು ಒಂದು ವಿಶ್ವದಾಖಲೆಯೇ ಇರಬೇಕು. ಈ ಮುಂಚೆ ನೀವೆಲ್ಲಾದರೂ ಇಂಥ ವೈಶಿಷ್ಟ್ಯವನ್ನು ಕಂಡಿದ್ದಿರಾ? ಮೂರೂ ಮಂದಿ ಲೇಖಕರು ಸಾಹಿತ್ಯದ ಒಲವು, ಕೃತಿ ರಚನೆಗೆ ಪ್ರೇರಣೆ ಮತ್ತು ಕನಸುಗಳು ನನಸಾದ ಕ್ಷಣಗಳನ್ನು ಹಂಚಿಕೊಂಡರು.

ಸಾಹಿತಿ ಅಂಕಣಕಾರ ಶಿಕಾರಿಪುರ ಹರಿಹರೇಶ್ವರ ಅವರು ಅತಿಥಿಗಳ ಪರಿಚಯ ಸ್ವಾಗತ ಭಾಷಣ ಮಾಡಿದರು. ಕವಿ ಸುಕುಮಾರ್‌ ಅವರು ತಾವು ಕಲಿಯಲು, ಬರೆಯಲು, ಬೆಳೆಯಲು ಕಾರಣರಾದ ಸರ್ವರನ್ನೂ ಮನಸಾರೆ ಅಭಿನಂದಿಸಿದರು. ಜೊತೆಗೆ ತಮ್ಮ ಕವನಗಳಿಗೆ ವೇದಿಕೆ ನೀಡಿ, ಅಂತರ್ಜಾಲದ ಮೂಲಕ ಜಗದಗಲಕ್ಕೆ ತಲುಪಿಸಿದ ‘ದಟ್ಸ್‌ಕನ್ನಡ’ ಸಂಪಾದಕ ಎಸ್‌.ಕೆ.ಶಾಮಸುಂದರ ಅವರನ್ನು ಸುಕುಮಾರ್‌ ನೆನೆದರು. ವೇದಿಕೆಗೆ ಕರೆದು ಆತ್ಮೀಯವಾಗಿ ಗೌರವಿಸಿದರು.

ಮಾತುಗಳು ಮುಗಿದ ಮೇಲೆ ತುಂಬಿದ ಸಭೆ ಮೌನಕ್ಕೆ ಶರಣಾಯಿತು. ವೇದಿಕೆಯಲ್ಲಿ ಎಂ.ಡಿ. ಪಲ್ಲವಿ ‘ಕೃಷ್ಣಾ ಎನಬಾರದೆ’ ಹಾಡುತ್ತಿದ್ದಳು.

ಮುಖಪುಟ / ಸಾಹಿತ್ಯ-ಸಂಸ್ಕೃತಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more