ವ್ಯಾಯಾಮ ಮಾಡದೆಯೇ ತೂಕ ಇಳಿಸಿಕೊಳ್ಳಲು ಸೂಪರ್ ಟಿಪ್ಸ್ ಇದು: ಇಲ್ಲಿ ಆಹಾರ ಕ್ರಮವೇ ಮುಖ್ಯ
ಬೊಜ್ಜು ಈಗ ಬಹುತೇಕರನ್ನು ಕಾಡುವ ಸಾಮಾನ್ಯ ಸಮಸ್ಯೆಯಾಗಿದೆ. ಹೆಚ್ಚುತ್ತಿರುವ ಬೊಜ್ಜು ನಾನಾ ರೀತಿಯ ಕಾಯಿಲೆಗಳಿಗೂ ದಾರಿ ಮಾಡಿಕೊಡಬಹುದು. ಬೊಜ್ಜಿನ ಸಮಸ್ಯೆಗೆ ಇಂದಿನ ಜೀವನಶೈಲಿಯೇ ಬಹು ಮುಖ್ಯ ಕಾರಣ. ದೀರ್ಘ ಸಮಯದವರೆಗೆ ಕುಳಿತಲ್ಲಿಯೇ ಕುಳಿತು ಕೆಲಸ ಮಾಡುವುದು, ಟಿವಿ ನೋಡುವುದು, ಮೊಬೈಲ್ ನೋಡುವುದು ಇವೆಲ್ಲಾ ದೇಹದಲ್ಲಿ ಬೊಜ್ಜು ಹೆಚ್ಚಾಗಲು ಕಾರಣವಾಗುತ್ತದೆ. ಇದರ ಹೊರತಾಗಿ, ನಾವು ಸೇವಿಸುವ ಆಹಾರವೂ ದೇಹ ತೂಕ ಏರಿಕೆಯಾಗುವುದಕೆ ಪ್ರಮುಖ ಕಾರಣವಾಗಿರುತ್ತದೆ.
ಬೊಜ್ಜು ಕಾರಗಿಸುವುದು ಹೇಗೆ?:
ಫಾಸ್ಟ್ ಫುಡ್, ಸಿಹಿತಿಂಡಿಗಳು, ಪದೇ ಪದೇ ಚಹಾ ಮತ್ತು ಕಾಫಿ ಕುಡಿಯುವುದರಿಂದಲೂ ದೇಹದ ತೂಕ ಹೆಚ್ಚಾಗುತ್ತದೆ. ಇದಕ್ಕಾಗಿ ತೂಕ ಕಳೆದುಕೊಳ್ಳಬೇಕಾದರೆ ಮತ್ತು ದೇಹದಲ್ಲಿ ಸೇರಿಕೊಂಡಿರುವ ಬೊಜ್ಜು ಕರಗಬೇಕಾದರೆ ವ್ಯಾಯಾಮ ಮತ್ತು ಆಹಾರ ಪದ್ಧತಿ ಎರಡರ ಬಗ್ಗೆ ಗಮನಹರಿಸುವುದು ಬಹಳ ಮುಖ್ಯ. ದೀರ್ಘಕಾಲದವರೆಗೆ ಸರಿಯಾದ ಆಹಾರ ಕ್ರಮವನ್ನು ಅನುಸರಿಸುವುದು ಮತ್ತು ವ್ಯಾಯಾಮ ಮಾಡುವುದರಿಂದ ಮಾತ್ರ ತೂಕ ಇಳಿಸಿಕೊಳ್ಳಬಹುದು. ಇದಕ್ಕೆ ತಾಳ್ಮೆ ಮತ್ತು ಸ್ಥಿರತೆ ಬಹಳ ಮುಖ್ಯ. ಅನೇಕ ಜನರು ತೂಕ ಇಳಿಸಿಕೊಳ್ಳಲು ಯೋಗ, ವ್ಯಾಯಾಮದ ಮೊರೆ ಹೋಗುತ್ತಾರೆ. ಮಾತ್ರವಲ್ಲ ಜಿಮ್‌ಗಾಗಿ ಸಾವಿರಾರು ರೂಪಾಯಿಗಳನ್ನು ವ್ಯಯಿಸುತ್ತಾರೆ.

