ಬೇಸಿಗೆಯಲ್ಲಿ ಕಾಡುವ ತಲೆನೋವಿಗೆ ಸುಲಭ ಪರಿಹಾರಗಳು ಇಲ್ಲಿವೆ
ಬೇಸಿಗೆ ಬಿಸಿಲು ನೆತ್ತಿ ಸುಡುತ್ತಿದೆ. ಸೂರ್ಯನ ಕಡು ಬಿಸಿಲು, ಧೂಳು ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಆದ್ದರಿಂದ, ಕೆಲಸ, ಕಾಲೇಜು, ಕಚೇರಿ ಎಂದು ದಿನವಿಡೀ ಬಿಸಿಲಿನಲ್ಲಿ ಕಳೆಯಬೇಕಾದವರು ತಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಅನಿವಾರ್ಯವಾಗಿದೆ. ಸೂರ್ಯನ ಶಾಖ ಮಿತಿ ಮೀರುತ್ತಿರುವಂತೆಯೇ ತಲೆನೋವಿನ ಸಮಸ್ಯೆ ಕೂಡಾ ಸಾಮಾನ್ಯವಾಗಿದೆ. ಜೊತೆಗೆ ದೇಹದಲ್ಲಿ ನೀರಿನ ಅಂಶ ಕಡಿಮೆಯಾಗುವುದು, ತಲೆ ಭಾರ, ತಲೆ ಸುತ್ತುವುದು ಮುಂತಾದ ಸಮಸ್ಯೆಗಳು ಬಹಳ ಮಂದಿಯನ್ನು ಕಾಡುತ್ತಿದೆ. ಬಿಸಿಲಿನ ಕಾರಣದಿಂದ ತೀವ್ರ ತಲೆನೋವು ಕಾಡುತ್ತಿದ್ದರೆ ಅದರ ಪರಿಹಾರಕ್ಕೆ ಮಾತ್ರೆ ತಿನ್ನುವುದೇ ಅಲ್ಲ. ಬದಲಾಗಿ ಕೆಲವೊಂದು ಮನೆ ಮದ್ದುಗಳನ್ನು ಅನುಸರಿಸುವ ಮೂಲಕ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.
ಬೇಸಿಗೆಯಲ್ಲಿ ತಲೆನೋವಿಗೆ ಮನೆಮದ್ದುಗಳು:
ಸಾಕಷ್ಟು ನೀರು ಕುಡಿಯಿರಿ:
ಬೇಸಿಗೆಯಲ್ಲಿ ಬಿಸಿಲಿನ ಕಾರಣದಿಂದಾಗಿ ಕಾಡುವ ತಲೆನೋವಿಗೆ ನೀರೇ ಪರಿಹಾರವಾಗಬಹುದು. ಬಿಸಿಲಿನಿಂದ ಮನೆಗೆ ಹಿಂದಿರುಗಿ ಬರುತ್ತಿದ್ದ ಹಾಗೆಯೇ ಮುಖವನ್ನು ತಣ್ಣೀರಿನಿಂದ ತೊಳೆದುಕೊಳ್ಳಿ. ಜೊತೆಗೆ ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯಿರಿ. ಈ ರೀತಿ ನೀರು ಕುಡಿಯುವುದರಿಂದ ಡಿ ಹೈಡ್ರೇಶನ್ ಅಂದರೆ ದೇಹದಲ್ಲಿ ನೀರಿನ ಅಂಶ ಕಡಿಮೆಯಾಗಿದ್ದರೆ ಅದನ್ನು ಸರಿತೂಗಿಸಲು ಸಹಾಯ ಮಾಡುತ್ತದೆ. ಹಾಗೆಯೇ ಬೇಸಿಗೆಯಲ್ಲಿ ಮನೆಯಿಂದ ಹೊರ ಹೋಗುವಾಗ ನಿಮ್ಮೊಂದಿಗೆ ನೀರು ಕೊಂಡೊಯ್ಯುವುದನ್ನು ಮರೆಯಬೇಡಿ. ಬಿಸಿಲಿನ ಕಾಲದಲ್ಲಿ ಎಷ್ಟು ನೀರು ಕುಡಿಯುತ್ತಿರೋ ಅಷ್ಟು ನೀವು ತಲೆ ನೋವಿನಿಂದ ದೂರ ಇರಬಹುದು.

