ಬಾಗಿಲನು ತೆರೆದು ಸೇವೆಯನು ಕೊಡೊ

ಕವನ ರಸಾಸ್ವಾದಕ್ಕೆ ಬ್ರಹ್ಮೇತಿ ಬುದ್ದಿ ಏನೂ ಬೇಕಿಲ್ಲ ಎಂದು ಅಶೋಕ ಪಿಲ್ಲರ್ ಸಮೀಪದ ಕೆಫೆಕಾಫಿಡೇ ಮೀಟಿಂಗ್ ನಲ್ಲಿ ಇತ್ತೀಚೆಗೆ ಒಂದು ತಾತ್ಪೂರ್ತಿಕ ತೀರ್ಮಾನಕ್ಕೆ ಬರಲಾಯಿತು. ಪ್ರಾಸ ಮತ್ತು ಲಯ ಇಲ್ಲದಿರುವ ಕವನದ ಸಾಲುಗಳಲ್ಲಿ ಕಣ್ಣಾಮುಚ್ಚಾಲೆ ಆಡುವ ಪದಪಂಕ್ತಿಗಳ ಅರ್ಥ ಅರಿಯುವುದಕ್ಕೆ ಚೂರುಪಾರು ಕವನಸೂಕ್ಷ್ಮವಿದ್ದರೆ ಸಾಕೆಂದು ಕೆಲವರು ಅಭಿಪ್ರಾಯ ತಾಳಿದರು. ತಮಗೆ ಕವನದ ಒಳಮೈ ಹೊರಮೈ ಎರಡೂ ಗೋಚರವಾಗುತ್ತದೆಂದೂ ಆದರೆ ಕಂಡದ್ದನ್ನು ವಿವರಿಸುವ ಚತುರತೆ ಇಲ್ಲವೆಂದೂ ಒಂದಿಬ್ಬರು ಒಪ್ಪಿಕೊಳ್ಳುವ ಸಹೃದಯ ತೋರಿದರು.
ಕವನ ಮೇಲು ನೋಟಕ್ಕೆ ತುಂಗೆಯ ಗಿಡದ ಹಾಗೆ ಕಂಡರೂ ಅದರಲ್ಲಿ ತಾಳೆಯಷ್ಟು ಬಾನೆತ್ತರದ ಅರ್ಥ ಇರಲಿಕ್ಕೆ ಸಾಧ್ಯ ಎಂದು ಆಚಾರ್ಯ ಪಾಠಶಾಲೆಯಲ್ಲಿ ಆಪ್ಶನಲ್ ಹಿಂದಿ ಪಠ್ಯ ಓದುತ್ತಿರುವ ಗುರುರಾಜ ಹೇಳಿದ್ದನ್ನು ಕೇಳಿದವರಿಗೆ ಅವನ ಮಾತೇ ಒಂದು ಮಹಾಕಾವ್ಯವೆಂದು ಭಾಸವಾಗಿ ಸುಮ್ಮನೆ ಕಾಫಿ ಬಟ್ಟಲಿಗೆ ಕೈ ಹಾಕಿದರು. ಈ ಬಗೆಯ ಕವನ ಸಂಕಿರಣಗಳು ಆಗಾಗ ಅಲ್ಲಲ್ಲಿ ನಡೆಯುತ್ತಿದ್ದರೂ ಯಾರೂ ಅದನ್ನು ವರದಿ ಅಥವಾ ದಾಖಲೆ ಮಾಡುವುದಕ್ಕೆ ಕೈಹಾಕದಿರುವುದು ನನಗೆ ಟೆನ್ನಿಸನ್ ಹಾಗೂ ವರ್ಡ್ಸ್ ವರ್ಥ್ ಕವನಗಳಷ್ಟೆ ಸತ್ಯವೆನಿಸಿತು. ಖಂಡಿತವಾಗಿಯೂ ಯೇಸು ಹೇಳದ ಈ ಸತ್ಯ ವಾಕ್ಯಗಳು ಚರ್ಚೆಗೆ ಬರದೆನೇ ವೇದ್ಯವಾಗುವ ಸಂಗತಿಗಳಲ್ಲಿ ಇನ್ನೊಂದಾಗಿ ಕಾಫಿಬಿಲ್ಲು ಕೊಡುವ ಸಮಯ ಎದುರಾಯಿತು.