ಆಹಾರ ಪದ್ದತಿ ಮುಖ್ಯ:
ದೇಹ ತೂಕ ಇಳಿಸಿಕೊಳ್ಳಬೇಕಾದರೆ ವ್ಯಾಯಾಮ, ಯೋಗ, ಜಿಮ್ ಎಷ್ಟು ಮುಖ್ಯವೋ ಇದೆಲ್ಲಕ್ಕಿಂತ ಹೆಚ್ಚಾಗಿ, ಆಹಾರದ ಮೇಲಿನ ನಿಯಂತ್ರಣ ಅಷ್ಟೇ ಮುಖ್ಯ. ವ್ಯಾಯಾಮದ ನಂತರ ಫಾಸ್ಟ್ ಫುಡ್ ತಿನ್ನುವುದರಿಂದ ತೂಕ ಇಳಿಸಿಕೊಳ್ಳಲು ಎಂದಿಗೂ ಸಾಧ್ಯವಿಲ್ಲ ಎನ್ನುತ್ತಾರೆ ತಜ್ಞರು. ಆದ್ದರಿಂದ, ದೇಹ ತೂಕ, ಬೊಜ್ಜು ಕರಗಿಸಬೇಕಾದರೆ ಮುಖ್ತವಾಗಿ ಆಹಾರ ನಿಯಂತ್ರಣ ಬಹಳ ಮುಖ್ಯ. ನಿತ್ಯದ ಆಹಾರದ ಮೇಲೆ ಗಮನಹರಿಸಿದರೆ, ತೂಕ ಇಳಿಸಿಕೊಳ್ಳುವ ಪ್ರಕ್ರಿಯೆ ಸುಲಭವಾಗಬಹುದು. ಹಾಗಾಗಿ ವ್ಯಾಯಾಮ ಮಾಡದೆಯೂ ತೂಕ ಇಳಿಸಿಕೊಳ್ಳಲು ಕೆಲವು ಮಾರ್ಗಗಳಿವೆ.
ತಜ್ಞರು ಹೇಳುವುದೇನು ?:
ತೂಕ ಇಳಿಸುವ ಬಗ್ಗೆ ವೈದ್ಯ ಅರುಣ್ ಕುಮಾರ್ ಇನ್ಸ್ಟಾಗ್ರಾಮ್ ನಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಅವರ ಪ್ರಕಾರ ಜಿಮ್ ಗೆ ಹೋಗಿ ವ್ಯಾಯಾಮ ಮಾಡುವುದರಿಂದ ದೇಹದ ಕೊಬ್ಬನ್ನು ಕಡಿಮೆ ಮಾಡಲು ಸಾಧ್ಯವಿಲ್ಲ. ದೇಹದ ಕೊಬ್ಬನ್ನು ಕಡಿಮೆ ಮಾಡಲು ಆಹಾರ ಪದ್ಧತಿ ಬಹಳ ಮುಖ್ಯ. ಆಹಾರ ನಿಯಂತ್ರಣದ ಮೂಲಕ ಮಾತ್ರ ತೂಕ ಇಳಿಸಿಕೊಳ್ಳಬಹುದು. ಕಡಿಮೆ ಕ್ಯಾಲೋರಿ ಮತ್ತು ಇನ್ಸುಲಿನ್ ನಿಯಂತ್ರಣ ಇದ್ದಾಗ, ಹೆಚ್ಚುವರಿ ಕೊಬ್ಬು ಶಕ್ತಿಯಾಗಿ ಬದಲಾಗುತ್ತದೆ.ಆಗ ಕೊಬ್ಬನ್ನು ಕಳೆದುಕೊಳ್ಳುವುದು ಸಾಧ್ಯವಾಗುತ್ತದೆ.
