ಹೆಚ್ಚು ಉಳಿತಾಯ ಮಾಡುವವರ ರಹಸ್ಯವೇನು? ಉತ್ತರ ಇಲ್ಲಿದೆ!
ತಿಂಗಳಿಗೆ 50,000 ರೂ. ಸಂಬಳ ಪಡೆಯುವ ಇಬ್ಬರು ಸ್ನೇಹಿತರನ್ನು ಊಹಿಸಿಕೊಳ್ಳಿ. ಅವರಲ್ಲಿ ಒಬ್ಬನ ಬ್ಯಾಂಕ್ ಖಾತೆಯಲ್ಲಿ ಯಾವಾಗಲೂ ತುರ್ತು ಪರಿಸ್ಥಿತಿಗೆ ಸಾಕಾಗುವಷ್ಟು ಹಣ ಇರುತ್ತದೆ. ಪ್ರತಿ ತಿಂಗಳು ಎಸ್ಐಪಿ (SIP) ಮಾಡುತ್ತಾನೆ. ಆರೋಗ್ಯ ವಿಮೆ, ಜೀವ ವಿಮೆ ಕೂಡ ಮಾಡಿಕೊಂಡಿದ್ದಾನೆ.
ಇನ್ನೊಬ್ಬನೂ ಅಷ್ಟೇ ಸಂಬಳ ಪಡೆಯುತ್ತಾನೆ. ಆದರೆ ತಿಂಗಳ ಕೊನೆಯಲ್ಲಿ ಹಣವೇ ಉಳಿಯುವುದಿಲ್ಲ. ಸಣ್ಣ ತುರ್ತು ಪರಿಸ್ಥಿತಿ ಬಂದರೂ ಸಾಲ ಮಾಡಬೇಕಾಗುತ್ತದೆ. ಇಬ್ಬರ ಆದಾಯ ಒಂದೇ ಇದ್ದರೂ, ಅವರ ಆರ್ಥಿಕ ಸ್ಥಿತಿ ಏಕೆ ಇಷ್ಟು ಭಿನ್ನವಾಗಿದೆ?

ಇದಕ್ಕೆ ಉತ್ತರ ಪಡೆಯಲು ಕೇವಲ ಸಂಬಳದ ನಂಬರ್ ನೋಡಿದರೆ ಸಾಲದು. ಹಣದ ಬಗ್ಗೆ ಇರುವ ಅರಿವು ಮತ್ತು ಹಣವನ್ನು ನಿರ್ವಹಿಸುವ ಅಭ್ಯಾಸದಲ್ಲಿ ಅವರ ಸ್ಥಿತಿಗೆ ಉತ್ತರ ಸಿಗುತ್ತೆ.
ಹೆಚ್ಚು ಸಂಪಾದಿಸಿದರೆ ಮಾತ್ರ ಹೆಚ್ಚು ಉಳಿತಾಯವೆ?
ಬಹಳ ವರ್ಷಗಳಿಂದ ಅರ್ಥಶಾಸ್ತ್ರಜ್ಞರು, "ಹೆಚ್ಚು ಸಂಪಾದಿಸುವವರು ಹೆಚ್ಚು ಉಳಿತಾಯ ಮಾಡುತ್ತಾರೆ" ಎಂದು ನಂಬುತ್ತಿದ್ದರು. ಇದು ಒಂದು ಮಟ್ಟಿಗೆ ಸತ್ಯವೂ ಹೌದು. ಆದರೆ ಭಾರತದ ವಾಸ್ತವ ಚಿತ್ರ ನೀಡುವ ಕಥೆಯೇ ಬೇರೆ.
ಇಂದು ಬ್ಯಾಂಕ್ ಖಾತೆಗಳು, ಯುಪಿಐ, ಡಿಜಿಟಲ್ ಪಾವತಿಗಳು ಎಲ್ಲರಿಗೂ ಸುಲಭವಾಗಿ ಲಭ್ಯವಿವೆ. ಆದಾಯವೂ ಹಿಂದಿಗಿಂತ ಹೆಚ್ಚಾಗಿದೆ. ಆದರೂ ಅನೇಕ ಕುಟುಂಬಗಳು ಹಣವನ್ನು ಬ್ಯಾಂಕ್ನಲ್ಲಿ ಹೂಡಿಕೆ ಮಾಡುವ ಬದಲು ನಗದು, ಚಿನ್ನ ಅಥವಾ ಮನೆಯಲ್ಲೇ ಉಳಿಸಿಕೊಳ್ಳುತ್ತಿವೆ.
