Zero oil cooking Recipe: ಎಣ್ಣೆ ಬಳಸದೆ ಅಡುಗೆ ಮಾಡುವುದು ಹೇಗೆ?
ಇತ್ತೀಚಿನ ದಿನಗಳಲ್ಲಿ ಕರಿದ ತಿಂಡಿಗಳು ಮಾತ್ರವಲ್ಲದೆ ಅಡುಗೆಗೂ ಅತೀ ಹೆಚ್ಚು ಎಣ್ಣೆಯನ್ನು ಬಳಕೆ ಮಾಡುತ್ತಿರುವುದು ಕಂಡು ಬರುತ್ತಿದೆ. ಇದು ಬೊಜ್ಜು ಸೇರಿದಂತೆ ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಸಾಮಾನ್ಯವಾಗಿ ನಿಮ್ಮ ಮನೆಯಲ್ಲಿ ವಯಸ್ಸಾದವರಿದ್ದರೆ ಅಥವಾ ಚಿಕ್ಕ ಮಕ್ಕಳಿದ್ದರೆ ಅವರಿಗೆ ಹೆಚ್ಚು ಅಡುಗೆ ಎಣ್ಣೆ ಬಳಸದ ಆಹಾರವನ್ನು ನೀಡಲು ವೈದ್ಯರು ಸಲಹೆ ನೀಡಿರುತ್ತಾರೆ.
ಅದೆಷ್ಟೋ ಜನಕ್ಕೆ ವೈದ್ಯರು ಸಲಹೆ ನೀಡಿದರೂ ಎಣ್ಣೆ ಇಲ್ಲದೆ ಅಡುಗೆ ತಯಾರಿ ಹೇಗೆ ಮಾಡೋದು ಅನ್ನೋ ಪ್ರಶ್ನೆ ಮೂಡಿರುತ್ತದೆ. ಹೀಗೆ ಅಡುಗೆ ಎಣ್ಣೆ ಕಡಿಮೆ ಮಾಡುವುದಿರಲಿ ಸಂಪೂರ್ಣವಾಗಿ ಎಣ್ಣೆ ಬಳಕೆ ಮಾಡದೇ ಯಾವುದಾದರೂ ಆಹಾರ ತಯಾರು ಮಾಡಬಹುದಾ ಅಂತ ಕೇಳೋರಿಗೆ ನಾವು ಬಗೆ ಬಗೆಯ ಅಡುಗೆ ರೆಸಿಪಿ ಹೇಳಿ ಕೊಡುತ್ತೇವೆ.

ಅದನ್ನು ನೀವು ಮನೆಯಲ್ಲಿ ಟ್ರೈ ಮಾಡಿ ಟೇಸ್ಟ್ ಮಾಡಿ ನಮ್ಮೊಂದಿಗೆ ನಿಮ್ಮ ಅನುಭವವನ್ನು ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ. ಹಾಗಾದರೆ ಯಾವೆಲ್ಲಾ ಅಡುಗೆಯನ್ನು ಕುಕ್ಕಿಂಗ್ ಆಯಿಲ್ ಇಲ್ಲದೆ ಮಾಡಬಹುದು ಅಂತ ಒಂದೊಂದಾಗಿ ನೋಡುತ್ತಾ ಹೋಗೋಣ. ಇವತ್ತು ನಾವು ನಿಮಗೆ ಆಲುಗಡ್ಡೆಯನ್ನು ಪಲ್ಯವನ್ನು ಅಡುಗೆ ಎಣ್ಣೆ ಬಳಕೆ ಮಾಡದೆ ಹೇಗೆ ತಯಾರಿಸಬಹುದು ಅಂತ ಹೇಳಿಕೊಡುತ್ತೇವೆ. ಇದನ್ನು ನೀವು ಚಾಪಾತಿ, ದೋಸೆ ಅಥವಾ ಅನ್ನದೊಂದಿಗೂ ಸೇವಿಸಬಹುದು.
ಆಲುಗಡ್ಡೆಯನ್ನು ಪಲ್ಯ ತಯಾರಿಸಲು ಬೇಕಾಗುವ ಪದಾರ್ಥಗಳು:
* ಆಲೂಗಡ್ಡೆ ನಾಲ್ಕು
* ಹಸಿ ಬಟಾಣಿ ಐದು ಚಮಚ
* ಈರುಳ್ಳಿ ಎರಡು
* ಜೀರಿಗೆ ಅರ್ಧ ಚಮಚ
* ಅರಿಶಿಣ ಚಿಟಿಕೆ
* ದನಿಯ ಪೌಡರ್ ಅರ್ಧ ಚಮಚ
* ರುಚಿಗೆ ತಕ್ಕಷ್ಟು ಉಪ್ಪು
* ಖಾರದ ಪುಡಿ ಎರಡು ಚಮಚ
* ಶುಂಠಿ ಅರ್ಧ ಚಮಚ
* ಬೆಳ್ಳುಳ್ಳಿ ಅರ್ಧ ಚಮಚ
* ಟೊಮ್ಯಾಟೋ ಎರಡು
* ಕೊತ್ತಂಬರಿ ಸೊಪ್ಪು ಸ್ವಲ್ಪ
ತಯಾರಿಸುವ ವಿಧಾನ:
* ಗ್ಯಾಸ್ ಕಡಿಮೆ ಉರಿಯಲ್ಲಿ ಇಟ್ಟು, ಒಂದು ಪಾತ್ರೆಯನ್ನು ಒಲೆಯ ಮೇಲೆ ಇಡಿ. ಇದಕ್ಕೆ ಎಣ್ಣೆಯನ್ನು ಹಾಕದೇ ನೇರವಾಗಿ ಸ್ವಲ್ಪ ಬಿಸಿಯಾದ ಬಳಿಕ ಜೀರಿಗೆಯನ್ನು ಹಾಕಿ ಸ್ವಲ್ಪ ಹುರಿಯಿರಿ.
* ಬಳಿಕ ಇದಕ್ಕೆ ಸಣ್ಣಕೆ ಹೆಚ್ಚಿದ ಈರುಳ್ಳಿಯನ್ನು ಹಾಕಿ ಕಡಿಮೆ ಉರಿಯಲ್ಲಿ ಹುರಿದುಕೊಳ್ಳಿ.
* ಈರುಳ್ಳಿ ಕೆಂಪಾದ ಬಳಿಕ ಅಂದರೆ ನೀರಿನಾಂಶ ಕಡಿಮೆಯಾದ ಬಳಿಕ ಇದಕ್ಕೆ ಒಂದು ಚಮಚ ಬಿಸಿ ನೀರು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ

