ಲ್ಯಾಪ್‌ಟಾಪ್ ಚಾರ್ಜರ್‌ನಲ್ಲೊಂದು ಪುಟ್ಟ ಸಿಲಿಂಡರ್ ಇದೆ! ಅದು ಏಕೆ ಮುಖ್ಯ ಗೊತ್ತಾ?ಇಲ್ಲಿದೆ ಸಂಪೂರ್ಣ ಮಾಹಿತಿ
ಈಗಿನ ಕಾಲದಲ್ಲಿ ಲ್ಯಾಪ್‌ಟಾಪ್ ಇಲ್ಲದ ಮನೆ ಬಹಳ ವಿರಳ. ಬಹುತೇಕ ಮಂದಿಯ ಕೆಲಸ ಲ್ಯಾಪ್‌ಟಾಪ್ ಮೂಲಕವೇ ನಡೆಯುವುದು. ನಿಮ್ಮ ಮನೆಯಲ್ಲಿಯೂ ಲ್ಯಾಪ್‌ಟಾಪ್ ಇದ್ದರೆ ಅಥವಾ ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡುವವರಾಗಿದ್ದರೆ ಬಹುಶಃ ನೀವು ಕೂಡಾ ಗಮನಿಸಿರಬಹುದು. ಲ್ಯಾಪ್‌ಟಾಪ್ ಚಾರ್ಜರ್‌ನಲ್ಲಿ ಒಂದು ಸಣ್ಣ, ಸಿಲಿಂಡರ್ ಇರುತ್ತದೆ. ಸಣ್ಣ ಪ್ಲಾಸ್ಟಿಕ್ ಗಡ್ಡೆಯಂತೆ ಕಾಣುವ ಈ ವಸ್ತು ಬಹಳ ಪ್ರಾಮುಖ್ಯವಾಗಿದೆ. ಇದನ್ನು ಫೆರೈಟ್ ಬೀಡ್ ಅಥವಾ ಫೆರೈಟ್ ಚಾಕ್ ಎಂದು ಕರೆಯುತ್ತಾರೆ. ಇದು ಲ್ಯಾಪ್‌ಟಾಪ್ ಸರಾಗವಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ.
ಚಾರ್ಜಿಂಗ್ ಕೇಬಲ್‌ನಲ್ಲಿರುವ ಸಿಲಿಂಡರ್ ಒಂದು ರೀತಿಯ ಕವಚವಾಗಿದ್ದು, ಇದು ಕಬ್ಬಿಣ ಆಧಾರಿತ ಸಂಯುಕ್ತವಾದ ಫೆರೈಟ್ ಎಂಬ ವಸ್ತುವನ್ನು ಹೊಂದಿರುತ್ತದೆ. ಕೇಬಲ್ ಈ ಫೆರೈಟ್ ಕೋರ್ ಮೂಲಕ ಹಾದುಹೋದಾಗ, ಅನಗತ್ಯ ವಿದ್ಯುತ್ ಶಬ್ದವನ್ನು ನಿಯಂತ್ರಿಸುತ್ತದೆ. ಇನ್ನೂ ಸರಳವಾಗಿ ಹೇಳಬೇಕೆಂದರೆ ಇದು ಫಿಲ್ಟರ್‌ನಂತೆ ಕೆಲಸ ಮಾಡುತ್ತದೆ. ಲ್ಯಾಪ್‌ಟಾಪ್ ಚಾರ್ಜರ್ ನಿರಂತರವಾಗಿ ವಿದ್ಯುತ್ ಸಂಕೇತಗಳನ್ನು ಸಾಗಿಸುತ್ತಿರುತ್ತದೆ.ಆದರೆ ಅವೆಲ್ಲವೂ ಉಪಯುಕ್ತವಲ್ಲ. ಕೆಲವು ಸಿಗ್ನಲ್‌ಗಳು ಲ್ಯಾಪ್‌ಟಾಪ್ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರುವಂತದ್ದಾಗಿರುತ್ತದೆ. ಅಲ್ಲಿಯೇ ಈ ಫೆರೈಟ್ ಬೀಡ್ ಕೆಲಸ ಶುರು ಮಾಡುತ್ತದೆ.

