ನಮಗೆ ಕಾಣದ ‘ಆ’ ಮೂರನೇ ಕಣ್ಣು ಯಾವುದು? ನಮ್ಮ ಒಳಗಣ್ಣು ತೆರೆಯುವುದು ಯಾವಾಗ?
ನಮಗೆಲ್ಲರಿಗೂ ಇರುವುದು ಎರಡೇ ಕಣ್ಣಾದರೂ ಆ ಮೂರನೇ ಕಣ್ಣಿನ ಬಗ್ಗೆ ಜನ ಆಗಾಗ್ಗೆ ಮಾತನಾಡುತ್ತಿರುತ್ತಾರೆ. ಹೀಗಾಗಿ ಆ ಮೂರನೇ ಕಣ್ಣು ಯಾವುದು ಎಂಬುದು ಎಲ್ಲರಲ್ಲಿರುವ ಕುತೂಹಲವಾಗಿದೆ. ಆದರೂ ನಾವೆಲ್ಲರೂ ನಮ್ಮ ಎರಡು ಕಣ್ಣುಗಳಾಚೆಗೂ ಮೂರನೇ ಕಣ್ಣಿನಿಂದ ನೋಡುವ ಪ್ರಮೇಯಗಳಂತು ಜೀವಿತಾವಧಿಯಲ್ಲಿ ಒಮ್ಮೆಯಾದರೂ ಬಂದೇ ಬರುತ್ತದೆ.
ವೈದ್ಯಕೀಯ ವಿಜ್ಞಾನದಲ್ಲಿ ನಮ್ಮ ದೇಹದಲ್ಲಿ ಮೂರನೇ ಕಣ್ಣು ಇಲ್ಲದಿರಬಹುದು ಆದರೆ ಆಧ್ಯಾತ್ಮಿಕ ಜೀವನದಲ್ಲಿ ಪ್ರತಿಯೊಬ್ಬರಿಗೂ ಮೂರನೇ ಕಣ್ಣಿರುವುದು ಗೋಚರಿಸುತ್ತದೆ. ಇಂತಹದೊಂದು ಕಣ್ಣು ತೆರೆದಾಗಲೇ ನಾವು ನಾವಾಗಿ, ಒಳ್ಳೆಯ ಮನುಷ್ಯನಾಗಿ ಬದುಕಲು ಸಾಧ್ಯವಾಗುತ್ತಿರುವುದು ಎಂದರೆ ಅಚ್ಚರಿಯಾಗಬಹುದು. ಆದರೆ ಇದು ನಿಜವಾಗಿದೆ. ಮೂರನೇ ಕಣ್ಣಿನ ಬಗ್ಗೆ ಮಾತನಾಡಿದರೆ ಜನ ಹುಚ್ಚ ಎನ್ನಬಹುದು. ಆದರೆ ಪ್ರತಿಯೊಬ್ಬರಲ್ಲೂ ಮೂರನೇ ಕಣ್ಣು ಇದ್ದೇ ಇರುತ್ತದೆ. ಅದು ಬೇರೆ ಯಾವುದೂ ಅಲ್ಲದ ನಮ್ಮೊಳಗಿನ ಒಳಗಣ್ಣಾಗಿರುತ್ತದೆ.

ಇದರಲ್ಲಿ ಜಗತ್ತನ್ನು ನೋಡಲು ಸಾಧ್ಯವಾಗದೆ ಇರಬಹುದಾದರೂ ಪಾಪ ಪುಣ್ಯ, ನ್ಯಾಯ, ಧರ್ಮ, ಕರ್ಮವನ್ನು ತಿಳಿಯಲು ಸಾಧ್ಯವಾಗುತ್ತದೆ. ಕಣ್ಣು ಇರುವುದು ಕೇವಲ ಸೌಂದರ್ಯ ಸವಿಯೋಕೆ ಅಲ್ಲ. ಅದರಾಚೆಗಿನ ಭವ್ಯತೆಯನ್ನು ನೋಡೋದಕ್ಕೆ. ಮೇಲ್ನೋಟಕ್ಕೆ ಕಂಡಿದೆಲ್ಲವೂ ಸತ್ಯ ಎಂದು ನಂಬಲಾಗುವುದಿಲ್ಲ. ಅದರಾಚೆಗೆ ಇನ್ನೇನೋ ನಿಗೂಢತೆ ಅಡಗಿರುತ್ತದೆ. ಅದಕ್ಕಾಗಿ ಹಿರಿಯರು ಕಣ್ಣಾರೆ ಕಂಡರೂ ಪರಾಂಬರಿಸಿ ನೋಡು ಎಂದಿರುವುದು.
