ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟಾಸ್ಗೆದ್ದು ಬ್ಯಾಟಿಂಗ್ ಆರಿಸಿಕೊಂಡ ಇಂಡಿಯ

By Staff
|
Google Oneindia Kannada News

United we fight against terrorism
ದೇಶಭಕ್ತಿ ಎಂಬ ಪದಕ್ಕೆ ಭಾರತದಲ್ಲಿ ಈ ಹೊತ್ತು ಹೊಸ ಅರ್ಥ-ವಿನ್ಯಾಸ ಬಂದಿದೆ. ವಿನೂತನವಾದ ಮ್ಯಾಚ್ ಈಗಷ್ಟೆ ಆರಂಭವಾಗಿದೆ. ಭಯೋತ್ಪಾದನೆ ವಿರುದ್ಧ ಅನಿರ್ದಿಷ್ಟ ಹೋರಾಟದ ಈ ಪಂದ್ಯದಲ್ಲಿ ಭಾರತ ಈದೀಗ ಟಾಸ್ ಗೆದ್ದು ಬ್ಯಾಟಿಂಗ್ ಆರಿಸಿಕೊಂಡಿದೆ!

* ಇಂಡಿಯನ್ ಕನ್ನಡಿಗ

ಕೆಲವು ವರ್ಷಗಳ ಹಿಂದೆ ಕರಾಚಿಯ ರಸ್ತೆಯೊಂದರಲ್ಲಿ , ಇಂಡಿಯನ್ ಹೈ ಕಮಿಷನರ್ ಆಗಿದ್ದ ಜಿ. ಪಾರ್ಥಸಾರಥಿಯವರು ಪ್ರಯಾಣಿಸುತ್ತಿದ್ದರು. ಅವರ ಕಾರಿನ ಚಾಲಕ ಒಬ್ಬ ಸ್ಥಾನೀಯ ಪಾಕಿಸ್ತಾನಿ. ಕಾರಿನೊಳಗಿಂದಲೇ ಆ ಚಾಲಕ ರಸ್ತೆ ಪಕ್ಕದ ಒಂದು ಭವ್ಯ ಬಂಗಲೆಯನ್ನು ತೋರಿಸಿ ಇದೋ ನೋಡಿ ದಾವೂದ್ ಇಬ್ರಾಹಿಮ್ ನಿವಾಸ ಎಂದು ನಿರುಮ್ಮಳವಾಗಿ ಹೇಳಿ ಮುಂದೆ ಸಾಗಿದ. ಪಾರ್ಥಸಾರಥಿಯವರು ಅವಾಕ್ಕಾದರು. ಭಾರತಕ್ಕೆ ಬೇಕಾದ ಮೋಸ್ಟ್ ವಾಂಟೆಡ್ ಅಪರಾಧಿಯೊಬ್ಬ ಪಾಕಿಸ್ತಾನದಲ್ಲಿ ರಾಜಾರೋಷವಾಗಿ ವಾಸವಾಗಿದ್ದಾನೆ..!

ತೊಂಬತ್ಮೂರರ ಮುಂಬೈ ಸ್ಫೋಟದಿಂದ ಇವತ್ತಿನವರೆಗೆ ಭಾರತ ದಾವೂದ್ ಗಾಗಿ ಪಾಕಿಸ್ತಾನವನ್ನು ಅಂಗಲಾಚಿ ಬೇಡಿಕೊಳ್ಳುತ್ತಲೇ ಇದೆ. ಆದರೆ ಪಾಕಿಸ್ತಾನ ಮಾತ್ರ ಈ ದಾವೂದ್ ಯಾರು.. ಅವನು ನಮ್ಮ ದೇಶದಲ್ಲಿ ಇಲ್ಲವೇ ಇಲ್ಲ ಸಾಕ್ಷಿ ಕೊಡಿ.. ಇತ್ಯಾದಿ ಮೊಂಡು ವಾದ, ಬಾಲಿಶ ವರ್ತನೆಗಳಿಂದ ಉಪಖಂಡವಷ್ಟೇ ಅಲ್ಲದೆ ವಿಶ್ವದಾದ್ಯಂತ, ಎಲ್ಲ ರೀತಿಯ ಉಗ್ರವಾದ ಹಾಗೂ ಇತರ ಅಪರಾಧಿ ಚಟುವಟಿಕೆಗಳನ್ನು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಪೋಷಿಸುತ್ತಲೇ ಬಂದಿದೆ.

