‘ಸತ್ಯಾತ್ಮಸುಧಾ’ : ಶ್ರೀ ಸತ್ಯಾತ್ಮತೀರ್ಥರ ಪ್ರವಚನಾಮೃತಸಾರ

ಶ್ರೀ ಸತ್ಯಾತ್ಮತೀರ್ಥರ ಪ್ರವಚನ, ಕೇವಲ ಒಣ ವೇದಾಂತವಾಗಿ ಉಳಿದಿಲ್ಲ. ಆ ಪ್ರವಚನಗಳ ಪರಿಣಾಮ ಮತ್ತು ಪ್ರಭಾವಗಳನ್ನು ಅರಿಯಬೇಕಾದರೆ ಸ್ವಲ್ಪ ಹತ್ತಿರಕ್ಕೆ ಬನ್ನಿ. ಎಲ್ಲಿದೆ ಸುಖ? ಎಲ್ಲಿದೆ ಶಾಂತಿ? ಎಂದು ಹುಡುಕುವ ಮನಸ್ಥಿತಿ ನಿಮ್ಮದಾಗಿದ್ದರೆ ತಪ್ಪದೇ ' ಸತ್ಯಾತ್ಮಸುಧಾ’ ಪುಸ್ತಕದ ಪುಟಗಳನ್ನು ತೆರೆಯಿರಿ!

ಶ್ರೀ ಸತ್ಯಾತ್ಮತೀರ್ಥರ ಉಪನ್ಯಾಸ ಮಾಲಿಕೆಯಿಂದ ಆಯ್ದ ಸುಧಾ ಬಿಂದುಗಳು :

* 'ಶುಭೇನ ಕರ್ಮಣಾ ಸ್ವರ್ಗಮ್‌’ ಎಂದು ಹೇಳಿದಂತೆ ಸತ್ಕರ್ಮಗಳಿಂದ ಸ್ವರ್ಗ ಸಿಗುವುದು ಸತ್ಯವಾದರೂ ಆ ಪುಣ್ಯದ ಬೆನ್ನ ಹಿಂದೆಯೇ ಬರುವ ಪಾಪಗಳು ಸ್ವರ್ಗಕ್ಕೆ ಕಡಿವಾಣ ಹಾಕುತ್ತವೆ. ಅಂದ ಮೇಲೆ ಸತ್ಕರ್ಮಗಳನ್ನು ಮಾಡಿ ಪುಣ್ಯವನ್ನು ಸಂಪಾದಿಸುವುದರ ಜೊತೆಗೆ, ಕೂಡಿಟ್ಟ ಪಾಪದ ಚೀಲಗಳ ಹೊರೆಯನ್ನು ಇಳಿಸಿಕೊಳ್ಳುವುದೂ ಸಾಧಕನಿಗೆ ಅವಶ್ಯಕವೇ.

* 'ಬ್ರಾಹ್ಮಣಾನಾಂ ಚ ವಾಕ್ಯೇನ ಸದಾ ಸಂಶೋಧನಂ ಭವೇತ್‌’ (ಅನುಶಾಸನ ಪರ್ವ, ಮಹಾಭಾರತ). ಜ್ಞಾನಿಗಳು, ತಪಸ್ವಿಗಳು 'ಇದು ಶುದ್ಧವಿದೆ’ ಎಂದು ಆದೇಶಿಸಿದರೆ ಸಾಕು ಅಲ್ಲಿನ ದೋಷ-ಪಾಪಗಳೆಲ್ಲಾ ಪರಿಹಾರವಾಗಿ ಅದು ಶುದ್ಧವಾಗುವುದರಲ್ಲಿ ಸಂದೇಹವಿಲ್ಲ.

* ''ಶಾಸ್ತ್ರಾಧ್ಯಯನದಿಂದ, ನಾಮಸ್ಮರಣೆಯಿಂದ, ಮರಣವನ್ನು ಜಯಿಸಬಹುದು’’ ಅಂದರೇನು?