ಮೇಲ್ನೋಟಕ್ಕೆ ಕಾಣುವುದೇ ಸತ್ಯವಲ್ಲ
ನಾವು ಮೇಲ್ನೋಟಕ್ಕೆ ಏನು ಕಾಣುತ್ತದೆಯೋ ಅದನ್ನೇ ಸತ್ಯ ಎಂದು ನಂಬುತ್ತೇವೆ. ಆದ್ದರಿಂದಲೇ ಕೆಲವರ ಬಗೆಗೆ ಏನಾದರೂ ವಿಚಾರಗಳು ಹೊರಬಂದಾಗ ಅಚ್ಚರಿಪಡುತ್ತೇವೆ. ಇವತ್ತು ಪರದೆಯಾಚೆಗಿನ ಚಟುವಟಿಕೆಗಳೇ ಜಾಸ್ತಿ. ನಮಗೆ ಒಬ್ಬ ವ್ಯಕ್ತಿಯ ಒಂದು ಮುಖ ಮಾತ್ರ ಕಾಣುತ್ತಿದೆ. ಮತ್ತೊಂದು ಮುಖ ಕಾಣುತ್ತಿಲ್ಲ. ಹೀಗಾಗಿ ನೋಡಿದ್ದಕ್ಕಿಂತ ಹೆಚ್ಚಾಗಿ ಹೇಳಿದ್ದನ್ನೇ ನಿಜವೆಂದು ನಂಬುವ ತೀರ್ಮಾನಕ್ಕೆ ಬಂದು ಬಿಟ್ಟಿದ್ದೇವೆ. ಪರಾಂಬರಿಸಿ ನೋಡುವ ಸಂಯಮ ಮತ್ತು ಸಮಯ ಇರಡೂ ನಮಗಿಲ್ಲವಾಗಿದೆ.

ಇವತ್ತು ಕಣ್ಣಿನಿಂದ ಒಳ್ಳೆಯದನ್ನು ನೋಡೋದಕ್ಕಿಂತ ಹೆಚ್ಚಾಗಿ ಕೆಟ್ಟದನ್ನೇ ನೋಡುತ್ತಿದ್ದೇವೆ. ಮತ್ತು ಅದಕ್ಕೆ ಬಹು ಬೇಗ ಹೊಂದಿಕೊಳ್ಳುತ್ತಿದ್ದೇವೆ. ನಮ್ಮ ಬದುಕು ನಮಗೆ ಎನ್ನುವ ಮಟ್ಟಕ್ಕೂ ಬಂದು ನಿಂತಿದ್ದೇವೆ. ಕೆಟ್ಟದನ್ನು ನೋಡಿಯೂ ನೋಡದಂತೆ ಸಾಗುವ ಪ್ರಯತ್ನ ಮಾಡಬೇಕು ಇದು ನಿಜಕ್ಕೂ ಒಳ್ಳೆಯದು. ಕೆಟ್ಟವರೊಂದಿಗೆ ಒಳ್ಳೆಯವರಾಗಿಯೇ ಉಳಿಯುವುದು ಸುಲಭವಲ್ಲ. ಆದರೂ ಕೆಟ್ಟವರಿಗೆ ಒಂದಷ್ಟು ಒಳ್ಳೆತನವನ್ನು ತೋರಿಸಿ ಅವರನ್ನು ತಿದ್ದುವ ಕೆಲಸ ಮಾಡಬೇಕು. ಕೆಟ್ಟವರೊಂದಿಗೆ ಇದ್ದು ತಾವು ಕೆಟ್ಟವರಾಗದೆ ಉಳಿದವರು ಎಷ್ಟೋ ಮಂದಿಯಿದ್ದಾರೆ.
ಯಾವಾಗ ನಮ್ಮ ಒಳಗಣ್ಣು ತೆರೆಯುತ್ತದೆ?
