ಟಿಪ್ಪು ಸುಲ್ತಾನ್ ನಿಜ ಇತಿಹಾಸ, ರಾಜಕಾರಣ ಹಾಗೂ ಸತ್ಯಾನ್ವೇಷಣೆ

By: ಸನತಕುಮಾರ ಬೆಳಗಲಿ
Subscribe to Oneindia Kannada

ನಾವೆಲ್ಲ ಚಿಕ್ಕವರಿದ್ದಾಗ ಶಾಲಾ ಪಠ್ಯಪುಸ್ತಕಗಳಲ್ಲಿ ಈ ನಾಡಿನ ಮಹಾಪುರುಷರ ಸಾಲಿನಲ್ಲಿ ಟಿಪ್ಪು ಸುಲ್ತಾನ್ ಹೆಸರು ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಈಗಲೂ ಇರಬಹುದು. ಚಿದಾನಂದಮೂರ್ತಿಗಳು ಸೇರಿದಂತೆ ಇಂದಿನ ತಲೆಮಾರಿನ ಎಲ್ಲರೂ ಇದನ್ನು ಓದಿಯೇ ಬೆಳೆದವರು.

ಆಗ ಇದನ್ನು ವಿರೋಧಿಸದವರು ಈಗ ಟಿಪ್ಪು ಆಚರಣೆ ವಿರೋಧಿಸುತ್ತಿದ್ದಾರೆ. ಇದರಲ್ಲಿ ರಾಜಕೀಯ ಲಾಭ ಮಾಡಿಕೊಳ್ಳುವ ಹುನ್ನಾರವಲ್ಲದೇ ಮತ್ತೇನೂ ಇಲ್ಲ. ಅಂತೆಯೇ ಅಯೋಧ್ಯೆಯ ಬಾಬ್ರಿ ಮಸೀದಿ, ರಾಮ ಮಂದಿರದಂತೆ, ಬಾಬಾ ಬುಡನ್ ಗಿರಿಯಂತೆ ಟಿಪ್ಪು ಕೂಡ ಈಗ ವಿವಾದದ ಕೇಂದ್ರಬಿಂದು ಆಗಿದ್ದಾನೆ.

ಟಿಪ್ಪು ಸುಲ್ತಾನ್ ಬಗ್ಗೆ ಇತ್ತೀಚೆಗೆ ವಿವಾದ ಆರಂಭವಾಗುತ್ತಿದ್ದಂತೆ, ಮಾಹಿತಿ ಸಂಗ್ರಹಿಸಲು ಹಲವಾರು ಪುಸ್ತಕಗಳನ್ನು, ಪುಟಗಳನ್ನು ನಾನು ತಿರುವಿ ಹಾಕಿದೆ. ಪ್ರೊ.ಶೇಖ್ ಅಲಿ ಅವರು ಬರೆದ ಪುಸ್ತಕ, ಹಯವದನರಾಯರು ಬರೆದ ಪುಸ್ತಕ, 'ಮೇಕಿಂಗ್ ಹಿಸ್ಟರಿ'ಯಲ್ಲಿ ಸಾಕೇತ್ ರಾಜನ್ ನೀಡಿರುವ ವಿವರಗಳು.. ಅಷ್ಟೇ ಅಲ್ಲ, ಈ ನಾಡಿನ ಹಿರಿಯ ಪತ್ರಕರ್ತ ಮತ್ತು ಸ್ವಾತಂತ್ರ್ಯ ಹೋರಾಟಗಾರ ತಿರುಮಲ ತಾತಾಚಾರ್ಯ ಅವರು ಬರೆದ ಪುಸ್ತಕವನ್ನು ತಿರುವಿ ಹಾಕಿದೆ. ಆ ನಂತರ ಟಿಪ್ಪು ಬಗೆಗಿನ ಗೌರವ ಇನ್ನೂ ಹೆಚ್ಚಾಯಿತು.[ಟಿಪ್ಪು ಜಯಂತಿ ಹೆಸರಲ್ಲಿ ಕಾಂಗ್ರೆಸ್ ರಾಜಕೀಯ: ಮೋಹನ್ ದಾಸ್ ಪೈ]