ಇದೇ ವೇಳೆ, ಅದೇ ಆದಾಯ ಹೊಂದಿರುವ ಕೆಲವು ಕುಟುಂಬಗಳು ಮ್ಯೂಚುವಲ್ ಫಂಡ್, ಎಸ್ಐಪಿ, ಷೇರು ಮಾರುಕಟ್ಟೆ ಹಾಗೂ ನಿವೃತ್ತಿ ಯೋಜನೆಗಳಲ್ಲಿ ಹೂಡಿಕೆ ಮಾಡಿ ನಿಧಾನವಾಗಿ ಸಂಪತ್ತು ನಿರ್ಮಿಸುತ್ತಿವೆ. ಹಾಗಾದರೆ ವ್ಯತ್ಯಾಸ ಎಲ್ಲಿದೆ? ಅದು ಆರ್ಥಿಕ ಸಾಕ್ಷರತೆ (Financial Literacy) ಯಲ್ಲಿದೆ.
ಅಭ್ಯಾಸವೇ ಉಳಿತಾಯದ ಮೂಲ
ಹಲವರು "ಖರ್ಚಾದ ಮೇಲೆ ಉಳಿದ ಹಣವೇ ಉಳಿತಾಯ" ಎಂದು ಭಾವಿಸುತ್ತಾರೆ. ಆದರೆ ಹಣಕಾಸು ತಜ್ಞರ ಪ್ರಕಾರ, ಉತ್ತಮ ಉಳಿತಾಯ ಮಾಡುವವರು ಮೊದಲು ಉಳಿತಾಯಕ್ಕೆ ಹಣವನ್ನು ತೆಗೆದಿಡುತ್ತಾರೆ. ನಂತರ ಉಳಿದ ಹಣದಲ್ಲಿ ಖರ್ಚು ಮಾಡುತ್ತಾರೆ. ಇದನ್ನು "Save First, Spend Later" ಎನ್ನುವ ಅಭ್ಯಾಸ ಎಂದು ಕರೆಯುತ್ತಾರೆ.
ಇದಕ್ಕೆ ಹಣದ ಬಗ್ಗೆ ಮೂಲಭೂತ ಜ್ಞಾನ ಬೇಕು. ಉದಾಹರಣೆಗೆ, ಹಣದುಬ್ಬರ (Inflation) ಎಂದರೇನು? ಚಕ್ರಬಡ್ಡಿಯ (Compound Interest) ಶಕ್ತಿ ಎಷ್ಟು? ಎಲ್ಲ ಹಣವನ್ನೂ ಒಂದೇ ಕಡೆ ಹೂಡಿಕೆ ಮಾಡಬಾರದು ಯಾಕೆ? ತುರ್ತು ನಿಧಿ (Emergency Fund) ಯಾಕೆ ಅಗತ್ಯ? ಈ ವಿಷಯಗಳನ್ನು ಅರ್ಥ ಮಾಡಿಕೊಂಡವರು ಸಾಮಾನ್ಯವಾಗಿ ಉತ್ತಮ ಹಣಕಾಸು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ.
ಸಂಶೋಧನೆ ಏನು ಹೇಳುತ್ತದೆ?
2025ರಲ್ಲಿ ಪ್ರಕಟವಾದ ಒಂದು ಅಧ್ಯಯನದಲ್ಲಿ 400 ನಗರ ಹಾಗೂ ಅರೆನಗರ ಪ್ರದೇಶದ ಕುಟುಂಬಗಳನ್ನು ಪರಿಶೀಲಿಸಲಾಯಿತು. ಅದರಲ್ಲಿ ಪ್ರಮುಖ ಕಂಡುಬಂದ ಸಂಗತಿ ಏನೆಂದರೆ, ಹಣಕಾಸಿನ ಬಗ್ಗೆ ಉತ್ತಮ ಅರಿವು ಹೊಂದಿದ್ದ ಕುಟುಂಬಗಳು ತಮ್ಮ ಆದಾಯದ ಸುಮಾರು 24% ಉಳಿತಾಯ ಮಾಡುತ್ತಿದ್ದವು. ಕಡಿಮೆ ಹಣಕಾಸು ಜ್ಞಾನ ಹೊಂದಿದ್ದ ಕುಟುಂಬಗಳು ಕೇವಲ 12% ಉಳಿತಾಯ ಮಾಡುತ್ತಿದ್ದವು. ಅಂದರೆ, ಒಂದೇ ಆದಾಯ ಇದ್ದರೂ, ಹಣದ ಬಗ್ಗೆ ಹೆಚ್ಚು ಅರಿವು ಇರುವವರು ಸುಮಾರು ಎರಡು ಪಟ್ಟು ಹೆಚ್ಚು ಉಳಿತಾಯ ಮಾಡುತ್ತಿದ್ದರು.
