• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಹಾಕವಿಯಾಡನೆ ಮಾತುಕತೆ : ಆಕಸ್ಮಿಕವಾಗಿ ಸಿಕ್ಕ ಅಪರೂಪದ ಯೋಗ!

By Staff
|
 • ತ್ರಿಪುಟಪ್ರಿಯ, ಬೆಂಗಳೂರು
  • ದೇಶಭಾಷಾ ಮಾಧ್ಯಮದ ಅಗತ್ಯವನ್ನು ಕುರಿತು ಮಹಾತ್ಮಾ ಗಾಂಧಿಯವರ ಬರಹವೊಂದನ್ನು ದೆಹಲಿಯ ‘ಆರ್ಗನೈಸರ್‌’ ಪತ್ರಿಕೆ ಪುನರ್‌ ಮುದ್ರಿಸಿತ್ತು. ಅದನ್ನು ಕನ್ನಡಕ್ಕೆ ಅನುವಾದಿಸಬೇಕೆನಿಸಿತು. ಗಾಂಧೀಜಿಯ ಆ ಬರಹ ಕುವೆಂಪು ಅವರ ಗಮನಕ್ಕೆ ಬಂದಿಲ್ಲವೆಂದು ‘ಇದನ್ನು ನೀವು ಗಮನಿಸಿದ್ದೀರಾ?’ ಎಂದು ಕೇಳಿದೆ-
  ಇದನ್ನೆಲ್ಲ ನಾನು ಓದಿದ್ದೇನೆ; ಕನ್ನಡಕ್ಕೂ ತಂದಿದ್ದೇನೆ. ಆದರೆ ನೀವೂ ಈ ಲೇಖನವನ್ನು ಅನುವಾದಿಸಿ ಯಾವುದಾದರೂ ಪತ್ರಿಕೆಯಲ್ಲಿ ಪ್ರಕಟಿಸಿ. ಇಂಥ ವಿಷಯಗಳನ್ನು ಮತ್ತೆ ಮತ್ತೆ ನಮ್ಮ ಜನರಿಗೆ ನೆನಪು ಮಾಡುತ್ತಿರಬೇಕು. ಪುಟ 1
  • ತಮ್ಮ ಕೃತಿಗಳ - ಆದರಲ್ಲೂ ‘ಶ್ರೀರಾಮಾಯಣ ದರ್ಶನಂ’ ದ ವಿಮರ್ಶೆಯನ್ನು ಕುರಿತು ಆಡಿದ ಒಂದು ಮಾತು-
  ಹೊಸ ಬೀಗವನ್ನು ಹಳೆಯ ಬೀಗದ ಕೈಯಿಂದ ತೆರೆಯುವುದು ಸಾಧ್ಯವಿಲ್ಲ; ಅದರಿಂದ ಬೀಗವೆ ಕೆಟ್ಟುಹೋಗಬಹುದು! ನನ್ನ ಕೃತಿಗಳನ್ನು ವಿಮರ್ಶಿಸಬೇಕಾದರೆ ದರ್ಶನ ಇತ್ಯಾದಿಗಳನ್ನು ತಿಳಿದುಕೊಂಡಿರಬೇಕು. ನಿಮ್ಮಂಥ ಕೆಲವರ ಕೈಯಲ್ಲಿ ಸರಿಯಾದ ಬೀಗದ ಕೈಗಳಿವೆ. ಪುಟ 2
  • ವಿಶ್ವವಿದ್ಯಾನಿಲಯದ ಪ್ರಚಾರೋಪನ್ಯಾಸಗಳ ವಿಷಯ ಬಂದಾಗ-