ತಪ್ಪು ಮಾಡಿದ ಯಾವುದೇ ವ್ಯಕ್ತಿಗೂ ಶಿಕ್ಷೆ, ದುಃಖ, ಯಮಯಾತನೆ ತಪ್ಪಿದ್ದಲ್ಲ. ಪ್ರಯಶ್ಚಿತ್ತ ಮಾಡಿಕೊಂಡರೆ ಶಿಕ್ಷೆ-ದುಃಖ ಬಹಳಷ್ಟು ಕಡಿಮೆಯಾಗುತ್ತದೆ. ಸ್ನಾನ, ಜಪ, ಹೋಮ, ವ್ರತ, ಉಪವಾಸ, ಕಾಯಕ್ಲೇಶ ಹೀಗೆ ಪ್ರಾಯಶ್ಚಿತ್ತಗಳಲ್ಲಿ ವೈವಿಧ್ಯವಿದೆ. ಎಲ್ಲಕ್ಕಿಂತ ಉತ್ತಮವಾದ, ವಿಶಿಷ್ಟವಾದ ಪ್ರಾಯಶಿತ್ತ 'ನಾಮಸ್ಮರಣೆ’. ಯಾವ ವ್ಯಕ್ತಿ ಭಗವಂತನ ಅಪರೋಕ್ಷ ಜ್ಞಾನ ಸಂಪಾದಿಸುತ್ತಾನೋ ಅವನಿಗೆ ಜ್ಞಾನೋತ್ತರದಲ್ಲಿ ಯಾವ ಪಾಪದ ಲೇಪವೂ ಆಗುವುದಿಲ್ಲ.

* ಯಾವ ವ್ಯಕ್ತಿ ಭಕ್ತಿಯಿಂದ ನಾಮಸ್ಮರಣೆ ಮಾಡುತ್ತಾನೆ, ಬ್ರಹ್ಮಮೀಮಾಂಸಾದಿ ಶಾಸ್ತ್ರಗಳ ಅಧ್ಯಯನ ಮಾಡುತ್ತಾನೆ, ಅವನಿಗೆ ಅಪರೋಕ್ಷ ಜ್ಞಾನವಾವುದು ನಿಶ್ಚಿತ. ಅದರಿಂದ ಜನನ-ಮರಣದ ಚಕ್ರವನ್ನು ದಾಟಿ ಮುಕ್ತಿ ದೊರೆಯುವುದೂ ನಿಶ್ಚಿತ.

* ''ಆನಂದಶ್ಚ ಮುಕ್ತಾನಾಮ್‌’’ ಎಂಬ ಶ್ರೀಮದಾಚಾರ್ಯರ ವಾಕ್ಯವನ್ನು ವ್ಯಾಖ್ಯಾನಿಸುತ್ತ ಶ್ರೀ ಟೀಕಾಕೃತ್ಪಾದರು ತಮ್ಮ ನ್ಯಾಯಸುಧೆಯಲ್ಲಿ ಹೇಳುತ್ತಾರೆ, 'ಕತ್ತಲೆ ಇದ್ದಾಗ ಒಬ್ಬ ವ್ಯಕ್ತಿ ದೀಪ ಹಚ್ಚಿದರೆ ಆ ಪುಸ್ತಕ ಕಾಣುತ್ತದೆ. ನಂತರ ಆ ದೀಪ ಹಚ್ಚಿದ ವ್ಯಕ್ತಿಯ ಅವಶ್ಯಕತೆ ಇರುವುದಿಲ್ಲ. ಆದರೆ ದೀಪದಿಂದ ಕತ್ತಲೆ ಹೋದರೂ ಪ್ರಧಾನಾವರಣವಾದ ಪೆಟ್ಟಿಗೆಯನ್ನು ತೆರೆದು ತೋರಿಸಲು ವ್ಯಕ್ತಿಯಾಬ್ಬ ಬೇಕಲ್ಲವೇ? ಪ್ರಧಾನಾವರಣವು 'ಈಶ್ವರೇಚ್ಛಾ’, ಅದನ್ನು ತೆಗೆಯಲು ಮತ್ತೆ ಭಗವಂತ ಬರಬೇಕು.

* ಜೀವನಿಗೆ ಏಳು ಆವರಣಗಳಿವೆ. 1) ಅವಿದ್ಯಾ, 2) ಕಾಮ, 3) ಕರ್ಮ, 4) ಸ್ವಗುಣಾಚ್ಛಾದಿಕಾ, 5) ಪರಮಾಚ್ಛಾದಿಕಾ 6) ಲಿಂಗದೇಹ, 7) ಈಶ್ವರೇಚ್ಛಾ. ಇವುಗಳಲ್ಲಿ 'ಅವಿದ್ಯಾ’ ಎಂಬುದು ನಿಮಿತ್ತ ಮಾತ್ರ ಆವರಣ. ಕೊನೆಯದಾದ 'ಈಶ್ವರೇಚ್ಛಾ’ ಪ್ರಧಾನವಾದ ಆವರಣ.

