Peaceful Life: ಶಾಂತಿಯುತ ಬದುಕು ನಮ್ಮದಾಗಲು ಏನು ಮಾಡಬೇಕು?
ಭೂಮಿಯ ಮೇಲೆ ಹುಟ್ಟಿದ ಪ್ರತಿಯೊಂದು ಜೀವಿಯೂ ಶಾಂತಿಯನ್ನು ಬಯಸುತ್ತದೆ. ಅದಕ್ಕಾಗಿ ದಿನನಿತ್ಯವೂ ಹೋರಾಡುತ್ತದೆ. ಹೀಗಿರುವಾಗ ಮನುಷ್ಯರಾದ ನಮಗೆ ನಮ್ಮ ಬದುಕಿನಲ್ಲಿ ಶಾಂತಿ ಇಲ್ಲದೆ ಹೋದರೆ ಬದುಕಲು ಸಾಧ್ಯವೇ? ಒಂದು ವೇಳೆ ಬದುಕಿನಲ್ಲಿ ಶಾಂತಿ ಇಲ್ಲದೆ ಹೋದರೆ ಅದು ಬದುಕಾಗಿ ಉಳಿಯಲಾರದು.
ಇಂದಿನ ವೈಜ್ಞಾನಿಕ ಯುಗದಲ್ಲಿ ಪ್ರತಿಯೊಬ್ಬರೂ ದಿನಪೂರ್ತಿ ದುಡಿಯುತ್ತಿದ್ದು, ಪೈಪೋಟಿ ಸ್ಪರ್ಧೆಗಳ ನಡುವೆ ತಮ್ಮ ಬದುಕನ್ನು, ಗಟ್ಟಿಗೊಳಿಸಲು ಹೋರಾಟ ನಡೆಸುತ್ತಲೇ ಇರುತ್ತಾರೆ. ಹೀಗಾಗಿ ಬರೀ ಹಣ, ದುಡಿಮೆಯ ಬಗ್ಗೆಯೇ ಆಲೋಚಿಸುವ ಮನುಷ್ಯ ಎಲ್ಲೋ ಒಂದು ಕಡೆ ತಮ್ಮನ್ನು ತಾವೇ ಕಳೆದುಕೊಳ್ಳುತ್ತಾರೆ. ಒಮ್ಮೊಮ್ಮೆ ಇದು ಅರಿವಿಗೆ ಬಾರದೆ ಹೋಗುತ್ತದೆ. ಜೊತೆಗೆ ಸದಾ ಹಣ ಸಂಪಾದನೆಯತ್ತಲೇ ಗಮನಹರಿಸುವ ಭರದಲ್ಲಿ ಗೊತ್ತೇ ಆಗದಂತೆ ಶಾಂತಿಯನ್ನು ಕಳೆದುಕೊಳ್ಳುತ್ತಾರೆ.

ಒಂದು ಕ್ಷಣ ಯೋಚಿಸಿ ನೋಡಿದರೆ ಈ ಬದುಕಿನಲ್ಲಿ ಏನಿದೆ? ಇಂದು ಹುಟ್ಟಿ ನಾಳೆ ಸಾಯುವ ನಾವು ಕೊಂಡೊಯ್ಯುವುದು ಏನನ್ನೂ ಇಲ್ಲ. ಹೀಗಿದ್ದರೂ ಹೋರಾಡುತ್ತೇವೆ, ಕೂಡಿಡುತ್ತೇವೆ. ಮತ್ತೊಬ್ಬರನ್ನು ಮಣಿಸಿ ನಮ್ಮ ಸಾಮ್ರಾಜ್ಯವನ್ನು ಗಟ್ಟಿ ಮಾಡಿಕೊಳ್ಳುತ್ತೇವೆ. ನಾನು, ನನ್ನದು ಎಂಬ ವ್ಯಾಮೋಹದಲ್ಲಿ ಮಾನಸಿಕ ನೆಮ್ಮದಿಯನ್ನು ಕಳೆದುಕೊಳ್ಳುತ್ತೇವೆ.
