‘ಸತ್ಯಾತ್ಮಸುಧಾ’ : ಶ್ರೀ ಸತ್ಯಾತ್ಮತೀರ್ಥರ ಪ್ರವಚನಾಮೃತಸಾರ
ಶ್ರೀ ಸತ್ಯಾತ್ಮತೀರ್ಥರ ಪ್ರವಚನ, ಕೇವಲ ಒಣ ವೇದಾಂತವಾಗಿ ಉಳಿದಿಲ್ಲ. ಆ ಪ್ರವಚನಗಳ ಪರಿಣಾಮ ಮತ್ತು ಪ್ರಭಾವಗಳನ್ನು ಅರಿಯಬೇಕಾದರೆ ಸ್ವಲ್ಪ ಹತ್ತಿರಕ್ಕೆ ಬನ್ನಿ. ಎಲ್ಲಿದೆ ಸುಖ? ಎಲ್ಲಿದೆ ಶಾಂತಿ? ಎಂದು ಹುಡುಕುವ ಮನಸ್ಥಿತಿ ನಿಮ್ಮದಾಗಿದ್ದರೆ ತಪ್ಪದೇ ‘ ಸತ್ಯಾತ್ಮಸುಧಾ’ ಪುಸ್ತಕದ ಪುಟಗಳನ್ನು ತೆರೆಯಿರಿ!
ಇನ್ನಷ್ಟು ಕಥೆಗಳು ದೃಷ್ಟಾಂತಗಳು :
‘ಮಾನವ ಜನ್ಮ ದೊಡ್ಡದು. ಅಸಂಖ್ಯ ನೀಚಯೋನಿಗಳಿಂದ ಪಾರಾಗಿ ನಾವು ಮಾನವಜನ್ಮ ಪಡೆದಿದ್ದೇವೆ. ಈಗ ಭಗವಂತನನ್ನು ಮರೆತರೆ ಮತ್ತೆ ನೀಚಯೋನಿಯಲ್ಲಿ ಜನಿಸಬೇಕಾಗುವುದು. ಈ ಸಂದೇಶವನ್ನು ಸಾರುತ್ತದೆ ಮಾಹಾಭರತದ ಇನ್ನೊಂದು ಕತೆ. ‘ಅಗ್ನಿಪ್ರಭ ಎಂಬ ಹೆಸರಿನ ಋಷಿ ಕಂದಮೂಲಗಳನ್ನು ತಿಂದು, ಜಿತೇಂದ್ರಿಯನಾಗಿ, ಸ್ವಾಧ್ಯಾಯದಲ್ಲಿ ನಿರತನಾಗಿದ್ದ. ಉಪವಾಸಾದಿಗಳಿಂದ ಶುದ್ಧಮನ ಪಡೆದಿದ್ದ. ವರ್ಣಾಶ್ರಮಗಳಿಗೆ ಉಚಿತವಾದ ಕರ್ಮಗಳನ್ನು ಮಾಡಿಕೊಂಡು, ಶಿಷ್ಯರಿಗೆ ಪಾಠ ಹೇಳುತ್ತ ತಪವನ್ನು ಆಚರಿಸುತ್ತಿದ್ದ.