ಆಧುನಿಕ ಎಲೆಕ್ಟ್ರಾನಿಕ್ಸ್ ಇಲೆಕ್ಟ್ರೋಮ್ಯಾಗ್ನೆಟಿಕ್ ಇಂಟರ್‌ಫಿಯರೆನ್ಸ್ (EMI) ಅನ್ನು ಜನರೇಟ್ ಮಾಡುತ್ತದೆ. ಇದು ಅನಗತ್ಯ ಶಬ್ದವಾಗಿದ್ದು ಅದು ತಂತಿಗಳ ಉದ್ದಕ್ಕೂ ಚಲಿಸುತ್ತದೆ. ಈ ಮೂಲಕ ಸಿಗ್ನಲ್‌ಗಳಿಗೆ ಅಡ್ಡಿಪಡಿಸುವ ಸಾಧ್ಯತೆಯೂ ಇದೆ. ನಿಮ್ಮ ಸಾಧನವು ಕಾರ್ಯನಿರ್ವಹಿಸುತ್ತಿದ್ದರೂ, ಕೆಲವೊಮ್ಮೆ ನಿಧಾನವಾಗಿ ಡೇಟಾ ವರ್ಗಾವಣೆಯಾಗುವುದು, ಲ್ಯಾಪ್‌ಟಾಪ್ ಸ್ಕ್ರೀನ್ ಮಿನುಗುವಂತೆ ಕಾಣುವುದು, ಆಡಿಯೊ ಸರಿಯಾಗಿ ಕೇಳಿಸದೆ ಇರುವುದು ಮತ್ತು ಸರಿಯಾಗಿ ಚಾರ್ಜ್ ಆಗದಿರುವುದು ಮೊದಲಾದ ಸಮಸ್ಯೆಗಳನ್ನು ಉಂಟು ಮಾಡಬಹುದು. ಫೆರೈಟ್ ಬೀಡ್ ಈ ಶಬ್ದವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ಮೂಲಕ ಸ್ಪಷ್ಟ ಮತ್ತು ಹೆಚ್ಚು ಸ್ಥಿರವಾದ ಸಂಕೇತಗಳನ್ನು ರವಾನಿಸುತ್ತದೆ.
ಹೆಚ್ಚು ತಾಂತ್ರಿಕವಾಗಿ ಬಳಸದೆ, ಫೆರೈಟ್ ಬೀಡ್ ಹೆಚ್ಚಿನ ಶಬ್ದವನ್ನು ಹೀರಿಕೊಳ್ಳುತ್ತದೆ ಮತ್ತು ಅದನ್ನು ಸಣ್ಣ ಪ್ರಮಾಣದ ಶಾಖವಾಗಿ ಪರಿವರ್ತಿಸುತ್ತದೆ. ಈ ಮೂಲಕ ಅನಗತ್ಯ ಶಬ್ದ ಕೇಬಲ್‌ನ ಉದ್ದಕ್ಕೂ ಚಲಿಸುವುದನ್ನು ಮತ್ತು ನಿಮ್ಮ ಸಾಧನದೊಂದಿಗೆ ಹಸ್ತಕ್ಷೇಪ ಮಾಡುವುದನ್ನು ತಡೆಯುತ್ತದೆ. ಆದರೆ ಲ್ಯಾಪ್‌ಟಾಪ್‌ಗೆ ಅಗತ್ಯವಿರುವ ಮುಖ್ಯ ವಿದ್ಯುತ್ ಪ್ರವಾಹವನ್ನು ನಿರ್ಬಂಧಿಸುವುದಿಲ್ಲ. ಆದ್ದರಿಂದ ನಿಮ್ಮ ಸಾಧನವು ಸರಿಯಾಗಿ ಚಾರ್ಜ್ ಆಗಿ ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ.
ಲ್ಯಾಪ್‌ಟಾಪ್ ಚಾರ್ಜರ್‌ಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಇವು ಫೋನ್ ಚಾರ್ಜರ್‌ಗಳು, ಯುಎಸ್‌ಬಿ ಕೇಬಲ್‌ಗಳು, ಮಾನಿಟರ್ ಮತ್ತು ಟಿವಿ ಕೇಬಲ್‌ಗಳು, ಪ್ರಿಂಟರ್ ವೈರ್‌ಗಳು ಮತ್ತು ಆಡಿಯೊ ಉಪಕರಣಗಳ ಕೇಬಲ್‌ಗಳಲ್ಲಿಯೂ ಕಂಡುಬರುತ್ತವೆ. ಫೆರೈಟ್ ಬೀಡ್ ಇಲ್ಲದೆ ಡಿವೈಸ್ ಕೆಲಸ ಮಾಡುವುದಿಲ್ಲ ಎಂದೇನಿಲ್ಲ. ಆದರೆ, ಈ ಬೀಡ್ ಇಲ್ಲದೆ ಹೋದರೆ ಡಿವೈಸ್‌ನ ಕಾರ್ಯಕ್ಷಮತೆ ಕಡಿಮೆಯಾಗುವ ಆತಂಕ ಇರುತ್ತದೆ.
ಕೆಲವು ಆಧುನಿಕ ಕೇಬಲ್‌ಗಳನ್ನು ಇನ್‌ಬಿಲ್ಟ್ ಶೀಲ್ಡಿಂಗ್‌ನೊಂದಿಗೆ ವಿನ್ಯಾಸಗೊಳಿಸಲಾಗಿದೆ. ಆದ್ದರಿಂದ ಅವುಗಳಲ್ಲಿ ಎದುರಿಗೆ ಕಾಣಿನಿಸುವಂತೆ ಫೆರೈಟ್ ಬೀಡ್ ಇರುವುದಿಲ್ಲ. ಆದರೆ ಅನೇಕ ಸಂದರ್ಭಗಳಲ್ಲಿ, ವಿದ್ಯುತ್ ಕೇಬಲ್‌ಗಳೊಂದಿಗೆ, ಇದನ್ನು ಪರಿಣಾಮಕಾರಿಯಾಗಿ ಜೋಡಿಸಲಾಗಿರುತ್ತದೆ.














Click it and Unblock the Notifications