ಇವಿಷ್ಟು ವಿಷಯಗಳು ತಮ್ಮೆಲ್ಲರ ಅವಗಾಹನೆಗೆ ಬಂದಿದೆ. ಆದರೆ, ಈ ಬಾರಿಯ ಮುಂಬೈನಲ್ಲಿ ಉಗ್ರರ ದಾಳಿ ಮತ್ತು ಗತ್ಯಂತರದ ಸ್ಥಿತಿಯ ಅವಲೋಕನ ಮಾತ್ರ ಅಭೂತಪೂರ್ವ ಮಹತ್ವವನ್ನ ಪಡೆದುಕೊಂಡಿದೆ. ವಾಲ್ ಸ್ಟ್ರೀಟ್ ಜರ್ನಲ್ ನಂತಹ ವಿದೇಶಿ ಪತ್ರಿಕೆ ಕೂಡ ವಿರೋಧಿ ಪಕ್ಷಗಳು ನಾಚುವಂತೆ ಭಾರತದ ಆಡಳಿತಾರೂಡ ಯುಪಿಎ ಸರಕಾರವನ್ನು ತರಾಟೆಗೆ ತೆಗೆದುಕೊಂಡಿತು. ಉಗ್ರವಾದದ ಬಗ್ಗೆ ಮೃದು ಧೋರಣೆ, ವೋಟ್ ಬ್ಯಾಂಕ್ ರಾಜಕಾರಣ, ರಕ್ಷಣಾ ವ್ಯವಸ್ಥೆಯ ಅಸಮರ್ಪಕ ನಿರ್ವಹಣೆ, ಬೇಜವಾಬ್ದಾರಿ ಮೊದಲಾದ ಹುಳುಕುಗಳು ಜಾಡಿಸಲ್ಪಟ್ಟವು.

ಇಂತಹ ಪರಿಸ್ಥಿತಿಯಲ್ಲಿ ಕೆಲವರು ಬಲಪಂಥೀಯ ಬಿಜೆಪಿ ನೇತೃತ್ವದ ಸರಕಾರವನ್ನು ಸ್ಮರಿಸಿದರಾದರೂ ಇಲ್ಲೊಂದು ಸಮಸ್ಯೆಯಿದೆ. ಬಿಜೆಪಿಯ ಧರ್ಮಾಧಾರಿತ ರಾಜಕಾರಣದ ರಕ್ತ ಸಿಕ್ತ ಇತಿಹಾಸ ಎನ್.ಡಿ.ಎ ಸರಕಾರದ ಉಗ್ರವಾದದ ವಿರುದ್ಧದ ಹೋರಾಟಕ್ಕೆ ಖಂಡಿತವಾಗಿಯೂ ತೊಡರುಗಾಲಾಗಿತ್ತು. ಇವೆಲ್ಲ ಕಾರಣಗಳಿಂದಾಗಿ ಎರಡು ಪ್ರಮುಖ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿ ಇಬ್ಬರೂ ಉಗ್ರವಾದದ ವಿರುದ್ಧದ ಹೋರಾಟದಲ್ಲಿ ಗಣನೀಯವಾಗಿ ಸೋತಿದ್ದವು.

