ಒಂಟಿಯಾಗಿರೋರೆಲ್ಲ ಮಾನಸಿಕ ಅಸ್ವಸ್ಥರಾ? ಕೆಲವರಿಗ್ಯಾಕೆ ಯಾರೂ ಫ್ರೆಂಡ್ಸೇ ಇರಲ್ಲ?
ಜೀವನ ಅಂದ ಮೇಲೆ ಪ್ರತಿಯೊಬ್ಬರಿಗೂ ಸ್ನೇಹಿತರು ಇರಲೇಬೇಕಲ್ಲ. ಯಾವ ಸಂಬಂಧ ಇರುವುದೋ ಬಿಡುವುದೋ ಆದರೆ ಸ್ನೇಹ ಸಂಬಂಧ ಬಹಳ ಮುಖ್ಯ. ಯಾಕೆಂದರೆ ಯಾರಲ್ಲೂ ಹೇಳಲು ಸಾಧ್ಯವಾಗದೆ ಇರುವ ಕೆಲವು ಮಾತುಗಳನ್ನು ಸ್ನೇಹಿತರ ಬಳಿ ಹೇಳಿಕೊಳ್ಳುವುದು ಸಾಧ್ಯ. ನಮ್ಮ ಸುಖ ಸಂತೋಷಕ್ಕಾಗಿ ಅಲ್ಲದಿದ್ದರೂ ಮನಸ್ಸಿನ ನೋವು, ಕಷ್ಟ ನಷ್ಟಗಳಿಗೆ ಕಿವಿಯಾಗುವುದಕ್ಕಾದರೂ ಸ್ನೇಹಿತ ಬೇಕು.
ಆದರೆ ಈ ಜಗತ್ತಿನಲ್ಲಿ ಇರುವ ಪ್ರತಿಯೊಬ್ಬರಿಗೂ ಸ್ನೇಹಿತರು ಇರುತ್ತಾರೆಯೇ? ಹೌದು ಎಂದರೆ ತಪ್ಪಾದೀತು. ಕೆಲವರು ಎಲ್ಲಾ ಸಂಬಂಧಗಳಿಂದ ದೂರ ಉಳಿದು ಬಿಡುತ್ತಾರೆ. ಸ್ನೇಹಿತರಿಂದಲೂ. ಒಂದು ರೀತಿಯಲ್ಲಿ ಒಂಟಿಯಾಗಿರುವುದೇ ಅವರ ಆಯ್ಕೆ ಆಗಿರುತ್ತದೆ.

ಹೀಗೆ ಒಂಟಿಯಾಗಿದ್ದಾರೆ ಎಂದ ಕೂಡಲೇ ಅವರನ್ನು ಡಿಪ್ರೆಶನ್ ಕಾಡುತ್ತಿದೆ, ಅವರು ಮಾನಸಿಕ ಸಮಸ್ಯೆ ಇರುವವರು ಎಂದಲ್ಲ. ಒಂಟಿಯಾಗಿರುವುದು ಅವರು ಆಯ್ದುಕೊಂಡಿರುವ ದಾರಿ. ಆದರೆ ಯಾತಕ್ಕಾಗಿ ಎನ್ನುವುದು ಇಲ್ಲಿರುವ ಪ್ರಶ್ನೆ.ಇದಕ್ಕೆ ಕಾರಣಗಳು ಹಲವು.
ತಜ್ಞರು ಹೇಳುವುದೇನು ?
ಮನೋವೈದ್ಯರು ಹೇಳುವ ಪ್ರಕಾರ, ಕಾಲ ಕಳೆದಂತೆ ಕೆಲವರು ಸ್ವಾವಲಂಬಿಗಳಾಗಿ ಬಿಡುತ್ತಾರೆ. ಇವರ ಸ್ವಾವಲಂಬನೆ ಎಷ್ಟರ ಮಟ್ಟಿಗೆ ಇರುತ್ತದೆ ಎಂದರೆ ತಮ್ಮ ಜೀವನದಲ್ಲಿ ಅದೇನೇ ಪರಿಸ್ಥಿತಿ ಬರಲಿ ಅದನ್ನು ಶೇರ್ ಮಾಡುವುದಕ್ಕೂ ಅವರಿಗೆ ಯಾರೂ ಬೇಡ ಎನ್ನುವ ಮನಸ್ಥಿತಿಗೆ ತಲುಪುತ್ತಾರೆ. ಪ್ರತಿಯೊಂದು ಸಮಸ್ಯೆಗೆ ತಾವೇ ಉತ್ತರ ಕಂಡುಕೊಳ್ಳುತ್ತಾರೆ. ಕ್ರಮೇಣ ಇದೇ ಅವರಿಗೆ ಅಭ್ಯಾಸವಾಗಿ ಬಿಡುತ್ತದೆ.