  ನೀವು ಭಾಷಣಗಳಲ್ಲಿ ಸಾಹಿತ್ಯದ ಬಗ್ಗೆ ಹೇಳುವುದಕ್ಕಿಂತ ಹೆಚ್ಚಾಗಿ, ವೈಜ್ಞಾನಿಕ ದೃಷ್ಟಿಯನ್ನು ಬೆಳೆಸಿಕೊಳ್ಳುವಂತೆ ಜನತೆಗೆ ಹೇಳಬೇಕು. ಸಾಮಾನ್ಯ ಜನಮನದ ಮೌಢ್ಯಗಳಿಗೆ ಕೊಡಲಿಪೆಟ್ಟು ಹಾಕಬೇಕು. ಪುಟ 2
  • ಪರಂಪರೆಯ ಅರಿವಿನ ಅಗತ್ಯದ ಬಗ್ಗೆ-
  ಹಿಂದಿನ ಗ್ರಂಥಗಳ ಅರಿವು ಅಗತ್ಯ; ಹಿಂದಿನವರು ಏನು ಹೇಳಿದ್ದಾರೆಂಬುದನ್ನು ನೋಡಬೇಕು. ಅದರಿಂದ ವಿಕಾಸಕ್ಕೆ ಆಸ್ಪದವಾಗುತ್ತದೆ. ಎಲ್ಲವನ್ನೂ ಹಿಂದಿನವರೆ ಹೇಳಿ ಪೂರೈಸಿರುವುದು ಸಾಧ್ಯವಿಲ್ಲ; ಪ್ರಗತಿಗೆ, ಸಾಧನೆಗೆ ಅಂತ್ಯವಿಲ್ಲ. ನನ್ನದೇ ಕಡೆಯ ಮಾತಲ್ಲ, ಇನ್ನೂ ಆಗಬೇಕಾದ್ದು ಬಹಳ ಇದೆ ಎಂದು ಶ್ರೀ ರಾಮಕೃಷ್ಣ ಪರಮಹಂಸರೂ ಹೇಳುತ್ತಿದ್ದರು. ಪುಟ 2
  • ಈಗೇನು ಬರೆಯುತ್ತಿದ್ದೀರಿ ಎಂಬ ಪ್ರಶ್ನೆಗೆ-
  ಏನೂ ಇಲ್ಲ. I am not writing poetry I am living poetry!
  • ಚಂದ್ರಗ್ರಹ ಯಾತ್ರೆಯನ್ನು ಕುರಿತು-
  ಚಂದ್ರಗ್ರಹದಲ್ಲಿ ಜೀವ ಇಲ್ಲವಂತೆ. ಇದರಿಂದ ಭೂಮಿಯ ಬಗ್ಗೆ ನಮ್ಮ ಗೌರವ ಹೆಚ್ಚಿತು! ಭೂಮಿಯ ಒಂದು ಸಗಣಿ ಹುಳುವೂ ಪೂಜ್ಯ; ಬೆರಳು ಮಡಿಸುವುದೂ ಒಂದು ಪವಾಡ! ಪುಟ 3
  • ಕಾವ್ಯಗಳನ್ನು ಜನತೆಗೆ ಮುಟ್ಟಿಸುವಲ್ಲಿ ಗಮಕದ ಅವಶ್ಯಕತೆಯನ್ನು ಒತ್ತಿ ಹೇಳುತ್ತ-
  ಕಾವ್ಯವಾಚನ ಇರಲಿ, ಗದ್ಯಕೃತಿಗಳ dramatic recitation dramatic recitation ಕೂಡ ಸಾಧ್ಯ. ಕಾದಂಬರಿವಾಚನವೂ ಒಂದು ಕಲೆ. ಡಿಕನ್ಸ್‌ ತನ್ನ ಕಾದಂಬರಿಗಳನ್ನು ಸಭೆಗಳಲ್ಲಿ ವಾಚಿಸಿ ಹಣ ಗಳಿಸುತ್ತಿದ್ದನಂತೆ. ನಮ್ಮಲ್ಲೂ ಇಂಥ ಪದ್ಧತಿ ಬೆಳೆಯಬೇಕು. ಪುಟ 5

