Success in Life: ಜೀವನದಲ್ಲಿ ನಿಮ್ಮ ಸಾಧನೆಗೆ ಅಡ್ಡಿ ಬರುವ 3 ವ್ಯಕ್ತಿಗಳು ಯಾರು?
ಪ್ರತಿಯೊಬ್ಬರ ಜೀವನ ಸುಲಭವಾಗಿಲ್ಲ. ಪ್ರತಿ ಕ್ಷಣ ಪ್ರತಿ ದಿನ ಸವಾಲಾಗಿರುತ್ತದೆ. ಹುಟ್ಟಿದ ಪ್ರತಿಯೊಬ್ಬ ಜವಬ್ದಾರಿಯುತ ವ್ಯಕ್ತಿಯ ಬದುಕು ಹೂವಿನ ಹಾಸಿಗೆಯಾಗಿರುವುದಕ್ಕಿಂತ ಮುಳ್ಳಿದ ದಾರಿಯಾಗಿರುವುದೇ ಹೆಚ್ಚು. ಒಬ್ಬ ವ್ಯಕ್ತಿ ಶ್ರಮ ವಹಿಸಿ ತಾನು ಅಂದುಕೊಂಡಂತೆ ಬದುಕುವುದು ಕಷ್ಟ. ಯಾಕೆಂದರೆ ಆತನ ಸುತ್ತಲು ಇರುವ ವಾತಾವರಣ ಸಾಧನೆಗೆ ಅಡ್ಡಿಯನ್ನುಂಟು ಮಾಡುತ್ತದೆ. ಹೀಗಾಗಿ ಶ್ರಮದಿಂದ ಮಾತ್ರ ಒಬ್ಬ ವ್ಯಕ್ತಿ ಯಾವುದಾದರು ಸಾಧನೆ ಮಾಡುತ್ತಾನೆ ಅಂದರೆ ಅದು ತಪ್ಪು ತಿಳುವಳಿಕೆ.
ಹಾಗಾದರೆ ಜೀವನದಲ್ಲಿ ಸಾಧನೆಗೆ ಅಡ್ಡಿ ಬರುವ 3 ವ್ಯಕ್ತಿಗಳು ಯಾರು? ಈ ವ್ಯಕ್ತಿಗಳನ್ನು ನಾವು ಗುರುತಿಸುವುದು ಹೇಗೆ? ಇವರಿಂದ ಎಷ್ಟು ಅಂತರ ಕಾಯ್ದುಕೊಳ್ಳಬೇಕು? ಇಂತಹ ವಿಷಯಗಳ ಬಗ್ಗೆ ತಿಳಿಯೋಣ. ಪ್ರತಿಯೊಬ್ಬರಿಗೂ ಜೀವನದಲ್ಲಿ ಒಂದು ಗುರಿ ಇರುತ್ತದೆ. ಆ ಗುರಿ ತಲುಪಲು ವ್ಯಕ್ತಿ ಸದಾ ಶ್ರಮ ಪಡುತ್ತಾನೆ. ಆದರೆ ಶ್ರಮದ ನಡುವೆಯೇ ಅನೇಕ ಸವಾಲುಗಳು ಎದುರಾಗುತ್ತವೆ. ನಂಬಿದವರು ಮೋಸ ಮಾಡುವುದು, ವೈರಿಗಳ ಪಿತೂರಿ ಅಲ್ಲದೆ ನಮ್ಮೊಳಗಿರುವ ಶತ್ರು ಕೂಡ ನಮ್ಮ ಸಾಧನೆಗೆ ಅಡ್ಡಿಯಾಗಬಹುದು. ಹಾಗಾದರೆ ಆ ಶತ್ರುಗಳು ಯಾರು?

ನಿಮ್ಮ ಸಾಧನೆಗೆ ಅಡ್ಡಿ ಬರುವ 3 ವ್ಯಕ್ತಿಗಳು ಯಾರು?
1. ನಿಜವಾದ ಶತ್ರು
ಪ್ರತಿಯೊಬ್ಬರ ಜೀವನದಲ್ಲಿ ಶತ್ರುಗಳು ಇರುವುದು ಸಹಜ. ಶತ್ರುಗಳು ಎಂದಿಗೂ ಒಳಿತನ್ನು ಬಯಸುವುದೇ ಇಲ್ಲ. ತಮಗಿಲ್ಲದ್ದು ತಮ್ಮ ಶತ್ರುಗಳಿಗೂ ಇರಬಾರದು ಎಂದು ಬಯಸುತ್ತಾರೆ. ಉದಾ: ಒಬ್ಬರ ಬಳಿ ಮನೆ, ಕಾರು, ಬೈಕ್, ಉತ್ತಮ ಉದ್ಯೋಗ ಇದ್ದರೆ ಇದನ್ನು ನೋಡಿ ಖುಷಿ ಪಡುವುದಕ್ಕಿಂತ ಅಸೂಯೆ ಪಟ್ಟು ಅದನ್ನು ಹಾಳು ಮಾಡುವುದೇ ಹೆಚ್ಚು.
