Karnataka Famous Saree: ಸಂಗಾತಿಗಾಗಿ ಸೀರೆ... ಕರ್ನಾಟಕದ ಪ್ರಸಿದ್ಧ ಸಾಂಪ್ರದಾಯಿಕ ಸೀರೆಗಳು!
ಶ್ರಾವಣ ಮಾಸ ಆರಂಭವಾಗುತ್ತಿದ್ದಂತೆ ಸಾಲು ಸಾಲು ಹಬ್ಬಗಳು ಬರಲಾರಂಭಿಸುತ್ತವೆ. ವರಲಕ್ಷ್ಮಿ ವ್ರತ, ಗಣೇಶ ಚತುರ್ಥಿ, ದಸರಾ ಹಾಗೂ ದೀಪಾವಳಿ ಹೀಗೆ ಒಂದಾದ ನಂತರ ಒಂದರಂತೆ ಬರುವ ಹಬ್ಬಗಳಿಗೆ ಮಹಿಳೆಯರು ಹೆಚ್ಚಾಗಿ ಸೀರೆಯನ್ನು ಖರೀದಿ ಮಾಡುತ್ತಾರೆ. ಸಾಮಾನ್ಯವಾಗಿ ಪುರುಷರಿಗೆ ಸೀರೆಗಳ ಬಗ್ಗೆ ಅಷ್ಟಾಗಿ ತಿಳಿದಿರುವುದಿಲ್ಲ. ಹೀಗಾಗಿ ಮುಂದೆ ಬರುವ ಹಬ್ಬಗಳಿಗೆ ನೀವೇನಾದರೂ ಸೀರೆ ಖರೀದಿ ಮಾಡ್ಬೇಕು ಅಂದುಕೊಮಡಿದ್ದರೆ ನಾವು ನಿಮಗೆ ಕೆಲ ಸೀರೆಗಳ ಬಗ್ಗೆ ಮಾಹಿತಿ ನೀಡುತ್ತೇವೆ. ಈ ಸೀರೆಗಳನ್ನು ಖರೀದಿ ಮಾಡುವ ಮೂಲಕ ನೀವು ನಿಮ್ಮ ಸಂಗಾತಿಯನ್ನು ಬೆಚ್ಚಿಸಬಹುದು.
ಶ್ರೀಗಂಧದ ಮರಗಳ ನಾಡು ಎಂದು ಕರೆಯಲ್ಪಡುವ ಕರ್ನಾಟಕ ಶ್ರೀಮಂತ ಸಂಸ್ಕೃತಿ ಮತ್ತು ಪರಂಪರೆಗೆ ಹೆಸರುವಾಸಿಯಾಗಿದೆ. ಇಲ್ಲಿನ ಅತ್ಯಂತ ಗಮನಾರ್ಹ ವೈಶಿಷ್ಟ್ಯವೆಂದರೆ ಸುಂದರವಾದ ಸೀರೆಗಳು. ಇಲ್ಲಿನ ಸೀರೆಗಳು ವಿಶಿಷ್ಟ ವಿನ್ಯಾಸ, ಬಣ್ಣ ಮತ್ತು ಕರಕುಶಲತೆಗೆ ಹೆಚ್ಚು ಜನಪ್ರಿಯತೆಯನ್ನು ಪಡೆದಿವೆ. ಭಾರತೀಯ ಉಡುಗೆಯಲ್ಲಿ ಸಂಪ್ರದಾಯದ ಸಂಕೇತವಾಗಿವೆ ಸೀರೆಗಳು. ಹಾಗಾದರೆ ಯಾವೆಲ್ಲಾ ಸೀರೆಗಳನ್ನು ಹಬ್ಬಗಳಿಗೆ ಖರೀದಿ ಮಾಡಬಹುದು ಎಂದು ನೊಡೋಣ.

ಮೈಸೂರು ಸಿಲ್ಕ್ ಸೀರೆಗಳು
ಮೈಸೂರು ಸಿಲ್ಕ್ ಸೀರೆಗಳು ಕರ್ನಾಟಕದ ಅತ್ಯಂತ ಪ್ರಸಿದ್ಧವಾದ ಸೀರೆಗಳಲ್ಲಿ ಒಂದಾಗಿದೆ. ಶುದ್ಧ ರೇಷ್ಮೆಯಿಂದ ತಯಾರಿಸಲ್ಪಟ್ಟ ಈ ಸೀರೆಗಳು ಮೃದುವಾದ ಫಿನಿಶ್ ಹೊಂದಿದ್ದು, ಧರಿಸಲು ತುಂಬಾ ಆರಾಮದಾಯಕವಾಗಿರುತ್ತವೆ. ಇದರ ಲೇಸ್ ವರ್ಕ್ ಸೀರೆಯ ಅಂದವನ್ನು ಹೆಚ್ಚಿಸುತ್ತದೆ.