ಅರಿವು ಇದ್ದರೆ ಸಾಕೇ?
ಹಣದ ಬಗ್ಗೆ ತಿಳಿದಿರುವ ಪ್ರತಿಯೊಬ್ಬರೂ ಉತ್ತಮ ಉಳಿತಾಯ ಮಾಡುತ್ತಾರೆ ಎನ್ನಲು ಸಾಧ್ಯವಿಲ್ಲ. ಏಕೆಂದರೆ ಹಣಕಾಸು ನಿರ್ಧಾರಗಳ ಮೇಲೆ ಹಲವಾರು ಅಂಶಗಳು ಪ್ರಭಾವ ಬೀರುತ್ತವೆ.
1. ಆದಾಯ ಕಡಿಮೆ ಇರುವುದು: ದಿನನಿತ್ಯದ ಅಗತ್ಯಗಳೇ ಕಷ್ಟವಾಗಿ ಪೂರೈಸುವ ಕುಟುಂಬಗಳಿಗೆ ಹೂಡಿಕೆ ಮಾಡಲು ಹೆಚ್ಚುವರಿ ಹಣವೇ ಇರುವುದಿಲ್ಲ.
2. ಚಿನ್ನದ ಮೇಲಿನ ನಂಬಿಕೆ: ಭಾರತದಲ್ಲಿ ಚಿನ್ನವನ್ನು ಕೇವಲ ಆಭರಣವಲ್ಲ, ಭದ್ರ ಹೂಡಿಕೆ ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಅನೇಕರು ಬ್ಯಾಂಕ್ ಅಥವಾ ಮ್ಯೂಚುವಲ್ ಫಂಡ್ಗಿಂತ ಚಿನ್ನವನ್ನೇ ಹೆಚ್ಚು ಆಯ್ಕೆ ಮಾಡುತ್ತಾರೆ.
3. ಬ್ಯಾಂಕ್ ಮತ್ತು ಹೂಡಿಕೆ ಸಂಸ್ಥೆಗಳ ಮೇಲಿನ ಅನುಮಾನ: ಕೆಲವರಿಗೆ ಬ್ಯಾಂಕ್ ಅಥವಾ ಮ್ಯೂಚುವಲ್ ಫಂಡ್ಗಳ ಬಗ್ಗೆ ಇನ್ನೂ ಸಂಪೂರ್ಣ ವಿಶ್ವಾಸ ಇಲ್ಲ.ಅವರು ನಗದು ಅಥವಾ ಜಮೀನನ್ನೇ ಸುರಕ್ಷಿತ ಹೂಡಿಕೆ ಎಂದು ಭಾವಿಸುತ್ತಾರೆ.
ಜ್ಞಾನಕ್ಕಿಂತ ಅಭ್ಯಾಸ ಮುಖ್ಯ
2022ರಲ್ಲಿ 47 ಸಾವಿರಕ್ಕೂ ಹೆಚ್ಚು ಭಾರತೀಯ ಕುಟುಂಬಗಳನ್ನು ಒಳಗೊಂಡ ಮತ್ತೊಂದು ದೊಡ್ಡ ಅಧ್ಯಯನದಿಂದ ಒಂದು ಕುತೂಹಲಕಾರಿ ಸಂಗತಿ ಗೊತ್ತಾಯಿತು. ಹಣದ ಬಗ್ಗೆ ಗೊತ್ತಿರುವುದಕ್ಕಿಂತ, ʼಹಣವನ್ನು ಹೇಗೆ ಬಳಸುತ್ತೇವೆ ಎಂಬುದು ಹೆಚ್ಚು ಮುಖ್ಯʼ.
ಉದಾಹರಣೆಗೆ, ಪ್ರತಿ ತಿಂಗಳು ಖರ್ಚಿನ ಲೆಕ್ಕ ಬರೆಯುವುದು, ಸಮಯಕ್ಕೆ ಬಿಲ್ ಪಾವತಿಸುವುದು, ತುರ್ತು ನಿಧಿ ಕಟ್ಟುವುದು, ನಿಯಮಿತವಾಗಿ ಹೂಡಿಕೆ ಮಾಡುವುದು, ಸಾಲವನ್ನು ನಿಯಂತ್ರಣದಲ್ಲಿ ಇಡುವುದು- ಈ ಅಭ್ಯಾಸಗಳನ್ನು ಬೆಳೆಸಿಕೊಂಡವರ ಆರ್ಥಿಕ ಸ್ಥಿತಿ ಉತ್ತಮವಾಗಿತ್ತು.