ಯಾವ ಭಾಷೆಯಲ್ಲೇ ಆಗಲೀ ಕವನವನ್ನು ಉಜ್ಜಿ, ಹಿಂಡಿ, ಕತ್ತರಿಸಿ, ಸೋಸಿ, ಅರ್ಥವಿಶ್ಲೇಷಣೆಯಲ್ಲಿ ತೊಡಗುವುದಕ್ಕೆ ಮತ್ತು ಸಾಧ್ಯವಾದರೆ ತಾವು ಪಟ್ಟ ಸಂತೋಷವನ್ನು ಇತರರೊಂದಿಗೆ ಹಂಚಿಕೊಳ್ಳುವುದಕ್ಕೆ ಒಂದು ವಿಚಿತ್ರ ಮನೋಸ್ಥಿತಿ ಬೇಕಾಗುತ್ತದೆ. ಆ ಮನೋಸ್ಥಿತಿಯು ಕೇಳುವವರಿದ್ದರೆ ಮಾತ್ರ ಬಾಯಿಬಿಡುತ್ತದೆ. ನಮ್ಮ ಕನ್ನಡ ಭಾಷೆಯಲ್ಲಿ ಅಂಥ ವಿಚಿತ್ರವೀರ್ಯರು ಬೆರಳೆಣಿಕೆಯಷ್ಟು ಮಾತ್ರ ಕಾಣಸಿಗುವರು. ಅವರಿಗೆಲ್ಲ ನಮ್ಮ ನಮೋನ್ನಮಃಗಳು.
ತಮಗೆ ಅರ್ಥವಾದ ಕವನವನ್ನು ಇತರರಿಗೆ ಬಿಡಿಸಿ ಹೇಳುವುದಕ್ಕೆ ಅನೇಕರಿಗೆ ವ್ಯವಧಾನ ಇರುವುದಿಲ್ಲ. ಬರೆದರೆ ಅಂಕಿತ ಪ್ರಕಾಶನದ ಪ್ರಕಾಶ್ ಕಂಬತ್ತಳ್ಳಿ ಬಿಟ್ಟು ಇನ್ನಾರೂ ಓದರು. ಅಂಥ ಓದಿಗೆ, ಬರವಣಿಗೆಗೆ ಶರಣಾಗುವುದಕ್ಕೆ ಪ್ರಕಾಂಡ ಪಾಂಡಿತ್ಯ ಬೇಕಾಗುವುದಂತೂ ನಿಜ. ಕುರ್ತುಕೋಟಿ, ಸಿ.ಎನ್. ರಾಮಚಂದ್ರ, ಎಸ್.ಆರ್. ವಿಜಯಶಂಕರ, ನರಹಳ್ಳಿ ಬಾಲಸುಬ್ರಮಣ್ಯ ಮುಂತಾದವರು ಅಂಥ ಕೆಲಕ್ಕೆ ಬಿಡುವಾದಾಗ ಕೈಹಾಕುತ್ತಿದ್ದುದುಂಟು. ವಿಮರ್ಶನ ಕಲೆ ಭಯಂಕರ ಕಷ್ಟ. ಕೆಲವರಿಗೆ ಮಾತ್ರ ಸಿದ್ಧಿಸುವಂಥದ್ದು. ನಮ್ಮನಿಮ್ಮಂಥವರಿಗೆ ಇಂಥ ದುಸ್ಸಾಹಸ ಸಲ್ಲದು.
ಈಚೀಚೆಗೆ ಕೆಲವರು ಹೊಸ ವಿಮರ್ಶಕರು ಜನ್ಮ ತಾಳಿದ್ದಾರೆ. ಓದುವವರಿಗೆ ನೇರವಾಗಿ ತಲಪುವಂತೆ ಬರೆಯುತ್ತಾರೆ ಎನ್ನುವುದೇ ಅವರವರ ಚಾನಲ್ಲುಗಳ ಬ್ರೇಕಿಂಗ್ ನ್ಯೂಸ್ ಆಗಿರುತ್ತದೆ. ಶಿವಮೊಗ್ಗೆಯ ಸಿರಾಜ್ ಅಹಮ್ಮದ್, ಚಿಂತಾಮಣಿಯ ಕೊಡ್ಲೆಕೆರೆ, ಉಪ್ಪಿನಂಗಡಿಯ ಜೋಗಿ, ಹರಳಾಪುರದ ರಘುನಾಥ ಆಗಾಗ ಟಿಪ್ಪಣಿಗಳನ್ನು ಬರೆಯುವುದುಂಟು. ಟಿಪ್ಪಣಿಗಳನ್ನು ಓದಿ ಕವನದ ಮೂಲ ಪ್ರತಿ ಹುಡುಕಿಕೊಂಡು ಹೋಗುವಂತಾದರೆ ಅದೇ ಅವರ ಕವನಕಾಣ್ಕೆ ಎಂದು ಹೇಳಬೇಕಾಗುತ್ತದೆ.
ಈ ಮಧ್ಯೆ, ನಮ್ಮ ವೆಬ್ ಪುಟಗಳಲ್ಲಿ ನಾಳೆ ಕವನದ ಬಗೆಗೆ ಒಂದು ಸ್ಪೋಟಕ ಸುದ್ದಿ ಪ್ರಕಟವಾಗುವ ಸಾಧ್ಯತೆ ಇದೆ. ಆದಕಾರಣ ತಾವೆಲ್ಲರೂ ತಪ್ಪದೆ ನಾಳೆ ಅದನ್ನು ನೋಡಬೇಕೆಂದು, ಸಮಯವಿದ್ದರೆ ಓದಬೇಕೆಂದೂ ಅರಿಕೆ ಮಾಡಿಕೊಳ್ಳಲಾಗಿದೆ.












Click it and Unblock the Notifications