ಎಲ್ಲ ಅಸಹಾಯಕತೆ, ನಿರಾಸೆ, ನೋವುಗಳಿಗೆ ಪರಿಹಾರದ ಆಸೆಯ ಮೊಳಕೆ ಒಡೆದಿದ್ದೆ ಮೊನ್ನೆ ಮೊನ್ನೆ. ಮುಂಬೈನಲ್ಲಿ ಉಗ್ರರ ಆಕ್ರಮಣ, 183 ಜೀವ ಹಾನಿ, 4 ಸಾವಿರ ಕೋಟಿ ಆರ್ಥಿಕ ಹಾನಿ, ರಾಜಕಾರಣಿಗಳ ಕ್ಷುಲ್ಲಕ ಹೇಳಿಕೆ, ನಡವಳಿಕೆಗಳು.. ಇವೆಲ್ಲ ಒಂದರ ಹಿಂದೊಂದು ಟಿವಿ ಮಾಧ್ಯಮಗಳ ಮೂಲಕ ಜನ ಸಾಮಾನ್ಯರ ಮೇಲೆ ಅಪ್ಪಳಿಸಿದ್ದೆ ಬದಲಾವಣೆಗೆ ಓಂಕಾರ ಹಾಕಿತು. ಇನ್ನೊಮ್ಮೆ ಕಣ್ಣು ಹಾಯಿಸಿ ನೋಡಿ. ಪರಿಸ್ಥಿತಿಯ ಮೊದಲ ದಿನದಿಂದಲೇ ಬೀದಿಗಿಳಿದ ಜನರ ಕೈಲಿ ಒಂದೆ ಒಂದು ದೊಣ್ಣೆ ಸಹ ಇರಲಿಲ್ಲ. ವೃದ್ಧರು, ಮಕ್ಕಳು, ಮಹಿಳೆಯರು, ಬಡವ, ಬಲ್ಲಿದ, ಎಲ್ಲ ಧರ್ಮ, ಜಾತಿಯ, ಎಲ್ಲ ಭಾಷೆಯ ಕೋಮಿನ, ಎಲ್ಲ ಪ್ರಾದೇಶಿಕ ವಿಭಿನ್ನತೆಗಳನ್ನು ಗಾಳಿಗೆ ತೋರಿ, ಇಡೀ ದೇಶಕ್ಕೆ ದೇಶವೇ ಒಂದಾಗಿ, ಹೃದಯ ಸಮುದ್ರವ ಕಲಕಿ, ಆರ್ಭಟಿಸಿದ ಬಗೆಯಿದೆಯಲ್ಲ ಅದರ ಮುಂದೆ ಭಾರತದ ಕೀಳು ರಾಜಕಾರಣ ಮಂಗ ಮಾಯವಾಯ್ತು.

ದಿಲ್ಲಿಯಿಂದ ಹಳ್ಳಿಯವರೆಗೆ ಎಲ್ಲ ಬಗೆಯ ರಾಜಕಾರಣಿಗಳೂ ಮುಖ ತೋರಿಸದೇ ನಡುಗಿ, ಅಡಗಿ ಕುಳಿತರು. ಯಾವ ಪಕ್ಷ, ಪಂಗಡ, ಪದ್ದತಿಗಳಿಗೂ ಸಾಧ್ಯವಾಗದ ರಕ್ತ ರಹಿತ ಬದಲಾವಣೆಯ ವಾಸನೆ ಈ ಬಾರಿ ಕಾಣಿಸಿತು. ಇದು ತುರ್ತು ಪರಿಸ್ಥಿತಿಯ ಕಾಲಕ್ಕಿಂತ ಹೆಚ್ಚಿನ ಸಂಕ್ರಮಣದ ಕಾಲ. ಶಸ್ತ್ರರಹಿತ ಜನಸಾಮಾನ್ಯರು ನಿಷ್ಕ್ರೀಯ ನಿರಂಕುಶ ಶಾಸಕಾಂಗದ ಸೊಂಟ ಮುರಿದು ಮೊಣಕಾಲುಗಳ ಮೇಲೆ ನಿಲ್ಲಿಸಿದರಲ್ಲ? ಇದೆ ನೋಡಿ ಪ್ರಜಾಸತ್ತೆಯ ಸುಂದರತೆ. ಅಭೂತಪೂರ್ವ ದೇಶಪ್ರಜ್ಞೆಯ ನಡುವೆ ಭಾರತೀಯರು ತಮ್ಮ ಹಕ್ಕು ಭವಿಷ್ಯಗಳ ಬಗ್ಗೆ ತಾವೆ ಚಿಂತಿಸಿ, ವಸ್ತುನಿಷ್ಠ ಫಲಿತಾಂಶಗಳನ್ನು ಸಮಾಲೋಚನೆಗೊಳಿಸುವ ನಿಟ್ಟಿನಲ್ಲಿ ಮುನ್ನುಗ್ಗಿರುವುದು ಒಂದು ಆಶಾದಾಯಕ ಬೆಳವಣಿಗೆ.