* ಸಂಸಾರಕ್ಕೆ ಮೂಲ ಕಾರಣ, ಅದು ಅಭಿಮಾನ. ಅರ್ಥಾತ್‌ ಮಮತೆ, 'ನಾನು ನನ್ನದು’ ಎಂಬ ಭಾವನೆ. ಈ ಸಂಸಾರದಲ್ಲಿ ಮನುಷ್ಯನು ಕೆಲವು ಪದಾರ್ಥಗಳಿಂದ ಸುಖವನ್ನು ಅನುಭವಿಸಿದರೆ, ಕೆಲವು ಪದಾರ್ಥಗಳಿಂದ ದುಃಖವನ್ನು ಅನುಭವಿಸುತ್ತಾನೆ. ಸುಖದುಃಖಗಳಿಗೆ ಕಾರಣ ಅಭಿಮಾನ. ತನ್ನ ಮನೆಗೆ ಏನಾದರೂ ಹಾನಿಯಾದರೆ ದುಖವಾಗುತ್ತದೆ. ಆ ಮನೆಯನ್ನು ಮಾರಿದ ಮೇಲೆ ಆ ಮನೆಗೆ ಏನೇ ಹಾನಿಯಾದರೂ ದುಃಖವಾಗುವದಿಲ್ಲ. 'ಅಭಿಮಾನ ಬಿಡಿ. ಆಗದಿದ್ದರೆ, ಕಡಿಮೆ ಮಾಡಿಕೊಳ್ಳಿ’ ಎಂದು ಶಾಸ್ತ್ರ ಹೇಳುತ್ತದೆ.

* ಜಿಜ್ಞಾಸೆ (ತಿಳಿದುಕೊಳ್ಳುವ ಇಚ್ಛೆ) ಇದ್ದರೆ ಜಗವೆಲ್ಲ ಗುರುವೇ. ಮಹಾಭಾರತದಲ್ಲಿ ಯಯಾತಿ ರಾಜನ ಕಥೆ ಬರುತ್ತದೆ. ಯಯಾತಿ ರಾಜ ಕಾಡಿನಲ್ಲಿ ಸಂಚರಿಸುವಾಗ ಬೋಧ್ಯ ಎಂಬ ಋಷಿಯನ್ನು ಕಾಣುತ್ತಾನೆ. ಕಾಡಿನಲ್ಲಿ ಒಬ್ಬನೇ ಇದ್ದರೂ ಅವನ ಮುಖದಲ್ಲಿ ಮಂದಹಾಸವಿರುತ್ತದೆ. ಸಂಪತ್ತು, ಸೇವಕರು ಇರುವ ತಮಗೆ ದೊರೆಯದ ಮನಃಶಾಂತಿ, ನಿಶ್ಚಿಂತತೆ ಕಾಡಿನಲ್ಲಿ ಒಬ್ಬರೇ ಇದ್ದೂ ಅನುಭವಿಸಲು ಕಾರಣವೇನು ಎಂದು ರಾಜ ಕೇಳುತ್ತಾನೆ.

ಋಷಿಗಳು ಆರು ಗುರುಗಳ ಬಗ್ಗೆ ಹೇಳುತ್ತಾರೆ. ''ಪಿಂಗಲಾ ಕುರರಃ ಸರ್ಪಃ ಸಾರಂಗಾನ್ವೇಷಣಂ ಮುನೇ । ಇಷುಕಾರಃ ಕುಮಾರೀಚ ಷಡೇತೇ ಗುರವೋ ಮಮ ।।’’ ವೇಶ್ಯಾ ಸ್ತ್ರೀ, ಪಕ್ಷಿ, ಹಾವು, ಜೇನುಹುಳ, ಬಾಣ ಮಾಡುವವ, ಕನ್ಯೆ ಇವರಿಂದ ಕಲಿಯುವ ಪಾಠವಿದೆ.