Tippu real history, politics and truth

ದೇಶದ ಪ್ರಥಮ ಸ್ವಾತಂತ್ರ್ಯ ಹೋರಾಟಗಾರ ಟಿಪ್ಪು ಸುಲ್ತಾನ್. 40 ಸಾವಿರ ಚದರ ಮೈಲಿಯಿದ್ದ ಮೈಸೂರು ಸಾಮ್ರಾಜ್ಯವನ್ನು 80 ಸಾವಿರ ಚದರ ಮೈಲಿಗೆ ವಿಸ್ತರಿಸಿದ. ಈಗಿನ ಕನ್ನಂಬಾಡಿ ಆಣೆಕಟ್ಟಿನ ನೀಲನಕ್ಷೆಯನ್ನು ಸಿದ್ಧಪಡಿಸಿದ್ದು ಟಿಪ್ಪು ಸುಲ್ತಾನ್. ಈ ನಾಡಿಗೆ ರೇಷ್ಮೆಯನ್ನು ತಂದು ಲಕ್ಷಾಂತರ ರೈತರ ಬದುಕಿಗೆ ಬೆಳಕು ನೀಡಿದವನು ಟಿಪ್ಪು ಸುಲ್ತಾನ್.

ಮರಾಠರು ಶೃಂಗೇರಿ ಶಾರದಾಪೀಠವನ್ನು ಧ್ವಂಸಗೊಳಿಸಿ, ಅದನ್ನು ಲೂಟಿ ಮಾಡಿಕೊಂಡು ಹೋದಾಗ, ಅದಕ್ಕಾಗಿ ಶೃಂಗೇರಿ ಸ್ವಾಮಿಗಳ ಕ್ಷಮೆ ಕೇಳಿ, ಲೂಟಿ ಮಾಡಿಕೊಂಡ ಆಭರಣಗಳನ್ನು ಮತ್ತೆ ಮಾಡಿಸಿಕೊಟ್ಟು ಮಠವನ್ನು ಜೀರ್ಣೋದ್ಧಾರ ಮಾಡಿದ್ದು ಟಿಪ್ಪು ಸುಲ್ತಾನ್. ಹೀಗೆ ಹಿಂದೂ ದೇವಾಲಯಗಳಿಗೆ ನೆರವು ನೀಡಿದ ನೂರಾರು ಉದಾಹರಣೆಗಳನ್ನು ಕೊಡಬಹುದು. ಈಗ ಟಿಪ್ಪು ಬಗ್ಗೆ ಟೀಕೆ ಮಾಡುವವರು ಶೃಂಗೇರಿ ಮೇಲೆ ಮರಾಠರು ನಡೆಸಿದ ದಾಳಿ ಬಗ್ಗೆ ಮಾತನಾಡುವುದಿಲ್ಲ.[ಇತಿಹಾಸ ಅರಿಯದವರಿಂದ ಟಿಪ್ಪು ಬಗ್ಗೆ ಅಪಪ್ರಚಾರ: ಖಾದರ್]

ಯುದ್ಧದಲ್ಲಿ ಶತ್ರುದೇಶಗಳ ಮಹಿಳೆಯರ ಮೇಲೆ ದೌರ್ಜನ್ಯ ಮಾಡಿದ ಕಾರಣಕ್ಕಾಗಿ ತನ್ನದೇ ತಂದೆಯ ಸೇನಾ ದಳದ ಮುಖ್ಯಸ್ಥ ಮಖ್ಬುಲ್ ಅಹಮದ್ ನನ್ನು ಶಿಕ್ಷೆಗೆ ಗುರಿಪಡಿಸಿದ ಟಿಪ್ಪು ಸುಲ್ತಾನ್. ಯಾರು ಭೂಮಿ ಉಳುತ್ತಾರೋ, ಅವರು ಯಾವ ಜಾತಿಯವರೇ ಆಗಿದ್ದರೂ ಅವರಿಗೆ ಭೂಮಿ ಒಡೆತನ ನೀಡಬೇಕೆಂದು ಟಿಪ್ಪು ಘೋಷಣೆ ಮಾಡಿದ. ದೇವಸ್ಥಾನ ಮತ್ತು ಮಠಗಳ ವಶದಲ್ಲಿದ್ದ ನೂರಾರು ಎಕರೆ ಭೂಮಿಯನ್ನು ಅಲ್ಲಿ ಉಳುಮೆ ಮಾಡುವ ಶೂದ್ರರಿಗೆ ಹಂಚಿದ್ದು ಟಿಪ್ಪು ಸುಲ್ತಾನ್.

