ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಸತ್ಯಾತ್ಮಸುಧಾ’ : ಶ್ರೀ ಸತ್ಯಾತ್ಮತೀರ್ಥರ ಪ್ರವಚನಾಮೃತಸಾರ

By Staff
|
Google Oneindia Kannada News


ಶ್ರೀ ಸತ್ಯಾತ್ಮತೀರ್ಥರ ಪ್ರವಚನ, ಕೇವಲ ಒಣ ವೇದಾಂತವಾಗಿ ಉಳಿದಿಲ್ಲ. ಆ ಪ್ರವಚನಗಳ ಪರಿಣಾಮ ಮತ್ತು ಪ್ರಭಾವಗಳನ್ನು ಅರಿಯಬೇಕಾದರೆ ಸ್ವಲ್ಪ ಹತ್ತಿರಕ್ಕೆ ಬನ್ನಿ. ಎಲ್ಲಿದೆ ಸುಖ? ಎಲ್ಲಿದೆ ಶಾಂತಿ? ಎಂದು ಹುಡುಕುವ ಮನಸ್ಥಿತಿ ನಿಮ್ಮದಾಗಿದ್ದರೆ ತಪ್ಪದೇ ‘ ಸತ್ಯಾತ್ಮಸುಧಾ’ ಪುಸ್ತಕದ ಪುಟಗಳನ್ನು ತೆರೆಯಿರಿ!

ಶ್ರೀಗಳ ಪ್ರವಚನಗಳಲ್ಲಿಯ ಸ್ಮರಣೀಯವಾದ ಕೆಲವು ಸುಧಾಬಿಂದುಗಳು :* ‘ಭಗವಂತನು ಎಲ್ಲರಿಂದ ಸತ್ಕರ್ಮಗಳನ್ನೇ ಮಾಡಿಸಿ ಸುಖವನ್ನೇ ಕೊಡಲಿ, ದುಃಖವನ್ನು ಯಾರಿಗೂ ಕೊಡದಿರಲಿ. ಈ ಹಸಿವೆ-ನೀರಡಿಕೆ, ಕತ್ತಲು-ಬಿಸಿಲು, ಇವಾವೂ ಇಲ್ಲದಿದ್ದರೆ ಎಷ್ಟು ಚೆಂದ?’ ಎನ್ನುವರೇ ಹೆಚ್ಚಿನ ಜನ. ‘ದೇವರು ಹಸಿವನ್ನೇ ಕೊಡದಿದ್ದರೆ ಊಟದ ಸುಖ ಬರುತ್ತಿರಲಿಲ್ಲ, ಕತ್ತಲೆಯೇ ಇಲ್ಲದಿದ್ದರೆ ಬೆಳಕಿಗೆ ಮಹತ್ವವಿಲ್ಲ. ಒಳ್ಳೆಯ ಜನ ಅನಾದಿಕಾಲದಿಂದ ಇರುವಂತೆ ದುಷ್ಟರೂ ಅನಾದಿಕಾಲದಿಂದ ಇದ್ದಾರೆ. ಭಗವಂತನು ಅವರವರ ಸ್ವಭಾವಕ್ಕನುಗುಣವಾಗಿ ಫಲವನ್ನು ಕೊಡುತ್ತಾನೆ ಎಂಬುದನ್ನು ನಾವು ತಿಳಿಯಬೇಕು.’

*‘ದೇಹ-ಇಂದ್ರಿಯ-ಜ್ಞಾನ-ಗಾಳಿ-ಬೆಳಕು ಎಲ್ಲವನ್ನು ಕೊಟ್ಟು ರಕ್ಷಿಸುತ್ತಿರುವ ಭಗವಂತನಿಗೆ ನಾವೇನು ಕರ ಕೊಡಬೇಕು?’ ಎಂದರೆ, ‘ನಾನಾ ಜನರ ಶುಶ್ರೂಷೆಯೇ ನಾವು ದೇವರಿಗೆ ಕೊಡುವ ಕರ’. ‘ನಾನಾ ಜನಸ್ಯ ಶುಶ್ರೂಷಾ ಕರ್ಮಾಖ್ಯಾ ಕರವನ್ವಿತೇಃ’ ಎಂದು ಗೀತಾತಾತ್ಪರ್ಯದಲ್ಲಿ ಶ್ರೀ ಮಧ್ವಚಾರ್ಯರು ಹೇಳಿದ್ದಾರೆ.’