ಯಯಾತಿ ಋಷಿಗಳಿಗೆ ಕೇಳುತ್ತಾನೆ, 'ಕಂಡ ಕಂಡವರನ್ನು ಗುರುಗಳನ್ನಾಗಿ ಸ್ವೀಕಾರ ಮಾಡಬಾರದಲ್ಲವೇ? ಮೋಕ್ಷ ಮಾರ್ಗದಲ್ಲಿ ನಡೆಸುವ, ಉಪದೇಶ ಮಾಡಿ ಉದ್ಧರಿಸುವ ಸಾಮರ್ಥ್ಯವುಳ್ಳ ಗುರುಗಳನ್ನು ಆಶ್ರಯಿಸಬೇಕಲ್ಲವೇ? ಎಂದು ಕೇಳುತ್ತಾನೆ. ಆಗ ಬೋಧ್ಯ ಋಷಿಗಳು ಉತ್ತರಿಸುತ್ತಾರೆ, 'ಶಾಸ್ತ್ರಗಳು ಗುರುಗಳ ಆಯ್ಕೆಯ ಬಗ್ಗೆ ಹೇಳಿದ್ದು ಸರಿಯೇ. ಗುರುಗಳನ್ನು ಪರೀಕ್ಷಿಸಿ ಸ್ವೀಕರಿಸಬೇಕು ಎಂಬುದೂ ಸರಿ. ಆದರೆ ನಾನು ಹೇಳಿದ ಆರು ಗುರುಗಳು, 'ಎದುರಿಗೆ ಕುಳಿತು ಉಪದೇಶ ಮಾಡಿದವರು’, ಎಂಬ ಅರ್ಥದಲ್ಲಿ ಇಲ್ಲ. ಅವರು ತಮ್ಮ ಕೆಲಸ ಮಾಡುತ್ತಿರುವಾಗ, ಅವರನ್ನು ನೋಡಿ, ಅವರಿಂದ ಕೆಲವು ತತ್ವಗಳನ್ನು ಕಲಿತಿದ್ದೇನೆ. ಈ ಅರ್ಥದಲ್ಲಿ ಅವರನ್ನು ಗುರುಗಳೆಂದು ಕರೆದೆ. ಈ ಅರ್ಥದಲ್ಲಿ ನೋಡಿದರೆ ಜಗತ್ತಿನಲ್ಲಿ ಯಾವ ವಸ್ತುವೂ ನಮಗೆ ಗುರು ಆಗಬಲ್ಲದು.

1) ಪಿಂಗಳಾ ಎಂಬ ವೇಶ್ಯೆ ವಿದೇಹ ನಗರದಲ್ಲಿದ್ದಳು. ಧನಗಳಿಸಲು ದಿನಾಲೂ ಸಂಜೆ ಶೃಂಗರಿಸಿಕೊಂಡು ಧನವಂತ ಯಜಮಾನರ ದಾರಿ ನೋಡುತ್ತಿದ್ದಳು. ಒಂದು ದಿನ ಯಾರೂ ಬರಲಿಲ್ಲ. ವಿರಕ್ತಳಾದಳು. ಮುಂದೆ ದೇವರನ್ನೇ ಪತಿಯನ್ನಾಗಿ ಪಡೆದಳು. ಅವಳು ಕಲಿಸಿದ ಪಾಠ ಭೋಗಾಸಕ್ತಿಯಿಂದ ತ್ಯಾಗಾಸಕ್ತಿ.

2) ಕುರರ ಎಂಬ ಕಡಲ ಹದ್ದು ಬಾಯಲ್ಲಿ ಮಾಂಸದ ತುಂಡು ಹಿಡಿದು ಹಾರುತ್ತಿತ್ತು. ಎಲ್ಲ ಪಕ್ಷಿಗಳು ಬೆನ್ನಟ್ಟಿದವು. ಅದು ತುಂಡನ್ನು ಬೀಸಾಕಿತು. ನಿಶ್ಚಿಂತೆಯಿಂದ ಹಾರಾಡಲು ಆರಂಭಿಸಿತು. ಅದು ಕಲಿಸಿದ ಪಾಠ. ಬಹಳ ಜನರಿಗೆ ಬೇಕಾದ ವಸ್ತುವನು ತ್ಯಜಿಸಬೇಕು ಎಂಬುದು.

3) ಒಂದು ಹಾವು. ಅದು ಮನೆ ಕಟ್ಟುವ ಗೋಜಿಗೆ ಹೋಗುವುದಿಲ್ಲ. ಇರುವೆ ಕಟ್ಟಿದ ಮನೆಯಲ್ಲಿ ವಾಸಿಸುತ್ತದೆ. ಅದು ಕಲಿಸಿದ ಪಾಠ. ಮನೆ ಕಟ್ಟಲು ಶ್ರಮ ಪಡಬಾರದು.ಚಿಕ್ಕ ಮನೆ, ಬಾಡಿಗೆ ಮನೆ ಇದ್ದರೂ ಪರವಾ ಇಲ್ಲ. ಭಗವಂತನ ಸಂಕಲ್ಪದಂತೆ ಯೋಗ್ಯತಾನುಸಾರ ಸಿಕ್ಕ ಮನೆಯಲ್ಲೇ(ಗುಡಿಸಲಲ್ಲೇ) ಜೀವನ ಸಾರ್ಥಕ ಮಾಡಿಕೊಳ್ಳಬೇಕು.

