Beetroot: ಬೀಟ್ರೂಟ್ ನೋಡಿ ಮೂದಲಿಸುವ ಮುನ್ನ ಈ ಸ್ಟೋರಿ ಓದಿ, ರಕ್ತದೊತ್ತಡಕ್ಕೆ ಇದುವೇ ರಾಮಬಾಣ
ಮನುಷ್ಯನನ್ನು ಕಾಯಿಲೆಗಳು ಕಾಡುವುದು ಸಹಜ. ಆ ಕಾಯಿಲೆಗಳನ್ನು ತಡೆಯಲು ಪ್ರಕೃತಿಯಲ್ಲಿಯೇ ಮದ್ದುಗಳಿದ್ದು, ಅದನ್ನು ತರಕಾರಿ, ಹಣ್ಣು, ಸೊಪ್ಪುಗಳಲ್ಲಿಯೇ ದೊರೆಯುತ್ತಿದೆ. ಯಾವುದನ್ನು ಬಳಸಿದರೆ ಯಾವ ಕಾಯಿಲೆ ನಿಯಂತ್ರಣಕ್ಕೆ ಬರುತ್ತದೆ ಎಂಬುದನ್ನು ಅರಿತು ಅದನ್ನು ಬಳಸುತ್ತಾ ಹೋದರೆ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ.
ಹಿಂದಿನ ಕಾಲದವರು ಏಕೆ ಆರೋಗ್ಯವಾಗಿದ್ದರು ಎಂಬುದನ್ನು ನೋಡಿದ್ದೇ ಆದರೆ ಅವರೆಲ್ಲರೂ ರಾಸಾಯನಿಕ ಮುಕ್ತವಾದ ಪ್ರಕೃತಿಯಲ್ಲಿಯೇ ದೊರೆಯುತ್ತಿದ್ದ ಆಹಾರ ಪದಾರ್ಥಗಳನ್ನು ಬಳಸುತ್ತಿದ್ದರು. ತರಕಾರಿ, ಹಣ್ಣುಗಳನ್ನು ಸೇವಿಸುತ್ತಿದ್ದರು. ಇದರಿಂದ ಅವರ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಾಗುತ್ತಿತ್ತು. ಆದರೆ ಈಗಿನ ಆರೋಗ್ಯ ಕ್ರಮದಲ್ಲಿ ನಾವು ನಮ್ಮ ಆರೋಗ್ಯವನ್ನು ಕಾಪಾಡುವ ಆಹಾರಕ್ಕಿಂತ ಬಾಯಿಗೆ ರುಚಿಯಾದ ಆಹಾರಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದೇವೆ.

ಈ ಆಹಾರ ಪದಾರ್ಥಗಳು ನಮ್ಮ ಶರೀರಕ್ಕೆ ಹಾದು ಬರುವುದಿಲ್ಲ ಎಂಬ ಸತ್ಯಗೊತ್ತಿದ್ದರೂ ಅದನ್ನೇ ಸೇವಿಸುತ್ತಿದ್ದೇವೆ. ಬೇಸಿಗೆ ಕಾಲದಲ್ಲಿ ತರಕಾರಿ, ಹಣ್ಣುಗಳನ್ನು ಆರೋಗ್ಯದ ದೃಷ್ಠಿಯಿಂದ ಸೇವಿಸುವುದು ಮುಖ್ಯ. ಆದರೆ ನಮಗೆ ಕೆಲವು ತರಕಾರಿಗಳಲ್ಲಿರುವ ಆರೋಗ್ಯವರ್ಧಕ ಗುಣಗಳ ಬಗ್ಗೆ ಗೊತ್ತಿದ್ದರೂ ನಾವು ಅದನ್ನು ಸೇವಿಸುವುದೇ ಇಲ್ಲ. ಆದ್ದರಿಂದ ತರಕಾರಿಗಳಲ್ಲಿ ಏನೇನು ಔಷಧಿ ಗುಣಗಳಿವೆ? ಯಾವ ತರಕಾರಿಯನ್ನು ಬಳಸಿದರೆ ನಮ್ಮನ್ನು ಕಾಡುತ್ತಿರುವ ರೋಗದಿಂದ ಮುಕ್ತವಾಗಬಹುದು ಎಂಬುದನ್ನು ಅರಿತುಕೊಳ್ಳುವುದು ಬಹು ಮುಖ್ಯವಾಗಿದೆ.