  1. ಉತ್ತಮ ಜನರ ಶುಶ್ರೂಷೆ : ಉತ್ತಮ ಜನರು ಯಾರೆಂದರೆ- ಸಾಧನ ಶರೀರ ನೀಡಿದ ತಂದೆ-ತಾಯಿ, ಜ್ಞಾನೋಪದೇಶ ನೀಡಿದ ಗುರುಗಳು, ನಮಗೆ ಮಾರ್ಗದರ್ಶನ ನೀಡುವಂಥ ಗ್ರಂಥರಚಿಸಿದ ಋಷಿಗಳು, ಪೀಠಾಧಿಪತಿಗಳು, ಟಿಪ್ಪಣಿಕಾರರು. ಇವರನ್ನು ಭಕ್ತಿಯಿಂದ, ಶ್ರದ್ಧೆಯಿಂದ ಸೇವಿಸಬೇಕು.(ಉತ್ತಮರ ಶುಶ್ರೂಷೆ ಮಾಡಲು ಆದರ್ಶ ಶ್ರೀ ರಾಮಚಂದ್ರ).
  2. ಮಧ್ಯಮ ಜನರ ಶುಶ್ರೂಷೆ : ಇದನ್ನು ಸ್ನೇಹ ಹಾಗೂ ಪ್ರೀತಿಯಿಂದ ಮಾಡಬೇಕು.
  3. ಅಧಮ ಜನರ ಶುಶ್ರೂಷೆ : ಅಧಮರಿಗೆ ದಯೆ ತೋರಬೇಕು, ಆಪತ್ಕಾಲದಲ್ಲಿ ಅವರಿಗೆ ಸಹಾಯ ಮಾಡಬೇಕು.
* ಕೆಲವು ಸಲ ಗೀತೆಯ ಮಾತುಗಳು ಅರ್ಥವಾಗುವುದಿಲ್ಲ. ಆಗ ನಾವು ಗುರುಗಳ ಭಾಷ್ಯದ ಕಡೆಗೆ ತಿರುಗಬೇಕು. ‘ಗೀತೆಯೇ ಲಾಕರ್‌, ಭಾಷ್ಯವೇ ಕೀಲಿಕೈ’ ಎನ್ನುತ್ತಾರೆ. ‘ಅಪಿಚೇತ್ಸುದುರಾಚಾರೋ ಭಜತೇ ಮಾಮನನ್ಯಭಾಕ..’(ಗೀತಾ, ಅ-9, ಶ್ಲೋ-30) ಅನನ್ಯವಾಗಿ ಭಜಿಸಿದರೆ ದುರಾಚಾರಿಗಳ ಪಾಪಗಳನ್ನು ಭಗವಂತ ಪರಿಹರಿಸುತ್ತಾನೆ ಎಂದು ಅರ್ಥ ಮಾಡಿದರೆ ತಪ್ಪಾಗುತ್ತದೆ. ಇದಕ್ಕೆ ಆಚಾರ್ಯರು ತಮ್ಮ ಭಾಷ್ಯದಲ್ಲಿ ಸರಿಯಾದ ಅರ್ಥ ನೀಡುತ್ತಾರೆ. ‘ಅಪರೋಕ್ಷಜ್ಞಾನವನ್ನು ಪಡೆದ ನಂತರವೂ ಸಹ ಕೆಲವೊಮ್ಮೆ ಅಪರೋಕ್ಷಜ್ಞಾನವು ತಿರೋಧಾನವಾಗುತ್ತದೆ(ಮರೆಯಾಗುತ್ತದೆ). ಮಹಾ ತಪಸ್ವಿಗಳಾದ ದೇವತೆಗಳು-ಋಷಿಗಳೇ ಮೊದಲಾದವರು, ಇಂಥ ಸಮಯದಲ್ಲಿ ಕೆಲವೊಮ್ಮೆ ತಪ್ಪು ಮಾಡುವುದುಂಟು. ನಂತರ ಪಶ್ಚಾತ್ತಪಗೊಂಡು ದೇವರನ್ನು ಭಜಿಸಿದರೆ ಅವನು(ದೇವನು) ಅವರ ಪಾಪಗಳನ್ನು ಪರಿಹರಿಸುತ್ತಾನೆ.’ ಎಂಬ ಅರ್ಥ ಇಲ್ಲಿದೆ.