4) ಜೇನುಹುಳ ಕಲಿಸಿದಪಾಠ, ಅನೇಕ ಜ್ಞಾನಿಗಳಿಂದ ತತ್ವಜ್ಞಾನದ ಮಧುವನ್ನು ಸಂಗ್ರಹಿಸುವದು. ಜೇನುಹುಳ ಸಹಸ್ರಾರು ಪುಷ್ಪಗಳಿಂದ ಮಧುವನ್ನು ಸಂಗ್ರಹಿಸುತ್ತದೆ.

5) ಬಾಣಗಳನ್ನು ತಯಾರಿಸುವವನಿಂದ ಕಲಿತದ್ದು ಪರಬ್ರಹ್ಮನಲ್ಲಿ ಏಕಾಗ್ರಚಿತ್ತವನ್ನು ಇಡುವ ಪಾಠ. ಬಾಣ ಮಾಡುವವ ಬಾಣದ ಮೊನೆಯನ್ನು ಚೂಪಾಗಿಸುತ್ತ ಇದ್ದ. ಬದಿಯಲ್ಲಿ ರಾಜನು ಚದುರಂಗ ಸೇನೆಯಾಡನೆ ಹೊರಟಿದ್ದ. ಅವನ ಚಿತ್ತ ಚಂಚಲವಾಗಲಿಲ್ಲ, ಅವನು ಹೊರಳಿ ಕೂಡ ನೋಡಲಿಲ್ಲ. ಅವನ ಲಕ್ಷ್ಯ ತನ್ನ ಕೆಲಸದೆಡೆ ಇತ್ತು.

6) ಒಬ್ಬ ಬಡ ಕನ್ನೆಯನ್ನು ನೋಡಲು ವರನ ಸಂಬಂಧಿಕರು ಬರುತ್ತಾರೆ. ಮನೆಯಲ್ಲಿ ಒಬ್ಬಳೇ ಇದ್ದಾಳೆ. ಆದರೂ ಅತಿಥಿಗಳನ್ನು ಸ್ವಾಗತಿಸಿ ಉಣಬಡಿಸುತ್ತಾಳೆ. ಮನೆಯಲ್ಲಿ ಬೇಯಿಸಲು ಅಕ್ಕಿ ಇರುವುದಿಲ್ಲ. ಬತ್ತ ಇರುತ್ತದೆ. ಬತ್ತ ಕುಟ್ಟುತ್ತಾಳೆ. ಅತಿಥಿಗಳಿಗೆ ಸಂಶಯ ಬರಬಾರದೆಂದು, ಬಳೆ ಸದ್ದಾಗಬಾರದೆಂದು, ಹೆಚ್ಚಿನ ಬಳೆ ತೆಗೆದಿಟ್ಟು ಒಂದೊಂದೇ ಬಳೆ ಇಟ್ಟುಕೊಂಡಿರುತ್ತಾಳೆ. ಅವಳು ಕಲಿಸಿದ ಪಾಠ, ಜನರಿದ್ದರೆ ಗದ್ದಲವಾಗುತ್ತದೆ, ಸಾಧನೆ ಮಾಡಲು ಏಕಾಂತವಾಸವೇ ಶ್ರೇಷ್ಠ. ಜನರಹಿತ ಅರಣ್ಯವೇ ಸಾಧನೆಗೆ ಯೋಗ್ಯ ಸ್ಥಳವೆಂದು ಅರಿತೆ.

ಶ್ರೀಮದ್‌ ಭಾಗವತದಲ್ಲಿ 24 ಗುರುಗಳ ಕಥೆ ಬಂದಿದೆ. ಮಹಾಭಾರತದಲ್ಲಿ ಬರುವ 6 ಗುರುಗಳ ಕಥಾನಕದಲ್ಲಿ ಅಡಗಿರುವ ತತ್ವಗಳು, ಸಾಧನೆಯ ಮೆಟ್ಟಲು ಏರಲು ಸಹಕಾರಿಯಾಗಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+