ಮಾನಸಿಕ ಕಾರಣ
ಇದರಲ್ಲಿ ಕೆಲವು ಮಾನಸಿಕ ಆರೋಗ್ಯ ಸ್ಥಿತಿಗಳು ಕೂಡಾ ಸ್ವಲ್ಪ ಮಟ್ಟದ ಪಾತ್ರ ವಹಿಸಬಹುದು. ಇಲ್ಲ ಎನ್ನುವುದಕ್ಕೆ ಸಾಧ್ಯವಿಲ್ಲ. ಯಾಕೆಂದರೆ ಯಾರಾದರೂ ಡಿಪ್ರೆಶನ್‌ನಲ್ಲಿದ್ದರೆ ಅವರು ಸಾಮಾಜಿಕವಾಗಿ ಯಾರೊಂದಿಗೂ ಬೆರೆಯುವುದಕ್ಕೆ ಇಷ್ಟಪಡುವುದಿಲ್ಲ. ಇಲ್ಲಿ ಅವರನ್ನು ತಡೆಯುವುದು ಅವರ ಮಾನಸಿಕ ಸ್ಥಿತಿ. ಇನ್ನು ಸೋಶಿಯಲ್ ಆಕ್ಸೈಟಿ ಡಿಸ್ ಆರ್ಡರ್‌ನಲ್ಲಿ ತನ್ನನ್ನು ಯಾರು ಹೇಗೆ ಜಡ್ಜ್ ಮಾಡುತ್ತಾರೋ ಎನ್ನುವ ಭಯ ಕಾಡುತ್ತಿರುತ್ತದೆ. ಹಾಗಾಗಿ ಅವರು ಯಾರೊಂದಿಗೂ ಬೆರೆಯುವುದಕ್ಕೆ ಇಷ್ಟಪಡುವುದಿಲ್ಲ.
ಬಾಲ್ಯದ ಅನುಭವಗಳು
ವೈದ್ಯರ ಪ್ರಕಾರ, ಬಾಲ್ಯದ ಕಹಿ ನೆನಪುಗಳು ಕೂಡಾ ಕಾರಣವಾಗಿರಬಹುದು. ಹೀಗಾಗಿ ಕೆಲವರು ಯಾರೊಂದಿಗೂ ಬಹಳ ಹತ್ತಿರವಾಗುವುದಿಲ್ಲ. ಯಾರೇ ಇರಲಿ ಒಂದು ರೀತಿಯ ಅಂತರ ಕಾಯ್ದುಕೊಂಡೇ ಇರುತ್ತಾರೆ. ಬೇರೆಯವರು ಇವರೊಂದಿಗೆ ಫ್ರಂಡ್‌ಶಿಪ್ ಬೆಳೆಸುವ ಆಸೆ ತೋರಿಸಬಹುದು. ಆದರೆ ಇವರು ಮಾನಸಿಕವಾಗಿ ಸಿದ್ದರಿರುವುದಿಲ್ಲ. ಕೆಲವೊಮ್ಮೆ ಕೆಲವರನ್ನು ನೋಡಿದಾಗ ಅವರ ಜೊತೆ ಸ್ನೇಹ ಮಾಡುವ ಮನಸ್ಸಾಗಬಹುದು. ಆದರೆ, ಅವರು ತಮ್ಮ ಜೊತೆಗಿನ ಫೆಂಡ್‌ಶಿಪ್ ಅನ್ನು ಎಲ್ಲಿ ಮುರಿದು ಬಿಡುವರೋ ಎನ್ನುವ ಭಯ ಮುಂದಕ್ಕೆ ಹೋಗದಂತೆ ತಡೆಯುತ್ತದೆ.
ಮತ್ತೆ ಮತ್ತೆ ನೋವು ತಿನ್ನುವ ಶಕ್ತಿ ಇಲ್ಲದೇ ಇರುವುದರಿಂದ ಒಂಟಿಯಾಗಿರುವುದೇ ಒಳ್ಳೆಯದು ಎನ್ನುವ ನಿರ್ಧಾರಕ್ಕೆ ಬಂದಿರುತ್ತಾರೆ.