ವ್ಯಾಯಾಮದಿಂದ ದೇಹದ ಶಕ್ತಿ ಹೆಚ್ಚಿಸಬಹುದು. ವ್ಯಾಯಾಮದಿಂದ ಹೆಚ್ಚಿನ ಕ್ಯಾಲೊರಿಗಳನ್ನು ಬರ್ನ್ ಮಾಡಲು ಸಾಧ್ಯವಿಲ್ಲ. ಆಹಾರದ ಮೇಲಿನ ನಿಯಂತ್ರಣದ ಮೂಲಕ ಮಾತ್ರ ತೂಕ ಇಳಿಸಿಕೊಳ್ಳಬಹುದು. ಚಹಾದೊಂದಿಗೆ ಬೋಂಡಾ ಬಜ್ಜಿ ಸೇವಿಸಿ ಒಂದು ಗಂಟೆ ವಾಕ್ ಮಾಡುವುದರಿಂದ ಪ್ರಯೋಜನವಾಗುವುದಿಲ್ಲ. 45 ನಿಮಿಷಗಳ ಕಾಲ ಜಾಗಿಂಗ್ ಮಾಡಿ ಮತ್ತೆ ಜ್ಯೂಸ್ ಬಿಸ್ಕತ್ತು ಸೇವಿಸಿದರೆ ಕ್ಯಾಲೊರಿ ಕಡಿಮೆಯಾಗುವುದಿಲ್ಲ. ದೊಡ್ಡ ಕ್ರೀಡಾಪಟುಗಳು ತಮ್ಮ ದೇಹವನ್ನು ಆಕಾರದಲ್ಲಿಡಲು ಸರಿಯಾದ ಆಹಾರಕ್ರಮವನ್ನು ಅನುಸರಿಸುತ್ತಾರೆ. ಹಾಗಾಗಿ ದೇಹದ ಕೊಬ್ಬನ್ನು ಕಡಿಮೆ ಮಾಡಲು ಆಹಾರ ನಿಯಂತ್ರಣ ಅತ್ಯಗತ್ಯ.
ಇದೆಲ್ಲದರ ಹೊರತಾಗಿ, ತಜ್ಞರು ಹೇಲುವುದೇನೆಂದರೆ ವ್ಯಾಯಾಮ ಮಾಡದೆ ತೂಕ ಇಳಿಸಿಕೊಳ್ಳಬೇಕಾದರೆ ಮೊದಲು ಚಹಾ ಮತ್ತು ಕಾಫಿಯನ್ನು ಸಂಪೂರ್ಣವಾಗಿ ಬಿಟ್ಟು ಬಿಡಬೇಕು. ಸಕ್ಕರೆಯನ್ನು ಮುಟ್ಟಿಯೂ ನೋಡಬಾರದು. ಎಣ್ಣೆಯಲ್ಲಿ ಕರಿದ ವಡೆಗಳು, ಬೋಂಡಾ, ಬಜ್ಜಿ ಇತ್ಯಾದಿಗಳಿಂದ ದೂರ ಇರಬೇಕು. ಕಾರ್ಬೋಹೈಡ್ರೇಟ್‌ಗಳನ್ನು ಕಡಿಮೆ ಮಾಡಿ ನಿಮ್ಮ ಆಹಾರದಲ್ಲಿ ಹೆಚ್ಚಿನ ಪ್ರೋಟೀನ್ ಮತ್ತು ಪ್ರೋಟೀನ್‌ಯುಕ್ತ ಆಹಾರ ಸೇರಿಸಬೇಕು. ಅಲ್ಲದೆ, ಹಣ್ಣು ಮತ್ತು ತರಕಾರಿಗಳಿಗೂ ತಟ್ಟೆಯಲ್ಲಿ ಜಾಗ ಇರಲಿ.
(ಬರಹ: ರಂಜಿತಾ ಆರ್.ಕೆ.)














Click it and Unblock the Notifications