ಸ್ವಾಮಿ ಪ್ರಭುಪಾದರು ಹೇಳುವುದೇನು?
ನಮಗೆ ಶಾಂತಿ ಬೇಕಾದರೆ ನಾವೇನು ಮಾಡಬೇಕು ಎಂಬುವುದನ್ನು ಆಧ್ಯಾತ್ಮಿಕ ಚಿಂತಕರು ವಿವಿಧ ರೀತಿಯಲ್ಲಿ ಹೇಳಿದ್ದಾರೆ. ದೇವರ ಬಗ್ಗೆ ಭಕ್ತಿಯುಳ್ಳವನು, ಸದಾ ದೇವರ ಸ್ಮರಣೆಯಲ್ಲಿಯೇ ಇರುವ ಯೋಗಿಗಳು ಶಾಂತಚಿತ್ತರಾಗಿರುತ್ತಾರೆ. ಶಾಂತಿಯನ್ನು ನಾವು ಹೇಗೆ ಪಡೆಯಬಹುದು ಎಂಬುವುದನ್ನು ಸ್ವಾಮಿ ಪ್ರಭುಪಾದರು ತಮ್ಮ ಬರವಣಿಗೆಯಲ್ಲಿ ವಿವರಿಸಿದ್ದಾರೆ.

ಪ್ರಪಂಚದಲ್ಲಿ ಪ್ರತಿಯೊಬ್ಬನಿಗೂ ಶಾಂತಿ ಬೇಕು. ಶಾಂತಿವಾದಿಗಳಿಗೆ ಶಾಂತಿಯನ್ನು ಹೇಗೆ ಪಡೆಯಬೇಕೆಂಬುವುದೇ ಗೊತ್ತಿಲ್ಲ. ಆದರೆ ಶಾಂತಿ ಬೇಕು. ನಾನು ಕ್ಯಾಂಟರ್ ಬರಿಯ ಚರ್ಚ್ ಬಿಷಪ್ರ ಭಾಷಣ ಓದಿದೆ. ಅದು ಹೀಗಿತ್ತು. ನಿಮಗೆ ದೇವರಿಲ್ಲದ ದೇವ ಸಾಮ್ರಾಜ್ಯ ಬೇಕು. ಇದು ನಮ್ಮ ದೋಷ, ನಮಗೆ ಶಾಂತಿ ಬೇಕೇ ಬೇಕಾದರೆ ಆಗ ಭಗವಂತನನ್ನು ಅರಿಯುವುದೇ ಶಾಂತಿ ಪಡೆಯುವ ವಿಧಾನ ಎಂದು ಅರ್ಥಮಾಡಿಕೊಳ್ಳಿ ಎಂದು ಸ್ವಾಮಿ ಪ್ರಭುಪಾದರು ಪ್ರಸ್ತಾಪಿಸಿದ್ದಾರೆ.
ನಾವು ಈ ಜಗತ್ತಿಗೆ ಬರಿ ಅತಿಥಿಗಳಷ್ಟೆ
ಇದನ್ನು ಭಗವದ್ಗೀತೆಯಲ್ಲಿಯೂ ಹೇಳಲಾಗಿದೆ. ಪರಮ ಪ್ರಭುವಾದ ಕೃಷ್ಣನ ಸಂಪರ್ಕವಿಲ್ಲದೆ ನಿಮಗೆ ಶಾಂತಿ ದೊರಕದು. ಆದ್ದರಿಂದ ನಮ್ಮ ಹತ್ತಿರ ಬೇರೆಯೇ ಆದ ಶಾಂತಿ ಸೂತ್ರವಿದೆ. ನಿಜವಾದ ಶಾಂತಿ ಸೂತ್ರವೆಂದರೆ, ಭಗವಂತನು ಇಡೀ ಜಗತ್ತಿನ ಒಡೆಯ ಎಂಬುವುದನ್ನು ಅರಿಯಬೇಕು. ಆದರೆ, ಇಂದು ನಾವು ನಮಗೆ ನಾವೇ ಒಡೆಯರು ಎಂಬಂತೆ ತಿಳಿದುಕೊಂಡಿದ್ದೇವೆ. ಹಾಗಾಗಿ ಕಾದಾಟ, ವೈಷಮ್ಯಗಳು ಹುಟ್ಟಿಕೊಳ್ಳುತ್ತಿದ್ದು ಶಾಂತಿಯನ್ನು ಹರಣ ಮಾಡುತ್ತಿವೆ.