ಈ ನಿಜವಾದ ಶತ್ರುಗಳು ಪ್ರತಿ ಹೆಜ್ಜೆಗೂ ಅಡೆತಡೆಗಳನ್ನು ಉಂಟು ಮಾಡುತ್ತಲೇ ಇರುತ್ತಾರೆ. ಇಂಥವರನ್ನು ಗುರುತಿಸುವುದು ಸಾಮಾನ್ಯವಾಗಿ ಕಷ್ಟವಾಗುವುದಿಲ್ಲ. ಇವರು ನೇರಾ ನೇರ ನಿಮ್ಮೊಂದಿಗೆ ಹೋರಾಡುತ್ತಾರೆ. ನಿಜವಾದ ಶತ್ರುಗಳು ನಿಮ್ಮೊಂದಿಗೆ ಇಲ್ಲದೆ ನಿಮ್ಮ ವಿರುದ್ಧ ಹೋರಾಡುತ್ತಾರೆ. ಹೀಗಾಗಿ ಇವರಿಂದ ಅಂತರ ಕಾಯ್ದುಕೊಳ್ಳುವ ಪ್ರಶ್ನೆಯೇ ಬರುವುದಿಲ್ಲ. ಇಂಥವರಿಂದ ಜಾಗರೂಕರಾಗಿರುವುದು ತುಂಬಾ ಮುಖ್ಯ.
2. ಮಿತ್ರನಂತಿರುವ ಶತ್ರು
ಪ್ರತಿಯೊಬ್ಬರು ಸ್ನೇಹ ಜೀವಿಗಳು. ಸ್ನೇಹವಿಲ್ಲದೆ ಬದುಕುವುದು ತುಂಬಾ ಕಷ್ಟ. ಗೆಳೆತನ ನಮ್ಮನ್ನು ಕಷ್ಟದ ಸಂದರ್ಭದಲ್ಲಿ ಕೈಹಿಡಿದು ಕಾಪಾಡುತ್ತದೆ. ಆದರೆ ಕೆಲ ಬಾರಿ ನಮಗೆ ನಮ್ಮೊಂದಿಗೆ ಇರುವ ಶತ್ರುಗಳನ್ನು ಗುರುತಿಸುವುದು ತುಂಬಾ ಕಷ್ಟ. ಅವರಿಂದಾಗುವ ಸಮಸ್ಯೆಗಳನ್ನು ಪತ್ತೆ ಹಚ್ಚಿ ಅವರಿಂದ ಅಂತರ ಕಾಯ್ದುಕೊಳ್ಳುವ ಸಮಯಕ್ಕಾಗಲೇ ನಾವು ಸಾಕಷ್ಟು ಕಳೆದುಕೊಂಡು ಬಿಟ್ಟಿರುತ್ತೇವೆ.

ಸಾಮಾನ್ಯವಾಗಿ ನಮ್ಮೊಂದಿಗಿರುವ ಶತ್ರುಗಳು ನಮ್ಮೊಂದಿಗೆ ತುಂಬಾ ಚೆನ್ನಾಗಿರುವಂತೆ ವರ್ತಿಸುತ್ತಾರೆ. ಹೀಗಾಗಿ ಅವರನ್ನು ಗುರುತಿಸುವುದು ತುಂಬಾ ಕಷ್ಟ. ಅವರಿಂದ ಸಮಸ್ಯೆಗಳಾಗುತ್ತಿದ್ದರು ಅದು ನಮ್ಮ ಗಮನಕ್ಕೆ ಬರುವುದೇ ಇಲ್ಲ. ಆ ಸಮಸ್ಯೆಗಳ ನೋವನ್ನು ನಾವು ಅವರ ಕಣ್ಣು ಮುಂದೆ ಅನುಭವಿಸುತ್ತಿರುತ್ತೇವೆ. ಉದಾ: ನಿಮ್ಮೊಂದಿಗೆ ಇದ್ದು ನಿಮ್ಮ ಬಗ್ಗೆ ಕೆಟ್ಟ ಪ್ರಚಾರ ಮಾಡುವುದು, ನಿಮಗೆ ಗೊತ್ತಿಲ್ಲದಂತೆ ಶತ್ರುಗಳನ್ನು ಹೆಚ್ಚಿಸುವುದು, ನಿಮ್ಮ ವಿರುದ್ಧದ ತಂಡವನ್ನು ಪ್ರಚೋದಿಸುವುದು, ನಿಮ್ಮ ಬಗ್ಗೆ ಕುಟುಂಬದಲ್ಲಿ ಕೆಟ್ಟ ಭಾವನೆ ಮೂಡಿಸುವುದು.