ಹಿರಿಯರು ಕೆಟ್ಟವರಿಂದ ದೂರ ಇರಿ ಎಂದು ಹೇಳಿದ್ದಾರೆ. ಇದು ನಿಜಕ್ಕೂ ಒಳ್ಳೆಯದೇ. ಏಕೆಂದರೆ ಕೆಟ್ಟವರ ನಡುವೆ ಇದ್ದರೆ ನಾವು ಕೂಡ ಸಮಾಜದ ಕಣ್ಣಿಗೆ ಕೆಟ್ಟವರಾಗಿಯೇ ಕಾಣುತ್ತೇವೆ. ಒಮ್ಮೆ ನಮ್ಮ ಮೇಲೆ ಅಪವಾದ ಬಂದರೆ ಮತ್ತೆ ಅದನ್ನು ಹೋಗಲಾಡಿಸುವುದು ಸುಲಭದ ಕೆಲಸವಲ್ಲ. ಒಂದು ಕ್ಷಣ ಕಣ್ಣುಮುಚ್ಚಿ ನೋಡು ನಮ್ಮ ಮುಂದೆ ಏನಿದೆ ಏನೂ ಇಲ್ಲ. ಎಲ್ಲವೂ ಕತ್ತಲೇ ಆ ಕತ್ತಲನ್ನು ಹೋಗಲಾಡಿಸಬೇಕಾದರೆ ನಾವು ಕಣ್ಣು ತೆರೆಯಬೇಕು. ಹೊರಕಣ್ಣು ಮುಚ್ಚಿದಾಗ ಮಾತ್ರ ಒಳಗಣ್ಣು ಕಾಣುತ್ತದೆ. ಇದು ಮನುಷ್ಯ ಜೀವನ ಇಷ್ಟೇನಾ ಎಂದು ಪ್ರಶ್ನಿಸುತ್ತದೆ. ನಮ್ಮ ಒಳಗಿನ ಕಣ್ಣು ಕಾಮಾದಿ ಅರಿಷಡ್ವರ್ಗಗಳಿಂದ ತುಂಬಿಕೊಂಡಿರುವುದರಿಂದ ಅದನ್ನು ಆಳವಾಗಿ ನಾವು ನೋಡುವುದಿಲ್ಲ.
ಒಂದೆಡೆ ವಿದ್ಯಾವಾಚಸ್ಪತಿ ದಾಸ ಸಾಹಿತ್ಯ ಹರಿಕಾರ ಡಾ.ಅರಳುಮಲ್ಲಿಗೆ ಪಾರ್ಥಸಾರಥಿಯವರು ಹೇಳುತ್ತಾರೆ. ನಮ್ಮೊಳಗೆ ಕಣ್ಣಿದೆ ಎಂದು ಗೊತ್ತಾಗಬೇಕಾದರೆ ಹೊರಗಣ್ಣು ಮುಚ್ಚಬೇಕು. ಒಳಗಣ್ಣುಗಳನ್ನು ತೆರೆಯಬೇಕು. ಒಳಗಣ್ಣು ತೆರೆದರೆ ಅಲ್ಲಿ ಚಿಮ್ಮುತ್ತಿರುವ ಚಿರಂತನ ತೇಜಸ್ಸಿನ ಅಮೃತದರ್ಶನವಾಗುತ್ತದೆ. ಅಮೃತಪಾನ ಭಾಗ್ಯವನ್ನು ಪಡೆಯುತ್ತೇವೆ. ಚಿರಂಜೀವಿಗಳಾಗುತ್ತೇವೆ. ಒಮ್ಮೆ ಒಳಗಣ್ಣು ತೆರೆಯಿತೆಂದರೆ ಮತ್ತೆ ಹೊರಗಣ್ಣು ತೆರೆಯುವುದಿಲ್ಲ.
ಸದಾ ಜಾಗೃತವಾಗಿಡುವ ಒಳಗಣ್ಣು
ಈ ಮಾತುಗಳು ಎಷ್ಟು ಸತ್ಯವಲ್ಲವೆ? ನಮ್ಮ ಮೂರನೇ ಕಣ್ಣಾದ ಆ ಒಳಗಣ್ಣನ್ನು ತೆರೆಯದೆ ಹೋದರೆ ಖಂಡಿತಾ ನಾವು ದಯಾಮಯಿಗಳಾಗಲು, ಉಪಕಾರಿಗಳಾಗಲು, ಒಳ್ಳೆಯ ಕೆಲಸ ಮಾಡಲು, ಹೀಗೆ ಒಬ್ಬ ಒಳ್ಳೆಯ ಮನುಷ್ಯರಾಗಲು ಸಾಧ್ಯವೇ ಇಲ್ಲ. ಹೀಗಾಗಿಯೇ ದೇವರು ನಮಗೆ ಗೊತ್ತಿಲ್ಲದಂತೆ ಒಳಗಣ್ಣನ್ನು ನೀಡಿದ್ದಾನೆ. ಅದು ದುಃಖಕ್ಕೆ ಮಿಡಿಯುತ್ತದೆ, ಕಷ್ಟಕ್ಕೆ ಸ್ಪಂದಿಸುತ್ತದೆ. ಅದಕ್ಕಿಂತ ಹೆಚ್ಚಾಗಿ ಸದಾ ಜಾಗೃತಗೊಳಿಸುತ್ತಾ ನಮ್ಮೆಲ್ಲರನ್ನು ಒಳ್ಳೆಯ ಮನುಷ್ಯರನ್ನಾಗಿ ಇಟ್ಟಿರುತ್ತದೆ.












Click it and Unblock the Notifications