ಸಂಶೋಧಕರು ಕಂಡು ಹಿಡಿದ ಸತ್ಯವೇನು?
ದಿನ ನಿತ್ಯ ಹಲವು ತರಕಾರಿಗಳನ್ನು ಬಳಸುತ್ತೇವೆ. ಈ ತರಕಾರಿಗಳು ತನ್ನದೇ ಆದ ಗುಣಗಳನ್ನು ಹೊಂದಿವೆ. ಈ ತರಕಾರಿಗಳ ಪೈಕಿ ಬೀಟ್ರೋಟ್ ಬಗ್ಗೆ ಹೇಳಬೇಕೆಂದರೆ ಇದು ಹಲವು ರೋಗಗಳಿಗೆ ರಾಮಬಾಣವಾಗಿದೆ ಅದರಲ್ಲೂ ಅಧಿಕ ರಕ್ತದೊತ್ತಡದಿಂದ ಬಳಲುವವರು ಗೆ ಬೀಟ್ರೂಟ್ ರಸ ಸೇವಿಸುವುದು ಬಹಳ ಉತ್ತಮವಾಗಿದೆ. ಪ್ರತಿದಿನ ಒಂದು ಬಟ್ಟಲು ಬೀಟ್ರೋಟಿನ ರಸವನ್ನು ಸೇವಿಸಿದರೆ ರಕ್ತದೊತ್ತಡವನ್ನು ಕಡಿಮೆ ಮಾಡಿಕೊಳ್ಳಬಹುದು ಎನ್ನುವ ಹೊಸ ಸಂಗತಿಯನ್ನು ಭಾರತದ ಸಂಶೋಧಕರು ಕಂಡು ಹಿಡಿದಿದ್ದಾರೆ.
ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ ಕೆಲವು ಮಂದಿ 8 ಔನ್ಸ್ ನಷ್ಟು ಬೀಟ್ರೋಟಿನ ರಸದ ಸೇವನೆಯನ್ನು ಮಾಡಿ 10 ಎಂ ಎಂ ಎಚ್ಜಿ ಯಷ್ಟರ ಪ್ರಮಾಣದ ರಕ್ತದೊತ್ತಡವನ್ನು ಕಡಿಮೆ ಮಾಡಿಕೊಂಡಿದ್ದಾರೆ. 15 ರೋಗಿಗಳ ಮೇಲೆ ಈ ಪ್ರಯೋಗ ನಡೆಸಲಾಯಿತು. ಆಗ ಅವರಲ್ಲಿ ಅಧಿಕ ರಕ್ತದೊತ್ತಡದ ಪ್ರಮಾಣ ಇಳಿಮುಖವಾದದ್ದು ಕಂಡು ಬಂದಿತು. ಅದರಲ್ಲೂ ಸೇವಿಸಿದ 3ರಿಂದ 6 ಗಂಟೆ ನಂತರ ಅತ್ಯುತ್ತಮವಾದ ಫಲಿತಾಂಶ ಕಂಡು ಬಂದಿತಂತೆ.

ಡಾ. ಅಮ್ರಿತ್ ಅಹ್ಲುವಾಲಿಯ ಹೇಳಿದ್ದೇನು?