ಹೀಗೆ ಹೇಳುತ್ತಾ ಹೋದರೆ ನಿಜವಾದ ಶತ್ರುಗಳಿಗಿಂತ ನಮ್ಮೊಂದಿಗಿರುವ ಶತ್ರುಗಳೇ ನಮಗೆ ಹೆಚ್ಚು ಸವಾಲಾಗಿರುತ್ತಾರೆ. ಹೀಗಾಗಿ ಇಂಥವರಿಂದ ಜಾಗರೂಕರಾಗಿರುವುದು ತುಂಬಾ ಮುಖ್ಯ. ಮೂಲ ಗೊತ್ತಿಲ್ಲದೆ ನಿಮಗೆ ಸಮಸ್ಯೆಗಳಾಗುತ್ತಿದ್ದರೆ ಅದನ್ನು ಪತ್ತೆ ಮಾಡಿ. ಕೆಲ ಬಾರಿ ನಿಮಗೇ ಗೊತ್ತಿಲ್ಲದಂತೆ ನಿಮ್ಮೊಂದಿಗೆ ಶತ್ರುಗಳು ನಿಮ್ಮ ಬಗ್ಗೆ ಪಿತೂರಿ ಮಾಡುತ್ತಿರಬಹುದು. ನಿಮ್ಮೊಂದಿಗೆ ಇದ್ದು ನಿಮ್ಮ ಏಳಿಗೆಗೆ ಅಡ್ಡಿಯಾಗುತ್ತಿರಬಹುದು. ಅದನ್ನು ಕಂಡು ಹಿಡಿದು ಅವರಿಂದ ದೂರ ಇರಿ.
3. ನಮ್ಮೊಳಗಿರುವ ಶತ್ರು
ನಿಜವಾದ ಶತ್ರು, ಮಿತ್ರನಂತಿರುವ ಶತ್ರುಗಳು ಕಣ್ಣಿಗೆ ಕಾಣುತ್ತಾರೆ. ಆದರೆ ನಮ್ಮೊಳಗಿರುವ ಶತ್ರು ನಮಗೆ ಕಾಣಿಸುವುದೇ ಇಲ್ಲ. ಸಾಮಾನ್ಯವಾಗಿ ನಿಮಗೆ ಇಂಥಹ ಅನುಭವ ಆಗಿರಬಹುದು- ಉದಾ: ಸವಾಲುಗಳನ್ನು ಎದುರಿಸಲು ಹಿಂಜರಿಕೆ, ಒಳ್ಳೆಯದನ್ನು ಮಾಡಲು ಬೇಡ ಎನ್ನುವ ಭಾವನೆ, ಯಾವುದೇ ಹೊಸ ಹೆಜ್ಜೆ ಇಡಲು ಭಯ, ಮೋಸ ಹೋಗುವ ಭೀತಿ, ಹಾಳಾಗುವ ಅಂಜಿಕೆ ಇತ್ಯಾದಿ.
ಇದು ಪ್ರತಿಯೊಬ್ಬರಿಗೂ ಒಂದಲ್ಲಾ ಒಂದು ಸಂದರ್ಭದಲ್ಲಿ ಅನಿಸಿರುತ್ತದೆ. ಆದರೆ ನಂತರ ಇದರ ಬಗ್ಗೆ ನೀವು ಪಶ್ಚಾತಾಪ ಪಟ್ಟಿರಬಹುದು. ಹೀಗೆ ನೀವು ಏನಾದರು ಮಾಡಲು ಹಿಂಜರಿದಿದ್ದರೆ ಅದನ್ನು ನೀವು ಕಳೆದುಕೊಂಡ ಅನುಭವವಾಗಿದ್ದರೆ ಅದು ನಿಮ್ಮೊಳಗಿರುವ ಶತ್ರು.
ಹೌದು... ಯಾವುದೇ ಕಾರ್ಯಗಳನ್ನು ಮಾಡಲು ನಿಮ್ಮೊಳಗೆ ಹಿಂಜರಿಗೆ ಭಯ ಭೀತಿ ಇದ್ದರೆ ಅದು ನಿಮ್ಮೊಳಗಿರುವ ನಿಮ್ಮ ಶತ್ರು. ಅದರಿಂದ ನೀವು ದೂರವಾಗಲು ಸವಾಲುಗಳನ್ನು ಸ್ವೀಕರಿಸುವುದನ್ನು ಕಲಿಯಬೇಕು. ಮುನ್ನುಗ್ಗುವುದನ್ನು ಧೈರ್ಯದಿಂದ ಎದುರಿಸುವುದನ್ನು ಅನುಸರಿಸಬೇಕು. ಆಗ ಮಾತ್ರ ನಿಮ್ಮನ್ನು ನೀವು ಶತ್ರುಗಳಿಂದ ರಕ್ಷಿಸಿಕೊಳ್ಳಲು ಸಾಧ್ಯವಾಗುತ್ತದೆ. ನಿಮ್ಮ ಸಾಧನೆಗೆ ಶತ್ರುಗಳ ಪ್ರಭಾವ ಇಲ್ಲದೆ ಮುನ್ನುಗ್ಗಲು ಸಾಧ್ಯವಾಗುತ್ತದೆ.












Click it and Unblock the Notifications