Weight Loss: ನೆಮ್ಮದಿ ಕೆಡಿಸುವ ತೂಕವನ್ನು ಇಳಿಸಲು ಏನೇನು ಮಾಡಬೇಕು?
ಇವತ್ತು ನಮ್ಮಲ್ಲಿ ಹೆಚ್ಚಿನ ಜನ ಹೆಚ್ಚುತ್ತಿರುವ ದೇಹದ ತೂಕದ ಬಗ್ಗೆ ತಲೆಕೆಡಿಸಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲದೆ ಹೆಚ್ಚಿದ ತೂಕವನ್ನು ಇಳಿಸಲು ನಾನಾ ಕಸರತ್ತು ಮಾಡುತ್ತಿದ್ದಾರೆ. ಆದರೂ ಹೆಚ್ಚಿನವರಿಗೆ ವಯಸ್ಸಿಗೆ, ಎತ್ತರಕ್ಕೆ ತಕ್ಕಂತೆ ನಮ್ಮ ದೇಹದ ತೂಕವನ್ನು ಕಾಪಾಡಿಕೊಳ್ಳುವುದು ಸುಲಭವಾಗಿ ಉಳಿದಿಲ್ಲ ಹೀಗಾಗಿ ಕೆಲವರು ವ್ಯಾಯಾಮ, ವಾಕಿಂಗ್ ಜಿಮ್ ಹೀಗೆ ಏನೇನೋ ಕಸರತ್ತುಗಳನ್ನು ಮಾಡಲೇ ಬೇಕಾದ ಅನಿವಾರ್ಯತೆ ಬಂದೊದಗಿದೆ.
ಇವತ್ತು ನಮ್ಮ ತೂಕ ಹೆಚ್ಚಾಗಲು ಕಾರಣವೇನು ಎಂಬ ಪ್ರಶ್ನೆಗೆ ಶಿಸ್ತು ಇಲ್ಲದೆ ಆಹಾರ ಸೇವನೆ ಎಂದು ಥಟ್ ಅಂಥ ಹೇಳಿ ಬಿಡಬಹುದು. ಕೆಲವರು ದೈಹಿಕ ಶ್ರಮದ ಕೆಲಸ ಮಾಡುವುದರಿಂದ ದೇಹಕ್ಕೆ ವ್ಯಾಯಾಮ ಆಗುವುದರಿಂದ ಅವರ ತೂಕ ಹೆಚ್ಚಾಗುವುದಿಲ್ಲ. ಆದರೆ ಒಂದೆಡೆ ಕುಳಿತು ಕೆಲಸ ಮಾಡುವವರಲ್ಲಿ ಈ ಸಮಸ್ಯೆ ಹೆಚ್ಚಾಗಿದೆ. ಅವರಿಗೆ ವ್ಯಾಯಾಮ ಸಿಗದ ಕಾರಣದಿಂದ ದೇಹದ ತೂಕ ಹೆಚ್ಚಾಗಿ ಹಲವು ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತಿದೆ.

ಆಹಾರಕ್ರಮದಲ್ಲಿ ಶಿಸ್ತು, ನಿಯಮಿತ ವ್ಯಾಯಾಮ ತೂಕ ಇಳಿಸಲು ಸಹಕಾರಿ ಆಗುತ್ತದೆ. ಇನ್ನು ವೈದ್ಯರು ಹೇಳುವ ಆಹಾರ ಕ್ರಮಗಳಂತೆ ಎಣ್ಣೆ, ಬೆಣ್ಣೆ, ಜಿಡ್ಡಿನ ಪದಾರ್ಥಗಳಷ್ಟೇ ಅಲ್ಲದೆ ಅಗತ್ಯಕ್ಕಿಂತ ಹೆಚ್ಚು ಸೇವಿಸಿದ ಕಾರ್ಬೋಹೈಡ್ರೇಟ್ಗಳು, ಪ್ರೋಟೀನ್ಗಳು ದೇಹದ ತೂಕವನ್ನು ಹೆಚ್ಚಿಸುವುದರಿಂದ ಅವುಗಳನ್ನು ದೂರವಿಡುವುದು ಬಹುಮುಖ್ಯವಾಗುತ್ತದೆ. ಇದರ ಜತೆಗೆ ವೈದ್ಯರು ಹೇಳುವ ಸಲಹೆ ಮತ್ತು ಆಹಾರ ಕ್ರಮಗಳನ್ನು ನಿತ್ಯದ ಬದುಕಿನಲ್ಲಿ ಅಳವಡಿಸಿಕೊಳ್ಳುವ ಪ್ರಯತ್ನ ಮಾಡಬೇಕು. ಇವತ್ತು ಮಾಡಿ ನಾಳೆ ಬಿಟ್ಟು ಬಿಟ್ಟರೆ ಅದು ಇನ್ನಷ್ಟು ಅಪಾಯಕಾರಿಯಾಗಲಿದೆ.