ಕನ್ನಡ ಭಾಷಿಕ ಪ್ರದೇಶಗಳನ್ನು ಮೊದಲ ಬಾರಿಗೆ ಒಂದುಗೂಡಿಸಿದ ಶ್ರೇಯಸ್ಸು ಟಿಪ್ಪು ಸುಲ್ತಾನ್ ಗೆ ಸಲ್ಲುತ್ತದೆ. ಆಗ ಗುಲಬರ್ಗಾ, ಬೀದರ್ ಸೇರಿದಂತೆ ಕೆಲ ಭಾಗಗಳು ಹೊರತುಪಡಿಸಿ ಇಡೀ ಕನ್ನಡ ಭಾಷಿಕ ಪ್ರದೇಶಗಳು ಒಂದೇ ರಾಜ್ಯದಲ್ಲಿ ವಿಲೀನಗೊಂಡಿದ್ದವು. ನಲವತ್ತು ವರ್ಷ ಮಾತ್ರ ಬಾಳಿ ಮರಣ ಹೊಂದಿದ ಟಿಪ್ಪು ನಂತರ ಮತ್ತೆ ಕರ್ನಾಟಕ ಒಡೆದು ಚೂರುಚೂರಾಯಿತು.

ನೀರಾವರಿ ಸೌಲಭ್ಯ ಕಲ್ಪಿಸಲು ಟಿಪ್ಪು ಸಾಕಷ್ಟು ಶ್ರಮಿಸಿದ. ಹಳೆಯ ಮೈಸೂರಿನ ಕೋಲಾರ-ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು, ಹಾಸನ ಮುಂತಾದ ಕಡೆ ನಾವು ಕಾಣುವ ಕೆರೆಕಟ್ಟೆಗಳು ನಿರ್ಮಾಣಗೊಂಡಿದ್ದು ಆತನ ಕಾಲದಲ್ಲಿ. ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್ ಆಳಿದ್ದು 1761 ರಿಂದ 1799ರ ತನಕ. ಈ 38 ವರ್ಷಗಳಲ್ಲಿ ಅವರು ಯುದ್ಧ ಮಾಡದ ಒಂದೇ ಒಂದು ವರ್ಷವೂ ಇಲ್ಲ. ಹೀಗಾಗಿ ಟಿಪ್ಪು ಕೈಗೊಂಡ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಜಾರಿಗೆ ತರಲು ಸಾಧ್ಯವಾಗಲಿಲ್ಲ.[ಕೊಡವ ಸಮಾಜ ಬಿಜೆಪಿ ಬ್ರ್ಯಾಂಚ್ ಆಫೀಸ್ ಆಗಬಾರದು: ಎಕೆ ಸುಬ್ಬಯ್ಯ]

ಟಿಪ್ಪು ಬಲವಂತದ ಮತಾಂತರ ಮಾಡುತ್ತಿದ್ದ ಎಂಬ ಆರೋಪ ಕೋಮುವಾದಿಗಳು ಮಾಡುತ್ತಾರೆ. ಇದು ನಿಜವೇ ಆಗಿದ್ದರೆ ಶ್ರೀರಂಗಪಟ್ಟಣ ಸೇರಿದಂತೆ ಮೈಸೂರು ಪ್ರಾಂತ್ಯದಲ್ಲಿ ಈಗ ಹಿಂದೂಗಳಿಗಿಂತ ಮುಸಲ್ಮಾನರ ಸಂಖ್ಯೆಯೇ ಹೆಚ್ಚಾಗಿರುತ್ತಿತ್ತು. ಮತಾಂತರ ನಡೆದೇ ಇಲ್ಲವೆಂದಲ್ಲ. ಹಿಂದೂ ಧರ್ಮದಲ್ಲಿನ ಉಸಿರುಗಟ್ಟಿಸುವ ವಾತಾವರಣದಿಂದ ರೋಸಿ ಹೋದ ದಲಿತರು ಮತಾಂತರ ಮಾಡಿರಬಹುದು. ಜಾತಿ ವ್ಯವಸ್ಥೆಯ ಕ್ರೌರ್ಯದಿಂದ ಪಾರಾಗಲು ಅಸ್ಫೃಶ್ಯರು ಮತಾಂತರ ಮಾಡಿದ್ದಾರೆಂದು ಸ್ವಾಮಿ ವಿವೇಕಾನಂದರು ಹೇಳಿದ್ದಾರೆ.