ಅತಿಯಾಗಿ ಯೋಚಿಸುವುದು
ಕೆಲವರಿಗೆ ಸಣ್ಣ ಸಣ್ಣ ವಿಚಾರಗಳ ಬಗ್ಗೆ ಕೂಡಾ ಅತಿಯಾಗಿ ಯೋಚಿಸುವ ಅಭ್ಯಾಸ ಇರುತ್ತದೆ. ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳುವ ಬದಲು ತಮ್ಮ ಮನಸ್ಸಿನಲ್ಲಿಯೇ ಕತೆಯನ್ನು ಸೃಷ್ಟಿಸಿಕೊಂಡು ಅದೇ ಸತ್ಯ ಎನ್ನುವಂತೆ ನಡೆದುಕೊಳ್ಳುತ್ತಾರೆ. ಸ್ನೇಹಿತ ರಿಯಾಕ್ಟ್ ಮಾಡುವುದು ತಡವಾದರೆ, ಮಾತನಾಡುವಾಗ ಸ್ವಲ್ಪ ವ್ಯತ್ಯಾಸ ಕಂಡುಬಂದರೂ ಅವರಿಗೆ ನಾನು ಇಷ್ಟವಿಲ್ಲ, ನನ್ನ ಮಾತನಾಡಲು ಮನಸ್ಸಿಲ್ಲ ಎನ್ನುವ ತೀರ್ಮಾನಕ್ಕೆ ಬರುತ್ತಾರೆ. ಈ ರೀತಿ ಓವರ್ ತಿಂಕಿಂಗ್‌ನಿಂದಾಗಿ ಎಲ್ಲಾ ಸಂಬಂಧಗಳಿಂದ ದೂರವಾಗುತ್ತಾ ಹೋಗುತ್ತಾರೆ.
ಯಾವಾಗ ಸಹಾಯ ಪಡೆಯಬೇಕು?
ಹಾಗಂತ ಒಂಟಿಯಾಗಿರುವ ಎಲ್ಲರಿಗೂ ಸಮಸ್ಯೆ ಇದೆ ಎಂದಲ್ಲ. ಅಂತರ್ಮುಖಿ ಅಥವಾ ಇಂಟ್ರೋವರ್ಟ್‌ಗಳಾಗಿರುವುದೇ ಕೆಲವರ ಸ್ವಭಾವ. ಅವರು ಯಾವಾಗಲೂ ಒಂಟಿಯಾಗಿರುವುದನ್ನೇ ಇಷ್ಟಪಡುತ್ತಾರೆ. ತುಂಬಿದ ಜನರ ಮಧ್ಯೆ ಇರುವುದು ಅವರಿಗೆ ಅಷ್ಟಾಗಿ ಇಷ್ಟವಾಗುವುದಿಲ್ಲ. ಇವರು ಕೆಲವೇ ಸಂಬಂಧಗಳನ್ನು ಹೊಂದಿರುತ್ತಾರೆ, ಆದರೆ ಅದು ಅರ್ಥಪೂರ್ಣವಾಗಿರುತ್ತದೆ.
ಹೆಚ್ಚು ಉಳಿತಾಯ ಮಾಡುವವರ ರಹಸ್ಯವೇನು? ಉತ್ತರ ಇಲ್ಲಿದೆ!
ಇನ್ನು ಕೆಲವರು ಸ್ನೇಹಿತರು ಇಲ್ಲ ಅಥವಾ ದೂರ ಆಗುತ್ತಿದ್ದಾರೆ ಎನ್ನುವ ಕಾರಣದಿಂದ ನಿರಂತರ ದುಃಖ, ಆತಂಕ, ಒಂಟಿತನ, ಹತಾಶೆ ಯನ್ನು ಅನುಭವಿಸುತ್ತಾ ಇರುತ್ತಾರೆ. ಹೀಗಿದ್ದರೆ ಅವರನ್ನು ಬಿಟ್ಟು ಬಿಡಬಾರದು. ಅವರನ್ನು ಮನಶ್ಶಾಸ್ತ್ರಜ್ಞ ಅಥವಾ ಮನೋವೈದ್ಯರ ಬಳಿಗೆ ಕರೆದುಕೊಂಡು ಹೋಗಬೇಕು.
ಜೀವನದಲ್ಲಿ ನಮಗೆ ಎಷ್ಟು ಮಂದಿ ಸ್ನೇಹಿತರಿದ್ದಾರೆ ಎನ್ನುವುದು ವ್ಯಕ್ತಿಯ ಸಂತೋಷ ಅಥವಾ ಮೆಂಟ್ ಹೆಲ್ತ್‌ನ ಮಾನದಂಡ ಅಲ್ಲವೇ ಅಲ್ಲ. ಕೆಲವರು ಒಂಟಿಯಾಗಿದ್ದರೂ ತೃಪ್ತರಾಗಿರುತ್ತಾರೆ, ಸಂತೋಷವಾಗಿರುತ್ತಾರೆ. ಹಾಗಾಗಿ ಸ್ನೇಹಿತರಿಲ್ಲದವರೆಲ್ಲಾ ಮಾನಸಿಕ ಅಸ್ವಸ್ಥರಲ್ಲ.


Click it and Unblock the Notifications