ಮೈಸೂರು ಸಿಲ್ಕ್ ಸೀರೆಗಳನ್ನು ತಯಾರಿಸುವ ಪ್ರಕ್ರಿಯೆಯು ಹಲವಾರು ಹಂತಗಳನ್ನು ಒಳಗೊಂಡಿರುತ್ತದೆ. ಹೀಗಾಗಿ ಇದರ ಅಂದಕ್ಕೆ ಸರಿಸಾಟಿಯಾದ ಸೀರೆಗಳು ಕಡಿಮೆ ಎನ್ನುತ್ತಾರೆ ಮಹಿಳೆಯರು. ಇದೇ ಕಾರಣಕ್ಕೆ ಮದುವೆ, ಹಬ್ಬಗಳಂತಹ ವಿಶೇಷ ಸಂದರ್ಭಗಳಲ್ಲಿ ಈ ಸೀರೆಗಳನ್ನೇ ಹೆಚ್ಚಾಗಿ ಗೃಹಿಣಿಯರು ಆಯ್ಕೆ ಮಾಡುತ್ತಾರೆ.
ಇಳಕಲ್ ಸೀರೆಗಳು
ಇಳಕಲ್ ಸೀರೆಗಳು ಕರ್ನಾಟಕದ ಮತ್ತೊಂದು ಜನಪ್ರಿಯ ಸೀರೆಯಾಗಿದೆ. ಈ ಸೀರೆಗಳು ತಮ್ಮ ವಿಶಿಷ್ಟ ನೇಯ್ಗೆ ತಂತ್ರಕ್ಕೆ ಹೆಸರುವಾಸಿಯಾಗಿದೆ. ಸೀರೆಯ ದೇಹವು ಹತ್ತಿಯಿಂದ ಮಾಡಲ್ಪಟ್ಟಿದ್ದರೆ ಪಲ್ಲು ರೇಷ್ಮೆಯಿಂದ ಮಾಡಲ್ಪಟ್ಟಿರುತ್ತದೆ. ಈ ಸಂಯೋಜನೆಯು ಸೀರೆಗೆ ವಿಶಿಷ್ಟ ನೋಟವನ್ನು ನೀಡುತ್ತದೆ.

ಇಲ್ಕಲ್ ಸೀರೆಯ ಪಲ್ಲು ಹೆಚ್ಚಾಗಿ ಕೆಂಪು ಅಥವಾ ಮರೂನ್ ಬಣ್ಣದಲ್ಲಿ ಇರುತ್ತದೆ. ಸೀರೆಯ ದೇಹವು ವಿವಿಧ ಬಣ್ಣಗಳು ಮತ್ತು ವಿನ್ಯಾಸಗಳಲ್ಲಿ ಇರುತ್ತದೆ. ಈ ಸೀರೆಗಳು ಧರಿಸಲು ತುಂಬಾ ಆರಾಮದಾಯಕವಾಗಿದ್ದು ಎಲ್ಲಾ ಸಂದರ್ಭಗಳಲ್ಲಿ ಹೊಂದಿಕೊಳ್ಳುತ್ತದೆ.
ಕಾಂಚೀಪುರಂ ಸೀರೆಗಳು
ಕಾಂಚಿಪುರಂ ಸೀರೆಗಳು ತಮಿಳುನಾಡಿನಿಂದ ಬಂದಿದ್ದರೂ ಕರ್ನಾಟಕದಲ್ಲಿಯೂ ಜನಪ್ರಿಯವಾಗಿವೆ. ಈ ಸೀರೆಗಳು ವಿನ್ಯಾಸ ಮತ್ತು ಅದರ ಬಣ್ಣಗಳಿಗೆ ಹೆಸರುವಾಸಿಯಾಗಿವೆ. ಶುದ್ಧ ರೇಷ್ಮೆಯಿಂದ ತಯಾರಿಸಲ್ಪಟ್ಟ ಕಾಂಚೀಪುರಂ ಸೀರೆಗಳು ಚಿನ್ನ ಅಥವಾ ಬೆಳ್ಳಿಯ ಎಳೆಗಳನ್ನು ಬಳಸಿ ತಯಾರಿಸಲಾಗುತ್ತದೆ.
ಕಾಂಚೀಪುರಂ ಸೀರೆಗಳ ಗಡಿಗಳು ಸಾಮಾನ್ಯವಾಗಿ ಅಗಲವಾಗಿರುತ್ತವೆ. ನವಿಲುಗಳು, ಹೂವುಗಳು ಮತ್ತು ದೇವಾಲಯಗಳಂತಹ ಸಾಂಪ್ರದಾಯಿಕ ಚಿತ್ರಗಳಿಂದ ಇವುಗಳನ್ನು ತಯಾರಿಸಲಾಗಿರುತ್ತದೆ. ಈ ಸೀರೆಗಳು ತಮ್ಮ ಭವ್ಯವಾದ ನೋಟದಿಂದಾಗಿ ಮದುವೆಗಳು ಮತ್ತು ಇತರ ವಿಶೇಷ ಸಂದರ್ಭಗಳಲ್ಲಿ ಅತ್ಯಾಕರ್ಷಕವಾಗಿರುತ್ತವೆ.