* ಲೋಕಸಂಹಾರದಿಂದ ರುದ್ರಾದಿಗಳಿಗೆ ಪಾಪವುಂಟೇ? ಎಂಬ ಪ್ರಶ್ನೆ ಕೆಲವರಿಗೆ ಬರುತ್ತದೆ. ‘ತಾವು ಮಾಡುವ ಸಂಹಾರ ಕರ್ಮವೂ ಒಂದು ಭಗವಂತನ ಸೇವೆ ಎಂದು ತಿಳಿದರೆ ರುದ್ರ-ಯಮಾದಿ ದೇವತೆಗಳಿಗೆ ಕಿಚಿತ್ತೂ ಪಾಪ ಬರುವುದಿಲ್ಲ. ಅಜ್ಞಾನಿಗಳಾದ ದೈತ್ಯರು-ಅಸುರರು ಲೋಕ ಸಂಹಾರಕ್ಕಾಗಿ ಹುಟ್ಟಿದ್ದರೂ ಅವರಿಗೆ ಭಗವಂತನ ಸ್ವತಂತ್ರ ಕರ್ತೃತ್ವದ ಜ್ಞಾನ ಇಲ್ಲದಿರುವುದರಿಂದ ಅವರಿಗೆ ಪಾಪದ ಲೇಪವಿದೆ’.

* ‘ಪುರೋಹಿತರು ಯಾರು? ಪುರಃ= ಬಹಳ ಮೊದಲೇ, ಹಿತ= ಯಾವ ಕರ್ಮ ಮಾಡುವುದರಿಂದ ನಮಗೆ, ನಮ್ಮ ದೇಶಕ್ಕೆ ಹಿತವಾಗುತ್ತದೆ ಎಂಬುದಾಗಿ ಸೂಚನೆ ಕೊಡುವವರು, ಅವರು ನಿಜವಾದ ಪುರೋಹಿತರು. ದಶರಥನಿಗೆ ವಶಿಷ್ಠರಂತಹ ಶ್ರೇಷ್ಠ ಪುರೋಹಿತರಿದ್ದರು. ಪುರೋಹಿತರಿಗೆ ಶಾಸ್ತ್ರದಲ್ಲಿ ಮಹತ್ವದ ಸ್ಥಾನವಿದೆ. ಯಜಮಾನರು ಶ್ರದ್ಧೆಯಿಂದ ಕರ್ಮ ಮಾಡಬೇಕು. ಪುರೋಹಿತರು, ‘ನಾವು ಮಾಡುವ ಪೌರೋಹಿತ್ಯವು ಭಗವಂತನ ಪ್ರೀತಿಗಾಗಿ ಮಾಡುವ ವಿಷ್ಣುಪೂಜೆ’ ಎಂದು ಮಾಡಬೇಕು. ‘ನಮ್ಮಿಂದ ಕರ್ಮಲೋಪವಾದರೆ ನಮಗೆ, ಯಜಮಾನನಿಗೆ, ದೇಶಕ್ಕೆ ಅನರ್ಥವಾಗುತ್ತದೆ’ ಎಂಬ ಎಚ್ಚರ ಪುರೋಹಿತರಿಗೆ ಇರಬೇಕು. ಇದನ್ನು ಅವರು ಅರಿತರೆ ಯಜಮಾನನಿಗೂ ಒಳ್ಳೆಯದು, ದೇಶಕ್ಕೂ ಒಳ್ಳಯದು’.