* ತಕ್ಷಣ ಇದಕ್ಕೆ ಉಪ್ಪು, ಅರಿಶಿಣ, ದನಿಯಾ ಪೌಡರ್, ಸಣ್ಣಕೆ ಕುಟ್ಟಿದ ಶುಂಠಿ ಬೆಳ್ಳುಳ್ಳಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಇದಕ್ಕೆ ಮತ್ತೆ ಒಂದು ಚಮಚ ನೀರು ಬೆರೆಸಿ ಕಲಿಸುತ್ತಲೇ ಇರಿ.
* ಸಣ್ಣ ಉರಿಯಲ್ಲೇ ಇಟ್ಟು ಕೈಯಾಡಿಸುತ್ತಾ ಸಣ್ಣಕೆ ಹೆಚ್ಚಿದ ಟೊಮ್ಯಾಟೋ ಹಾಕಿ ಚೆನ್ನಾಗಿ ಬಾಡಿಸಿ. ಇದು ಪೇಸ್ಟ್ ಆಗುವವರೆಗೂ ಕಲಿಸುತ್ತಲೇ ಇರಿ.
* ಬಳಿಕ ಇದಕ್ಕೆ ಒಂದು ವಿಸಿಲ್ ಆಗುವವರೆಗೆ ಕುದಿಸಿ ಹಸಿ ಬಟಾಣಿ(ಹಾಗೇ ಕೂಡ ಬಳಕೆ ಮಾಡಬಹುದು) ಹಾಕಿ ಮಿಕ್ಸ್ ಮಾಡಿ.
* ನಂತರ ಬೇಯಿಸಿದ ಆಲುಗಡ್ಡೆ ಹಾಕಿ ಕದಡಿ, ಬೇಕಿದ್ದಲ್ಲಿ ಸ್ವಲ್ಪ ನೀರು ಹಾಕಿ. ಸ್ವಲ್ಪ ಹೊತ್ತಿ ಬಿಟ್ಟು ಕೊತ್ತಂಬರಿ ಸೊಪ್ಪು ಮೇಲೆ ಉದುರಿಸಿದರೆ ಬಿಸಿ ಬಿಸಿ ಆಯಿಲ್ ಫ್ರೀ ಆಲುಗಡ್ಡೆ ಪಲ್ಯ ಸವಿಯಲು ಸಿದ್ಧ.
ಪ್ರೀಯ ಓದುಗರೆ ಇದನ್ನು ನೀವು ಒಮ್ಮೆ ಮನೆಯಲ್ಲಿ ಟ್ರೈ ಮಾಡಿ. ನೀವು ಎಣ್ಣೆ ಹಾಕಿ ಮಾಡುವ ಅಡುಗೆಗೂ ಹಾಗೂ ಎಣ್ಣೆ ಬಳಸದೇ ಮಾಡುವ ಅಡುಗೆಗೂ ರುಚಿಯಲ್ಲಿ ಯಾವುದೇ ವ್ಯತ್ಯಾಸವನ್ನು ನೀವು ಕಾಣುವುದಿಲ್ಲ. ರುಚಿಯೊಂದಿಗೆ ನಿಮ್ಮ ಆರೋಗ್ಯವನ್ನೂ ನೀವು ಕಾಪಾಡಿಕೊಳ್ಳಬಹುದು. ಏನಂತಿರಾ...?












Click it and Unblock the Notifications