ನಾವು ಮೊದಲಿಗೆ ದೇವರೇ ಎಲ್ಲದರ ಒಡೆಯನೆಂದು ಒಪ್ಪಿಕೊಳ್ಳಬೇಕು. ನಾವು ಈ ಜಗತ್ತಿಗೆ ಬರಿ ಅತಿಥಿಗಳಷ್ಟೆ. ನಾವು ಬರುತ್ತೇವೆ, ಹೋಗುತ್ತೇವೆ ಅಷ್ಟೆ. ಆದರೆ ನಾವು ಇದು ನನ್ನ ಜಮೀನು, ಇದು ನನ್ನ ಕುಟುಂಬ, ಇದು ನನ್ನ ಶರೀರ. ಇದು ನನ್ನ ಆಸ್ತಿ ಎಂದುಕೊಳ್ಳುತ್ತೇವೆ. ದೇವರ ಆಜ್ಞೆ ಬಂದಾಗ ಎಲ್ಲವನ್ನೂ ಬಿಟ್ಟು ಹೋಗಲೇ ಬೇಕಾಗುತ್ತದೆ. ಈ ದೇಹದ ಒಡೆಯನೂ ಸಹ ನಾನಲ್ಲ. ಆದರೂ ನಾನೇ ಈ ದೇಹವೆಂದು ಹೇಳುತ್ತೇನೆ.
ಭಗವಂತನೇ ಎಲ್ಲದರ ಒಡೆಯ
ನಿಜವಾಗಿ ಇದು ಮೂರ್ಖತನವಾದ್ದರಿಂದ ಶಾಂತಿ ಹೊಂದಲು ಹೇಗೆ ಸಾಧ್ಯ ಎಂದು ಸ್ವಾಮಿ ಪ್ರಭುಪಾದರು ಪ್ರಶ್ನಿಸುತ್ತಾರೆ. ಜೊತೆಗೆ ಭಗವಂತನೇ ಎಲ್ಲದರ ಒಡೆಯ ಎಂಬುವುದನ್ನು ಅರಿತಾಗ ಮತ್ತು ಅದನ್ನು ಒಪ್ಪಿದಾಗ ಶಾಂತಿ ಸಿಗುತ್ತದೆ ಎಂಬ ಮಾತನ್ನು ಹೇಳುತ್ತಾರೆ. ನಾವು ದೇವರಲ್ಲಿ ಅನುರುಕ್ತರಾಗಬೇಕು. ದೇವರು ಪ್ರತಿಯೊಬ್ಬರ ಮಿತ್ರ ಎಂಬುವುದನ್ನು ಅರಿಯಬೇಕು. ಅವನೇ ಒಡೆಯ ಎಂಬುವುದನ್ನು ಒಪ್ಪಿಕೊಳ್ಳಬೇಕು. ಹಾಗೆ ತಿಳಿದಾಗ ಮಾತ್ರ ನಿಮಗೆ ಶಾಂತಿ ಸಿಗುತ್ತದೆ. ಇದೇ ಶಾಂತಿ ಸೂತ್ರ ಎಂಬುವುದಾಗಿ ಆಧ್ಯಾತ್ಮಿಕ ಗ್ರಂಥಗಳಲ್ಲಿ ವಿವರಿಸಿರುವುದನ್ನು ನಾವು ಕಾಣಬಹುದಾಗಿದೆ.












Click it and Unblock the Notifications