* ‘ಸತ್ಯವಚನ, ಇದೊಂದು ದೊಡ್ಡ ಗುಣ. ಸತ್ಯವನ್ನೇ ಹೇಳುವ ಗುಣ ನಮ್ಮಲ್ಲಿದ್ದರೆ ಅದು ನಮ್ಮನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುತ್ತದೆ. ವಾಣಿ ಮನುಷ್ಯಪ್ರಾಣಿಗೆ ದೇವದತ್ತವಾಗಿ ಬಂದುದು. ‘ವಚನೇ ಕಿಂ ದರಿದ್ರತಾ’ ಎಂದು ಸುಳ್ಳು ಹೇಳಿದರೆ ಅನರ್ಥವಾಗುವುದು ನಿಶಿತ. ಸತ್ಯ ನುಡಿದ ಆದರ್ಶ ಪುರುಷರು ಹರಿಶ್ಚಂದ್ರ, ದಶರಥ, ಭೀಷ್ಮ, ಜನಮೇಜಯ. ಉಪನಿಷತ್ತಿನಲ್ಲಿ ಬರುವ ಸತ್ಯಕಾಮನ ಕತೆ ಬಹು ಪ್ರಸಿದ್ಧ. ಜಬಾಲೆಯ ಮಗನಾದ ಸತ್ಯಕಾಮ ವೇದಾಧ್ಯಯನಕ್ಕೆ ಗುರುಕುಲ ಸೇರಲು ಹೊರಟಾಗ, ‘ನಾನು ದಾಸಿಯ ಮಗನಾದುದರಿಂದ ನನ್ನ ತಂದೆ ಯಾರು? ನನ್ನ ಗೋತ್ರವಾವುದು? ನನಗೆ ಗೊತ್ತಿಲ್ಲ’ ಎಂಬ ಸತ್ಯ ವಚನ ನುಡಿದು ಗೌತಮ ಋಷಿಗಳ ಪ್ರೀತಿ ಗಳಿಸುತ್ತಾನೆ. ಆಗ ‘ನೈತದಬ್ರಾಹ್ಮಣೋ ವಿವಕ್ತುಮರ್ಹತಿ’ ಎಂಬ ಉದ್ಗಾರ ಗುರುಮುಖದಿಂದ ಬರುತ್ತದೆ(ಛಾಂದೋಗ್ಯ ಉಪನಿಷತ್‌). ‘ನಾಸ್ತಿ ಸತ್ಯಾತ್‌ ಪರಂ ತಪಃ’ ಸತ್ಯ ನುಡಿಯುವುದಕ್ಕಿಂತ ಮಿಗಿಲಾದ ತಪಸ್ಸು ಇನ್ನೊಂದಿಲ್ಲ ಎನ್ನುತ್ತದೆ ಮಹಾಭಾರತ.

*‘ನ ಸ್ತ್ರೀ ಸ್ವಾತಂತ್ರ್ಯಮರ್ಹತಿ’ ಎಂದರೇನು? ಅವಳಿಗೆ ಯಾವಾಗಲೂ ಬಂಧನವಿದೆಯೇ? ‘‘ಪಿತಾ ರಕ್ಷತಿ ಕೌಮಾರೇ ಭರ್ತಾ ರಕ್ಷತಿ ಯೌವನೇ । ಪುತ್ರಶ್ಚಸ್ಥಾವಿರೇ ಭಾವೇ ನ ಸ್ತ್ರೀ ಸ್ವಾತಂತ್ರ್ಯಮರ್ಹತಿ ।।’’. ಇಲ್ಲಿ ‘ರಕ್ಷತಿ’ ಎಂದಿದೆ, ‘ಬಧ್ನಾತಿ’ ಎಂದಿಲ್ಲ. ಇದನ್ನು ಗಮನಿಸಬೇಕು. ಸ್ರೀಯ ರಕ್ಷಣೆಯ ಜವಾಬ್ದಾರಿ ಇನ್ನೊಬ್ಬರದಾಗಿದೆ. ಈ ಅರ್ಥದಲ್ಲಿ ಅವಳಿಗೆ ಸ್ವಾತಂತ್ರ್ಯವಿಲ್ಲ. ಕುಮಾರ-ಯೌವನ-ವೃದ್ಧಾಪ್ಯಗಳಲ್ಲಿ ಪಿತ-ಪತಿ-ಸುತ ಅವಳನ್ನು ರಕ್ಷಿಸುತ್ತಾರೆ, ಬಂಧಿಸುವುದಿಲ್ಲ’.


ಹಿಂದಿನ ಪುಟ

ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X