  ವೆಂಕಟಪ್ಪ, ನಂದಾಲಾಲ ಬಸು ಇವರ ಕಲೆಯ ಮುಂದೆ ಹೆಬ್ಬಾರ ಮುಂತಾದವರ ಕಲೆ ನಿರಾಶಾದಾಯಕ. ಪುಟ 6

  ಸಂಕೀರ್ಣತೆ ನಮ್ಮಲ್ಲಿ ಹಿಂದೆಯೂ ಇತ್ತು; ಆದರೆ ಸೂಚ್ಯವಾಗಿತ್ತು. ಇಂದಿನವರು ಮಂಚ ಬೀದಿಗೆಳೆಯುತ್ತಿದ್ದಾರೆ! ಪುಟ 6

  ಕವಿಗಳು ಏಲಕ್ಕಿಯನ್ನು ಲತೆಯನ್ನುತ್ತಾರೆ, ವಿಷಯವೆ ಅವರಿಗೆ ಗೊತ್ತಿಲ್ಲ ಎಂದೊ ಏನೊ ನಿಜಲಿಂಗಪ್ಪನವರು ತಮ್ಮೊಂದು ಭಾಷಣದಲ್ಲಿ ಟೀಕಿಸಿದ್ದರು. ಅದನ್ನು ಪ್ರಸ್ತಾಪಿಸಿದಾಗ-ಕವಿಗಳು ಚಂದನವನ್ನೂ ಲತೆಯನ್ನುತ್ತಾರೆ! ಅದಕ್ಕೇನು ಮಾಡೋಣ? ಇದೆಲ್ಲ ಕವಿಸಮಯ. ನಿಜಲಿಂಗಪ್ಪನವರಿಗೆ ಗೊತ್ತಿಲ್ಲ, ಅಷ್ಟೆ! ಪುಟ 8

  • ಕನ್ನಡ ಮಾಧ್ಯಮವನ್ನು ಕುರಿತು-
  We are in the middle of the battlefield! ಪುಟ 8
  • ಕುವೆಂಪು ದೆಹಲಿಗೆ ಹೋಗಿ ಜ್ಞಾನಪೀಠ ಪ್ರಶಸ್ತಿ ಸ್ವೀಕರಿಸಿ ಬಂದಿದ್ದರು. ಆ ಬಗ್ಗೆ ಮಾತನಾಡುತ್ತ-
  ಏನು ಆ ಶ್ರೀಮಂತರ ವೈಭವ! ಬಡವರ ಮತ್ತು ಶ್ರೀಮಂತರ ನಡುವಣ ಅಂತರ ಖಂಡಿತ ಕಡೆಮೆಯಾಗಬೇಕು. ಇದ್ದುದರಲ್ಲಿ ಜೈನರು ವಾಸಿ: ದಾನ ಧರ್ಮ ಮಾಡುತ್ತಾರೆ. ಪುಟ 9
  • ಮಾಧ್ಯಮವನ್ನು ಕುರಿತು-
  ಇಂಗ್ಲಿಷ್‌ ಪತ್ರಿಕೆಗಳು ನಮ್ಮ ಮೊದಲ ಶತ್ರು; ಇಂಗ್ಲಿಷ್‌ ಪರವಾಗಿ ಒಬ್ಬಳು ಹೆಸರಿಲ್ಲದ ಹುಡುಗಿ ಬರೆದರೊ ಪ್ರಕಟಿಸುತ್ತವೆ. ಕನ್ನಡದ ಪರವಾಗಿ ನಮ್ಮಂಥವರು ಬರೆದರೂ ಪ್ರಕಟಿಸುವುದಿಲ್ಲ!

  ಕನ್ನಡವನ್ನು ವಿರೋಧಿಸುವವರೆಲ್ಲ ಜಾತ್ಯಂಧರು! ಪುಟ 11

  ಹಿಂದೂ ಧರ್ಮವನ್ನು ವಿಶ್ವಧರ್ಮ ಮಾಡಬೇಕಾದರೆ ಜಾತಿ ಪದ್ಧತಿ ತೊಲಗಬೇಕು. ‘ಗುಣಕರ್ಮ ವಿಭಾಗಶಃ’ ಎಂಬ ಗೀತೆಯ ಭಗವದ್ವಾಣಿ ಲೋಕಕ್ಕೆಲ್ಲ ಅನ್ವಯಿಸುವಂಥದು; ಆ ಬಗ್ಗೆ ಅರವಿಂದರ ವ್ಯಾಪಕ ವ್ಯಾಖ್ಯಾನವನ್ನು ಗಮನಿಸಬೇಕು. ಪುಟ 11

  ರೋರಿಕ್‌ ಚಿತ್ರಶಾಲೆಯಲ್ಲಿ ಚಿತ್ರಗಳನ್ನು ನೋಡುತ್ತ ತಲ್ಲೀನನಾಗಿದ್ದೆ. ಆಗ ಅಲ್ಲಿಗೆ ಮಿರ್ಜಾ ಮತ್ತು ಮಾಸ್ತಿಯವರು ಬಂದರು; ನನ್ನ ಸಮಾಧಿಭಂಗವಾಯಿತು. ಪುಟ 15