ಟಿಪ್ಪು ಬಗ್ಗೆ ಸಂಶೋಧನೆ ಮಾಡಿ, ಪುಸ್ತಕ ಬರೆಯಲು ಹೊರಟ ಭಗವಾನ್ ಗಿಡ್ವಾಣಿ ಎಂಬ ಹಿಂದೂ ಮಹಾಸಭಾ ನಾಯಕ ಅದಕ್ಕಾಗಿ ಲಂಡನ್ನಿನ ಪ್ರಾಚ್ಯವಸ್ತು ಇಲಾಖೆ ಸಂಗ್ರಹಗಳನ್ನು ಮತ್ತು ದಾಖಲೆಗಳನ್ನು ಹುಡುಕಿದ. ಎಲ್ಲ ತಡಕಾಡಿದ ನಂತರ ಟಿಪ್ಪು ಬಗ್ಗೆ ತುಂಬಾ ಗೌರವ ಭಾವನೆ ವ್ಯಕ್ತಪಡಿಸಿ, 'ಟಿಪ್ಪು ಖಡ್ಗ' ಎಂಬ ಪುಸ್ತಕ ಬರೆದ. ರಣರಂಗದಲ್ಲಿ ಶತ್ರುಸೈನಿಕರ ವಿರುದ್ಧ ಸೆಣೆಸುತ್ತಲೇ ವೀರಮರಣವನ್ನಪ್ಪಿದ ಟಿಪ್ಪುವಿನಂತಹ ರಾಜ ಜಗತ್ತಿನಲ್ಲಿ ಇನ್ನೊಬ್ಬನಿಲ್ಲ ಎಂದು ಆತ ಹೇಳಿದ್ದಾನೆ.['ಹಿಂದೂಗಳ ಮೇಲೆ ದೌರ್ಜನ್ಯ ಮಾಡಿದ ಟಿಪ್ಪುವಿನ ಜಯಂತಿ ಬೇಡ']

ಎಲ್ಲಕ್ಕಿಂತ ಮುಖ್ಯವಾಗಿ, ಟಿಪ್ಪು ಸುಲ್ತಾನರ ಚರಿತ್ರೆಯನ್ನು ಸತ್ಯಕ್ಕೆ ಲೋಪವಾಗದಂತೆ ಕಟ್ಟಿಕೊಟ್ಟವರು ತಿತಾ ಶರ್ಮಾ. ಈ ನಾಡಿಗೆ ಟಿಪ್ಪು ಸುಲ್ತಾನ್ ನೀಡಿದ ಕೊಡುಗೆಯನ್ನು ಸಾಕ್ಷ್ಯಾಧಾರಗಳೊಂದಿಗೆ ಅವರು ದಾಖಲಿಸಿದ್ದಾರೆ. ಟಿಪ್ಪು ಅತ್ಯಂತ ಹೆಚ್ಚು ನಂಬಿದ್ದು ತನ್ನ ಆಸ್ಥಾನದಲ್ಲಿ ಮುಖ್ಯಮಂತ್ರಿಯಾಗಿದ್ದ ಪೂರ್ಣಯ್ಯನನ್ನು. ಇದೇ ಪೂರ್ಣಯ್ಯ ಮತ್ತು ಮೀರ್ ಸಾದಿಕ್ ಸೇರಿ ದ್ರೋಹ ಮಾಡಿ, ಬ್ರಿಟಿಷರೊಂದಿಗೆ ಶಾಮೀಲಾದರು. ಅದಕ್ಕಾಗಿ ಪಡೆದ ಕಾಣಿಕೆ ಮತ್ತು ಭಕ್ಷೀಸುಗಳಿಂದ ಈ ದ್ರೋಹಿಗಳ ಕುಟುಂಬಗಳು ಇಂದು ಸಾಕಷ್ಟು ಸಂಪತ್ತನ್ನು ಹೊಂದಿ ಸುಖವಾಗಿದ್ದರೆ, ಬ್ರಿಟಿಷರೊಂದಿಗೆ ರಾಜಿ ಮಾಡಿಕೊಳ್ಳದೆ ಎಲ್ಲವನ್ನೂ ಕಳೆದುಕೊಂಡ ಟಿಪ್ಪು ಸುಲ್ತಾನ್ ವಂಶಸ್ಥರು ಕೋಲ್ಕತ್ತಾದಲ್ಲಿ ಹಮಾಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Tippu sultan jayanti become controversial now. Karnataka government decided to celebrate Tippu jayanti. Sanathakumara Belagali, Veteran journalist from Kalaburagi writes about real face of Tippu sultan with some references.
Please Wait while comments are loading...