ಈ ಮುನಿಯ ಪ್ರಭಾವದಿಂದ ಅಲ್ಲಿ ವಾಸಿಸುವ ಪ್ರಾಣಿಗಳು ತಮ್ಮ ಜಾತಿವೈರವನ್ನು(ಹಾವು-ಮುಂಗಲಿ ವೈರ) ಮರೆತು, ಪರಸ್ಪರ ಪ್ರೀತಿ ಬೆಳೆಸಿ, ಸಹಜೀವನ ನಡೆಸಿಕೊಂಡಿದ್ದವು. ಅಂತಹ ಪ್ರಾಣಿಗಳಲ್ಲಿ ಒಂದು ನಾಯಿಯೂ ಆಶ್ರಮದಲ್ಲಿತ್ತು. ಒಮ್ಮೆ ಹೊರಗಿನಿಂದ ಬರುತ್ತಿದ್ದ ಹುಲಿಯನ್ನು ಕಂಡು, ತನ್ನನ್ನು ತಿನ್ನಲು ಬಂದಿದೆ ಎಂದು ಭಾವಿಸಿ, ನಾಯಿ ಮುನಿಯ ಶರಣಕ್ಕೆ ಹೋಯಿತು. ಏನು ಬೇಕೆಂದು ಕೇಳಿದಾಗ, ನಾಯಿಯು ತನ್ನನ್ನೂ ಹುಲಿಯನ್ನಾಗಿ ಮಾಡಲು ಕೇಳಿಕೊಂಡಿತು. ಮುನಿ ಅದನ್ನು ಹುಲಿಯನ್ನಾಗಿ ಪರಿವರ್ತಿಸಿದ. ಬಂದ ಹುಲಿ ಇದನ್ನು ಕಂಡು ಸಮಾನರಲ್ಲೇನು ಕಲಹ ಎಂದು ಹೊರಟುಹೋಯಿತು. ಇನ್ನೊಂದು ಸಂದರ್ಭದಲ್ಲಿ ಒಂದು ಕಾಡಾನೆಯನ್ನು ಕಂಡು ನಾಯಿ ತನ್ನನ್ನು ಆನೆ ಮಾಡಲು ಮುನಿಯನ್ನು ಬೇಡಿತು. ಇನ್ನೊಮ್ಮೆ ಸಿಂಹ ಮಾಡೆಂದಿತು. ಕೊನೆಗೆ ಸಿಂಹವನ್ನು ಕೊಲ್ಲುವ ಶಕ್ತಿಯುಳ್ಳ ಎಂಟುಕಾಲಿನ ಶರಭವನ್ನು ಕಂಡು ತನ್ನನ್ನೂ ಶರಭವನ್ನಾಗಿಸಲು ಮುನಿಯನ್ನು ಕೇಳಿತು.
ಮುನಿ ಅದರ ಮಾತು ಕೇಳಿದ. ಕೊನೆಗೆ ನಾಯಿ ತನ್ನಲ್ಲೇ ವಿಚಾರಿಸಿತು, ‘ಈ ಮುನಿ ತನ್ನನ್ನು ಹುಲಿ, ಆನೆ, ಸಿಂಹ, ಶರಭ ಮಾಡಿದ್ದಾನೆ. ಮೊರೆಹೋದವರನ್ನು ಕೇಳಿದಂತೆ ಪರಿವರ್ತಿಸಿಬಿಡುತ್ತಾನೆ. ಇತರರನ್ನೆಲ್ಲ ಶರಭ ಮಾಡಿದರೆ ನನ್ನ ಮಹತ್ವ ಕಡಿಮೆಯಾಗುವುದು. ಹೀಗಾಗದಿರುವಂತೆ ನೋಡಬೇಕಾದರೆ ಏನು ಮಾಡಬೇಕು? ಈ ಮುನಿಯನ್ನೆ ಸಂಹಾರ ಮಾಡಬೇಕು.’ ಎಂದುಕೊಂಡು ವಿಚಾರಿಸಿ ಮುನಿಯನ್ನು ತಿನ್ನಲು ಬಂತು. ದಿವ್ಯ ದೃಷ್ಟಿಯಿಂದ ಈ ವಿಷಯ ಅರಿತ ಮುನಿ ಅದನ್ನು ಮತ್ತೆ ನಾಯಿಯನ್ನಾಗಿಸಿದ. ನಾಯಿಗೆ ಪಶ್ಚಾತ್ತಾಪವಾಯಿತು.’