ಬೀಟ್ರೋಟಿನಲ್ಲಿರುವ ನೈಟ್ರೇಟ್ ರಕ್ತ ಕಣಗಳನ್ನು ಅಗಲಗೊಳಿಸುತ್ತದೆ ರಕ್ತ ಸಂಚಾರವನ್ನು ಸುಗಮಗೊಳಿಸುತ್ತದೆ. ಎದೆ ನೋವಿನಿಂದ ಬಳಲುವವರು ನೈಟ್ರೇಟ್ನ್ನು ಬಳಸುತ್ತಾರೆ ಎಂದಿದ್ದಾರೆ ವಿಜ್ಞಾನಿಗಳು. ಅಂದರೆ ಈ ಸಮಸ್ಯೆಯ ಪರಿಹಾರವೂ ಸಹ ಬೀಟ್ರೋಟ್ ನಲ್ಲಿದೆ ಎಂದಾಯಿತು. ಲಂಡನ್ ಮೆಡಿಕಲ್ ಶಾಲೆಗೆ ಸೇರಿರುವ ಬಾರ್ಟ್ ಹೆಲ್ತ್ ಎನ್ಎಚ್ಎಸ್ ಟ್ರಸ್ಟ್ನ ಸಂಶೋಧಕರು ನಡೆಸಿದ ಸಂಶೋಧನೆಯಿಂದ ಈ ಸಂಗತಿ ದೃಢಪಟ್ಟಿದೆ. ಇವರು ಹಲವು ವರ್ಷಗಳ ಕಾಲ ಇದರ ಬಗ್ಗೆ ಅಧ್ಯಯನ ನಡೆಸಿದ ಬಳಿಕ ಈ ಸಂಗತಿ ತಿಳಿದುಬಂದಿದೆ.
ಬಿಟ್ರೋಟ್ ಬಗ್ಗೆ ಪ್ರಯೋಗ ನಡೆಸುತ್ತಿದ್ದಾಗ ಒಂದು ಅನಿರೀಕ್ಷಿತ ಸಂಗತಿ ಗೋಚರವಾಯಿತು. ಈ ರಸವನ್ನು ಸೇವಿಸಿದ ವ್ಯಕ್ತಿಗಳ ಮೂತ್ರ ಗುಲಾಬಿ ಬಣ್ಣಕ್ಕೆ ಬದಲಾಯಿತಂತೆ. ಅಂದರೆ ಇದು ಮೂತ್ರ ಬಣ್ಣದ ಮೇಲೂ ಪ್ರಭಾವ ಬೀರುತ್ತದೆ ಎನ್ನುವ ಸಂಗತಿ ಅರಿವು ವಿಜ್ಞಾನಿಗಳಿಗೆ ಮೂಡಿತಂತೆ. ನೈಟ್ರೆಟ್ ಮಣ್ಣಿನಿಂದ ದೊರಕುತ್ತದೆ. ಅದನ್ನು ಹೀರಿ ತರಕಾರಿ ಬೆಳೆಯುತ್ತದೆ. ಪುಟ್ಟ ನೈಟ್ರೇಟ್ ನಿಂದ ಎಷ್ಟೊಂದು ಪ್ರಯೋಜನಗಳಿವೆ ಎನ್ನುವ ಸಂಗತಿಗಳು ಬೆಳಕಿಗೆ ಬಂದಾಗ ನಮಗೆ ತುಂಬಾ ಆಶ್ಚರ್ಯವಾಗಿತ್ತು ಎನ್ನುವ ಅಭಿಪ್ರಾಯವನ್ನು ಸಂಶೋಧಕ ಡಾ. ಅಮ್ರಿತ್ ಅಹ್ಲುವಾಲಿಯ ಹಲವು ವರ್ಷಗಳ ಹಿಂದೆಯೇ ಹೊರಗೆಡವಿದ್ದಾರೆ.