ಊಟ ಬಿಟ್ಟರೆ ತೂಕ ಕಡಿಮೆಯಾಗುತ್ತಾ?
ಕೆಲವರಲ್ಲಿ ಮಧ್ಯೆ, ಮಧ್ಯೆ ಊಟ ಬಿಟ್ಟರೆ ಸಣ್ಣಗಾಗಬಹುದು ಎಂಬ ತಪ್ಪುಕಲ್ಪನೆಯಿದೆ. ಅದರಿಂದ ಪ್ರಯೋಜನವಿಲ್ಲ. ಕಾರಣ ಮತ್ತೊಂದು ಹೊತ್ತು ಹೆಚ್ಚು ಊಟ ಸೇವಿಸುವಂತಾಗುತ್ತದೆ. ಹಾಗಾಗಿ ಊಟವನ್ನು ತಪ್ಪಿಸದೆ ಪ್ರಮಾಣವನ್ನು ಕಡಿಮೆಗೊಳಿಸಬೇಕು. ಮಧ್ಯೆ ಮಧ್ಯೆ ಕುರುಕು ತಿಂಡಿಗಳನ್ನು ತಿನ್ನುವ ಅಭ್ಯಾಸ ಕಡಿಮೆ ಮಾಡಬೇಕು ಎನ್ನುವುದಕ್ಕಿಂತಲೂ ಬಿಟ್ಟು ಬಿಡಬೇಕು. ಬೆಳಗ್ಗಿನ ಉಪಹಾರ ಸೇವನೆ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು. ಆದ್ದರಿಂದ ಅದನ್ನು ತಪ್ಪಿಸಬಾರದು. ರಾತ್ರಿ ವೇಳೆ ಊಟವಾದ ತಕ್ಷಣವೇ ಮಲಗುವುದು ಒಳ್ಳೆಯ ಅಭ್ಯಾಸವಲ್ಲ.
ಒಂದಷ್ಟು ಹೊತ್ತು ಅಡ್ಡಾಡಿ ಬಳಿಕ ಮಲಗುವುದು ಒಳ್ಳೆಯದು. ಟಿವಿ ನೋಡುತ್ತಾ, ಪುಸ್ತಕ ಓದುತ್ತಾ ಊಟ ಮಾಡುವ ಅಭ್ಯಾಸ ರೂಢಿಸಿಕೊಂಡಿದ್ದರೆ ಅದನ್ನು ಬಿಟ್ಟುಬಿಡುವುದು ಒಳಿತು. ನಿಧಾನವಾಗಿ ಚೆನ್ನಾಗಿ ಅಗಿದು ತಿನ್ನುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಗಬಗಬನೆ ತಿಂದು ಎದ್ದು ಹೋಗುವ ಅಭ್ಯಾಸವಿದ್ದರೆ ಅದಕ್ಕೆ ಕಡಿವಾಣ ಹಾಕಲೇ ಬೇಕಾಗುತ್ತದೆ. ಕೊಬ್ಬಿನ ಅಂಶವನ್ನು ಸಂಪೂರ್ಣ ಕಡಿಮೆ ಮಾಡದೆ ಸಮತೋಲನೆ ಕಾಯ್ದುಕೊಳ್ಳಬೇಕು, ಸಕ್ಕರೆ ಪ್ರಮಾಣ ಕಡಿಮೆಯಿದ್ದಷ್ಟು ಒಳಿತು. ಕೃತಕ, ಸಂಸ್ಕರಿಸಿದ, ಬೇಕರಿಯ ಪದಾರ್ಥಗಳು, ಐಸ್ಕ್ರೀಂ, ಫಿಜ್ಹಾ, ಬರ್ಗರ್ನಂತಹ ತಿನಿಸುಗಳಿಂದ ಆದಷ್ಟು ದೂರವಿರಬೇಕು. ಸೇವಿಸದಿದ್ದರೆ ಇನ್ನು ಒಳ್ಳೆಯದು.