ಸಾರಭೂತ ತೈಲಗಳನ್ನು ಬಳಸಿ:
ಬಿಸಿಲಿನ ಕಾರಣದಿಂದ ತೀವ್ರ ತಲೆನೋವು ಕಾಡುತ್ತಿದ್ದರೆ, ಸ್ವಲ್ಪ ಲ್ಯಾವೆಂಡರ್ ಅಥವಾ ಪುದೀನಾ ಸಾರಭೂತ ಎಣ್ಣೆಯನ್ನು ಕೈಯಲ್ಲಿ ತೆಗೆದುಕೊಂಡು ಅದನ್ನು ನಿಮ್ಮ ಹಣೆಯ ಮೇಲೆ ಮತ್ತು ಕಣ್ಣುಗಳ ಸುತ್ತಲೂ ಹಚ್ಚಿ ಬೆರಳುಗಳಿಂದ ಮೃದುವಾಗಿ ಮಸಾಜ್ ಮಾಡಿ. ತಲೆನೋವು ಸ್ವಲ್ಪ ಸಮಯದಲ್ಲೇ ಕಡಿಮೆಯಾಗುತ್ತದೆ. ಈ ಎಣ್ಣೆಯ ಸುವಾಸನೆಯು ತಲನೋವನ್ನು ಶಮನಗೊಳಸುವ ಸಾಮರ್ಥ್ಯವನ್ನು ಹೊಂದಿದೆ.
ಕೋಲ್ಡ್ ಕಂಪ್ರೆಸ್ ಬಳಸಿ:
ಐಸ್ ಅನ್ನು ಬಟ್ಟೆಯಲ್ಲಿ ಸುತ್ತಿ ನಿಮ್ಮ ತಲೆಗೆ ಹಚ್ಚಿಕೊಳ್ಳಿ. ಪರ್ಯಾಯವಾಗಿ, ಒಂದು ಸಣ್ಣ ಟವಲ್ ಅನ್ನು ಐಸ್ ನೀರಿನಲ್ಲಿ ಅದ್ದಿ ಅದನ್ನು ಕೂಡಾ ಹಣೆಗೆ ಹಚ್ಚಿಕೊಳ್ಳಬಹುದು. ಹೀಗೆ ಮಾಡಿದರೆ ಕೆಲವೇ ನಿಮಿಷಗಳಲ್ಲಿ ತಲೆ ನೋವಿನಿಂದ ಪರಿಹಾರ ಸಿಗುತ್ತದೆ.
ಐಸ್ಡ್ ಹರ್ಬಲ್ ಟೀ ಕುಡಿಯಿರಿ:
ತಲೆನೋವು ನಿವಾರಣೆಗೆ ಹರ್ಬಲ್ ಟೀ ಬಳಸಬಹುದು. ಐಸ್ಡ್ ಟೀ ತಲೆನೋವು ನಿವಾರಣೆಗೆ ಹೇಳಿ ಮಾಡಿಸಿದ ಪರಿಹಾರ. ನಿಂಬೆ ಟೀ, ಶುಂಠಿ ಟೀ, ಲ್ಯಾವೆಂಡರ್ ಟೀ, ಪುದೀನ ಟೀ ಇತ್ಯಾದಿಗಳನ್ನು ಸಹ ಪ್ರಯತ್ನಿಸಬಹುದು. ಇದು ತಲೆನೋವನ್ನು ತಕ್ಷಣ ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಊಟ ಮಾಡಿ:
ಏನೂ ತಿನ್ನದೆ ಅಥವಾ ಹೊಟ್ಟೆ ತುಂಬಾ ತಿನ್ನದೆ ಬಿಸಿಲಿಗೆ ಹೋದ ತಕ್ಷಣ ತೀವ್ರ ತಲೆನೋವು ಕಾಡಬಹುದು. ಆದ್ದರಿಂದ, ಸಮಯಕ್ಕೆ ಸರಿಯಾಗಿ ಊಟ ಮಾಡುವುದು ಬಹಳ ಮುಖ್ಯ. ಖಾಲಿ ಹೊಟ್ಟೆಯಲ್ಲಿ ಬಿಸಿಲಿಗೆ ಹೋಗುವುದನ್ನು ತಪ್ಪಿಸುವುದೇ ಉತ್ತಮ. ಊಟ ಮಾಡದೆ ಬಿಸಿಲಿಗೆ ಹೋದರೆ, ತಲೆನೋವು ಕಟ್ಟಿಟ್ಟ ಬುತ್ತಿ.
(ಬರಹ: ರಂಜಿತಾ ಆರ್.ಕೆ.)














Click it and Unblock the Notifications