‘ಮುನಿಯ ತಪಸ್ಸಿಗೆ ಮೆಚ್ಚಿದ ಭಗವಂತನಿಗೆ ನಾಯಿಯನ್ನು ಹುಲಿ-ಆನೆ-ಸಿಂಹ-ಶರಭ ಮಾಡುವುದು ಅಸಾಧ್ಯವಾಗಲಿಲ್ಲ. ಮಣ್ಣು ಧಾನ್ಯವಾಗಿ, ಅನ್ನವಾಗಿ, ವೀರ್ಯವಾಗಿ, ತಂದೆತಾಯಿಯಲ್ಲಿ ಬಂದು ಭೌತಿಕ ದೇಹವಾಯಿತು. ಮಣ್ಣು ಹೋಗಿ ದೇಹವಾದಂತೆ ನಾಯಿ ಹೋಗಿ ಹುಲಿಯಾಯಿತು. ‘‘ಬಹುಚಿತ್ರಜಗದ್ಬಹುಧಾಕರಣಾತ್ ಪರಶಕ್ತಿಃ ಅನಂತಗುಣಃ ಪರಮಃ’’ ಎಂದು ಶ್ರೀಮದಾಚಾರ್ಯರು ಹೇಳಿದಂತೆ ‘‘ಪರಶಕ್ತಿಃ’’ ಎಂದು ಕರೆಸಿಕೊಂಡಿರುವ ಆ ಭಗವಂತನಿಗೆ ನಾಯಿಯನ್ನು ಶರಭ ಮಾಡುವುದು ಅಸಾಧ್ಯವಲ್ಲ. ಈ ಕಥೆಯಿಂದ ಕಲಿಯುವ ಪಾಠವೇನು?’ ಎಂದು ಶ್ರೀ ಸತ್ಯಾತ್ಮರು ಕೇಳುತ್ತಾರೆ.
‘ಯಾವುದೋ ನೀಚಯೋನಿಯಲ್ಲಿದ್ದ ನಮ್ಮನ್ನು ಕ್ರಿಮಿ, ಕೀಟ, ಪಕ್ಷಿ, ಪಶು ಹೀಗೆ ಮೇಲಿನ ಯೋನಿಗಳಿಗೆ ಎತ್ತುತ್ತ ಅತ್ಯಂತ ಶ್ರೇಷ್ಠವಾದ ಮಾನವಯೋನಿಯಲ್ಲಿ ಭಗವಂತ ಹುಟ್ಟಿಸಿದ್ದಾನೆ. ಬ್ರಹ್ಮಜ್ಞಾನ ಪಡೆಯುವ ಯೋಗ್ಯತೆ ಕೊಟ್ಟಿದ್ದಾನೆ. ನಾಯಿಯು ಶರಭವಾಯಿತು, ನಂತರ ಮುನಿಯನ್ನೇ ತಿನ್ನಲು, ಕೊಲ್ಲಲು ಹೊರಟಂತೆ ನಾವು ಭಗವಂತನನ್ನೇ ತಿನ್ನಲು ಹೊರಟಿದ್ದೇವೆ. ‘ದೇವರೇ ಇಲ್ಲ’ ಎಂದರೆ ನಾವು ಭಗವಂತನನ್ನೇ ತಿಂದಂತೆ. ‘‘ಅಜ್ಞಾಭಂಗೋ ನರೇಂದ್ರಾಣಾಂ ವಿಪ್ರಾನಾಂ ಮಾನಖಂಡನಮ್’’ ಎಂದಂತೆ ರಾಜನನ್ನು ಪ್ರತ್ಯಕ್ಷವಾಗಿ ಕೊಲ್ಲಬೇಕಾಗಿಲ್ಲ, ಅವನ ಆಜ್ಞೆ ಮೀರಿದರೆ ಅವನನ್ನು ಕೊಂದಂತೆ. ವಿಪ್ರನ ಮಾನಹಾನಿ ಮಾಡಿದರೆ ಅವನನ್ನು ಕೊಂದಂತೆ. ‘ದೇವರೇ ಇಲ್ಲ’ ಎಂದರೆ ದೇವನನ್ನು ಕೊಲ್ಲಲು ಪ್ರಯತ್ನಿಸಿದಂತೆ. ಆತ್ಮಜ್ಞಾನ ಪಡೆದು ಮೋಕ್ಷ ಗಳಿಸಲು ಭಗವಂತನು ಮಾನವ ಜನ್ಮಕೊಟ್ಟಿದ್ದಾನೆ. ಅವನನ್ನು ನಾವು ನೆನೆಯದಿದ್ದರೆ ಮತ್ತೆ ನೀಚಯೋನಿಗಳಿಗೆ ಕಳಿಸದೇ ಇರುತ್ತಾನೆಯೇ? ನಾವು ಮಾನವ ಜನ್ಮ ಸಾರ್ಥಕ ಮಾಡಿಕೊಳ್ಳಬೇಕು’ ಎಂದು ಶ್ರೀಗಳು ಹೇಳುತ್ತಾರೆ.
ಹಿಂದಿನ ಪುಟಮುಂದಿನ ಪುಟ











Click it and Unblock the Notifications