ಬಿಟ್ರೋಟ್‌ನಲ್ಲಿದೆ ಹೇರಳ ನೈಟ್ರೇಟ್ ಅಂಶ
ಹಸಿರು ಸೊಪ್ಪುಗಳು ಮತ್ತು ಬಿಟ್ರೋಟ್ ನಲ್ಲಿ ಜೀರ್ಣವಾಗುವ ನೈಟ್ರೇಟ್ ಪ್ರಮಾಣ ಹೇರಳವಾಗಿದೆ. ಇದು ಹೃದಯದ ಆರೋಗ್ಯವನ್ನು ನಿಸ್ಸಂದೇಹವಾಗಿ ಕಾಪಾಡುತ್ತದೆ. ಬ್ರಿಟಿಷ್ ಹಾರ್ಟ್ ಫೌಂಡೇಷನ್ನ ವೈದ್ಯಕೀಯ ನಿರ್ದೇಶಕರಾದ ಪ್ರೊ. ಪೀಟರ್ ವಿಸ್ಬೆರಗ್ ಪ್ರಕಾರ ನಮಗೆ ತರಕಾರಿ ಸೇವನೆಯ ಮಹತ್ವ ತಿಳಿದಿದೆ. ಆದರೆ ಯಾವ ತರಕಾರಿಗಳಲ್ಲಿ ನೈಟ್ರೇಟ್ ಪ್ರಮಾಣಹೆಚ್ಚಿದೆ ಎಂದು ತಿಳಿದು ರಕ್ತದೊತ್ತಡದವನ್ನು ದೂರ ಮಾಡಿಕೊಳ್ಳುವತ್ತ ಗಮನ ನೀಡ ಬೇಕು. ಇಷ್ಟು ದಿನಗಳ ಕಾಲ ಈ ತರಕಾರಿ ರಕ್ತಹೀನತೆಯನ್ನು ದೂರ ಮಾಡುತ್ತಿತ್ತು, ಈಗ ಅಧಿಕರಕ್ತದೊತ್ತಡಕ್ಕೂ ಸಹ ಕಡಿವಾಣ ಹಾಕುತ್ತದೆ ಎಂದಿದ್ದಾರೆ.

ಇಷ್ಟೆಲ್ಲ ವಿಚಾರವನ್ನು ತಿಳಿದುಕೊಂಡ ಮೇಲೆ ಬಟ್ರೋಟ್ ಸಾಮಾನ್ಯ ತರಕಾರಿಯಲ್ಲ ಇದು ನಮ್ಮ ಆರೋಗ್ಯ ಕಾಪಾಡುವಲ್ಲಿ ಹೆಚ್ಚಿನ ಪಾತ್ರ ವಹಿಸುತ್ತದೆ ಎಂಬುದು ಅರಿವಿಗೆ ಬಂದಂತಾಯಿತಲ್ಲವೆ? ಇನ್ನಾದರೂ ಯಾರಾದರೂ ಬಿಟ್ರೋಟ್ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದರೆ, ದಯವಿಟ್ಟು ನೀವು ಬಳಸುವ ತರಕಾರಿಯಲ್ಲಿ ಬಿಟ್ರೋಟ್ ಬಳಸಲು ಆರಂಭಿಸಿ ನಿಮ್ಮ ಹೃದಯವನ್ನು ಕಾಪಾಡಿಕೊಳ್ಳುವ ಮೂಲಕ ಅಧಿಕ ರಕ್ತದೊತ್ತಡದ ಸಮಸ್ಯೆಯಿಂದ ಪಾರಾಗಲು ಇದು ಸಹಾಯ ಮಾಡಬಹುದು. ನಿಜ ಹೇಳಬೇಕೆಂದರೆ ನಾವು ಬಳಸುವ ಪ್ರತಿಯೊಂದು ತರಕಾರಿಯಲ್ಲೂ ಒಂದೊಂದು ರೀತಿಯ ಔಷಧೀಯ ಗುಣಗಳಿವೆ. ಅದನ್ನರಿತು ಬಳಸುವ ಜಾಣತನ ಬೆಳೆಸಿಕೊಳ್ಳಬೇಕಷ್ಟೆ.












Click it and Unblock the Notifications