ಇದೋ ಬಂದಿದೆ, ಸಾಹಿತ್ಯ ಪರಿಷತ್ತಿನ ಪರಿಷ್ಕೃತ ಕನ್ನಡ ನಿಘಂಟು
ಬೆಂಗಳೂರು : ರಾಜ್ಯ ಸರ್ಕಾರದ 1 ಕೋಟಿ ರುಪಾಯಿ ಅನುದಾನದಿಂದ ಮುದ್ರಿಸಿರುವ ಸಾವಿರಕ್ಕೂ ಹೆಚ್ಚು ಪುಟಗಳ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಕಟಣೆ ‘ಪರಿಷ್ಕೃತ ಸಂಕ್ಷಿಪ್ತ ಕನ್ನಡ ನಿಘಂಟು’ ಈಗ ಆಸಕ್ತರಿಗೆ ಲಭ್ಯ. ಈ ಭಾರೀ ಗಾತ್ರದ ನಿಘಂಟಿನೊಂದಿಗೆ ‘ಪರಿಷ್ಕೃತ ಕನ್ನಡ ರತ್ನಕೋಶ’ ಹಾಗೂ ‘ಪರಿಷ್ಕೃತ ಕನ್ನಡ- ಕನ್ನಡ- ಇಂಗ್ಲೀಷ್ ನಿಘಂಟು’ಗಳೂ ಲಭ್ಯ.
ಪರಿಷತ್ತಿನ ಶ್ರೀ ಕೃಷ್ಣರಾಜೇಂದ್ರ ಪರಿಷನ್ಮಂದಿರದಲ್ಲಿ ಗುರುವಾರ ಏರ್ಪಡಿಸಲಾಗಿದ್ದ ಸಮಾರಂಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಅ.ರಾ.ಚಂದ್ರಹಾಸ ಗುಪ್ತ ಮಹತ್ವದ ನಿಘಂಟುಗಳನ್ನು ಬಿಡುಗಡೆ ಮಾಡಿದರು. ಬಹುಭಾಷಾ ನಿಘಂಟು ಇವತ್ತಿನ ಅಗತ್ಯತೆ ಎಂದು ಅಭಿಪ್ರಾಯಪಟ್ಟ ಅವರು, ಕನಿಷ್ಠ ಪ್ರಾಂತೀಯ ಭಾಷಾ ನಿಘಂಟನ್ನಾದರೂ ರೂಪಿಸುವ ಜರೂರಿದೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ಕಾರ್ಯದರ್ಶಿ ಕೆ.ಸಿ.ರಾಮಮೂರ್ತಿ ಈ ನಿಘಂಟಿನ ಮಾರಾಟದಿಂದ ದೊರೆಯುವ 1 ಕೋಟಿ ರುಪಾಯಿಗಳಿಂದ ಪರಿಷತ್ತು ಮತ್ತಷ್ಟು ಪುಸ್ತಕಗಳನ್ನು ಪ್ರಕಟಿಸಬಹುದು, ಪುಸ್ತಕಗಳ ಮುದ್ರಣಕ್ಕೆ ಇಂತಹ ಶಾಶ್ವತ ವ್ಯವಸ್ಥೆಯ ಅಗತ್ಯವಿದೆ ಎಂದು ಹೇಳಿದರು.
ನಿಘಂಟಿಗಾಗಿ ದುಡಿದ ನಿಘಂಟು ಸಮಿತಿಯ ಸದಸ್ಯರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ನಿಘಂಟಿನ ಪ್ರಧಾನ ಸಂಪಾದಕ ಡಾ. ಪ್ರಭುಶಂಕರ, ಪರಿಷತ್ತಿನ ಅಧ್ಯಕ್ಷ ಎನ್. ಬಸವಾರಾಧ್ಯ ಮುಂತಾದವರು ಕಾರ್ಯಕ್ರಮದಲ್ಲಿ ಹಾಜರಿದ್ದರು.
(ಇನ್ಫೋ ವಾರ್ತೆ)
ಮುಖಪುಟ / ಸಾಹಿತ್ಯ ಸೊಗಡು











Click it and Unblock the Notifications