ಏನನ್ನು ಸೇವಿಸಬೇಕು ಮತ್ತು ಸೇವಿಸಬಾರದು
ಕೊಬ್ಬರಿ, ಎಳ್ಳು, ಕಡ್ಲೆಕಾಯಿ, ಗೋಡಂಬಿ, ಬಾದಾಮಿ ಮೊದಲಾದ ಡ್ರೈಫ್ರೂಟ್ಸ್ ಸೇವನೆ ಕಡಿಮೆ ಮಾಡಬೇಕು. ತುಪ್ಪ, ಚೀಸ್, ಪನ್ನೀರ್ ಸೇವಿಸದೆ ಕೆನೆ ತೆಗೆದಹಾಲು, ಕಡಿದ ಮಜ್ಜಿಗೆ ಸೇವಿಸಬೇಕು. ಕೊಬ್ಬಿನ ಅಂಶವಿರುವ ಮಾಂಸ ಸೇವನೆ ಕಡಿಮೆ ಮಾಡಿದಷ್ಟು ಉತ್ತಮ. ಉಪ್ಪಿನ ಅಂಶ ಹೆಚ್ಚಿರುವ ಉಪ್ಪಿನ ಕಾಯಿ, ಸಂಡಿಗೆ, ಹಪ್ಪಳ ಮೊದಲಾದವುಗಳನ್ನು ದೂರವಿಡಬೇಕು. ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು ವರ್ಜಿಸಿ ಹಬೆಯಲ್ಲಿ ಬೇಯಿಸಿದ ಪದಾರ್ಥಗಳನ್ನು ಸೇವಿಸುವುದನ್ನು ರೂಢಿಸಿಕೊಳ್ಳುವುದು ಒಳ್ಳೆಯದು. ಹಣ್ಣಿನ ಜ್ಯೂಸ್ ಬದಲು ಹಣ್ಣನ್ನೇ ಸೇವಿಸಬೇಕು.
ದಿನಕ್ಕೆ ಎಂಟರಿಂದ ಹತ್ತು ಲೋಟ ನೀರು ಸೇವಿಸಲೇ ಬೇಕು. ಸೇವಿಸುವ ಆಹಾರದ ಪ್ರಮಾಣ ಕಡಿಮೆ ಮಾಡಬೇಕಾದರೆ ಊಟಕ್ಕೆ ಮುಂಚಿತವಾಗಿ ಒಂದು ಲೋಟ ನೀರು ಕುಡಿದು ಮತ್ತೆ ಊಟ ಮಾಡಬೇಕು. ಕೊಬ್ಬಿನ ಅಂಶ ಕಡಿಮೆ ಇರುವ, ನಾರಿನ ಅಂಶ ಹೆಚ್ಚಿರುವ ಆಹಾರವನ್ನು ಸೇವಿಸುವುದು, ಮೊಳಕೆ ಕಟ್ಟಿದ ಕಾಳುಗಳು, ಸೊಪ್ಪು ತರಕಾರಿಗಳು, ಹಣ್ಣುಗಳ ಸೇವನೆಗೆ ಅದ್ಯತೆ ನೀಡಬೇಕು. ದೇಹದ ತೂಕವನ್ನು ಒಮ್ಮೆಗೆ ಇಳಿಸಲು ಯಾವುದೇ ಔಷಧಿಯಿಲ್ಲ. ಆದ್ದರಿಂದ ನಕಲಿ ಔಷಧಿಗಳಿಗೆ ಮೋಸ ಹೋಗುವುದಕ್ಕಿಂತ ವ್ಯಾಯಾಮ, ಕ್ರಮಬದ್ಧ ಆಹಾರ ಸೇವನೆ ಮೂಲಕ ದೇಹದ ತೂಕ ಹೆಚ್ಚಾಗದಂತೆ ನೋಡಿಕೊಂಡರೆ ತುಂಬಾ ಒಳ್ಳೆಯದು.












Click it and Unblock the Notifications