ವಯಸ್ಸಾದ ಮಹಿಳೆಯರು ಆರೋಗ್ಯದತ್ತ ನಿಗಾ ವಹಿಸಿ: ಯಾಕೆ ಗೊತ್ತಾ?
ಮನುಷ್ಯನಾಗಿ ಹುಟ್ಟಿದ ಮೇಲೆ ಎಲ್ಲ ಹಂತದ ಬದುಕನ್ನು ಅನುಭವಿಸುವುದು ಅನಿವಾರ್ಯವಾಗಿದೆ. ಅದರಲ್ಲೂ ಬದುಕಿನಲ್ಲಿ ಅತಿ ಹೆಚ್ಚಿನ ಬದಲಾವಣೆಯ ಹಂತಗಳನ್ನು ಕಾಣುವ ಮಹಿಳೆಯರು ವಯಸ್ಸಾಗುತ್ತಾ ಬರುತ್ತಿದ್ದಂತೆಯೇ ಆರೋಗ್ಯದತ್ತ ಹೆಚ್ಚಿನ ಕಾಳಜಿವಹಿಸಬೇಕಾಗುತ್ತದೆ. ಈ ವೇಳೆ ಆಹಾರ ಸೇವನೆಯತ್ತ ಹೆಚ್ಚು ನಿಗಾವಹಿಸಬೇಕಾಗುತ್ತದೆ. ಇಲ್ಲದೆ ಹೋದರೆ ದೇಹಕ್ಕೆ ಬೇಕಾದ ಪೋಷಕಾಂಶಗಳು ಸಿಗದೆ ಕೆಲವೊಂದು ತೊಂದರೆಗಳನ್ನು ಅನುಭವಿಸಬೇಕಾಗಿ ಬರಬಹುದು ಹೀಗಾಗಿ ವೈದ್ಯರ ಸಲಹೆಯಂತೆ ಆಹಾರ ಸೇವಿಸುವುದಲ್ಲದೆ, ಶಿಸ್ತು ಬದ್ಧ ಜೀವನಕ್ಕೆ ಆದ್ಯತೆ ನೀಡಬೇಕಾಗುತ್ತದೆ.
ಐವತ್ತರ ನಂತರ ಮಹಿಳೆಯರ ವಯಸ್ಸಿಗನುಗುಣವಾಗಿ ದೇಹದಲ್ಲಿ ಹಲವು ಬದಲಾವಣೆ ಕಾಣಿಸಿಕೊಳ್ಳುತ್ತದೆ. ಅದರಲ್ಲೂ ಋತುಬಂಧದ ನಂತರ ಸಮಸ್ಯೆಗಳು ಇದ್ದೇ ಇರುತ್ತವೆ. ಅದನ್ನು ನಿಭಾಯಿಸಿ ಮುನ್ನಡೆಯಬೇಕಾಗುತ್ತದೆ. ವೈದ್ಯರ ಸಲಹೆ ಪಡೆದು ಕಾಣಿಸಿಕೊಳ್ಳುವ ಸಮಸ್ಯೆಗೆ ಸಕಾಲದಲ್ಲಿ ಚಿಕಿತ್ಸೆ ಪಡೆಯುವುದು ಮತ್ತು ದೈನಂದಿನ ವ್ಯಾಯಾಮ, ವಾಕಿಂಗ್, ಯೋಗ ಮುಂತಾದ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕಾಗುತ್ತದೆ.

