ಡಾಟ್‌ಕಾಮ್ ಯುಗದಲ್ಲೂ ಪುಸ್ತಕ ಬೇಕೇ ಬೇಕು- ಎಚ್.ದುಂಡಿರಾಜ್
ಮುಂಬಯಿ : ಒಂದು ಪುಸ್ತಕವನ್ನು ಓದಿದ ಸಂತೋಷವನ್ನು ತಾಂತ್ರಿಕತೆ ಕಟ್ಟಿಕೊಡಲಾರದು. ಆದ್ದರಿಂದಲೇ ಡಾಟ್‌ಕಾಮ್ ಯುಗದಲ್ಲೂ ಪುಸ್ತಕಗಳು ಬೇಕೇ ಬೇಕು ಎಂದು ಕನ್ನಡದ ಪ್ರಸಿದ್ಧ ಚುಟುಕು ಕವಿ ಎಚ್. ದುಂಡಿರಾಜ್ ಅಭಿಪ್ರಾಯಪಟ್ಟಿದ್ದಾರೆ.
ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಲೇಖಕ ಶ್ರೀನಿವಾಸ ಜೋಕಟ್ಟೆ ಅವರ ‘ಗಾಂಧಿಯಿಂದ ಗಾವ್ಳಿ ತನಕ’ ಲೇಖನಗಳ ಸಂಕಲನ ಬಿಡುಗಡೆ ಮಾಡಿ ದುಂಡಿರಾಜ್ ಮಾತನಾಡುತ್ತಿದ್ದರು. ಅವಸರದ ಬರಹಗಳು ಅನಾಹುತಕ್ಕೆ ದಾರಿ ಮಾಡಿಕೊಡಬಾರದು ಎಂದು ಕಿವಿಮಾತು ಹೇಳಿದ ಅವರು, ಲೇಖಕನಿಗೆ ಜವಾಬ್ದಾರಿ, ಬದ್ಧತೆ ಇರಬೇಕು ಎಂದರು.
ರೋಚಕ ವಿಷಯ, ವಿಷಯವನ್ನು ಮಂಡಿಸುವಲ್ಲಿ ಮಾನವೀಯತೆಯ ಕಾಳಜಿ, ಲಲಿತ ಬರವಣಿಗೆಯ ಧಾಟಿ ಹಾಗೂ ಕವಿ ಹೃದಯದ ತುಡಿತ ಜೋಕಟ್ಟೆಯವರ ಬರಹಗಳಲ್ಲಿ ಎದ್ದು ಕಾಣುವ ಅಂಶವಾಗಿದ್ದು , ಬೆನ್ನುಡಿ ಮುನ್ನುಡಿಯಷ್ಟೇ ಸೊಗಸಾದ ಲೇಖನಗಳನ್ನು ಜೋಕಟ್ಟೆ ನೀಡಿದ್ದಾರೆ ಎಂದು ದುಂಡಿರಾಜ್ ಹೇಳಿದರು. ಲೇಖಕ ಶ್ರೀಪತಿ ಚಂಪಾ ಜೋಕಟ್ಟೆಯವರನ್ನು ಪರಿಚಯಿಸಿದರು.
ಮುಂಬಯಿಯ ಕರ್ನಾಟಕ ಸಂಘದ ಚಟುವಟಿಕೆಗಳಲ್ಲಿ ತೊಡಗುವ ಮೂಲಕ ನನ್ನಲ್ಲಿನ ಬರಹಗಾರ ಅನಾವರಣಗೊಂಡ. ಬೆಂಗಳೂರಿನ ‘ಅನ್ವೇಷಣೆ’ ಪ್ರಕಾಶನ ಈ ಪುಸ್ತಕವನ್ನು ಪ್ರಕಟಿಸಿದ್ದರೂ, ಬಾಲ್ಯದ ಗೆಳೆಯರೆಲ್ಲರು ಮುಂಬಯಿಯಲ್ಲಿ ಇರುವುದರಿಂದ ಇಲ್ಲಿನ ಕರ್ನಾಟಕ ಸಂಘದಲ್ಲಿ ಪುಸ್ತಕ ಬಿಡುಗಡೆಯಾಗುತ್ತಿದೆ ಎಂದು ಕಾರ್ಯಕ್ರಮದ ಕೇಂದ್ರ ಬಿಂದು ಶ್ರೀನಿವಾಸ ಜೋಕಟ್ಟೆ ಹೇಳಿದರು.
ಕರ್ನಾಟಕ ಸಂಘದ ಮಾಜಿ ಅಧ್ಯಕ್ಷ ಕೆ.ಜಯರಾಮ ಆಳ್ವ, ಹಾಲಿ ಅಧ್ಯಕ್ಷ ರವಿ ರಾ ಅಂಚನ್, ಉಪಾಧ್ಯಕ್ಷ ಎಂ.ಎಂ.ಕೋರಿ, ಪ್ರಧಾನ ಕಾರ್ಯದರ್ಶಿ ಭರತ್ ಕುಮಾರ್ ಪೊಲಿಪು ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
(ಇನ್ಫೋ ವಾರ್ತೆ)
ಮುಖಪುಟ / ಸಾಹಿತ್ಯ ಸೊಗಡು











Click it and Unblock the Notifications