ಆತ್ಮವಿಶ್ವಾಸವೂ ಮುಖ್ಯ
ಇನ್ನೊಂದು ಕುತೂಹಲಕಾರಿ ಸಂಗತಿ ಎಂದರೆ, ಹಣಕಾಸಿನ ಬಗ್ಗೆ ಇರುವ ಆತ್ಮವಿಶ್ವಾಸವೂ ದೊಡ್ಡ ಪಾತ್ರ ವಹಿಸುತ್ತದೆ. ಕೆಲವರಿಗೆ ಎಲ್ಲ ಮಾಹಿತಿ ಗೊತ್ತಿದ್ದರೂ ಹೂಡಿಕೆ ಮಾಡಲು ಭಯ. ಇನ್ನೂ ಕೆಲವರು ಮೂಲಭೂತ ಜ್ಞಾನವಷ್ಟೇ ಇದ್ದರೂ ಧೈರ್ಯದಿಂದ ಯೋಜನೆ ರೂಪಿಸಿ ಹೂಡಿಕೆ ಆರಂಭಿಸುತ್ತಾರೆ. ಅಂದರೆ, ಜ್ಞಾನ + ಆತ್ಮವಿಶ್ವಾಸ + ಉತ್ತಮ ಅಭ್ಯಾಸದಿಂದ ಉತ್ತಮ ಆರ್ಥಿಕ ಭವಿಷ್ಯ ಸಾಧ್ಯ.
ಭಾರತದಲ್ಲಿ ಹಣ ಉಳಿಸುವ ಸಂಸ್ಕೃತಿ ಹೊಸದಲ್ಲ. ಆದರೆ ಹೆಚ್ಚಿನವರು ಇನ್ನೂ ಚಿನ್ನ, ಜಮೀನು, ನಗದು ಇವುಗಳನ್ನೇ ಪ್ರಮುಖ ಉಳಿತಾಯ ಎಂದು ಪರಿಗಣಿಸುತ್ತಾರೆ. ಜನಧನ್ ಖಾತೆಗಳು, ಯುಪಿಐ, ಡಿಜಿಟಲ್ ಬ್ಯಾಂಕಿಂಗ್ ಬಂದ ನಂತರ ಹಣಕಾಸು ಸೇವೆಗಳು ಎಲ್ಲರಿಗೂ ತಲುಪಿವೆ. ಆದರೆ ಖಾತೆ ತೆರೆದರೆ ಮಾತ್ರ ಸಾಕಾಗುವುದಿಲ್ಲ. ಅದನ್ನು ಸರಿಯಾಗಿ ಬಳಸುವುದು, ಹೂಡಿಕೆ ಮಾಡುವುದು, ವಿಮೆ ಮಾಡಿಕೊಳ್ಳುವುದು, ನಿವೃತ್ತಿಗೆ ಯೋಜನೆ ರೂಪಿಸುವುದು ಕೂಡ ಅಷ್ಟೇ ಮುಖ್ಯ.
ತಜ್ಞರ ಅಭಿಪ್ರಾಯದ ಪ್ರಕಾರ, ಮಕ್ಕಳಿಗೆ ಶಾಲಾ ಹಂತದಿಂದಲೇ ಹಣಕಾಸು ಶಿಕ್ಷಣ ನೀಡಬೇಕು. ಮಕ್ಕಳಿಗೆ ಉಳಿತಾಯ, ಬಜೆಟ್, ಬ್ಯಾಂಕ್, ವಿಮೆ, ಹೂಡಿಕೆ ಮತ್ತು ಸಾಲದ ಬಗ್ಗೆ ಸರಳವಾಗಿ ಕಲಿಸಿದರೆ, ಮುಂದಿನ ಪೀಳಿಗೆ ಉತ್ತಮ ಹಣಕಾಸು ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ. ಅದರ ಜೊತೆಗೆ, ಕಡಿಮೆ ಆದಾಯದ ಕುಟುಂಬಗಳಿಗೆ ವಿಶ್ವಾಸಾರ್ಹ ಹಣಕಾಸು ಸಲಹೆ ಮತ್ತು ಸುಲಭ ಹೂಡಿಕೆ ಅವಕಾಶಗಳನ್ನು ಒದಗಿಸುವುದೂ ಅಗತ್ಯ.


Click it and Unblock the Notifications