ವೈದ್ಯರ ಪ್ರಕಾರ ಋತುಬಂಧದ ನಂತರದ ಅತ್ಯಂತ ಸಾಮಾನ್ಯದ ಪರಿಸ್ಥಿತಿ ಏನೆಂದರೆ ಅದು ಆಸ್ಟಿಯೊಪೊರೋಸಿಸ್, ಇದು 50 ವರ್ಷಕ್ಕಿಂತ ಮೇಲ್ಪಟ್ಟ ಮೂರು ಮಹಿಳೆಯರಲ್ಲಿ ಒಬ್ಬರ ಮೇಲೆ ಪರಿಣಾಮ ಬೀರುತ್ತದೆ. ಈಸ್ಟ್ರೊಜೆನ್ ಮಟ್ಟದಲ್ಲಿನ ಇಳಿಕೆಯಿಂದಾಗಿ ಮೂಳೆ ನಷ್ಟ ಮತ್ತು ದ್ರವ್ಯರಾಶಿಯ ನಷ್ಟ ಉಂಟಾಗಿ, ಅವುಗಳನ್ನು ದುರ್ಬಲಗೊಳಿಸುತ್ತದೆ ಮತ್ತು ಮುರಿಯುವ ಅಪಾಯವನ್ನು ಹೆಚ್ಚಿಸುತ್ತದೆ. ಕೆಲವರಿಗೆ ಇದು 'ಮೂಕ ಸ್ಥಿತಿ'ಯಲ್ಲಿರುತ್ತದೆಯಂತೆ ಹೀಗಾಗಿ ಮೂಲೆ ಮುರಿತ ಸಂಭವಿಸುವವರೆಗೆ ಯಾವುದೇ ಲಕ್ಷಣಗಳು ಗೋಚರಿಸುವುದಿಲ್ಲವಂತೆ.
ದೇಹಕ್ಕೆ ಪೋಷಕಾಂಶಗಳು ದೊರೆಯದೆ ಹೋದಾಗ ಕೆಲವೊಮ್ಮೆ, ಎತ್ತರವು ಕಡಿಮೆಯಾಗಬಹುದು, ಇದರ ಜೊತೆಗೆ ಬೆನ್ನು ನೋವು ಅಥವಾ ಬೆನ್ನು ಬಾಗುವಿಕೆ ಸಹ ಜೊತೆಗೂಡಬಹುದು. ಆಸ್ಟಿಯೊಪೊರೋಸಿಸ್ಗೆ ಸಂಬಂಧಿಸಿದ ಗಾಯಗಳು ಅತ್ಯಂತ ಗಂಭೀರವಾಗಿರಬಹುದು ಮತ್ತು ನೋವು ಮತ್ತು ದೀರ್ಘಾವಧಿಯ ಅಂಗವೈಕಲ್ಯವನ್ನು ಉಂಟುಮಾಡಬಹುದು. ಹೀಗಾಗಿ ತಜ್ಞ ವೈದ್ಯರ ಸಲಹೆ ಪಡೆಯುವುದು ಅತ್ಯಗತ್ಯವಾಗಿರುತ್ತದೆ.
ಈ ಎಲ್ಲ ಸಮಸ್ಯೆಗೆ ಏನು ಮಾಡಬೇಕು ಎಂಬ ಪ್ರಶ್ನೆಗೆ ವೈದ್ಯರು ಕೆಲವೊಂದು ಸಲಹೆ ನೀಡುತ್ತಾರೆ ಅವರು ಹೇಳುವಂತೆ ಮೂಳೆಗಳನ್ನು ಬಲಪಡಿಸಲು, ನಿಯಮಿತವಾಗಿ ವ್ಯಾಯಾಮ ಮಾಡುವುದು, ಹಣ್ಣುಗಳು, ತರಕಾರಿಗಳು ಮತ್ತು ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಸಮೃದ್ಧವಾಗಿರುವ ಆರೋಗ್ಯಕರ ಆಹಾರವನ್ನು ಸೇವಿಸುವುದು, ಧೂಮಪಾನ ಅಥವಾ ಮದ್ಯ ಸೇವನೆ ಮಾಡುತ್ತಿದ್ದರೆ ಅದನ್ನು ನಿಲ್ಲಿಸುವುದು ಒಳ್ಳೆಯದು.

ಋತುಬಂಧದ ಕಾರಣ ಚಲನಶೀಲತೆ, ಸಮತೋಲನ ಶಕ್ತಿಯಲ್ಲಿ ಏರುಪೇರು ಕಾಣಿಸುತ್ತದೆ. ಕೆಲವೊಮ್ಮೆ ತೂಕ ಹೆಚ್ಚಳದಂತಹ ಸಮಸ್ಯೆ ಕಾಣಿಸಬಹುದು. ಮೂಳೆ ಸವೆತದಿಂದ ಮಂಡಿ ನೋವು ಕಾಣಿಸಬಹುದು. ಇದರಿಂದ ಮೆಟ್ಟಿಲುಗಳನ್ನು ಹತ್ತುವುದು ಸವಾಲ್ ಆಗುತ್ತದೆ. ಶಕ್ತಿಯು ಕಡಿಮೆಯಾಗುವುದರಿಂದ ಆಯಾಸವಾಗುತ್ತದೆ. ಇದೆಲ್ಲವನ್ನು ತಪ್ಪಿಸಲು ಮತ್ತು ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಪೋಷಕಾಂಶಯುಕ್ತ ಆಹಾರ ಸೇವಿಸಬೇಕು.
ಇನ್ನು ಕೆಲಸವನ್ನು ಹೆಚ್ಚು ಮಾಡುವುದು ತೂಕವನ್ನು ಎತ್ತುವುದು ಹೀಗೆ ಕಠಿಣ ರೀತಿಯ ಕೆಲಸ ಮಾಡುವಾಗ ಎಚ್ಚರಿಕೆ ವಹಿಸಬೇಕು. ಕೆಲವೊಮ್ಮೆಹೃದ್ರೋಗದ ಅಪಾಯವೂ ಇಲ್ಲದಿಲ್ಲ. ಈಸ್ಟ್ರೊಜೆನ್ ಕೊರತೆಯು ಕೊಲೆಸ್ಟ್ರಾಲ್ ಹೆಚ್ಚಳದಂತಹ ಸಮಸ್ಯೆಯನ್ನು ತಂದೊಡ್ಡಬಹುದು. ಜತೆಗೆ ಮೈ ಬಿಸಿಯಾಗುವುದು, ರಾತ್ರಿಯಲ್ಲಿ ಮೈ ಬೆವರುವುದು, ಅಧಿಕ ರಕ್ತದೊತ್ತಡ ಮತ್ತು ಇತರ ಹೃದಯರಕ್ತನಾಳದ ಸಂಬಂಧಿತ ಸಮಸ್ಯೆಯನ್ನು ತಂದೊಡ್ಡಬಹುದು. ಆದ್ದರಿಂದ ವಯಸ್ಸಾದಂತೆ ತಮ್ಮ ಆರೋಗ್ಯದತ್ತ ಹೆಚ್ಚಿನ ನಿಗಾವಹಿಸಬೇಕಾಗುತ್ತದೆ.












Click it and Unblock the Notifications