  • ಗುಂಡಪ್ಪನವರ ‘ಮಂಕುತಿಮ್ಮನ ಕಗ್ಗ’ ಕ್ಕೆ ಜ್ಞಾನಪೀಠ ಪ್ರಶಸ್ತಿ ಸಿಗಲಿಲ್ಲ ಎಂಬ ಮಾತು ಬಂದಾಗ-
  ‘ಮಂಕುತಿಮ್ಮನ ಕಗ್ಗ’ didactic poetry, ಅಷ್ಟೆ. ಅದನ್ನು ಜ್ಞಾನಪೀಠದ ಮುಂದೆ ಇಡಬೇಕಾಗಿರಲಿಲ್ಲ. ಪುಟ 18
  • ‘ನವ್ಯ’ರನ್ನು ಕುರಿತು-
  ನವ್ಯರಿಗೆ ಒಬ್ಬ ವ್ಯಕ್ತಿಯನ್ನು ಕಂಡಕೂಡಲೆ ಮರ್ಮಸ್ಥಾನದ ಕಡೆಗೆ ದೃಷ್ಟಿ ಹೋಗುತ್ತದೆ; ಉಳಿದ ಭಾಗಗಳ ಕಡೆಗಲ್ಲ! ಪುಟ 18
  • ‘ನೀವು ನಿಮ್ಮ ಕೃತಿಗಳಲ್ಲಿ ಎಲ್ಲವನ್ನೂ ವಾಚ್ಯಮಾಡುತ್ತೀರಿ’ ಎಂಬ ಆಕ್ಷೇಪಣೆಗೆ-
  ಸಹೃದಯರಿಗೆ ಕವಿ ಕೀಲಿಕೈ ಕೊಡಬೇಕು. ಮದ್ದು ಕರ್ರಗೆ ಬಿದ್ದಿರುತ್ತದೆ; ಒಂದು ಕಿಡಿ ಸೋಕಿದರೆ ಸಾಕು, ಸಿಡಿಯುತ್ತದೆ! ಕವಿಯ ಸೂಚನೆ ಕಿಡಿಯ ಹಾಗೆ. ಪುಟ 19
  • ಈಗ ಏನೂ ಬರೆಯಲಾಗುತ್ತಿಲ್ಲ ಎಂಬುದನ್ನು ಹೇಳುತ್ತ-
  ಈಗ ನನ್ನೊಂದಿಗೆ ಸರಸ್ವತಿಯೇನೋ ಇದ್ದಾಳೆ; ಆದರೆ ವಾಗ್ದೇವಿಯೇಕೋ ಒಲಿಯಲೊಲ್ಲಳು! ಪುಟ 29

  (21.8.77) ಅಧ್ಯಾತ್ಮ ವೈಯಕ್ತಿಕ ವಿಷಯ. ಪುಟ 32

  (29.12.79) ನಾನು ಇಂಗ್ಲಿಷ್‌ ಮೂಲಕ ಕನ್ನಡಕ್ಕೆ ಬಂದವನು! ಆದ್ದರಿಂದ ನಾನು ಇಂಗ್ಲಿಷನ್ನು ದ್ವೇಷಿಸುವ ಪ್ರಶ್ನೆಯಿಲ್ಲ. ಪುಟ 35

  • ‘ಉಳಿದ ಕೆಲವು ದೇಶಗಳಿಗೆ ಹೋಲಿಸಿದರೆ ನಮ್ಮ ದೇಶ ಅಷ್ಟು ಕೆಟ್ಟಿಲ್ಲ!’ ಎಂದುದಕ್ಕೆ ಪ್ರತಿಕ್ರಿಯೆಯಾಗಿ-
  ಹಿರಿಯರ ಪುಣ್ಯದಿಂದ ಇರಬೇಕು! ಪುಟ 36
  • ನಾನೊಮ್ಮೆ ಕುವೆಂಪು ಅವರಿಗೆ ಹೇಳಿದೆ: ‘ನಾನು ಇದುವರೆಗೆ ಚಿಲ್ಲರೆ ಕೆಲಸಗಳನ್ನೇ ಮಾಡಿದೆ, ದೊಡ್ಡದೇನನ್ನೂ ಮಾಡಲಿಲ್ಲ’-
  ನೋಡಿ ಕೆಲಸದಲ್ಲಿ ಸಣ್ಣದು, ದೊಡ್ಡದು ಎಂಬ ಭೇದವಿಲ್ಲ. ಚೆನ್ನಾಗಿ ಮಾಡಿದ ಎಲ್ಲ ಕೆಲಸವೂ ದೊಡ್ಡದೇ! ಪುಟ 36