ಕಸೂತಿ ಸೀರೆಗಳು
ಕಸೂತಿ ಸೀರೆಗಳು ಕರ್ನಾಟಕದ ಸಾಂಪ್ರದಾಯಿಕ ಕಸೂತಿಯನ್ನು ಹೊಂದಿರುತ್ತವೆ. ಕಾಟನ್ ಅಥವಾ ರೇಷ್ಮೆ ಸೀರೆಗಳ ಅಂದವನ್ನು ಹೆಚ್ಚಿಸಲು ಈ ಕಸೂತಿಯನ್ನು ಮಾಡಲಾಗುತ್ತದೆ. ಕಸೂತಿಯಲ್ಲಿ ಪ್ರಕೃತಿ, ವಾಸ್ತುಶಿಲ್ಪ ಮತ್ತು ಪುರಾಣಗಳ ಚಿತ್ರಗಳಿಂದ ತಯಾರಿಸಲಾಗುತ್ತದೆ. ಈ ಸೀರೆಯ ಮೇಲೆ ಕೆಲ ವಿನ್ಯಾಸಗಳನ್ನು ರಚಿಸಲು ವರ್ಣರಂಜಿತ ಎಳೆಗಳನ್ನು ಬಳಸಿ ಕಸೂತಿ ಮಾಡಲಾಗುತ್ತದೆ. ಕಸೂತಿ ಸೀರೆಗಳು ಹಬ್ಬದ ಸಂದರ್ಭಗಳಲ್ಲಿ ಪರಿಪೂರ್ಣವಾಗಿದ್ದು ಅವು ಸಂಪ್ರದಾಯ ಸೊಬಗನ್ನು ಹೆಚ್ಚಿಸುತ್ತವೆ.
ಮೊಳಕಾಲ್ಮೂರು ಸೀರೆಗಳು
ಮೊಳಕಾಲ್ಮೂರು ಸೀರೆಗಳು ಕರ್ನಾಟಕದ ಮೊಳಕಾಲ್ಮೂರು ಪಟ್ಟಣದಿಂದ ಬರುತ್ತವೆ. ಈ ಸೀರೆಗಳು ತಮ್ಮ ವಿಶಿಷ್ಟ ನೇಯ್ಗೆ ತಂತ್ರ ಮತ್ತು ಸುಂದರವಾದ ವಿನ್ಯಾಸಗಳಿಗೆ ಹೆಸರುವಾಸಿಯಾಗಿದೆ. ಸೀರೆಯ ದೇಹವು ಸಾಮಾನ್ಯವಾಗಿರುತ್ತದೆ. ಮೊಳಗಾಲ್ಮುರು ಸೀರೆಗಳ ಪಲ್ಲು ಸಾಮಾನ್ಯವಾಗಿ ಆನೆಗಳು, ನವಿಲುಗಳು ಮತ್ತು ಹೂವುಗಳಂತಹ ಸಾಂಪ್ರದಾಯಿಕ ಲಕ್ಷಣಗಳನ್ನು ಹೊಂದಿರುತ್ತದೆ.
ಉಡುಪಿ ಸೀರೆಗಳು
ಕರ್ನಾಟಕ ಕರಾವಳಿಯ ಉಡುಪಿ ಮತ್ತು ದ.ಕ ಜಿಲ್ಲೆಗಳಲ್ಲಿ ತಯಾರಾಗುವ ಶುದ್ಧ ಒಂದೆಳೆ ಹತ್ತಿಯ ಕೈ ಮಗ್ಗ ಸೀರೆಗಳನ್ನು ಉಡುಪಿ ಸೀರೆ ಎಮದು ಕರೆಯಲಾಗುತ್ತದೆ. ಈ ಸೀರೆಯನ್ನು ಬಾಸೆಲ್ ಮಿಷನ್ ಪರಿಚಯಿಸಿದ ಮಲಬಾರ್ ಫ್ರೇಮ್ ಮಗ್ಗದಲ್ಲಿ ಚೌಕುಳಿ ಅಥವಾ ಸಾದಾ ವಿನ್ಯಾಸದಲ್ಲಿ ಒಂದೆಳೆಯ ಹತ್ತಿಯ ನೂಲನ್ನು ಬಳಸಿ ತಯಾರಿಸಲಾಗುತ್ತದೆ.












Click it and Unblock the Notifications