ಇಂದು ಉಗ್ರವಾದ, ಮುಂದೆ ನಕ್ಸಲವಾದ, ಕೋಮುವಾದ, ಭ್ರಷ್ಟಾಚಾರ, ಮತಾಂತರ, ಪ್ರಾದೇಶಿಕತೆ ಹಾಗೂ ಏಕರೂಪ ಸಂಹಿತೆ, ಆರೋಗ್ಯ, ಶಿಕ್ಷಣ, ಪರಿಸರ ಸಂರಕ್ಷಣೆ, ನಾಗರಿಕ ಶಿಷ್ಟಾಚಾರ, ಜಾಗೃತಿ ಮೊದಲಾದ ಕ್ಷೇತ್ರಗಳನ್ನೂ ಒಳಗೊಂಡು ಸರ್ವತೋಮುಖ ಏಳಿಗೆಗೆ ಶ್ರಮಿಸುವ ನಿಟ್ಟಿನಲ್ಲಿ ಈಗಿರುವ ಪ್ರಜಾಶಕ್ತಿಯನ್ನು ಸದ್ವಿನಿಯೋಗಿಸಬೇಕು. ಮುಂಬೈ ಆಕ್ರಮಣದಿಂದ ಹಚ್ಚಿಕೊಂಡ ಈ ಪವಿತ್ರ ಬೆಂಕಿಯನ್ನು ಇನ್ನೂ ಕೆಲ ವರ್ಷ ಸಜೀವವಾಗಿಟ್ಟುಕೊಳ್ಳೋಣ. ಏಕೆಂದರೆ ಸುಡಬೇಕಾದ ಲಂಕೆ ತುಂಬಾ ವಿಸ್ತಾರದ್ದು!

ಯಾವುದೇ ಕಾರಣಕ್ಕೂ ಸಿನಿಕರಾಗದೆ, ಪೂರ್ವಗ್ರಹ ಪೀಡಿತರಾಗದೆ, ಅಪಸ್ವರವಿಲ್ಲದೆ ಒಗ್ಗಟ್ಟಾಗೋಣವೆ? ಮುಂಬೈ ಪ್ರಕರಣ ಭಾರತದ ಫೆಡರಲ್ ವಿಚ್ಛಿದ್ರೀಕರಣಕ್ಕೆ ದಾರಿ ಎನ್ನುವ ಇಸ್ಲಾಮಾಬಾದ್ ಗೆ ತಕ್ಕ ಉತ್ತರವಾಗೋಣ. ಪ್ರತಿ ಬಾರಿಯಂತೆ ಈ ಬಾರಿ, ಇದು ಜನವರಿ 26, ಅಗಸ್ಟ್ 15ರ ಕಾಟಾಚಾರದ ಶಾಲಾ ಭಾಷಣಗಳಲ್ಲ. ಹಗುರವಾಗಿ ತೆಗೆದುಕೊಳ್ಳುವ ಧೋರಣೆ ಮುಂದೆ ಭಾರಿಯಾದೀತು.