  -ಮೇಲ್ಕಂಡ ಎಲ್ಲಾ ಸಾಲುಗಳನ್ನು ಹೊಂದಿರುವ ಪುಸ್ತಕದ ಹೆಸರು ‘ಮಹಾಕವಿಯಾಡನೆ ಮಾತುಕತೆ’. ‘ಸುವರ್ಣ ಕರ್ನಾಟಕ’ ವರ್ಷಾಚರಣೆಯ ಈ ಸಂದರ್ಭದಲ್ಲಿ ಈ ವಿಷಯವನ್ನು ನಿಮ್ಮೊಡನೆ ಹಂಚಿಕೊಳ್ಳಲು ತುಂಬಾ ಸಂತೋಷವಾಗುತ್ತಿದೆ.

  ಆ ಸಾಲುಗಳಿಂದ ನಿಮಗೀಗಾಗಲೆ ಈ ಪುಸ್ತಕದ ಮಹತ್ವ ತಿಳಿದಿರಬಹುದು. ಕಳೆದ ಭಾನುವಾರ ಹಳೆಯ ಪುಸ್ತಕಗಳನ್ನು ಮಾರಾಟ ಮಾಡುವವರಲ್ಲಿ, ಈ ಒಂದು ಅಪರೂಪ ಕೃತಿಯು ನನ್ನ ಕಣ್ಣಿಗೆ ಬಿದ್ದಿತು. ತಕ್ಷಣ ಅದನ್ನು ಖರೀದಿಸಲು ನಿರ್ಧರಿಸಿ ಆದರ ಬೆಲೆ ನೋಡಿದರೆ, ಕೇವಲ ಮೂರು ರೂಪಾಯಿ. ಮೂವತ್ತಾರು ಪುಟದ ಈ ಪುಸ್ತಕದ ಲೇಖಕರು ಸಿ.ಪಿ. ಕೃಷ್ಣಕುಮಾರ್‌ (ಸಿ.ಪಿ.ಕೆ ಎಂದೇ ಕನ್ನಡ ಸಾರಸ್ವತ ಲೋಕದಲ್ಲಿ ಹೆಸರಾಗಿರುವವರು). ಆರ್ಕಾವತಿ ಪ್ರಕಾಶನ - ಮೈಸೂರು. ಇವರು 1981 ರಲ್ಲಿ ಹೊರತಂದಿದ್ದಾರೆ.

  ಇದು ನಮ್ಮ ನಾಡಿನ ಶ್ರೇಷ್ಠ ಕವಿವರ್ಯರಾದ ಕುವೆಂಪುರವರೂಡನೆ ಸಿ.ಪಿ.ಕೆಯವರು ನಡೆಸಿದ ಸಂವಾದವನ್ನೂಳಗೂಂಡ ಕೃತಿ. ಲೇಖಕರೇ ಹೇಳಿಕೊಂಡಿರುವಂತೆ 1964 ರಿಂದ ತೊಡಗಿ ಹದಿನೇಳು ವರ್ಷಗಳವಧಿಯಲ್ಲಿ ಲೇಖಕರು ಕವಿವರ್ಯರೊಡನೆ ಹಲವಾರು ಬಾರಿ ನಡೆಸಿದ ಸಂಭಾಷಣೆಯ ಆಯ್ದ ನುಡಿಮುತ್ತುಗಳನ್ನು ಪೋಣಿಸಿಕೊಟ್ಟಿದ್ದಾರೆ.

