‘ಕತ್ತಾಲೆ ಬೆಳದಿಂಗಳೊಳಗ’ ಜನತೆಯ ಮುಂದೆ ರಂಗಕರ್ಮಿ ಸಿಜಿಕೆ
ಬೆಂಗಳೂರು : ಸಿಜಿಕೆ ಎಂದೇ ಗುರುತಿಸಿಕೊಂಡಿರುವ ಹಿರಿಯ ರಂಗ ಕರ್ಮಿ ಸಿ. ಜೆ. ಕೃಷ್ಣ ಸ್ವಾಮಿ ಅವರ ಆತ್ಮಕತೆ ‘ಕತ್ತಾಲೆ ಬೆಳದಿಂಗಳೊಳಗ’ ಕೃತಿ ಗುರುವಾರ ಅನಾವರಣಗೊಂಡಿದೆ.
ಗಂಟೆ ಗಟ್ಟಲೆ ಭಾಷಣಗಳಿಲ್ಲದ ಪುಟ್ಟ ಸಮಾರಂಭ. ಸರಳತೆಯ ಪ್ರತೀಕ. ರವೀಂದ್ರ ಕಲಾಕ್ಷೇತ್ರದಲ್ಲಿ ಸಿಜಿಕೆಯವರ ಅಭಿಮಾನಿಗಳು, ಕಲಾವಿದರು, ಬುದ್ಧಿಜೀವಿಗಳು ತುಂಬಿದ್ದರು. ‘ನಮ್ಮೊಳಗಿನ ಸಿಜಿಕೆ’ ಎಂಬ ವಿಶಿಷ್ಟ ರಂಗಪ್ರಯೋಗದ ನಡುವೆ ನಡೆದ ಈ ಪುಸ್ತಕ ಬಿಡುಗಡೆ ಕಾರ್ಯಕ್ರಮ ಅಪರೂಪದ್ದು.
ಮೊದಲು ಬಿಹಾರದಲ್ಲಿ 70ರ ದಶಕದಲ್ಲಿ ನಡೆದ ಬೆಲ್ಚಿ ದೌರ್ಜನ್ಯ ಘಟನೆ ಕುರಿತ ನಾಟಕ ಪ್ರದರ್ಶನ ನಡೆಯಿತು. ನಂತರ ಸಿಜಿಕೆ ದಂಪತಿಯನ್ನು ವೇದಿಕೆಗೆ ಕರೆತಂದು ಸನ್ಮಾನಿಸಲಾಯಿತು. ಶಶಿಧರ್ ಅಡಪ ಮತ್ತು ಅ.ನ. ರಮೇಶ್ ಪುಸ್ತಕದ ಪ್ರತಿಯಾಂದನ್ನು ಸಿಜಿಕೆಯವರಿಗೆ ಅರ್ಪಿಸಿದರು. ಸಿಜಿಕೆಯವರು ಅದನ್ನು ತಮ್ಮ ಪತ್ನಿ ಜಯಲಕ್ಷ್ಮಿ ಅವರಿಗೆ ನೀಡಿದರು.
ಸಿಜಿಕೆ, ಇನ್ನು ಭಾಷಣಗಳ ತಂಟೆ ಇಲ್ಲ , ನೀವಿನ್ನು ಸಭಿಕರ ಸಾಲಿನಲ್ಲಿ ಕೂತು ನಾಟಕ ನೋಡಿ ಎಂದು ಕಾರ್ಯಕ್ರಮ ನಿರೂಪಕ ಕಪ್ಪಣ್ಣ ಆತ್ಮೀಯವಾಗಿ ಹೇಳಿದರು. ಸಿಜಿಕೆ ನಿರ್ದೇಶನದ ಪಂಚಮ, ಸುಲ್ತಾನ್ ಟಿಪ್ಪು, ಚಕೋರಿ ನಾಟಕಗಳನ್ನು ವಿವಿಧ ರಂಗ ತಂಡಗಳು ಪ್ರದರ್ಶಿಸಿದವು.
ಎರಡು ವರ್ಷದ ಹಿಂದೆ ಸಿಜಿಕೆಯವರಿಗೆ ಹೃದಯಾಘಾತವಾಗಿತ್ತು. ಜಯದೇವ ಹೃದ್ರೋಗ ಆಸ್ಪತ್ರೆಯ ಡಾ. ಮಂಜುನಾಥ್ ನೀಡಿದ ಚಿಕಿತ್ಸೆ ಫಲವಾಗಿ ಕಲಾಭಿಮಾನಿಗಳ ಪಾಲಿಕೆ ಸಿಜಿಕೆಯವರು ಮತ್ತೆ ದೊರಕಿದ್ದರು. ಅಭಿಮಾನಿಗಳು ಸಿಜಿಕೆಯವರ ಆತ್ಮಕಥನ ಪುಸ್ತಕವನ್ನು ಡಾ. ಮಂಜುನಾಥ್ ಅವರಿಗೂ ನೀಡಿ ನಿಮ್ಮಿಂದಾಗಿ ಇವತ್ತು ಸಿಜಿಕೆ ನಮ್ಮ ಮಧ್ಯೆ ಇರುವಂತಾಗಿದೆ ಎಂದು ವೈದ್ಯರಿಗೆ ಕೃತಜ್ಞತೆ ಸಲ್ಲಿಸಿದರು.(ಇನ್ಫೋ ವಾರ್ತೆ)
ಮುಖಪುಟ / ಸಾಹಿತ್ಯ ಸೊಗಡು











Click it and Unblock the Notifications