ಟಿವಿ, ಅಂತರ್ಜಾಲ, ಮುದ್ರಣ ಮಾಧ್ಯಮಗಳೆಲ್ಲ ಒಕ್ಕೊರಲಲ್ಲಿ ನಿಂತಿವೆ. ಕೋಮುವಾದಿ, ಭಷ್ಟ, ವಂಶ ಪಾರಂಪರ್ಯ ರಾಜಕೀಯದ ಜನ ನಾಯಕರೇ, ಡೋಂಗಿ ಜಾತ್ಯತೀತ ನಾಯಕರೇ, ಡೋಂಗಿ ಮಣ್ಣಿನ ಮಕ್ಕಳೇ ದಾರಿ ಬಿಡಿ ದಾರಿ ಬಿಡಿ. ಸ್ವಯಂ ಮತದಾರ ಪ್ರಭುವೇ ದೇಶದ ನಾಯಕತ್ವ ವಹಿಸಿದ್ದಾನೆ! ಇನ್ನೊಂದು ವಿಷಯ: ಭಾರತೀಯ ಇಸ್ಲಾಂ ಧರ್ಮೀಯರಿಗೆ ಇದೊಂದು ಅಗ್ನಿ ಪರೀಕ್ಷೆ. ಹಿಂದೆಂದಿಗಿಂತ ಇಂದು ಅವರು ಹೆಚ್ಚು ಕ್ರಿಯಾತ್ಮಕವಾಗಿ ರಾಷ್ಟ್ರದ ಮುಖವಾಹಿನಿಯಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ.

ಕನ್ನಡ ನಾಡಿನಿಂದಲೂ ಈ ನಿಟ್ಟಿನಲ್ಲಿ ಹೆಚ್ಚಿನ ನಿರೀಕ್ಷೆ ಇದೆ. ಕನ್ನಡಿಗರೂ ಹಿಂದೆ ಬಿದ್ದಿಲ್ಲ. ಅಂದ್ ಹಾಗೆ ಅದ್ಯಾವುದೋ "ಬೆಂಗಳೂರು ಹಬ್ಬ" ಮಾಡೋಕೆ ಬಿಡೋಲ್ಲ ಅಂತ ನಿನ್ನೆ ಕೂಗು ಹಾಕಿದ, ಕರ್ನಾಟಕ ರಕ್ಷಣಾ ವೇದಿಕೆಯ ಸಹೋದರರು, ಉಗ್ರವಾದದ ವಿರುದ್ಧದ ರಾಷ್ಟ್ರದ ಹೋರಾಟದಲ್ಲಿ ಒಂದಾಗಿ, ಕೊನೆ ಪಕ್ಷ ವಿಧಾನಸೌಧದ ಮುಂದೆ ಮೊಂಬತ್ತಿ ಹಿಡಿದು ಮುಖ್ಯವಾಹಿನಿಯ ಜಾಗೃತಿಗೆ ಕಾರಣ ಆಗಬೇಕು ಮತ್ತು ಕನ್ನಡಿಗರ ಬದ್ಧತೆಯನ್ನು ಈಡೀ ರಾಷ್ಟ್ರದಲ್ಲಿ ಜಾಹಿರುಗೊಳಿಸಬೇಕು ಎಂಬ ವಾದ ಕೂಡ ಕೇಳಿ ಬರುತ್ತಿದೆ.

ಒಟ್ಟಿನಲ್ಲಿ ಮುಂಚಿಗಿಂತಲೂ ಸ್ಪಷ್ಟ, ಸಂಯುಕ್ತ, ಶಕ್ತಿಯುತ ಭಾರತದ ಸಾಕ್ಷಾತ್ಕಾರವಾಗಿದೆ. ಶಾಶ್ವತಗೊಳಿಸುವ ಇಚ್ಚಾಶಕ್ತಿ ಬೇಕು. ಜವಾಬ್ದಾರಿ ಖಂಡಿತ ಇದೆ. ನೆನೆಪಿಡಿ, ಇನ್ನೂ 3-4 ದಿನಗಳಲ್ಲಿ ಬೆಂಗಳೂರನ್ನು ಒಳಗೊಂಡು, ದೇಶದ ಪ್ರಮುಖ ವಿಮಾನ ನಿಲ್ದಾಣಗಳನ್ನ ಉಡಾಯಿಸುವ ಬಗ್ಗೆ ಉಗ್ರರು ರಾಜಾರೋಷವಾಗಿ ಹೇಳಿಕೊಳ್ಳುತಿದ್ದಾರೆ. ಇದೀಗ ತಾನೆ ಯುದ್ಧ ಆರಂಭವಾಗಿದೆ. ರಣರಂಗದ ನಟ್ಟ ನಡುವಿನಲ್ಲಿದ್ದೇವೆ. ಎಚ್ಚರ, ಎಚ್ಚರಿಕೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X