  ನಮಗೆಲ್ಲರಿಗೂ, ನಮ್ಮ ಹತ್ತಿರದ ಕವಿ, ಲೇಖಕ, ಚಿಂತಕರ ಬರವಣಿಗೆಯ ಜೀವನವಲ್ಲದ ಬದುಕನ್ನು ಕಾಣಲು ತುಂಬ ಕುತೂಹಲವಿರುತ್ತದೆ. ಅವರ ಕವಿಸಮಯವಲ್ಲದೆ ಅವರ ಬೇರೆ ಸಮಯದಲ್ಲಿ ಅವರ ವಿಚಾರ, ಆಚಾರ, ನಡವಳಿಕೆ, ಮಾತುಕತೆಗಳನ್ನು ಕೇಳಲು ಎಲ್ಲಾ ಸಹೃದಯರಿಗೂ ಕಾತುರತೆಯಿರುತ್ತದೆ.

  ಇಂಥ ಅತ್ಯುತ್ತಮ ಚಿಂತನಾಯೋಗ್ಯ ಮಾತುಗಳನ್ನು ಅದರಲ್ಲೂ ನಮ್ಮ ನಾಡಿನ ರಾಷ್ಟ್ರಕವಿಯ ಮಾತುಗಳನ್ನು, ವಿಚಾರಗಳನ್ನು, ಅವರ ಸಮಕಾಲೀನ ವಿಷಯಗಳು, ಸಮಸ್ಯೆಗಳು ಮತ್ತು ವ್ಯಕ್ತಿಗಳ ಬಗ್ಗೆ ಅವರ ಮಾತುಗಳನ್ನು ಈ ಪುಸ್ತಕ ಒಳಗೊಂಡಿದೆ. ಈ ಪುಸ್ತಕ ಮರುಮುದ್ರಣವಾಗಿದೆಯೋ ಇಲ್ಲವೋ ನನಗೆ ತಿಳಿಯದು. ಆದರೆ, ‘ಮಹಾಕವಿಯಾಡನೆ ಮಾತುಕತೆ’ ಪುನರ್‌ ಮುದ್ರಣಗೊಂಡರೆ ನಮ್ಮ ನಾಡಿನ ಎಲ್ಲಾ ಓದುಗರಿಗೆ ಕುವೆಂಪುರವರ ಚಿಂತನೆಯ ದಾಟಿಯ ಮೂಲಕ ಒಂದಿಷ್ಟು ಅರ್ಥ ಮಾಡಿಕೊಳ್ಳಲು ಸಹಾಯವಾಗುತ್ತದೆ.

  ಆಕಸ್ಮಿಕವಾಗಿ ನನ್ನ ಕಣ್ಣಿಗೆ ಬಿದ್ದ ಈ ಕೃತಿಯ ಕೆಲವು ಸಾಲುಗಳನ್ನು ದಟ್ಸ್‌ ಕನ್ನಡ ಡಾಟ್‌ ಕಾಂ ಓದುಗರ ಗಮನಕ್ಕೆ ತರಲು ನನಗೆ ಹೆಮ್ಮೆ ಎನಿಸುತ್ತಿದೆ. ಹಾಗೆಯೆ, ನಾನು ನಮ್ಮ ನಾಡಿನ ಎಲ್ಲಾ ಕನ್ನಡ ಸಹೃದಯರ ಪರವಾಗಿ ಸಿ.ಪಿ.ಕೆ ಯವರಿಗೂ, ಇದನ್ನು ಪ್ರಕಟಿಸಿದ ಪ್ರಕಾಶಕರಿಗೂ, ಮತ್ತು ಹಳೆಯ ಪುಸ್ತಕಗಳನ್ನು ನಿರಂತರವಾಗಿ ಓದುಗರಿಗೆ ಒದಗಿಸುವ ಎಲ್ಲಾ ಮಾರಾಟಗರಾರಿಗೂ ತುಂಬ ಧನ್ಯವಾದಗಳನ್ನು ತಿಳಿಸುತ್ತೆನೆ.

  (ಆಧಾರ ಗ್ರಂಥ : ‘ಮಹಾಕವಿಯಾಡನೆ ಮಾತುಕತೆ’ ಸಿ.ಪಿ.ಕೆ, ಅರ್ಕಾವತಿ ಪ್ರಕಾಶನ : : ಮೈಸೂರು)

  ಮುಖಪುಟ / ಸಾಹಿತ್ಯ-ಸಂಸ್ಕೃತಿ

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more